More

    ಹ್ಯಾಟ್ರಿಕ್ ಸರದಾರ ಜಿಗಜಿಣಗಿ ಗೆಲುವು ಕಸಿಯುವರೇ ಆಲಗೂರ?

    | ಪರಶುರಾಮ ಭಾಸಗಿ ವಿಜಯಪುರ

    ಸತತ ಮೂರು ಬಾರಿ ಗೆದ್ದು ನಾಲ್ಕನೇ ಬಾರಿಗೆ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ಕಾಂಗ್ರೆಸ್‌ ಮಾಜಿ ಶಾಸಕ, ರಾಜ್ಯಶಾಸ್ತ್ರದ ಪ್ರೊಫೆಸರ್ ರಾಜು ಅಲಗೂರ ಮಣಿಸುವರೇ? ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕಸಭೆ ಚುನಾವಣೆ ಎದುರಿಸಲು ಸಜ್ಜಾಗಿರುವ ಎಡಗೈ-ಬಲಗೈ ಸಮುದಾಯದ ಅಭ್ಯರ್ಥಿಗಳ ನೇರ ಹಣಾಹಣಿ ಮತದಾರರಲ್ಲಿ ಇಂಥದ್ದೊಂದು ಜಿಜ್ಜಾನೆ ಮೂಡಿಸಿದೆ. ಆದರೆ, ಹಿರಿಯ ಮುತ್ಸದ್ದಿ ರಮೇಶ ಜಿಗಜಿಣಗಿಯನ್ನು ಮಣಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬ ವಿಶ್ಲೇಷಣೆಯೂ ಇದೆ.

    ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿತಗೊಂಡಿದ್ದ ಕ್ಷೇತ್ರದಲ್ಲಿ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಮೂಲಕ ಅರಳಿದ ಕಮಲವನ್ನು ಮುದುಡಲು ಮತದಾರ ಈವರೆಗೂ ಬಿಟ್ಟಿಲ್ಲ, 1999 ಹಾಗೂ 2004ರಲ್ಲಿ ಯತ್ನಾಳ ಬಿಜೆಪಿಯಿಂದ ಸತತವಾಗಿ ಆಯ್ಕೆಯಾದರು. ಬಳಿಕ 2009ರಲ್ಲಿ ಕ್ಷೇತ್ರ ಎನ್‌ಸಿಗೆ ಮೀಸಲಾದ ಬಳಿಕ ದಲಿತ ಎಡಗೈ ಸಮುದಾಯದ ನಾಯಕ ರಮೇಶ ಜಿಗಜಿಣಗಿ ಸತತ ಗೆಲುವು ಸಾಧಿಸುತ್ತ ಬಂದಿದ್ದಾರೆ. ಇದೀಗ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರಾದರೂ ಅಂತರಿಕ ಅಸಮಾಧಾನ ಸಹಜವಾಗಿಯೇ ತೊಡರುಗಾಲಾಗಿದೆ. ಸತತ ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್ ಈ ಬಾರಿ ಅಭ್ಯರ್ಥಿ ಬದಲಾವಣೆ ಅಸ್ತ್ರ ಬಳಸಿದೆ. ಲಂಬಾಣಿ ಸಮುದಾಯಕ್ಕೆ ಮೂರು ಬಾರಿ ಹಾಗೂ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಒಂದು ಬಾರಿ ಅವಕಾಶ ಕಲ್ಪಿಸಲಾಯಿತು. ಆದರೆ, ಗೆಲುವು ಮರೀಚಿಕೆಯಾಗಿದ್ದರಿಂದ ಈ ಬಾರಿ ಅಭ್ಯರ್ಥಿ ಬದಲಾವಣೆ ಅನಿವಾರ್ಯವಾಗಿ ರಾಜು ಆಲಗೂರಗೆ ಅವಕಾಶ ನೀಡಿದ್ದು, ಪ್ರಬಲ ಪೈಪೋಟಿ ಸಾಧ್ಯತೆ ಇದೆ.

    ಗ್ಯಾರಂಟಿ ‘ಕೈ’ ಹಿಡಿಯುವ ವಿಶ್ವಾಸ
    ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆಗಳ ಜತೆಗೆ ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿದ್ದು, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ‘ಕೈ’ ಹಿಡಿಯುವ ವಿಶ್ವಾಸವಿದೆ. ಅಲ್ಲದೆ, ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಆರರಲ್ಲಿ ಶಾಸಕರನ್ನು ಹೊಂದಿದೆ. ಸಚಿವರಾದ ಶಿವಾನಂದ ಪಾಟೀಲ, ಡಾ.ಎಂ.ಬಿ.ಪಾಟೀಲ ದೊಡ್ಡ ಶಕ್ತಿಯಾಗಿದ್ದರೆ ಶಾಸಕರಾದ ಯಶವಂತರಾಯಗೌಡ ಪಾಟೀಲ, ಸಿ.ಎಸ್.ನಾಡಗೌಡ, ಅಶೋಕ ಮನಗೂಳಿ, ವಿಠಲ ಕಟಕದೊಂಡ ಗೆಲುವಿಗೆ ಕಾರಣೀಭೂತರಾಗುವ ವಿಶ್ವಾಸ ಆಂತರಿಕ ವಲಯದಲ್ಲಿ ಮನೆ ಮಾಡಿದೆ. ಇದರ ಹೊರತಾಗಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದ ಸುನಿಲಗೌಡ ಪಾಟೀಲ ಮತ್ತು ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಸಹ ಪಕ್ಷದ ಬಲ ಹೆಚ್ಚಿಸಲಿದ್ದಾರೆಂಬ ಲೆಕ್ಕಾಚಾರವಿದೆ. ಆದರೆ, ಹೊಂದಾಣಿಕೆ ರಾಜಕಾರಣದ ಗುಮ್ಮ ಸಹಜವಾಗಿಯೇ ಅಭ್ಯರ್ಥಿಯನ್ನು ಕಾಡುತ್ತಿದೆ.

    ಜಾತಿ ಲೆಕ್ಕಾಚಾರ
    ಕ್ಷೇತ್ರದಲ್ಲಿ ಲಿಂಗಾಯತ, ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗದ ಕುರುಬ ಸಮುದಾಯದ ಮತಗಳು ಹೆಚ್ಚಾಗಿವೆ. ಇದರಲ್ಲಿ ಮುಸ್ಲಿಂ ಮತಗಳು ಬಹುತೇಕ ಕಾಂಗ್ರೆಸ್ ಪಾಲಾದರೆ, ದಲಿತ ಸಮುದಾಯದಲ್ಲಿ ಮತ ವಿಭಜನೆಯಾಗಲಿದೆ. ಲಿಂಗಾಯತ ಸಮುದಾಯದ ಪಂಚಮಸಾಲಿ, ಗಾಣಿಗ, ಬಣಜಿಗ ಮತ್ತಿತರ ಮೇಲ್ವರ್ಗದ ಮತಗಳು ಬಿಜೆಪಿಯತ್ತ ಒಲವು ಹೊಂದಿದ್ದರೆ ಹಿಂದುಳಿದ ವರ್ಗಗಳಡಿ ಬರುವ ಲಿಂಗಾಯತ ಮತ ವಿಭಜನೆಯಾಗಿ ಕಾಂಗ್ರೆಸ್‌ಗೂ ದಕ್ಕಲಿವೆ. ಸಿಎಂ ಸಿದ್ದರಾಮಯ್ಯ ಅವರಿಂದಾಗಿ ಮತ್ತು ಬಿಜೆಪಿಯಲ್ಲಿ ಕೆ.ಎಸ್.ಈಶ್ವರಪ್ಪ ಅವರ ಬಂಡಾಯದ ಹಿನ್ನೆಲೆಯಲ್ಲಿ ಹಾಲುಮತ ಸಮುದಾಯದ ಮತಗಳು ಬಹುತೇಕ ಕಾಂಗ್ರೆಸ್‌ಗೆ ದಕ್ಕುವ ಲೆಕ್ಕಾಚಾರವಿದೆ. ಗೊಂದಲದಲ್ಲಿರುವ ಲಂಬಾಣಿ ಸಮುದಾಯ ಡಾ.ಬಾಬುರಾಜೇಂದ್ರ ನಾಯಕ ಸ್ವತಂತ್ರವಾಗಿ ಸ್ಪರ್ಧಿಸಿದರೆ ಎರಡೂ ಪಕ್ಷಗಳಿಂದ ದೂರವಾದರೂ ಇದರ ಹಾನಿ ಕಾಂಗ್ರೆಸ್‌ಗಿಂತ ಬಿಜೆಪಿಗೇ ಹೆಚ್ಚು. ಇನ್ನುಳಿದಂತೆ ಸಣ್ಣ ಸಮುದಾಯಗಳು ಬಹುತೇಕ ಬಿಜೆಪಿ ಜತೆಗಿವೆ. ಶಾಸಕರಾದ ಲಕ್ಷ್ಮಣ ಸವದಿ ಪ್ರಭಾವದಿಂದಾಗಿ ಗಾಣಿಗ ಸಮುದಾಯ ಕೊಂಚ ಕಾಂಗ್ರೆಸ್‌ನತ್ತ ವಾಲಿದರೂ ಅಚ್ಚರಿಯಿಲ್ಲ.

    ಹಿಂದುತ್ವ ಆಸರೆ
    ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸೇರಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು ಬಿಜೆಪಿಗೆ ದೊಡ್ಡ ಮತಗಳನ್ನು ತಂದುಕೊಡುವ ವಿಶ್ವಾಸ ಪಕ್ಷದಲ್ಲಿದೆ. ರಮೇಶ ಜಿಗಜಿಣಗಿ ಅವರ ವೈಯಕ್ತಿಕ ವರ್ಚಸ್ಸು, ಅಭಿವೃದ್ಧಿ ಕಾಮಗಾರಿಗಳು, ಎಲ್ಲಕ್ಕಿಂತ ಹೆಚ್ಚಾಗಿ ಕಳೆದ ಚುನಾವಣೆಯಲ್ಲಿ ಘೋಷಿಸಿದ್ದ ವಿಮಾನ ನಿಲ್ದಾಣ ಕಾಮಗಾರಿ, ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಿರುವುದು, ಹಿಂದುತ್ವದ ಪ್ರತಿಪಾದನೆ, ರಾಷ್ಟ್ರೀಯ ವಿಚಾರಧಾರೆಗಳು ಯುವಕರ ಮನ ಸೆಳೆಯುವಲ್ಲಿ ಸಫಲವಾಗಿದ್ದು, ಗೆಲುವಿನ ಬಗೆಗಿರುವ ಅನುಮಾನವನ್ನೇ ಅಳಿಸಿ ಹಾಕಿದೆ. ಆದರೆ, ಪಕ್ಷದ ಆಂತರಿಕ ಕಚ್ಚಾಟ, ಅಸಮಾಧಾನ, ಬಂಡಾಯ ಬಿಸಿತುಪ್ಪವಾಗಿದೆ. ಟಿಕೆಟ್ ವಂಚಿತ ಡಾ.ಬಾಬು ರಾಜೇಂದ್ರ ನಾಯಕ ಸ್ವತಂತ್ರವಾಗಿ ಕಣಕ್ಕಿಳಿಯುವುದಾಗಿ ತೀರ್ಮಾನಿಸಿದ್ದಾರೆ. ಇನ್ನು ಶಾಸಕ ಯತ್ನಾಳ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಚುನಾವಣೆ ಮಾಡುವುದಾಗಿ ವಾಗ್ದಾನ ಮಾಡಿದ್ದಾರಾದರೂ ಅಂತರಾಳದಲ್ಲಿ ಅಭ್ಯರ್ಥಿ ಬಗೆಗಿರುವ ಅಸಮಾಧಾನ ಅಲ್ಲಗಳೆಯುವಂತಿಲ್ಲ. ಆದರೆ, ಬಹುಸಂಖ್ಯಾತ ಮೇಲ್ವರ್ಗದ ಮತಗಳು ಬಿಜೆಪಿ ಕೈ ಹಿಡಿಯುವುದು ನಿಶ್ಚಿತ.

    ಬಿಜೆಪಿಯ 5ನೇ ಪಟ್ಟಿ ಬಿಡುಗಡೆ: ಬೆಳಗಾವಿಯಿಂದ​ ಶೆಟ್ಟರ್​, ಚಿಕ್ಕಬಳ್ಳಾಪುರದಿಂದ ಸುಧಾಕರ್​ ಕಣಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts