More

    ಭಂಡತನದ ಪರಮಾವಧಿ: ಆರೋಪ ಮುಕ್ತ ಆಗುವವರೆಗೆ ಕೇಜ್ರಿವಾಲ್​ ಪದತ್ಯಾಗ ಸೂಕ್ತ

    ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಬಂಧಿಸಿ ಮೂರು ದಿನಗಳಾಗಿವೆ. ಈ ಹಗರಣದಲ್ಲಿ ಕೇಜಿವಾಲ್ ಅವರೇ ಪ್ರಮುಖ ಸಂಚುಕೋರ (ಕಿಂಗ್‌ಪಿನ್) ಎಂಬುದಾಗಿ ಇ.ಡಿ. ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ. ಮದ್ಯದ ಹೋಲ್‌ಸೇಲ್‌ ಉದ್ಯಮಿಗಳಿಗೆ ಶೇಕಡ 12ರಷ್ಟು ಮತ್ತು ರಿಟೇಲ್ ವ್ಯಾಪಾರಿಗಳಿಗೆ ಶೇಕಡ 185ರಷ್ಟು ಲಾಭವಾಗುವಂತೆ 2021-22ರ ದೆಹಲಿ ಅಬಕಾರಿ ನೀತಿಯನ್ನು ರೂಪಿಸಲಾಗಿತ್ತು. ಈ ಶೇಕಡ 12ರಲ್ಲಿ ಅರ್ಧದಷ್ಟನ್ನು ಹೋಲ್‌ಸೇಲರ್‌ಗಳು ಆಡಳಿತಾರೂಢ ಆಮ್ ಆದ್ಮ ಪಕ್ಷದ (ಆಪ್) ನಾಯಕರಿಗೆ ಲಂಚವಾಗಿ ನೀಡುವುದು – ಇದು ಈ ಹಗರಣದ ಸಂಕ್ಷಿಪ್ತ ಹೂರಣ. ಆ ನೀತಿ ಈಗಾಗಲೇ ರದ್ದಾಗಿದೆ.

    ಆದರೆ ಹಗರಣಕ್ಕೆ ಸಂಬಂಧಿಸಿದಂತೆ ಆಪ್ ನಾಯಕ ಮನೀಶ್ ಸಿಸೋಡಿಯಾ, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ. ಕವಿತಾ ಸೇರಿದಂತೆ 16 ಮಂದಿಯನ್ನು ಈ ಹಿಂದೆಯೇ ಬಂಧಿಸಲಾಗಿದೆ. ಕೆಲವರು ಮಾಫಿ ಸಾಕ್ಷಿಗಳಾಗಿ ಮಾರ್ಪಟ್ಟಿದ್ದಾರೆ. ವಿಚಾರಣೆಗೋಸ್ಕರ ಕೇಜಿವಾಲ್ ಅವರಿಗೆ ಇ.ಡಿ. 9 ಸಲ ಸಮನ್ಸ್ ನೀಡಿತು. ಪ್ರತಿ ಬಾರಿಯೂ ಅವರು ಗೈರುಹಾಜರಾದರು. ಅವರು ಯಾವ ತಪ್ಪನ್ನೂ ಮಾಡಿರದಿದ್ದರೆ ವಿಚಾರಣೆಗೆ ಹಾಜರಾಗಿ ತಮ್ಮ ವಾದವನ್ನು ಧೈರ್ಯವಾಗಿ ಮಂಡಿಸಬಹುದಿತ್ತು. ಅದನ್ನು ಬಿಟ್ಟು, ‘ಸಮನ್ಸ್ ನೀಡುತ್ತಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ’ ಎಂಬರ್ಥದ ರಾಜಕೀಯ ಹೇಳಿಕೆಗಳನ್ನು ನೀಡತೊಡಗಿದರು. ತಮಗೆ ಇ.ಡಿ.ಯಿಂದ ರಕ್ಷಣೆ ನೀಡುವಂತೆ ಕೋರಿ ರೌಸ್ ಅವೆನ್ಯೂ ಕೋರ್ಟ್‌ನಿಂದ ಹಿಡಿದು ಹೈಕೋರ್ಟ್- ಸುಪ್ರೀಂಕೋರ್ಟ್‌ವರೆಗೂ ಹೋದರು. ಯಾವ ನ್ಯಾಯಾಲಯವೂ ಅವರ ಕೋರಿಕೆಗೆ ಮನ್ನಣೆ ನೀಡಲಿಲ್ಲ ಎಂಬುದು ಗಮನಾರ್ಹ. ಕೊನೆಕೊನೆಗೆ ಸುಪ್ರೀಂ ಕೋರ್ಟ್‌ನಲ್ಲಿ ತಾವೇ ತಮ್ಮ ಅರ್ಜಿಯನ್ನು ವಾಪಸ್ ಪಡೆಯುವ ಸ್ಥಿತಿಗೆ ತಲುಪಿದರು. ಅಂತಿಮವಾಗಿ ನಿರೀಕ್ಷಿತ ರೀತಿಯಲ್ಲಿ ಇ.ಡಿ.ಯಿಂದ ಬಂಧನಕ್ಕೆ ಒಳಗಾದರು. ಇಷ್ಟಾದ ನಂತರವಾದರೂ ಕೇಜ್ರಿವಾಲ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತಾರೆ ಎಂದು ದೇಶದ ಜನ ಭಾವಿಸಿದ್ದರು. ಆದರೆ ಅವರು ಹಾಗೆ ಮಾಡದೇ ಬಂಧನದಲ್ಲಿ ಇದ್ದುಕೊಂಡೇ ಆಡಳಿತ ನಡೆಸಲು ಮುಂದಾಗಿದ್ದಾರೆ.

    ದೆಹಲಿಯ ಕುಡಿಯುವ ನೀರು ಪೂರೈಕೆ ಸಮಸ್ಯೆಗೆ ಸಂಬಂಧಿಸಿದಂತೆ ಅಲ್ಲಿಂದಲೇ ಆದೇಶ ಹೊರಡಿಸಿದ್ದಾರೆ. ಇದೇ ವರಸೆಯನ್ನು ಮುಂದುವರಿಸುವುದಾಗಿಯೂ ಹೇಳಿದ್ದಾರೆ. ಇದಂತೂ ಭಂಡತನದ ಪರಮಾವಧಿ. ಈ ಹಿಂದೆ ಇಂತಹ ಅನೇಕ ಸನ್ನಿವೇಶಗಳನ್ನು ದೇಶದ ಜನತೆ ನೋಡಿದ್ದಾರೆ. ಆ ಸಂದರ್ಭಗಳಲ್ಲೆಲ್ಲ ಅಧಿಕಾರಸ್ಥ ರಾಜಕಾರಣಿಗಳು ಎಫ್‌ಐಆರ್/ ಚಾರ್ಜ್‌ ಶೀಟ್ ಫೈಲ್ ಆಗುತ್ತಲೇ ಅಥವಾ ಬಂಧನ ಸನ್ನಿಹಿತವಾಗುತ್ತಿದ್ದಂತೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಉದಾಹರಣೆಗಳಿವೆ. ಆ ಸಂಪ್ರದಾಯವನ್ನು ಪಾಲಿಸಲೂ ಕೇಜ್ರಿವಾಲ್ ಮುಂದಾಗಿಲ್ಲ. 2011ರಲ್ಲಿ ಇಡೀ ದೇಶಾದ್ಯಂತ ದೊಡ್ಡ ಸಂಚಲನ ಮೂಡಿಸಿದ್ದ, ಜನಮೆಚ್ಚುಗೆಯನ್ನೂ ಗಳಿಸಿದ್ದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ದ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದ ಕೇಜ್ರಿವಾಲ್ ಇವರೇನಾ ಎಂದು ಆಶ್ಚರ್ಯವಾಗುತ್ತದೆ. ‘ಕೆಲವು ನಾಯಕರ ರಾಜಕೀಯ ಮಹತ್ವಾಕಾಂಕ್ಷೆಯಿಂದಾಗಿ ಭ್ರಷ್ಟಾಚಾರ ವಿರೋಧಿ ಆಂದೋಲನ ವಿಫಲವಾಯಿತು’ ಎಂದು ಆಂದೋಲನದ ನೇತಾರರಾಗಿದ್ದ ಅಣ್ಣಾ ಹಜಾರೆ ಅವರು ಇತ್ತೀಚೆಗೆ ಹೇಳಿರುವುದು ಮಾರ್ಮಿಕವಾಗಿದೆ. ಭ್ರಷ್ಟಾಚಾರದ ವಿರುದ್ಧ ಪುಂಖಾನುಪುಂಖವಾಗಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸುತ್ತಿದ್ದ ಕೇಜ್ರಿವಾಲ್ರಂಥವರೇ ಈಗ ಭ್ರಷ್ಟಾಚಾರದ ಆರೋಪದಲ್ಲಿ ಜೈಲುಪಾಲಾಗಿರುವುದು ವಿಪರ್ಯಾಸ.

    ತವರು ಕ್ಷೇತ್ರದಿಂದ ಕಂಗನಾ ಕಣಕ್ಕೆ: ಬಿಜೆಪಿ ಟಿಕೆಟ್ ಗಿಟ್ಟಿಸಿದ ಬೆನ್ನಲ್ಲೇ ಬಾಲಿವುಡ್​ ಫೈರ್ ಬ್ರಾಂಡ್ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts