More

  ಖರೀದಿ ಕೇಂದ್ರಕ್ಕೆ ಕಳಪೆ ರಾಗಿ ಮಾರಾಟ? ಅನ್ನದಾತರ ಹೆಸರಿನಲ್ಲಿ ಮಧ್ಯವರ್ತಿಗಳ ಕಳ್ಳಾಟ ಬಟಾಬಯಲು

  | ಜಿ.ನಾಗರಾಜ್ ಬೂದಿಕೋಟೆ

  ರೈತರ ಆರ್ಥಿಕ ಸಬಲತೆ ಉದ್ದೇಶದಿಂದ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ರಾಗಿ ಖರೀದಿಗೆ ಮುಂದಾಗಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವ್ಯಾಪಾರಸ್ಥರು ಖರೀದಿ ಕೇಂದ್ರಕ್ಕೆ ಕಳಪೆ ರಾಗಿ ಮಾರಾಟ ಮಾಡಲು ಮುಂದಾಗಿರುವುದು ಬೆಳಕಿಗೆ ಬಂದಿದೆ.

  ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕು ಎಂಬ ಸದುದ್ದೇಶದಿಂದ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ರಾಗಿ ಖರೀದಿ ಕೇಂದ್ರ ತೆರೆದಿದೆ. ಈ ವರ್ಷ ಪ್ರತಿ ಕ್ವಿಂಟಾಲ್‌ ರಾಗಿಗೆ 3,846 ರೂ. ನಿಗದಿ ಮಾಡಿರುವುದರಿಂದ ಬಂಗಾರಪೇಟೆ ತಾಲೂಕಿನಲ್ಲಿ 2100 ರೈತರು 41 ಸಾವಿರ ಕ್ವಿಂಟಾಲ್‌ ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು 80 ರೈತರು ರಾಗಿ ಮಾರಾಟ ಮಾಡಿದ್ದಾರೆ. ಆದರೆ, ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವ್ಯಾಪಾರಸ್ಥರೇ ಹೆಚ್ಚಿನ ಪ್ರಮಾಣದಲ್ಲಿ ನೋಂದಣಿ ಮಾಡಿಕೊಂಡು ಲಾಭ ಪಡೆಯುವ ಉದ್ದೇಶದಿಂದ ಕಳಪೆ ರಾಗಿ ಮಾರಾಟ ಮಾಡಿ ಯೋಜನೆಯ ಆಶಯವನ್ನೇ ಬುಡಮೇಲು ಮಾಡುತ್ತಿದ್ದಾರೆ.

  ಈ ಬಾರಿ ಮಳೆ ಕೈಕೊಟ್ಟ ಕಾರಣ ಬಿತ್ತಿದ್ದ ರಾಗಿ ಜಮೀನಿನಲ್ಲೇ ಒಣಗಿ ಹೋಯಿತು. ಇದರಿಂದಾಗಿ ರಾಗಿ ಇಳುವರಿ ಕುಸಿದಿದ್ದು, ಬೆಲೆ ಗಗನಕ್ಕೇರಿದೆ. ಹಾಗಾಗಿ ರಾಗಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ರಾಗಿ ಖರೀದಿ ಕೇಂದ್ರಗಳಿಗಿಂತ ಹೆಚ್ಚಿನ ಬೆಲೆಗೆ ಗುಣಮಟ್ಟದ ರಾಗಿ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವ ಕಾರಣ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ರಾಗಿ ಮಾರಾಟಕ್ಕೆ ರೈತರು ನೋಂದಣಿಗೆ ಮುಂದಾಗಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಸ್ಥರು ರೈತರ ಪಹಣಿ ಪಡೆದು ಅವರ ಹೆಸರಿನಲ್ಲಿ ರಾಗಿ ಮಾರಾಟಕ್ಕೆ ಮುಂದಾಗಿದ್ದಾ ಎಂದು ಹೇಳಲಾಗುತ್ತಿದೆ.

  ಪ್ರತಿ ವರ್ಷ ರೈತರಿಗಿಂತ ನೂರು ಪಟ್ಟು ರಾಗಿಯನ್ನು ದಲ್ಲಾಳಿಗಳು ರೈತರ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ. ರೈತರ ಖಾತೆಗೆ ಹಣ ಜಮೆ ಆದ ಕೂಡಲೇ ರೈತರನ್ನು ಬ್ಯಾಂಕಿಗೆ ಕರೆದೊಯ್ದು ಹಣ ಪಡೆಯುವ ಮೂಲಕ ವ್ಯಾಪಾರಸ್ಥರು ಸಾಹುಕಾರರಾಗುತ್ತಿದ್ದಾರೆ. ಇದರಿಂದ ರೈತನಿಗೆ ಆದಾಯವಿಲ್ಲದಂತಾಗಿದೆ. ರಾಗಿ ಖರೀದಿ ಕೇಂದ್ರಗಳ ಬಳಿ ವ್ಯಾಪಾರಸ್ಥರು ಸುಳಿಯದಂತೆ ಕ್ರಮ ಜರುಗಿಸುವ ಜತೆಗೆ ಗುಣಮಟ್ಟದ ರಾಗಿ ಖರೀದಿಗೆ ಆದ್ಯತೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

  ರಾಗಿ ಖರೀದಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ. ಗುಣಮಟ್ಟ ಸರಿಯಿಲ್ಲದ ರಾಗಿಯನ್ನು ವಾಪಸ್ ಕಳುಹಿಸುವ ಜತೆಗೆ ವ್ಯಾಪಾರಸ್ಥರು ಮತ್ತು ದಲ್ಲಾಳಿಗಳನ್ನು ದೂರ ಇಡಲಾಗಿದೆ. ರೈತರಿಂದ ಬರುವ ರಾಗಿಯನ್ನು ಮಾತ್ರ ಖರೀದಿ ಮಾಡಲಾಗುತ್ತಿದೆ.

  | ಮನೋಹರನ್ ವ್ಯವಸ್ಥಾಪಕ, ರಾಜ್ಯಆಹಾರ ಮತ್ತು ನಾಗರಿಕ ಸರಬರಾಜು ನಿಗಮ

  ಪಡಿತರ ರಾಗಿ ವ್ಯಾಪಾರಸ್ಥರ ಪಾಲು
  ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರಿಗೆ ವಿತರಣೆ ಮಾಡುತ್ತಿರುವ ರಾಗಿಯನ್ನು ಬಹುತೇಕರು ವ್ಯಾಪಾರಸ್ಥರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ವರ್ಷದಿಂದ ಸಂಗ್ರಹಿಸಿಟ್ಟಿದ್ದ ರಾಗಿ ಜತೆಗೆ ರೈತರಿಂದ ಖರೀದಿ ಮಾಡಿದ ರಾಗಿ ಮತ್ತು ಕಳಪೆ ರಾಗಿಯನ್ನು ಮಿಶ್ರಣ ಮಾಡಿ ಹೆಚ್ಚಿನ ಬೆಲೆಗೆ ರಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ. ಗುಣಮಟ್ಟ ಇಲ್ಲದ ರಾಗಿಯನ್ನು ಜನ ಸೇವಿಸಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಮರಳಿ ವ್ಯಾಪಾರಸ್ಥರ ಕೈ ಸೇರುತ್ತದೆ. ಇದರಿಂದಾಗಿ ವ್ಯಾಪಾರಸ್ಥರಿಗೆ ಲಕ್ಷಾಂತರ ರೂ. ಲಾಭ ಬರಲಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಲಿದೆ.

  ತವರು ಕ್ಷೇತ್ರದಿಂದ ಕಂಗನಾ ಕಣಕ್ಕೆ: ಬಿಜೆಪಿ ಟಿಕೆಟ್ ಗಿಟ್ಟಿಸಿದ ಬೆನ್ನಲ್ಲೇ ಬಾಲಿವುಡ್​ ಫೈರ್ ಬ್ರಾಂಡ್ ಹೇಳಿದ್ದಿಷ್ಟು…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts