More

    ಟೀಮ್ ಇಂಡಿಯಾದಲ್ಲಿ ಮತ್ತೆ ಶುರುವಾಯಿತೇ ಸ್ಟಾರ್ ಕ್ರಿಕೆಟಿಗರ ವಾರ್?

    ನವದೆಹಲಿ: ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ವೈಯಕ್ತಿಕ ಕಾರಣದ ಮೇರೆಗೆ ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಬಿಸಿಸಿಐ ಮಾತ್ರ ಈ ವರದಿಯನ್ನು ತಳ್ಳಿ ಹಾಕಿದ್ದರೂ, ಗೊಂದಲಗಳು ಮುಂದುವರಿದಿವೆ.

    ಕೊಹ್ಲಿ ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲೂ ಪಿತೃತ್ವ ರಜೆಯ ಮೇರೆಗೆ ಮೊದಲ ಟೆಸ್ಟ್ ಪಂದ್ಯ ಆಡಿದ ಬಳಿಕ ತವರಿಗೆ ಮರಳಿದ್ದರು. ಪತ್ನಿ ಅನುಷ್ಕಾ ಶರ್ಮ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿ ಕೊಹ್ಲಿ ತವರಿಗೆ ಮರಳಿದ್ದರು. ಈ ಬಾರಿ ಪುತ್ರಿ ವಾಮಿಕಾ ಜನ್ಮದಿನವನ್ನು ಕುಟುಂಬದ ಜತೆಗೆ ಸಂಭ್ರಮಿಸುವ ಸಲುವಾಗಿ ಕೊಹ್ಲಿ ಏಕದಿನ ಸರಣಿಯಿಂದ ಬಿಡುವು ಬಯಸಿದ್ದಾರೆ ಎನ್ನಲಾಗಿದೆ. ಈ ನಿರ್ಧಾರವನ್ನು ಕೊಹ್ಲಿ ಈಗಾಗಲೆ ಬಿಸಿಸಿಐಗೆ ಮುಟ್ಟಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದ್ದರೂ, ಮಂಡಳಿ ಅಧಿಕಾರಿಗಳು ಮಾತ್ರ ಅಂಥ ಅಧಿಕೃತ ಮನವಿ ಬಂದಿಲ್ಲ ಎಂದು ಗೊಂದಲ ಹೆಚ್ಚಿಸಿದ್ದಾರೆ. ಆದರೆ ಏಕದಿನ ತಂಡದ ನಾಯಕತ್ವ ತಪ್ಪಿರುವ ಸಿಟ್ಟಿನಿಂದ ಮತ್ತು ರೋಹಿತ್ ನಾಯಕತ್ವದಡಿಯಲ್ಲಿ ಆಡಲು ಮನಸ್ಸು ಒಪ್ಪದೆ ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದೂ ಹೇಳಲಾಗುತ್ತಿದೆ.

    ಮಗಳ ಹುಟ್ಟುಹಬ್ಬ ಕಾರಣ?
    ಕೊಹ್ಲಿ ಏಕದಿನ ಸರಣಿ ತಪ್ಪಿಸಿಕೊಳ್ಳುತ್ತಿರುವುದಕ್ಕೆ ಪುತ್ರಿ ವಾಮಿಕಾಳ ಮೊದಲ ಜನ್ಮದಿನವನ್ನು ಕುಟುಂಬದೊಂದಿಗೆ ಸಂಭ್ರಮಿಸುವ ಕಾರಣ ನೀಡಲಾಗಿದೆ. ಆದರೆ ವಾಮಿಕಾ ಜನ್ಮದಿನ ಜನವರಿ 11. ಏಕದಿನ ಸರಣಿ ಶುರುವಾಗುವುದು ಜನವರಿ 19ರಿಂದ! ಜನವರಿ 11ರಿಂದ ಕೊಹ್ಲಿ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆಡಲಿದ್ದಾರೆ. ಇದು ಅವರ 100ನೇ ಟೆಸ್ಟ್ ಪಂದ್ಯವೂ ಆಗಿರಲಿದೆ. ಹೀಗಾಗಿ ಕೊಹ್ಲಿ ಪುತ್ರಿಯ ಜನ್ಮದಿನವನ್ನು ಸಂಭ್ರಮಿಸುವುದೇ ಆದರೆ ಕೊನೇ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳಬೇಕಾಗಿತ್ತು. ಇನ್ನು ತಡವಾಗಿ ಬರ್ತ್‌ಡೇ ಪಾರ್ಟಿ ಆಚರಿಸುವುದೇ ಆದರೆ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ತವರಿನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆಯಬಹುದಾಗಿತ್ತು. ವಿದೇಶಿ ನೆಲದ ಸವಾಲಿನ ಸರಣಿಗೆ ಗೈರಾಗುವುದು ಸರಿಯಲ್ಲ ಎಂಬ ವಾದಗಳು ಕೇಳಿಬಂದಿವೆ.

    ಅಧಿಕೃತ ಮನವಿ ಬಂದಿಲ್ಲ
    ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಿಂದ ಬಿಡುವು ನೀಡುವಂತೆ ವಿರಾಟ್ ಕೊಹ್ಲಿ ಅವರಿಂದ ಅಧಿಕೃತವಾಗಿ ಮನವಿ ಬಂದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ‘ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಥವಾ ಕಾರ್ಯದರ್ಶಿ ಜಯ್ ಷಾ ಅವರಿಗೆ ಕೊಹ್ಲಿ ಅವರಿಂದ ಇದುವರೆಗೆ ಯಾವುದೇ ಅಧಿಕೃತ ಮನವಿ ಬಂದಿಲ್ಲ. ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಂಡರೆ ಅಥವಾ ಗಾಯದ ಸಮಸ್ಯೆ ಕಾಡಿದರೆ ಅದು ಬೇರೆ ಮಾತು. ಈವರೆಗಿನ ಮಾಹಿತಿ ಪ್ರಕಾರ ಅವರು ಏಕದಿನ ಸರಣಿಯಲ್ಲಿ ಆಡಲಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಎಲ್ಲ ಆಟಗಾರರು ಕುಟುಂಬದ ಸದಸ್ಯರ ಜತೆಗೆ ಒಂದೇ ವಿಮಾನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲಿದ್ದಾರೆ. ಹೀಗಾಗಿ ಕುಟುಂಬಕ್ಕೆ ಸಮಯ ನೀಡುವ ಪ್ರಶ್ನೆ ಬರುವುದಿಲ್ಲ. ಆದರೆ ಬಯೋಬಬಲ್ ಬಳಲಿಕೆ ಕಾಡಿದರೆ ಅವರು ಖಂಡಿತವಾಗಿಯೂ ವಿಶ್ರಾಂತಿಗಾಗಿ ಆಯ್ಕೆ ಸಮಿತಿ ಅಧ್ಯಕ್ಷರು ಅಥವಾ ಆಯ್ಕೆ ಸಮಿತಿಯ ಸಂಚಾಲಕರಾಗಿರುವ ಬಿಸಿಸಿಐ ಕಾರ್ಯದರ್ಶಿಗೆ ಮನವಿ ಸಲ್ಲಿಸಬಹುದು’ ಎಂದು ಹೇಳಿದ್ದಾರೆ.

    ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ?
    ಏಕದಿನ ತಂಡದ ಹೊಸ ನಾಯಕ ರೋಹಿತ್ ಶರ್ಮ ಗಾಯದ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ, ಏಕದಿನ ತಂಡದ ನಿರ್ಗಮನ ನಾಯಕ ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ವರದಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಈ ನಡೆ ತೋರಿಸಿಕೊಡುತ್ತಿದೆ. ರೋಹಿತ್-ವಿರಾಟ್ ನಡುವೆ ಮನಸ್ತಾಪವಿಲ್ಲ ಎಂದು ಬಿಸಿಸಿಐ ವಲಯದಿಂದ ಪದೇಪದೆ ಸ್ಪಷ್ಟನೆಗಳು ಬರುತ್ತಿದ್ದರೂ, ಒಳಗೆ ಏನೋ ನಡೆಯುತ್ತಿದೆ ಎಂಬ ಅನುಮಾನವನ್ನು ಈ ಬೆಳವಣಿಗೆ ಮೂಡಿಸುತ್ತಿದೆ. ಪ್ರವಾಸದ ಎರಡೂ ಸರಣಿಗಳಲ್ಲಿ ಟೆಸ್ಟ್ ಮತ್ತು ಸೀಮಿತ ಓವರ್ ತಂಡದ ನಾಯಕರು ಜತೆಯಾಗಿ ಆಡುವ ಪ್ರಸಂಗವೇ ಎದುರಾಗುತ್ತಿಲ್ಲ. ಇದು ಇಬ್ಬರ ನಡುವೆ ಭಿನ್ನಾಭಿಪ್ರಾಯ ಎದ್ದಿರುವ ಸುಳಿವಿನಂತೆ ಕಾಣಿಸುತ್ತಿದೆ. ತಂಡದಲ್ಲಿ ರೋಹಿತ್ ಮತ್ತು ಕೊಹ್ಲಿ ಬಣಗಳೂ ಸೃಷ್ಟಿಯಾಗಿರುವುದೇ ಎಂಬ ಅನುಮಾನಗಳೂ ಮೂಡಿವೆ.

    ಕೊಹ್ಲಿ ಏಕದಿನ ಮತ್ತು ರೋಹಿತ್ ಟೆಸ್ಟ್ ಸರಣಿಗೆ ಅಲಭ್ಯರಾಗುತ್ತಿದ್ದಾರಂತೆ. ಕ್ರಿಕೆಟ್‌ನಿಂದ ಬಿಡುವು ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದರ ಸಮಯ ಉತ್ತಮವಾಗಿರಬೇಕು. ಇಲ್ಲದಿದ್ದರೆ ಭಿನ್ನಾಭಿಪ್ರಾಯದ ಊಹಾಪೋಹಗಳು ಹರಿದಾಡುತ್ತವೆ. ಇಬ್ಬರೂ ಮತ್ತೊಂದು ಮಾದರಿಯ ಕ್ರಿಕೆಟ್‌ಅನ್ನು ಬಿಡುವುದಿಲ್ಲವಲ್ಲ.
    | ಮೊಹಮದ್ ಅಜರುದ್ದೀನ್, ಮಾಜಿ ನಾಯಕ

    ಕೊಹ್ಲಿ-ರೋಹಿತ್ ಭಿನ್ನಮತ ಮೊದಲಲ್ಲ!
    ಕೊಹ್ಲಿ-ರೋಹಿತ್ ನಡುವೆ ಭಿನ್ನಾಭಿಪ್ರಾಯ ಇದ್ದಿದ್ದೇ ಆದರೆ ಇದು ಮೊದಲೇನಲ್ಲ. ಕಳೆದ 4 ವರ್ಷಗಳಿಂದ ಆಗಾಗ ಇವರಿಬ್ಬರ ಭಿನ್ನಾಭಿಪ್ರಾಯಗಳ ಸುದ್ದಿಗಳು ಬರುತ್ತಲೇ ಇವೆ. ಇದೇ ಕಾರಣಕ್ಕಾಗಿ ಹಿಂದಿನ ಕೋಚ್ ರವಿಶಾಸಿ ಇಬ್ಬರನ್ನೂ ಒಟ್ಟಿಗೆ ಕುಳಿತುಕೊಂಡು ಮನಬಿಚ್ಚಿ ಮಾತನಾಡುವಂತೆ ಮಾಡಿದ್ದರು. ಬಳಿಕ ಪರಸ್ಪರ ಉತ್ತಮ ಸ್ನೇಹಿತರಾಗಿದ್ದರು ಎನ್ನಲಾಗಿತ್ತು. ಆದರೆ ಇದೀಗ ರಾಹುಲ್ ದ್ರಾವಿಡ್ ಕೋಚ್ ಆದ ಬೆನ್ನಲ್ಲೇ ಮತ್ತೆ ಈ ತಲೆನೋವು ಮರುಕಳಿಸಿದಂತಿದೆ.

    ಕ್ರಿಕೆಟಿಗರ ಸಂಘರ್ಷ ಹೊಸದಲ್ಲ
    ಭಾರತದಲ್ಲಿ ಕ್ರಿಕೆಟಿಗರೆಂದರೆ ಯಾವ ಸೂಪರ್‌ಸ್ಟಾರ್‌ಗಳಿಗೂ ಕಡಿಮೆ ಇಲ್ಲ. ಅದೇ ರೀತಿ ಸ್ಟಾರ್ ಕ್ರಿಕೆಟಿಗರ ಅಹಂಗಳ ಸಂಘರ್ಷವೂ ಹೊಸದಲ್ಲ. ಈ ಹಿಂದೆ ಕಪಿಲ್ ದೇವ್-ಸುನೀಲ್ ಗಾವಸ್ಕರ್, ಮೊಹಮದ್ ಅಜರುದ್ದೀನ್-ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ-ರಾಹುಲ್ ದ್ರಾವಿಡ್, ಎಂಎಸ್ ಧೋನಿ-ವೀರೇಂದ್ರ ಸೆಹ್ವಾಗ್/ಗೌತಮ್ ಗಂಭೀರ್ ನಡುವೆಯೂ ಇಂಥ ಸಂಘರ್ಷ ಏರ್ಪಟ್ಟ ಬಗ್ಗೆ ವರದಿಗಳು ಬಂದಿದ್ದವು. ಆದರೆ ವೃತ್ತಿಪರ ಕ್ರೀಡೆಯಲ್ಲಿ ಇಂಥವುಗಳು ಮೈದಾನದಲ್ಲಿನ ನಿರ್ವಹಣೆಯ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸುವುದೇ ಮುಖ್ಯವಾದುದು.

    ರೋಹಿತ್ ಗೈರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಹಂಗಾಮಿ ಉಪನಾಯಕ ಯಾರು?

    ಏಕದಿನ ತಂಡದ ನಿರ್ಗಮನ ನಾಯಕ ಕೊಹ್ಲಿ ಬಗ್ಗೆ ಹೊಸ ನಾಯಕ ರೋಹಿತ್ ಹೇಳಿದ್ದೇನು?

    ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮ ಔಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts