More

    ಟೈಟಾನ್​ ನೌಕೆಯ ದುರಂತ ಸಂಭವಿಸಿದ್ಹೇಗೆ? ವೈರಲ್​ ಆಯ್ತು ಅನಿಮೇಷನ್​ ವಿಡಿಯೋ, 6 ಮಿಲಿಯನ್​ಗೂ ಅಧಿಕ​ ವೀಕ್ಷಣೆ

    ನ್ಯೂಯಾರ್ಕ್​: ಒಂದು ಶತಮಾನಕ್ಕೂ ಹಿಂದೆ ದುರಂತಕ್ಕೀಡಾದ ಟೈಟಾನಿಕ್​ ಹಡಗಿನ ಅವಶೇಷ ವೀಕ್ಷಣೆಗೆ ತೆರಳಿದ್ದ ಟೈಟಾನ್​ ಹೆಸರಿನ ಜಲಾಂತರ್ಗಾಮಿ ನೌಕೆ ನಾಪತ್ತೆಯಾಗಿ ಅಂತರ್​ಸ್ಫೋಟಗೊಂಡು ಐವರು ಪ್ರಮುಖ ವ್ಯಕ್ತಿಗಳು ಮೃತಪಟ್ಟ ದುರಂತ ಘಟನೆ ಇಡೀ ಜಗತ್ತಿನ ಗಮನ ಸೆಳೆಯಿತು. ನೌಕೆ ನಾಪತ್ತೆಯಾದ ದಿನದಿಂದ ಅದರಲ್ಲಿದ್ದ ಐವರ ಪ್ರಾಣ ಉಳಿಯಲೆಂದು ಅನೇಕರು ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ಪ್ರಾರ್ಥನೆ ಫಲಿಸಲಿಲ್ಲ.

    ಇನ್ನು ಭೀಕರ ಘಟನೆಗೆ ಕಾರಣ ಮತ್ತು ಫಲಿತಾಂಶವನ್ನು ಸಾಗರ ವಿಜ್ಞಾನಿಗಳು ಮತ್ತು ಕಡಲ ವ್ಯವಹಾರಿಕ ಸಂಸ್ಥೆಗಳು ವಿವಿಧ ರೀತಿಯಲ್ಲಿ ವಿವರಿಸಿದ್ದಾರೆ. ಇದರ ನಡುವೆ ಅಂರ್ಜಾಲದಲ್ಲಿ ಟೈಟಾನ್​ ನೌಕೆಯ ದುರಂತ ಹೇಗೆ ಸಂಭವಿಸಿತು ಎಂದು ವಿವರಿಸುವ ವಿಡಿಯೋ ತುಣುಕೊಂದು ವೈರಲ್​ ಆಗಿದ್ದು, ಎಲ್ಲೆಡೆ ಟ್ರೆಂಡ್​ ಆಗಿದೆ.

    12 ದಿನದಲ್ಲಿ 6 ಲಕ್ಷ ವೀಕ್ಷಣೆ

    6 ನಿಮಿಷ 20 ಸೆಕೆಂಡ್​ವುಳ್ಳ ಅನಿಮೇಷನ್ ವಿಡಿಯೋವನ್ನು ಜೂನ್​ 30ರಂದು AiTelly ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿದ್ದು, ಕೇವಲ 12 ದಿನಗಳಲ್ಲಿ ಬರೋಬ್ಬರಿ 6 ಮಿಲಿಯನ್​ ವೀಕ್ಷಣೆ ಪಡೆದುಕೊಂಡಿದೆ.

    ಇದನ್ನೂ ಓದಿ: Auto Driver Fights With Traffic Police | ನಡು ರಸ್ತೆಯಲ್ಲೇ ಟ್ರಾಫಿಕ್ ಪೊಲೀಸ್ ಹಾಗೂ ಆಟೋ ಚಾಲಕರ ನಡುವೆ ವಾಗ್ವಾದ | CHITRADURGA

    ಜೂನ್​ 18ರಂದು ಟೈಟಾನಿಕ್​ ಅವಶೇಷಗಳಿರುವ ಕಡೆ ಟೈಟಾನ್​ ಜಲಾಂತರ್ಗಾಮಿ ನೌಕೆ ಮುಳುಗಲು ಆರಂಭಿಸಿದ ಎರಡು ಗಂಟೆಗಳಲ್ಲಿ ರಾಡರ್​ನಿಂದ ನಾಪತ್ತೆಯಾಯಿತು. ಇದಾದ ಬಳಿಕ ನಾಲ್ಕು ದಿನಗಳ ಕಾಲ ತೀವ್ರ ಶೋಧ ನಡೆಯಿತು. ಆದರೆ, ಟೈಟಾನ್​ ನೌಕೆ ಅಂತರ್​ಸ್ಫೋಟಗೊಂಡು ಅದರಲ್ಲಿದ್ದ ಐವರು ಮೃತಪಟ್ಟಿದ್ದಾರೆ ಎಂದು ಯುಎಸ್​ ಕರಾವಳಿ ಪಡೆ ತಿಳಿಸಿತು. ಐವರು ಪ್ರಯಾಣಿಕರು ತಲಾ ಎರಡುವರೆ ಲಕ್ಷ ಡಾಲರ್​ ನೀಡಿ ಈ ಭಯಾನಕ ಪ್ರವಾಸ ಕೈಗೊಂಡಿದ್ದರು.

    ಹೈಡ್ರೋಸ್ಟಾಟಿಕ್ ಒತ್ತಡ

    ನೌಕೆ ನೀರಿಗೆ ಇಳಿದ ಬಳಿಕ ಏನಾಗಿರಬಹುದು? ಮತ್ತು ಹಲವರು ಹೇಳುವ ಪ್ರಕಾರ ಅಂತರ್​​ಸ್ಫೋಟ ಹೇಗೆ ಸಂಭವಿಸಿತು? ಟೈಟಾನ್​ ನೌಕೆ ಸ್ವತಃ ಕುಸಿಯುವ ಮೂಲಕ ಹೇಗೆ ವಿನಾಶವಾಯಿತು ಎಂಬುದನ್ನು ವಿಡಿಯೋದಲ್ಲಿ ವಿವರಿಸಲಾಗಿದೆ. ನೀರಿನ ಸುತ್ತಲೂ ಇರುವ ಅತಿ ಹೆಚ್ಚಿನ ಹೈಡ್ರೋಸ್ಟಾಟಿಕ್ ಒತ್ತಡದಿಂದ ಸ್ಫೋಟ ಸಂಭವಿಸಿದೆ ಎಂದು ಅನಿಮೇಷನ್ ವಿವರಿಸುತ್ತದೆ. ಅನಿಮೇಶನ್‌ನಲ್ಲಿ ತೋರಿಸಿರುವಂತೆ ಈ ದುರಂತ ಮಿಲಿಸೆಕೆಂಡ್‌ನ ಒಂದು ಭಾಗದೊಳಗೆ ಸಂಭವಿಸಿದೆ.

    400 ಪಟ್ಟು ಅಧಿಕ

    ಟೈಟಾನಿಕ್ ಇರುವ ಆಳದಲ್ಲಿ, ಪ್ರತಿ ಚದರ ಇಂಚಿಗೆ ಸುಮಾರು 5600 ಪೌಂಡ್‌ಗಳಷ್ಟು ನೀರಿನ ಒತ್ತಡವಿದೆ. ಇದರು ನೀರಿನ ಮೇಲ್ಭಾಗದಲ್ಲಿ ಅನುಭವಿಸುವ ಒತ್ತಡಕ್ಕಿಂತ 400 ಪಟ್ಟು ಅಧಿಕವಾಗಿದೆ. ಸಮುದ್ರ ತುಂಬಾ ಆಳವಾಗಿರುವುದರಿಂದ ನೀರಿನ ಒತ್ತಡದಿಂದಾಗಿ ಟೈಟಾನ್​ ನೌಕೆಯ ಮೇಲ್ಮೈನಲ್ಲಿ ತುಂಬಾ ಒತ್ತಡ ಉಂಟಾಗಿ, ಕೊನೆಗೆ ಅತ್ಯಧಿಕ ಒತ್ತಡದಿಂದಾಗಿ ನೌಕೆ ಭೀಕರವಾಗಿ ಸ್ಫೋಟಗೊಂಡಿದೆ.

    ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆದಿದೆ. ಅನೇಕರು ವಿಡಿಯೋ ವಿವರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಉತ್ತಮ ಅನಿಮೇಷನ್​. ಈ ವಿಡಿಯೋದಿಂದ ಟೈಟಾನ್​ ದುರಂತ ಹೇಗೆ ಸಂಭವಿಸಿತು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

    ಇದನ್ನೂ ಓದಿ: ಸೀಮಾ ಪಾಕ್​ಗೆ ಮರಳದಿದ್ದರೆ ಮತ್ತೊಂದು ಮುಂಬೈ ಮಾದರಿ ದಾಳಿ: ಬೆದರಿಕೆ ಕರೆ, ಮುಂಬೈ ಪೊಲೀಸರು ಅಲರ್ಟ್​

    ನೌಕೆಯಲ್ಲಿದ್ದ ಐವರು ಯಾರು?

    ಟೈಟಾನ್​ ನೌಕೆಯಲ್ಲಿ ಯುನೈಟೆಡ್​ ಕಿಂಗ್​​ಡಮ್​ನ ಆಕ್ಷನ್ ಗ್ರೂಪ್ ಹೂಡಿಕೆ ಸಂಸ್ಥೆಯ ಸಂಸ್ಥಾಪಕ ಮತ್ತು ಸಾಹಸಪ್ರಿಯ ಹಮೀಶ್​ ಹರ್ಡಿಂಗ್​ (58), ಫ್ರೆಂಚ್ ಕಡಲ ತಜ್ಞ ಪೌಲ್​ ಹೆನ್ರಿ ನರ್ಜೋಲೆಟ್ (77), ವಾಷಿಂಗ್ಟನ್ ಮೂಲದ ಓಷನ್‌ಗೇಟ್ ಕಂಪನಿ ಎವೆರೆಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟಾಕ್ಟನ್ ರಶ್ (61), ಪಾಕಿಸ್ತಾನದ ಖ್ಯಾತ ಉದ್ಯಮಿ ಶಹಜಾದ ದಾವೂದ್​ (48) ಮತ್ತು ಆತನ ಪುತ್ರ ಸುಲೇಮಾನ್​ ದಾವೂದ್​ (19) ಇದ್ದರು.

    ಘಟನೆ ಹಿನ್ನೆಲೆ ಏನು?

    ಕಳೆದ ಜೂ.18ರ ಭಾನುವಾರದಂದು ಈ ಘಟನೆ ನಡೆಯಿತು. ಕೆನಾಡದ ನ್ಯೂಫೌಂಡ್​ಲ್ಯಾಂಡ್​ ಕರಾವಳಿ ಭಾಗದಿಂದ ಸುಮಾರು 400 ಮೈಲಿ ದೂರದಲ್ಲಿ ಟೈಟಾನಿಕ ಹಡಗಿನ ಅವಶೇಷಗಳು ಬಿದ್ದಿವೆ. ಅದನ್ನು ನೋಡಲು ಟೈಟಾನ್​ ಹೆಸರಿನ ಜಲಾಂತರ್ಗಾಮಿ ನೌಕೆಯಲ್ಲಿ ಹೋದ ಐವರು ಮೃತಪಟ್ಟಿದ್ದಾರೆ. ಅವರ ಪತ್ತೆಗಾಗಿ ಕಳೆದ ಯುಎಸ್​ ಮತ್ತು ಕೆನಡಾ ಕರಾವಳಿ ಪಡೆ ದಿನದ 24 ಗಂಟೆ ಯುಎಸ್​ ಕನೆಕ್ಟಿಕಟ್‌ ರಾಜ್ಯದ ಎರಡು ಪಟ್ಟು ಗಾತ್ರದ ಪ್ರದೇಶದಲ್ಲಿ ನಿರಂತರ ಕಾರ್ಯಚರಣೆ ನಡೆಸಿತು. ನೌಕೆಯಲ್ಲಿ 96 ಗಂಟೆಗೆ ಆಗುವಷ್ಟು ಆಮ್ಲಜನಕ ಪೂರೈಕೆ ಇತ್ತು. ಒಂದು ಕಡೆ ಆಮ್ಲಜನಕ ಖಾಲಿಯಾಗುತ್ತಿರುವ ಆತಂಕದ ನಡುವೆ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿತ್ತು. ಆದರೆ, ಅಂತಿಮವಾಗಿ ನೌಕೆಯ ಅವಶೇಷಗಳು ಪತ್ತೆಯಾಯಿತು. ಅದರಲ್ಲಿದ್ದ ಐವರು ಮೃತಪಟ್ಟಿರುವುದು ಜೂ. 23ರಂದು ಖಚಿತವಾಯಿತು.

    ದುರಂತ ಸಂಭವಿಸಿದ್ಹೇಗೆ?

    ಟೈಟಾನ್​ ಹೆಸರಿನ ನೌಕೆಯು ನೀರಿನ ಸೆಳೆತಕ್ಕೆ ಅಂತರ್​ಸ್ಫೋಟಗೊಂಡು ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸಮುದ್ರದ ಆಳವಾಗಿ ಹೋದಂತೆ, ನೀರಿನ ಒತ್ತಡವು ಹೆಚ್ಚಾಗುತ್ತದೆ ಮತ್ತು ಕೆಳಕ್ಕೆ ತಳ್ಳುತ್ತದೆ. ಇದರಿಂದ ಜಲಾಂತರ್ಗಾಮಿ ನೌಕೆ ಸ್ಫೋಟಗೊಂಡಿದೆ. ರಿಮೋಟ್​ ಕಂಟ್ರೋಲ್​ ವಾಹನದಲ್ಲಿ ನೀರಿನ ಅಡಿಯಲ್ಲಿ ಪತ್ತೆಯಾದ ಅವಶೇಷಗಳನ್ನು ಪರೀಕ್ಷಿಸಿದ ಬಳಿಕ ಯುಎಸ್​ ಕರಾವಳಿ ಪಡೆ ಈ ನಿರ್ಣಯಕ್ಕೆ ಬರಲಾಯಿತು. ಸಾಗರದ ಸುಮಾರು 1600 ಅಡಿ (488 ಮೀಟರ್​) ಆಳದಲ್ಲಿ ನಾಪತ್ತೆಯಾದ ಜಲಾಂತರ್ಗಾಮಿ ನೌಕೆಯ ಅವಶೇಷಗಳು ಪತ್ತೆಯಾದವು.

    ಇದಕ್ಕೂ ಮುನ್ನ ಯುಎಸ್​ ಕರಾವಳಿ ಪಡೆ ಸಾಗರದ ಆಳದಲ್ಲಿ ಬಡಿಯುವ ಶಬ್ಧವನ್ನು ಗುರುತಿಸಿತ್ತು. ನೀರಿನ ಒಳಗಿನ ಶಬ್ಧವನ್ನು ಗುರುತಿಸುವ ಸೋನಾರ್​ ಅನ್ನು ರಕ್ಷಣಾ ಪಡೆಗಳು ಬಳಸಿದ್ದು, ನೌಕೆ ನಾಪತ್ತೆಯಾದ ಸ್ಥಳದಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಬಡಿಯುವ ಶಬ್ದ ಕೇಳಿಬರುತ್ತಿದೆ ಎಂದು ತಿಳಿಸಿದ್ದವು. ಇದರಿಂದ ಐವರು ಇನ್ನು ಜೀವಂತವಾಗಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಮತ್ತಷ್ಟು ಶೋಧ ಕಾರ್ಯ ನಡೆಸಿದಾಗ ಅಲ್ಲಿ ಕೇಳಿಬರುತ್ತಿದ್ದ ಶಬ್ದಕ್ಕೂ ನೌಕೆಗೂ ಸಂಬಂಧವಿಲ್ಲ ಎಂಬುದು ನಂತರದಲ್ಲಿ ತಿಳಿಯಿತು.

    ಟೈಟಾನ್​ ನೌಕೆಯ ಬಗ್ಗೆ

    ಕಾಣೆಯಾದ ಟೈಟಾನ್​ ಜಲಾಂತರ್ಗಾಮಿ ನೌಕೆ 6.7 ಮೀಟರ್​ ಉದ್ದವಿತ್ತು. ಕಾರ್ಬನ್​ ಫೈಬರ್​ ಮತ್ತು ಟೈಟಾನಿಯಂನಿಂದ ವಿನ್ಯಾಸ ಮಾಡಲಾಗಿತ್ತು. ಓರ್ವ ಪೈಲಟ್​ ಮತ್ತು ನಾಲ್ವರು ಸಿಬ್ಬಂದಿಯನ್ನು ಗಿರಷ್ಠ 4000 ಮೀಟರ್ ಆಳ (13,120 ಅಡಿ)ದವರೆಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿತ್ತು. ಓಷನ್​ಗೇಟ್​ ವೆಬ್‌ಸೈಟ್‌ ಪ್ರಕಾರ, ನೌಕೆಯಲ್ಲಿದ್ದ ಆನ್‌ಬೋರ್ಡ್ ಸಿಸ್ಟಮ್, ಸಿಬ್ಬಂದಿಯ ಆರೋಗ್ಯವನ್ನು ಪತ್ತೆಹಚ್ಚಲು ಮತ್ತು ಪೈಲಟ್‌ಗೆ ಅವರೋಹಣವನ್ನು ಗುರುತಿಸಿ, ಸುರಕ್ಷಿತವಾಗಿ ಮೇಲ್ಮೈಗೆ ಮರಳಲು ಸಾಕಷ್ಟು ಸಮಯದ ಮುಂಚೆಯೇ ಆರಂಭಿಕ ಎಚ್ಚರಿಕೆಯನ್ನು ಪತ್ತೆಹಚ್ಚುವ ವ್ಯವಸ್ಥೆಯೂ ಇತ್ತು ಎಂದು ತಿಳಿಸಿದೆ. ಜೂನ್​ 18ರಂದು ಟೈಟಾನಿಕ್ ಹಡಗು ಇರುವ ಕಡೆಗೆ ಧುಮುಕಲು ಪ್ರಾರಂಭಿಸಿದ ಸುಮಾರು 1 ಗಂಟೆ 45 ನಿಮಿಷಗಳ ನಂತರ ಟೈಟಾನ್​ ನೌಕೆ ತನ್ನ ಎಲ್ಲ ಸಂಪರ್ಕವನ್ನು ಕಡಿದುಕೊಂಡಿತು.

    ಇದನ್ನೂ ಓದಿ: ಫ್ರಾನ್ಸ್​ನಲ್ಲೂ ಭಾರತದ UPI ಬಳಕೆ, ಐಫೆಲ್​ ಟವರ್​ನಿಂದಲೇ ಆರಂಭಿಸಲಾಗುವುದು: ಪ್ರಧಾನಿ ಮೋದಿ ಹೇಳಿಕೆ

    ಟೈಟಾನಿಕ್​ ಘಟನೆ ಹಿನ್ನೆಲೆ

    1912ರ ಏಪ್ರಿಲ್​ 15ರಂದು ಟೈಟಾನಿಕ್​ ದುರಂತ ಸಂಭವಿಸಿತು. ಸೌತಾಂಪ್ಟನ್‌ನಿಂದ ನ್ಯೂಯಾರ್ಕ್ ನಗರಕ್ಕೆ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್​ ಹಡಗು ತನ್ನ ಮೊದಲ ಪ್ರಯಾಣ ಆರಂಭಿಸಿತ್ತು. ಕೆನಡಾ ದೇಶದ ನ್ಯೂಫೌಂಡ್‌ಲ್ಯಾಂಡ್‌ ಕರಾವಳಿಯಿಂದ 400 ಮೈಲು ದೂರದಲ್ಲಿ ಟೈಟಾನಿಕ್‌ ಹಡಗು ದುರಂತದಲ್ಲಿ ಮುಳುಗಡೆಯಾಯಿತು. ಒಂದು ಶತಮಾನಕ್ಕೂ ಅಧಿಕ ಸಮಯದಲ್ಲಿ ಸಮುದ್ರದ 12,600 ಅಡಿ ಆಳದಲ್ಲಿ ಟೈಟಾನಿಕ್ ಅವಶೇಷಗಳು ಬಿದ್ದಿವೆ. ಬೃಹತ್ ಮಂಜುಗಡ್ಡೆಗೆ ಟೈಟಾನಿಕ್ ಅಪ್ಪಳಿಸಿದ್ದ ಕಾರಣ 1500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಕೇವಲ 700 ಜನರು ಮಾತ್ರ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿತ್ತು. (ಏಜೆನ್ಸೀಸ್​)

    ಟೈಟಾನ್​ ನೌಕೆಯ ಅವಶೇಷಗಳು ವಶಕ್ಕೆ: ಮಾನವನ ದೇಹದ ಭಾಗಗಳೂ ಪತ್ತೆ, ಹೆಚ್ಚಿನ ವಿಶ್ಲೇಷಣೆಗಾಗಿ ರವಾನೆ

    ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ದುರಂತ ಅಂತ್ಯ: ಸಾವಿಗೆ ಆಮ್ಲಜನಕ ಕೊರತೆ ಕಾರಣವಲ್ಲ, ಇಲ್ಲಿದೆ ಪೂರ್ಣ ಮಾಹಿತಿ…

    ಜಲಾಂತರ್ಗಾಮಿ ನೌಕೆ ನಾಪತ್ತೆ: ಕೆಲವೇ ಗಂಟೆಗಳಲ್ಲಿ ಆಮ್ಲಜನಕ ಖಾಲಿ, ಇನ್ನೂ ಸಿಗದ ಸುಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts