More

    ಅಕ್ರಮ ನೋಂದಣಿ ಕಿಂಗ್​ಪಿನ್ ಸೆರೆ: ಆಂಧ್ರದಿಂದ ಬಂಧಿಸಿ ಕರೆತಂದ ಪೊಲೀಸರು; ಈವರೆಗೆ ಐವರು ಜೈಲುಪಾಲು

    ಬೆಂಗಳೂರು: ಗುಜರಿ ಹಾಗೂ ಕಳುವಾಗಿರುವ ಬಸ್ಸುಗಳ ಅಕ್ರಮ ನೋಂದಣಿ ಜಾಲದ ಕಿಂಗ್​ಪಿನ್ ವೇಣುಗೋಪಾಲ ರೆಡ್ಡಿಯನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಈವರೆಗೆ ಆರ್​ಟಿಒ ಏಜೆಂಟ್​ಗಳು ಸೇರಿ ಐವರನ್ನು ಬಂಧಿಸಿದ್ದು, ದಂಧೆಯಲ್ಲಿ ಇನ್ನೂ ಕೆಲವು ಆರ್​ಟಿಒ ಅಧಿಕಾರಿ, ಸಿಬ್ಬಂದಿ ಹಾಗೂ ಮಧ್ಯವರ್ತಿಗಳು ಭಾಗಿಯಾಗಿರುವುದಕ್ಕೆ ಪ್ರಾಥಮಿಕ ಸಾಕ್ಷ್ಯ ದೊರೆತಿದೆ. ಇವರನ್ನು ಬಂಧಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರು ಪೂರ್ವ ತಾಲೂಕಿನ ಕಾಟಂನಲ್ಲೂರು ಬಳಿಯ ಎಸ್​ಎಸ್​ಪಿ ಮೋಟಾರ್ಸ್ ಮಾಲೀಕ ವೇಣುಗೋಪಾಲ ರೆಡ್ಡಿ, ಮ್ಯಾನೇಜರ್ ಚಿರಂಜೀವಿ, ಸೂಪರ್​ವೈಸರ್ ಶ್ರೀನಿವಾಸ್, ಕೋಲಾರ ಆರ್​ಟಿಒ ಕಚೇರಿ ಏಜೆಂಟ್​ಗಳಾದ ರಾಜು ಹಾಗೂ ನವೀನ್ ಬಂಧಿತರು. ತಿರುಪತಿಯ ವೇಣುಗೋಪಾಲ ರೆಡ್ಡಿ ಪ್ರಮುಖ ಆರೋಪಿಯಾಗಿದ್ದು, ಎರಡೂವರೆ ವರ್ಷದಿಂದ ಅಕ್ರಮ ನೋಂದಣಿ ದಂಧೆ ನಡೆಸುತ್ತಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ನಾಗಾಲ್ಯಾಂಡ್ ಹಾಗೂ ಅರುಣಾಚಲ ಪ್ರದೇಶ ಆರ್​ಟಿಒ ಕಚೇರಿಯಿಂದ ವಾಹನ ವರ್ಗಾವಣೆಗೆ ವಿತರಣೆಯಾಗಿರುವ ನಕಲಿ ನಿರಾಕ್ಷೇಪಣಾ ಪತ್ರಗಳನ್ನು (ಎನ್​ಒಸಿ) ಆಧರಿಸಿ ಕೋಲಾರ ಆರ್​ಟಿಒ ಕಚೇರಿಯಲ್ಲಿ ಬಸ್​ಗಳನ್ನು ಅಕ್ರಮವಾಗಿ ನೋಂದಣಿ ಮಾಡಿಸಿ, ಶಾಲಾ-ಕಾಲೇಜುಗಳಿಗೆ ಅದೇ ಬಸ್​ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಬೆಂಗಳೂರು ಹಾಗೂ ಕೋಲಾರ ಆರ್​ಟಿಒ ಕಚೇರಿಯಲ್ಲೇ 250ಕ್ಕೂ ಅಧಿಕ ಬಸ್​ಗಳನ್ನು ನೋಂದಣಿ ಮಾಡಿಸಿ, ಮಾರಾಟ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

    ಹೊಸಕೋಟೆ ಕಾಟಂನಲ್ಲೂರು ಗ್ರಾಮದ ಸರ್ವೆ ನಂ.3ರಲ್ಲಿ ತಿರುಪತಿಯ ವೇಣುಗೋಪಾಲ ರೆಡ್ಡಿ ಎಸ್​ಎಸ್​ಪಿ ಗ್ಯಾರೇಜ್ ಇಟ್ಟುಕೊಂಡಿದ್ದು, ಹಳೆಯ ಲೇಲ್ಯಾಂಡ್ ಕಂಪನಿಯ ಚಾಸ್ಸಿಗಳನ್ನು ತಂದು ಯಾವುದೇ ಅನುಮತಿ ಇಲ್ಲದೆ ಬಸ್​ಗಳ ವಿನ್ಯಾಸ ಮಾಡಿಸುತ್ತಿದ್ದ. ಅರುಣಾಚಲ ಪ್ರದೇಶದ ಆರ್​ಟಿಒ ಕಚೇರಿಯಲ್ಲಿ 2-3 ವರ್ಷಗಳ ಹಿಂದೆ ನೋಂದಣಿ ಮಾಡಿಸಿದಂತೆ ದಾಖಲೆ ಸೃಷ್ಟಿಸುತ್ತಿದ್ದ. ಬಳಿಕ ಕೋಲಾರ ಆರ್​ಟಿಒ ಕಚೇರಿಯಿಂದ ಎನ್​ಒಸಿ ಪಡೆದುಕೊಳ್ಳಲಾಗಿದ್ದು, ಅಗತ್ಯ ದಾಖಲಾತಿ ಸೃಷ್ಟಿಸಿಕೊಂಡು ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿರುವ ಎಸ್​ಸಿಟಿ ಡಿಗ್ರಿ ಕಾಲೇಜು ಹಾಗೂ ಇತರ ಶಾಲಾ-ಕಾಲೇಜುಗಳ ಹೆಸರಿನಲ್ಲಿ ಕಡಿಮೆ ತೆರಿಗೆ ಪಾವತಿಸಿ ನೋಂದಣಿ ಮಾಡಿಸಿದ್ದಾನೆ. ಈ ದಂಧೆಯಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಬಂಧಿತ ಏಜೆಂಟ್ ನವೀನ್, ವೇಣುಗೋಪಾಲ ರೆಡ್ಡಿ ಜತೆ ಸಂಪರ್ಕದಲ್ಲಿರುತ್ತಿದ್ದ. ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸಿಕೊಂಡು ಆರ್​ಟಿಒ ಕಚೇರಿಗೆ ತಲುಪಿಸುತ್ತಿದ್ದ. ನೋಂದಣಿಗೂ ಮುನ್ನ ಮಾತನಾಡಿಕೊಂಡಂತೆ ವೇಣುಗೋಪಾಲ ರೆಡ್ಡಿ, ನವೀನ್​ಗೆ ಹಣ ತಲುಪಿಸುತ್ತಿದ್ದ ಎಂದು ಗೊತ್ತಾಗಿದೆ. ವೇಣುಗೋಪಾಲರೆಡ್ಡಿಯಿಂದ ಹಣ ಪಡೆದ ನಂತರ ನವೀನ್, ಉಳಿದವರಿಗೆ ಪಾಲು ಕೊಡುತ್ತಿದ್ದ ಎನ್ನಲಾಗಿದೆ.

    ಗೂಡ್ಸ್ ವಾಹನ ನೋಂದಣಿಗೂ ಸೈ

    ಪೊಲೀಸರೀಗ ಬರೀ ಶಾಲಾ-ಕಾಲೇಜುಗಳ ಹೆಸರಲ್ಲಿ ನೋಂದಣಿಯಾಗಿರುವ ಬಸ್​ಗಳ ದಾಖಲಾತಿ ಮಾತ್ರ ಪರಿಶೀಲನೆ ನಡೆಸಿದ್ದಾರೆ. ಆದರೆ, ಬಸ್​ಗಳ ಜತೆಗೆ 6 ತಿಂಗಳಲ್ಲಿ 750ಕ್ಕೂ ಹೆಚ್ಚು ಗೂಡ್ಸ್ ವಾಹನಗಳು ಅಕ್ರಮವಾಗಿ ನೋಂದಣಿಯಾಗಿರುವುದಕ್ಕೆ ದಾಖಲಾತಿಗಳಿವೆ. ಈ ಬಗ್ಗೆಯೂ ಪೊಲೀಸರು, ತನಿಖೆ ವ್ಯಾಪ್ತಿ ವಿಸ್ತರಿಸಿದರೆ ನೋಂದಣಿ ಅಕ್ರಮದ ಜಾಲ ಇನ್ನಷ್ಟು ಬಿಚ್ಚಿಕೊಳ್ಳುತ್ತದೆ ಎಂದು ಅಧಿಕಾರಿಗಳೇ ಮಾಹಿತಿ ನೀಡುತ್ತಾರೆ. ಪರ್ವಿುಟ್ ಇಲ್ಲದಿದ್ದರೂ ಒಂದೇ ದಿನದಲ್ಲಿ ಕೋಲಾರ ಆರ್​ಟಿಒದಿಂದ ರಾಜ್ಯ ಹಾಗೂ ಹೊರರಾಜ್ಯಗಳ ಆರ್​ಟಿಒಗೆ ಸಿಸಿ ಕೊಡಲಾಗಿದೆ.

    ವಾಹನಗಳ ಅಕ್ರಮ ನೋಂದಣಿ ಜಾಲದ ಪ್ರಮುಖ ಆರೋಪಿ ವೇಣುಗೋಪಾಲ ರೆಡ್ಡಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿಸಿದಂತೆ ಇದೊಂದು ಬೃಹತ್ ಜಾಲ ಎಂಬ ವಿಚಾರ ತಿಳಿಯುತ್ತಿದೆ. ದಂಧೆಯಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಮಾಹಿತಿ ಸಿಕ್ಕಿದ್ದು, ಆದಷ್ಟು ಬೇಗ ಎಲ್ಲರನ್ನು ಬಂಧಿಸಲಾಗುತ್ತದೆ.

    | ಶಂಕರಗೌಡ ಎ.ಪಾಟೀಲ್, ಹೊಸಕೋಟೆ ಉಪ ವಿಭಾಗದ ಡಿವೈಎಸ್ಪಿ

    ಬಾಡಿಗೆ ಮನೆ ಕರಾರು ಪತ್ರ ನಕಲಿ!: ಸ್ಥಳೀಯವಾಗಿ ಬಾಡಿಗೆ ಮನೆಯಲ್ಲಿ ವಾಸವಿರುವಂತೆ ನಕಲಿ ಕರಾರು ಪತ್ರ ಸೃಷ್ಟಿಸಿ, ಹೊರ ರಾಜ್ಯಗಳಿಂದ ವಾಹನ ವರ್ಗಾವಣೆ ಮಾಡಲಾಗಿದೆ. ಒಂದೇ ದಿನದಲ್ಲಿ ರೀ ನಂಬರ್ ಕೊಟ್ಟು, ಮಾರನೆ ದಿನವೇ ರಾಜ್ಯದ ಬೇರೆಬೇರೆ ಆರ್​ಟಿಒಗಳಿಗಲ್ಲದೆ ಮಣಿಪುರ, ಹರಿಯಾಣ, ಅರುಣಾಚಲಪ್ರದೇಶ ಇನ್ನಿತರ ರಾಜ್ಯಗಳಿಗೆ ಸಿಸಿ ಕೊಡಲಾಗಿದೆ.

    ಏಜೆಂಟ್​ಗಳ ಮನೆಯಲ್ಲಿ ಕಡತಗಳು?: ಸಾರಿಗೆ ಇಲಾಖೆ ಅಧಿಕಾರಿಗಳು ಅಥವಾ ಪೊಲೀಸರು ಪರಿಶೀಲನೆಗೆ ಬಂದರೆ ಸಿಕ್ಕಿಬೀಳುವ ಭಯದಲ್ಲಿ ಅಕ್ರಮ ನೋಂದಣಿಗೆ ಸಂಬಂಧಿಸಿದ ದಾಖಲಾತಿಗಳನ್ನು ಆರ್​ಟಿಒ ಕಚೇರಿಯಿಂದ ಸ್ಥಳಾಂತರಿಸಲಾಗಿದೆ ಎಂದು ಗೊತ್ತಾಗಿದೆ. ಕೆಲ ಏಜೆಂಟ್​ಗಳ ಮನೆಗಳಲ್ಲಿ ವಾಹನ ನೋಂದಣಿ ಫೈಲ್​ಗಳನ್ನು ಇಟ್ಟಿರುವ ಮಾಹಿತಿ ಸಿಕ್ಕಿದೆ.

    ಸ್ಕ್ವಾಡ್​ನಿಂದ ಕಡತಗಳ ಪರಿಶೀಲನೆ: ಇದೇ ಪ್ರಕರಣದ ವಿಚಾರಣೆಗಾಗಿ ಸಾರಿಗೆ ಇಲಾಖೆಯಿಂದಲೂ ಪ್ರತ್ಯೇಕ ತಂಡ ರಚಿಸಲಾಗಿದೆ. ಜಂಟಿ ಆಯುಕ್ತರಾದ ಗಾಯತ್ರಿದೇವಿ, ಎಆರ್​ಟಿಒಗಳಾದ ನಯಾಜ್ ಪಾಷಾ ಹಾಗೂ ಉಮೇಶ್ ತಂಡದಲ್ಲಿದ್ದಾರೆ. ಸೋಮವಾರ ಕೋಲಾರ ಆರ್​ಟಿಒ ಕಚೇರಿಗೆ ಭೇಟಿ ಕೊಟ್ಟಿದ್ದ ತಂಡ ಕೆಲ ಮಾಹಿತಿ ಪಡೆದಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ ಮತ್ತು ಸಿಬ್ಬಂದಿಯ ವರ್ಗಾವಣೆಗೂ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.

    ದಂಧೆ ಬಯಲಿಗೆಳೆದ ವಿಜಯವಾಣಿ: ಬಸ್​ಗಳ ಅಕ್ರಮ ನೋಂದಣಿ ಮಾಡಿರುವ ಕುರಿತು ‘ಕದ್ದ ವಾಹನಕ್ಕೂ ನೋಂದಣಿ!’ ಶೀರ್ಷಿಕೆಯಡಿ ಜೂ.30ರಂದು ವಿಜಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದನ್ನು ಆಧರಿಸಿ ಎಫ್​ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ನ್ಯಾಯಾಲಯದ ಮೊರೆ ಹೋಗಿದ್ದೇಕೆ ಎಂದು ಕಾರಣ ಕೊಟ್ಟ ಕಿಚ್ಚ; ನ್ಯಾಯಾಲಯದಲ್ಲೇ ಬಗೆಹರಿಯಲು ಬಿಡಿ ಎಂದು ಸುದೀಪ್ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts