More

    VALENTINES DAY SPECIAL | ಪ್ರೀತಿಯ ಪಾರಿವಾಳ ‘ನೋ’ ಅಂದ್ರೆ?

    ಅತುಲ ದಾಮಲೆ, ಬೆಂಗಳೂರು
    ಕಾದಂಬರಿಕಾರರು

    ಪ್ರೀತಿ ಗೆಲ್ಲುವುದು ಎಂದರೆ ಮೆಚ್ಚಿದ ಹುಡುಗಿ ಅಥವಾ ಹುಡುಗ ಒಪ್ಪಿದಾಗ ಎನ್ನುವ ಮಾತಿದೆ. ಇದನ್ನು ಒಪ್ಪದ ಜನರೂ ಇದ್ದಾರೆ. ‘ಮಚ್ಚಾ, ನನ್ ಹುಡುಗಿ ಕೈ ಕೊಟ್ಳು, ನನ್ ಪ್ರೀತಿ ಸೋತು ಹೋಯ್ತು’ ಎಂದು ಅಳುತ್ತಾ ಕೂರುವವರೂ ಇದ್ದಾರೆ. ಇದೆಲ್ಲವೂ ಪ್ರತಿಯೊಬ್ಬರ ವೈಯಕ್ತಿಕ ಅನುಭವ ಹಾಗೂ ಅಭಿಪ್ರಾಯಕ್ಕೆ ಬಿಟ್ಟದ್ದು. ಆದರೆ, ಈ ಅಭಿಪ್ರಾಯಗಳೇನೇ ಇದ್ದರೂ ಮೆಚ್ಚಿದ ಹುಡುಗ/ಹುಡುಗಿ ಪ್ರೇಮ ನಿವೇದನೆಗೆ ಇಲ್ಲ ಎಂದು ಹೇಳಿದ ನಂತರ ಯುವ ಜನರು ಏನು ಮಾಡುತ್ತಾರೆ ಎನ್ನುವುದರ ಮೇಲೆ ಸಮಾಜ ಯಾವ ದಿಕ್ಕಿನೆಡೆಗೆ ಸಾಗುತ್ತದೆ ಎನ್ನುವುದು ನಿರ್ಧಾರ ಆಗುತ್ತದೆ.

    ಈ ಫಿಲಾಸಫಿ ಎಲ್ಲಾ ಬದಿಗಿಟ್ಟು ಮೊದಲಿಗೆ ಪ್ರೀತಿ ಎಂದರೆ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ. ಹದಿ ವಯಸ್ಸಿನಲ್ಲಿ ಶುರುವಾಗುವ ಆಕರ್ಷಣೆ ಹಾರ್ಮೋನುಗಳಿಂದ ಉಂಟಾಗುತ್ತೆ. ಆದರೆ ಒಬ್ಬ ವ್ಯಕ್ತಿ ಪ್ರೌಢನಾಗುತ್ತಾ ಹೋದಂತೆ ತನ್ನ ಇಷ್ಟ-ಕಷ್ಟಗಳಿಗೆ ಅನುಗುಣವಾಗಿ ಜೀವನ ಸಂಗಾತಿಯನ್ನು ಹುಡುಕಲು ಆರಂಭಿಸುತ್ತಾನೆ. ತನ್ನನ್ನು ತಾನು ಇಷ್ಟಪಟ್ಟ ವ್ಯಕ್ತಿಗಾಗಿ ಸಮರ್ಪಿಸಿಕೊಳ್ಳಲು ಮುಂದಾಗುತ್ತಾನೆ. ಆಗಲೇ ಅಸಲಿ ಸಮಸ್ಯೆ ಶುರುವಾಗುವುದು. ನನಗೆ ಇಷ್ಟ ಇರುವುದು ಆಕೆ/ಆತನಿಗೂ ಪ್ರಿಯವಾಗಿ ಇರಬೇಕು ಎಂದಿಲ್ಲವಲ್ಲ. ಎದುರಿದ್ದವರಿಗೂ ನಾವು ಇಷ್ಟವಾಗಬೇಕು. ಕೆಲವರಿಗೆ ನಮ್ಮ ಸಮರ್ಪಣೆಯೂ ಇಷ್ಟವಾಗದೇ ‘ವಿಚಿತ್ರ’ ಅಥವಾ ‘ಕ್ರೀಪಿ’ ಎಂದೂ ತೋರಬಹುದು. ಆಗಲೇ ‘ಪಾರಿವಾಳ’ ಇಲ್ಲ ಎನ್ನುವುದು.

    ಪ್ರೀತಿ ಎನ್ನುವುದು ಅಡಿಕ್ಷನ್ ಇದ್ದ ಹಾಗೆ. ಅವರನ್ನೇ ಮನಸ್ಸಿನಲ್ಲಿ ನೆನೆದೂ ನೆನೆದು, ಅವರೊಂದಿಗೆ ಇದ್ದರೆ ಹಾಗೆಲ್ಲಾ ಮಾಡುತ್ತೇನೆ ಎಂದು ಗಾಳಿಗೋಪುರ ಕಟ್ಟುವ ಮೇಸ್ತ್ರಿಗಳೇ ಹೆಚ್ಚು. ಈ ಗಾಳಿಗೋಪುರ ಪುಸಕ್ಕನೇ ಮಾಯವಾದಾಗ ಆ ಖಾಲಿ ಜಾಗವನ್ನು ಹೇಗೆ ತುಂಬುವುದು ಎಂದು ತಿಳಿಯದೇ ಜನರು ಪರದಾಡುತ್ತಾರೆ. ಹುಡುಗಿ/ಹುಡುಗ ನೋ ಅಂದ ಮೇಲೆ ಜನ ಏನು ಮಾಡುತ್ತಾರೆ ಎನ್ನುವುದು ಅತ್ಯಂತ ಮುಖ್ಯವಾದ ವಿಚಾರ.

    ಬಿಹಾರದಲ್ಲಿ ಇಷ್ಟಪಟ್ಟ ಹುಡುಗಿ ಇನ್ಯಾರನ್ನೋ ಮದುವೆಯಾದಾಗ ಅಥವಾ ಇಲ್ಲಾ ಅಂದಾಗ ಹುಡುಗರು ಯುಪಿಎಸ್ ಸಿ ಪರೀಕ್ಷೆಗಾಗಿ ತಯಾರಿ ಮಾಡಲು ಮುಂದಾಗುತ್ತಾರೆ. ಮೂಲಭೂತವಾಗಿ ಆ ನೋವನ್ನು ಮರೆಯಲು ಇನ್ನೊಂದು ಕೆಲಸದಲ್ಲಿ ತೊಡಗಿಕೊಳ್ಳಲು ಪ್ರಯತ್ನಿಸುತ್ತಾರೆ. ನಗರ ಪ್ರದೇಶಗಳಲ್ಲಿ ಅನೇಕ ಹುಡುಗರು ಜಿಮ್ ಸೇರಿ ದೇಹ ದಾರ್ಢ್ಯವನ್ನು ಬೆಳೆಸಿಕೊಳ್ಳುತ್ತಾರೆ. ಈ ರೀತಿ ಜನರು ಬ್ರೇಕಪ್ ಜತೆಗೆ ಕೋಪ್ ಅಪ್ ಮಾಡಿಕೊಳ್ಳಲು ಪ್ರಯತ್ನಿಸಿದರೆ ಇನ್ನೂ ಕೆಲವರು ಪಕ್ಕಾ ದೇವದಾಸರಾಗುತ್ತಾರೆ. ಈ ದೇವದಾಸರು ತಾವೂ ನೋವಿನಲ್ಲಿ ಇರುತ್ತಾ ಇನ್ನೊಬ್ಬರಿಗೂ ಕಷ್ಟ ಕೊಡುತ್ತಾರೆ. ಇನ್ನೂ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಹುಚ್ಚು ನಿರ್ಧಾರಕ್ಕೂ ಕೈ ಹಾಕುತ್ತಾರೆ.

    ನಮ್ಮಿಷ್ಟದ ವ್ಯಕ್ತಿ ನಮ್ಮ ಜೀವನದಲ್ಲಿ ಇಲ್ಲ ಎಂದಾಗ ನಾವು ಮೊದಲು ಅರ್ಥ ಮಾಡಿಕೊಳ್ಳಬೇಕಾದದ್ದು ಇಷ್ಟೇ. ನಾವೆಷ್ಟೇ ಅವರನ್ನು ಇಷ್ಟಪಟ್ಟರೂ ಅವರು ನಮ್ಮ ಸ್ವತ್ತಲ್ಲ. ಹಾಗೆಂದು ಭಾವಿಸಿದರೆ ಅದನ್ನೇ ಪೊಸೆಸಿವ್​ನೆಸ್ ಎನ್ನುವುದು. ಖ್ಯಾತ ಕವಿ ಖಲೀಲ್ ಗಿಬ್ರಾನ್ ಇದೇ ರೀತಿಯ ಮಾತನ್ನು ಹೇಳಿದ್ದ. ನಿಮ್ಮ ಮಕ್ಕಳು ನಿಜಕ್ಕೂ ನಿಮ್ಮ ಮಕ್ಕಳಲ್ಲ ಎಂದು. ಅದನ್ನೇ ಇಲ್ಲಿಗೂ ಲಾಗೂ ಮಾಡಬಹುದೋ ಏನೋ. ನಮ್ಮಿಷ್ಟದ ವ್ಯಕ್ತಿ ನಮ್ಮ ಸ್ವತ್ತಲ್ಲ. ನಮ್ಮ ರೀತಿಯಲ್ಲೇ ಅವರಿಗೂ ಸ್ವಂತ ಭಾವನೆ, ಜೀವನ ಪರಿಸ್ಥಿತಿ, ಕಷ್ಟ-ಇಷ್ಟಗಳಿವೆ ಎಂದು ಅರ್ಥ ಮಾಡಿಕೊಂಡರೆ ಸಾಕು. ನಮ್ಮ ಪ್ರೀತಿ ಗೆದ್ದಂತೆಯೇ.

    ಇನ್ನು ನಾವು ಪ್ರೀತಿಸಿದ ವ್ಯಕ್ತಿ ನಮ್ಮೊಂದಿಗೆ ಜೀವನ ಪೂರ್ತಿ ಇರುತ್ತಾರೋ ಇಲ್ಲವೋ ಎನ್ನುವುದು ಒಂದು ಶುದ್ಧ ಆ್ಯಕ್ಸಿಡೆಂಟ್. ಹಾಗಾಗಿ ನೋ ಹಾರ್ಡ್ ಫೀಲಿಂಗ್ಸ್ ಎಂದುಕೊಂಡು ಜೀವನದಲ್ಲಿ ಮುಂದುವರೆಯಬೇಕು. ಪ್ರೀತಿಯ ವಿಚಾರದಲ್ಲಿ ಹಿಂದೆ ಬ್ರೇಕಪ್ ಮಾಡಿಕೊಂಡವರು ಅಥವಾ ಇನ್ಯಾವುದೋ ಕಾರಣಕ್ಕೆ ಜತೆಯಾಗಿ ಬಾಳುವಲ್ಲಿ ಸೋತವರು ನೋಡಲೇಬೇಕಾದ ಸಿನಿಮಾ ಅಂದರೆ ಅದು 99. ಅಲ್ಲಿ ಶುದ್ಧ ಪ್ರೀತಿಯನ್ನು ತೋರಿಸಿರುವ ಪರಿ ಮಾತ್ರ ನಿಜಕ್ಕೂ ಅದ್ಭುತ.

    ವಾಸ್ತವದಲ್ಲಿ ನಾವು ಏನು ಮಾಡಬಹುದು ಎಂದು ನೋಡುವುದಾದರೆ, ನೊಂದ ಹೃದಯದ ಭಗ್ನ ಪ್ರೇಮಿಗಳು ಮೊದಲಿಗೆ ಮಾಡಬೇಕಾದದ್ದು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು. ಪ್ರೇಮ ಎಂದರೆ ಅಲ್ಲಿ ಸಾಕಷ್ಟು ಶಕ್ತಿಯನ್ನು ಭಾವನೆಗಳ ರೂಪದಲ್ಲಿ ಅಥವಾ ಇನ್ಯಾವುದೋ ರೂಪದಲ್ಲಿ ನಾವು ಇನ್ವೆಸ್ಟ್ ಮಾಡಿರುತ್ತೇವೆ. ಅಷ್ಟೂ ಶಕ್ತಿ ಒಮ್ಮಿಂದೊಮ್ಮೆಲೆ ನಿಷ್ಪ್ರಯೋಜಕ ಎಂದು ತಿಳಿದಾಗ ಆಗುವ ನೋವು ಅಷ್ಟಿಷ್ಟಲ್ಲ. ಹೀಗಾಗಿ ಮೊದಲು ಕಳೆದುಕೊಂಡ ಆ ಉತ್ಸಾಹ ಶಕ್ತಿ ಆತ್ಮವಿಶ್ವಾಸವನ್ನು ಮರಳಿ ಪಡೆಯಬೇಕು. ಅದಕ್ಕೆ ಅನೇಕ ಮಾರ್ಗಗಳಿವೆ. ಬಿಹಾರದ ಭಗ್ನ ಪ್ರೇಮಿಗಳಂತೆ ಅಧ್ಯಯನಕ್ಕೆ ಇಳಿದರೂ ಸರಿ. ಜಿಮ್ ಸೇರಿದರೂ ತೊಂದರೆ ಇಲ್ಲ. ಅಥವಾ ನಿಮ್ಮಿಷ್ಟದ ವಿಚಾರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡರೂ ಓಕೆ. ಒಟ್ಟಿನಲ್ಲಿ ಶುರು ಮಾಡಿದ್ದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.

    ಇಷ್ಟ ಪಟ್ಟ ವ್ಯಕ್ತಿ ನಮ್ಮೊಂದಿಗೆ ಇರುವುದಿಲ್ಲ ಎಂದು ತಿಳಿದಾಗ ದುಃಖವಾದರೂ ಅವರು ಸಂತೋಷದಲ್ಲಿದ್ದಾರಲ್ಲ ಎಂದು ಸಮಾಧಾನಪಡಿಸಿಕೊಳ್ಳಬೇಕು. ಅವರೂ ದುಃಖದಲ್ಲಿದ್ದರೆ ವಾಸ್ತವವನ್ನು ಒಪ್ಪಿಕೊಂಡು ಮುನ್ನುಗ್ಗಬೇಕು. ಪರಿಪೂರ್ಣ ವ್ಯಕ್ತಿತ್ವವಾಗಲು ಇಂತಹ ನೋವುಗಳೂ ಅವಶ್ಯ ಎಂದು ನಾನು ಭಾವಿಸುತ್ತೇನೆ. ಇಂತಹ ನೋವುಗಳ ಮೇಲೆ ವಿಜಯ ಪತಾಕೆಯನ್ನು ಹಾರಿಸಿದಾಗಲೇ ಬದುಕಿಗೆ ಒಂದು ಸುಂದರ ಅರ್ಥ ಬರುವುದು. ಜೀವನ, ಒಂದು ಉತ್ತಮ ಕಥೆಯಾಗಿ ರೂಪುಗೊಳ್ಳುವುದು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts