More

    ಗುರುಪುರದಲ್ಲಿ ಪಾಳುಬಿದ್ದು ಅನಾಥವಾಗಿದೆ ಸರ್ಕಾರಿ ಆಸ್ತಿ

    ಧನಂಜಯ ಗುರುಪುರ

    ಗುರುಪುರ: ಗ್ರಾಮ ಪಂಚಾಯಿತಿಯ ಮೂಳೂರು ಮತ್ತು ಅಡ್ಡೂರು ಗ್ರಾಮ ವ್ಯಾಪ್ತಿಯಲ್ಲಿ 8 ಕಟ್ಟಡಗಳು ದಶಕಗಳಿಂದ ದಿಕ್ಕು-ದೆಸೆಯಿಲ್ಲದೆ ಅನಾಥವಾಗಿವೆ.
    ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಹೀಗಾಗಿ ಇವುಗಳು ಈಗ ಉಂಡಾಡಿಗಳ ಜುಗಾರಿ ಅಡ್ಡೆಯಾಗಿ, ಕುಡುಕರ ಹಾಗೂ ಅನೈತಿಕ ಚಟುವಟಿಕೆ ಕೇಂದ್ರವಾಗಿ ಮಾರ್ಪಟ್ಟಿವೆ. ಹಾಗಾದರೆ ಈ ಕಟ್ಟಡ ನಿರ್ಮಿಸಿದ ಔಚಿತ್ಯವಾದರೂ ಏನೆಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
    ಮೂಳೂರು ಗ್ರಾಮದ ಗುರುಪುರ ಪಂಚಾಯಿತಿಯ ಅನತಿ ದೂರದಲ್ಲಿ, ಗುಡ್ಡ ಕುಸಿತ ಸಂತ್ರಸ್ತರಿಗೆ ಗುರುತಿಸಲಾದ ನಿವೇಶನದ ಪಕ್ಕದಲ್ಲಿ ಆದ್ಯಪಾಡಿಯ ಕೊರಗ ಸಮುದಾಯದರಿಗೆ ಸೇರಿದ ಮನೆಯಿದೆ. ಜನವಸತಿ ಇಲ್ಲದ ನಿರ್ಜನ ರಸ್ತೆ ಪಕ್ಕದಲ್ಲಿರುವ ಈ ನಿವೇಶನ-ಮನೆ ತನಗೆ ಬೇಡ ಎಂದು ಸ್ಥಳೀಯ ನಿವಾಸಿ ಹೇಳಿದ್ದು, ಮನೆ ಅನಾಥವಾಗಿದೆ. ಗುರುಪುರ-ಕೈಕಂಬ ಸಂಪರ್ಕಿಸುವ ಒಳ ರಸ್ತೆಯಲ್ಲಿರುವ ಮನೆಯೀಗ ಕುಡುಕರ ಅಡ್ಡೆಯಾಗಿದೆ. ಮನೆಯೊಳಗೆ ಮತ್ತು ಹೊರಗೆ ಸಿಕ್ಕಿರುವ ಮದ್ಯದ ಬಾಟ್ಲಿಗಳೇ ಇದಕ್ಕೆ ಸಾಕ್ಷಿ.

    ನಡುಗುಡ್ಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

    ವರ್ಷದ ಹಿಂದೆ ವಿದ್ಯಾರ್ಥಿಗಳು ಇಲ್ಲವೆಂಬ ಕಾರಣದಿಂದ ಮೂಳೂರು ಗ್ರಾಮದ ನಡುಗುಡ್ಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಗುರುಪುರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರಸ್ತುತ ಈ ಕಿ.ಪ್ರಾ. ಶಾಲೆ ಅನಾಥವಾಗಿದೆ.

    ಆಸ್ಪತ್ರೆಯ ಕಟ್ಟಡಕ್ಕೆ ಕೇಳುವವರಿಲ್ಲ?

    ಕೊಟ್ಟಾರಿಗುಡ್ಡೆಯಲ್ಲಿ 25-30 ವರ್ಷದ ಹಿಂದೆ ಕಾರ್ಯಾಚರಿಸುತ್ತಿದ್ದ ಕಂಕನಾಡಿ ಆಸ್ಪತ್ರೆಗೆ ಸಂಬಂಧಿತ ‘ಹಿಂದ್ ಕುಷ್ಠ ನಿವಾರಣಾ ಸಂಘ’ದ ಕಟ್ಟಡ ಬೀಗಮುದ್ರೆ ಕಂಡಿದೆ. ಅನಧಿಕೃತವಾಗಿ ಅನಾಥರ ಅಧಿಕೃತ ನಿವಾಸವಾಗಿದೆ. ಇತ್ತೀಚೆಗಷ್ಟೇ ಈ ಕಟ್ಟಡದಲ್ಲಿ ವಾಸಿಸುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿದ್ದ. ಇಲ್ಲೇ ಪಕ್ಕದಲ್ಲಿ ಪಂಚಾಯಿತಿಗೆ ಸೇರಿದ ಬೃಹತ್ ನೀರಿನ ಟ್ಯಾಂಕ್ ಇದ್ದು, ಇದಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಕಂಕನಾಡಿ ಆಸ್ಪತ್ರೆಯ ಆಡಳಿತ ಆಕ್ಷೇಪಿಸಿದೆ. ಈ ವಿಷಯದಲ್ಲಿ ತಕರಾರು ಮುಂದುವರಿದಿದೆ. ಭವಿಷ್ಯದಲ್ಲಿ ಈ ಜಾಗ ಅತಿಕ್ರಮಣವೂ ಆಗಬಹುದು ಎಂಬುದು ಗ್ರಾಮಸ್ಥರ ಆರೋಪ.

    ಜನ ಪ್ರತಿನಿಧಿಗಳ ಮೌನವೇಕೆ?

    ಜಿಲ್ಲಾಡಳಿತ, ಪಂಚಾಯಿತಿ ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಈ ಕಟ್ಟಡಗಳು ಪಾಳು ಬೀಳುತ್ತಿದ್ದರೂ ಜನಪ್ರತಿನಿಧಿಗಳು ಮೌನವಹಿಸಿದ್ದೇಕೆ ಎನ್ನುವುದು ತಿಳಿಯದಾಗಿದೆ. ಕೆಲವು ಕಟ್ಟಡಗಳಂತೂ ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಅನಾಥವಾಗಿರುವ ಈ ಕಟ್ಟಡ ವಶಪಡಿಸಿಕೊಂಡು, ದುರಸ್ತಿ ಮಾಡಿ ಸರ್ಕಾರದ ಅನ್ಯ ಉದ್ದೇಶಕ್ಕೆ ಉಪಯೋಗಿಸಬಹುದಿತ್ತು ಎನ್ನುವುದು ಪ್ರಾಜ್ಞರ ಅಭಿಪ್ರಾಯ.

    ಕುಸಿದ ಅಂಗಡಿ, ಪಾಳುಬಿದ್ದ ಅಂಗನವಾಡಿ!

    ಗುರುಪುರ ಪೇಟೆಯಲ್ಲಿ ಪಂಚಾಯಿತಿಯ ಹಳೆಯ ಕಟ್ಟಡವೊಂದು ಪಾಳು ಬಿದ್ದಿದ್ದು, ಮಾರುಕಟ್ಟೆಯಲ್ಲಿ ಕೆಲವು ಅಂಗಡಿಗಳು ಕುಸಿದು ನೆಲ ಕಚ್ಚಿವೆ. ಪಂಚಾಯಿತಿಯವರಿಗೆ ಇಚ್ಛಾಶಕ್ತಿ ಇದ್ದಿದ್ದರೆ ಇಲ್ಲಿ ಮತ್ತೆ ಹೊಸ ಅಂಗಡಿಗಳನ್ನು ನಿರ್ಮಿಸಬಹುದಿತ್ತು. ಇದರಿಂದ ಅವರಿಗೆ ಆದಾಯವೂ ಬರುತ್ತಿತ್ತು. ಗುರುಪುರ ಅಣೆಬಳಿಯಲ್ಲಿ ಪಂಚಾಯಿತಿಗೆ ಸೇರಿದ ಆರ್‌ಸಿಸಿಯ ಅಂಗನವಾಡಿ ಕಟ್ಟಡ, ಅಡ್ಡೂರು ಗ್ರಾಮದ ಕುಚ್ಚಿಗುಡ್ಡೆಯಲ್ಲಿರುವ ಹಳೆಯ ಅಂಗನವಾಡಿ ಕಟ್ಟಡ ಪಾಳು ಬಿದ್ದಿದೆ. ಮೂಳೂರು ಗ್ರಾಮದ ವಿಕಾಸನಗರದಲ್ಲಿ ಯಶಸ್ವಿ ಯುವಕ ಮಂಡಲದ ಪಕ್ಕದಲ್ಲಿ ಪಂಚಾಯಿತಿಗೆ ಸೇರಿದ ಇನ್ನೊಂದು ಕಟ್ಟಡ ವರ್ಷಗಳಿಂದ ಪಾಳು ಬಿದ್ದಿದೆ.

    ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಅನಾಥ ಕಟ್ಟಡಗಳಿವೆ. ಕೆಲವನ್ನು ದುರಸ್ತಿ ಮಾಡಬಹುದು. ಈ ಕುರಿತು ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳಲಿದೆ. ಆದರೆ, ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಕಟ್ಟಡಗಳಿದ್ದು, ಆಯಾ ಇಲಾಖೆಗಳೇ ಅಭಿವೃದ್ಧಿ ಪಡಿಸಬೇಕು. 10-20 ವರ್ಷದಿಂದ ಕಟ್ಟಡ ಈ ರೀತಿ ಅನಾಥವಾಗಿದ್ದರೆ ತೊಂದರೆಯೇ ಹೆಚ್ಚು.
    ಯಶವಂತಕುಮಾರ್ ಶೆಟ್ಟಿ
    ಅಧ್ಯಕ್ಷ, ಗುರುಪುರ ಪಂಚಾಯಿತಿ

    ಪಂಚಾಯಿತಿ ವ್ಯಾಪ್ತಿಯಲ್ಲಿ ಅನಾಥ ಕಟ್ಟಡ ಇರುವ ಬಗ್ಗೆ ನನಗೆ ಹೆಚ್ಚೇನೂ ಮಾಹಿತಿ ಇಲ್ಲ. ಅಂತಹ ಕಟ್ಟಡಗಳ ಕುರಿತಾಗಿ ಜುಲೈ 27ರಂದು ನಡೆಯುವ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪಿಸಿ, ಸಮಗ್ರವಾಗಿ ಪರಿಶೀಲಿಸಿ ಕ್ರಮಕ್ಕೆ ಪ್ರಯತ್ನಿಸುವೆ.
    -ಪಂಕಜಾ ಶೆಟ್ಟಿ
    ಪಿಡಿಒ, ಗುರುಪುರ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts