More

    ಇಂಟರ್‌ನೆಟ್‌ ನೋಡಿದರು, ಮದ್ಯ ತಯಾರಿಸಿದರು: ಆಹಾ! ಇನ್ನು ತಮಗಿಲ್ಲ ಚಿಂತೆ ಎಂದುಕೊಂಡರು; ಆದರೆ ಮುಂದಾಗಿದ್ದೇ ಬೇರೆ..!

    ಚೆನ್ನೈ: ಲಾಕ್‌ಡೌನ್‌ನಿಂದ ಮದ್ಯ ಸಿಗದೇ ಒದ್ದಾಡುತ್ತಿರುವ ಮದ್ಯಪ್ರಿಯರ ಪಾಡಂತೂ ಕೇಳುವುದೇ ಬೇಡ ಹಾಗಾಗಿದೆ ಪರಿಸ್ಥಿತಿ. ಮದ್ಯದಂಗಡಿಗೆ ಕನ್ನ ಹಾಕುವುದರಿಂದ ಹಿಡಿದು, ನಾಲ್ಕೈದು ಪಟ್ಟು ಹಣ ಕೊಟ್ಟು ಕಳ್ಳಮಾರ್ಗದಲ್ಲಿ ಖರೀದಿಸುವವರೆಗೆ ಎಲ್ಲವೂ ನಡೆದೇ ಬಿಟ್ಟಿವೆ, ಅಲ್ಲಲ್ಲಿ ನಡೆಯುತ್ತಿವೆ ಕೂಡ.

    ಅಂಥದ್ದೇ ಒಂದು ಘಟನೆ ತಮಿಳುನಾಡಿದ ನಮಕ್ಕಲ್‌ ಗ್ರಾಮದಲ್ಲಿ ನಡೆದಿದೆ. ಮದ್ಯಕ್ಕಾಗಿ ಹಪಹಪಿಸುತ್ತಿದ್ದ ಇಬ್ಬರು ಯುವಕರು ಅದನ್ನು ಪಡೆಯಲು ಏನು ಮಾಡಬೇಕು ಎಂದು ತಿಳಿಯದೇ ಲಾಕ್‌ಡೌನ್‌ ಶುರುವಾದಾಗಿನಿಂದ ಇಷ್ಟು ದಿನ ಚಿಂತಿಸುತ್ತಿದ್ದರು. ಹೇಗೋ ಏಪ್ರಿಲ್ 14ರವರೆಗೆ ತಡೆದುಕೊಂಡರಾಯಿತು ಎಂದು ತಮ್ಮಲ್ಲೇ ಸಮಾಧಾನವನ್ನೂ ಪಟ್ಟುಕೊಂಡರು.

    ಆದರೆ ಯಾವಾಗ ಲಾಕ್‌ಡೌನ್‌ ಅವಧಿ ಮೇ 3ರವರೆಗೆ ಮುಂದುವರೆಯುತ್ತದೆ ಎಂದು ಘೋಷಣೆ ಆಯಿತೋ, ಈ ಯುವಕರಿಗೆ ತಲೆ ತಿರುಗಿದಂತಾಯಿತು. ಏನಾದರೊಂದು ಉಪಾಯ ಮಾಡಲೇಬೇಕು ಎಂದು ಯೋಚಿಸಿದ ಫಲವಾಗಿ ತಾವೇ ಮದ್ಯ ತಯಾರಿಸಿದರೆ ಹೇಗೆ ಎಂಬ ಯೋಚನೆ ಬಂತು.

    ಇನ್ನೇಕೆ ತಡ, ಇಂಟರ್‌ನೆಟ್‌ ಇದೆಯಲ್ಲ, ಹುಡುಕಿದ್ದೆಲ್ಲವೂ ಸುಲಭದಲ್ಲಿ ಸಿಗುವ ಇಂಟರ್‌ನೆಟ್‌ ಮೊರೆ ಹೋದ ಈ ಮದ್ಯಪ್ರೇಮಿಗಳಿಗೆ ‘ನೀವೇ ಸ್ವತಃ ತಯಾರಿಸಿ ಮದ್ಯ, ಇಲ್ಲಿದೆ ಟಿಪ್ಸ್‌’ ಗಮನ ಸೆಳೆಯಿತು. ಆಹಾ! ಸ್ವರ್ಗಕ್ಕೆ ಮೂರೇ ಗೇಣು ಎಂದುಕೊಂಡರು ಈ ಯುವಕರು. ಲಾಕ್‌ಡೌನ್‌ ಮುಗಿಯುವವರೆಗೆ ತಮಗಿಲ್ಲ ಚಿಂತೆ, ಮನೆಯಲ್ಲಿ ತಯಾರಿಸಿದರೆ ಯಾರಿಗೂ ತಿಳಿಯುವುದೂ ಇಲ್ಲ ಎಂದುಕೊಂಡ ಅವರು, ಮದ್ಯ ತಯಾರಿಕೆಗೆ ಬೇಕಿರುವ ಅಗತ್ಯ ವಸ್ತುಗಳನ್ನು ತರಿಸಿಕೊಂಡರು.

    ಮದ್ಯ ತಯಾರಿಸಲು ಶುರು ಮಾಡಿ, ಅದರಲ್ಲಿ ಬಹುತೇಕ ಯಶಸ್ವಿಯೂ ಆಗಿದ್ದರು. ಇನ್ನೇನು ಅಂತಿಮ ಹಂತದ ತಯಾರಿಕೆ ನಡೆದಿತ್ತು. ಬಾಯಿಗೆ ಮದ್ಯದ ಬಾಟಲನ್ನು ಇಟ್ಟು ಅದನ್ನು ಸವಿಯುವ ಕನಸು ಕಾಣುತ್ತಿರುವಷ್ಟರಲ್ಲೇ ಬಾಗಿಲು ದಡದಡ ಬಡಿಯಿತು. ನೋಡಿದರೆ ಪೊಲೀಸರು!

    ಮದ್ಯ ತಯಾರಿಸುವ ಸಾಮಗ್ರಿ ತರಿಸಿಕೊಂಡ ಸುದ್ದಿ ಪೊಲೀಸರ ಕಿವಿಗೆ ತಲುಪಿದ್ದರಿಂದಲೋ ಏನೋ, ಅದನ್ನರಿತ ಪೊಲೀಸರು ಮನೆಯ ಮೇಲೆ ದಾಳಿ ಮಾಡಿ ಯುವಕರನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ಮದ್ಯ ತಯಾರಿಕಾ ವಸ್ತು ಮತ್ತು ಸ್ಥಳದಲ್ಲಿದ್ದ ಕಂಟೇನರ್‌ಗಳನ್ನೂ ವಶಕ್ಕೆ ಪಡೆದುಕೊಂಡು ಯುವಕರ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಕೂಡ ಕೆಲ ವ್ಯಕ್ತಿಗಳು ಮದ್ಯ ತಯಾರಿಸಿ ಅದನ್ನು ಸ್ವಲ್ಪ ದಿನ ಬಿಟ್ಟು ಕುಡಿದರೆ ಟೇಸ್ಟ್‌ ಬರುತ್ತದೆ ಎನ್ನುವ ಕಾರಣಕ್ಕೆ ಸ್ನಾನಗೃಹದ ನೆಲದಡಿಯಲ್ಲಿ ಹುದುಗಿಸಿಟ್ಟಿದ್ದರು. ಅವರು ಕೂಡ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಇದೇ ಗ್ರಾಮದಲ್ಲಿ ನಡೆದಿದೆ.(ಏಜೆನ್ಸೀಸ್)

    ವೃದ್ಧನಿಗೆ ಸಿಕ್ತು ಒಪ್ಪೊತ್ತಿನ ಊಟದ ಸೌಲಭ್ಯ; ದಿಗ್ವಿಜಯ ನ್ಯೂಸ್ ಇಂಪ್ಯಾಕ್ಟ್, ಸ್ಥಳಕ್ಕೆ ತಹಸೀಲ್ದಾರ್ ಭೇಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts