More

  ವಾಯು ಸೇನೆಗೆ ಅಧಿಕಾರಿ ಸೋಗಿನಲ್ಲಿ 25 ಲಕ್ಷ ಧೋಖಾ

  ಬೆಂಗಳೂರು: ಅಮಾಯಕ ಜನರಿಗೆ ಸೈಬರ್ ಕಳ್ಳರು ಹೊಸ ಹೊಸ ಮಾರ್ಗದಲ್ಲಿ ವಂಚನೆ ಮಾಡುತ್ತಿದ್ದಾರೆ.
  ವಾಯು ಸೇನೆ ಅಧಿಕಾರಿ ಹೆಸರಿನಲ್ಲಿ ಡಿಸೇಲ್ ಸಗಟು ವ್ಯಾಪಾರಿಗೆ ಕರೆ ಮಾಡಿ 25 ಲಕ್ಷ ರೂ. ದೋಚಿದ್ದರೆ ಮತ್ತೊಂದೆಡೆ ರೈಲ್ವೆ ಟಿಕೆಟ್ ರದ್ದುಪಡಿಸಲು ಕರೆ ಮಾಡಿದ ವ್ಯಕ್ತಿಯಿಂದ 29 ಸಾವಿರ ರೂ. ಸುಲಿಗೆ ಮಾಡಿದ್ದಾರೆ. ಇದೇ ರೀತಿಯಾಗಿ ಇನ್‌ಸ್ಟಾಗ್ರಾಂನಲ್ಲಿ ಐಪಿಎಲ್ ಟಿಕೆಟ್ ಖರೀದಿಗೆ ಮುಂದಾದ ಯುವಕನಿಂದ 2.94 ಲಕ್ಷ ರೂ. ಪಡೆದು ಮೋಸ ಮಾಡಿರುವುದು ವರದಿಯಾಗಿದೆ.

  ಕಸವನಹಳ್ಳಿಯ ಉದ್ಯಮಿ ರಾಹುಲ್ ಕೆ. ವಿಜಯರಾಜನ್ ಎಂಬುವರು ಇದ್ದಲಿಗೆ ಡಿಸೇಲ್ ಡಿಲವರಿ ಕೊಡುವ ಕಂಪನಿ ನಡೆಸುತ್ತಿದ್ದಾರೆ. ಇವರಿಗೆ ಸಾಹಿಲ್ ಕುಮಾರ್ ಎಂಬಾತ ಕರೆ ಮಾಡಿ ಜಾಲಹಳ್ಳಿ ವಾಯು ಸೇನೆ ಘಟಕದಿಂದ ಮಾತನಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದ. ತುರ್ತಾಗಿ 6 ಸಾವಿರ ಲೀಟರ್ ಡಿಸೇಲ್ ವಾಯುಸೇನೆಗೆ ಬೇಕಾಗಿದೆ ಎಂದಿದ್ದ. ಇದಾದ ಮೇಲೆ ಹಣ ವರ್ಗಾವಣೆಗೆ ಬ್ಯಾಂಕ್ ಖಾತೆ ಮಾಹಿತಿ ಬೇಕೆಂದು ಉದ್ಯಮಿ ಕಡೆಯಿಂದ ಪಡೆದುಕೊಂಡು ದೃಢೀಕರಣಕ್ಕಾಗಿ 5 ರೂ. ಪಾವತಿಸುವಂತೆ ಸೂಚಿಸಿದ್ದ.

  ಇದನ್ನು ನಂಬಿದ ಉದ್ಯಮಿ, ಅಪರಿಚಿತ ವ್ಯಕ್ತಿ ಹೇಳಿದ ಬ್ಯಾಂಕ್ ಖಾತೆಗೆ 5 ರೂ. ಜಮೆ ಮಾಡಿದ್ದರು. ಮತ್ತೆ ಮತ್ತೊಂದು ಖಾತೆಯಿಂದ 10 ರೂ. ವರ್ಗಾವಣೆಗೆ ಹೇಳಲಾಗಿತ್ತು. ಅದನ್ನೂ ಕಳುಹಿಸಿದ ಉದ್ಯಮಿಯಿಂದ ಸೈಬರ್ ಕಳ್ಳರು, ‘ಮೊದಲು 6 ಸಾವಿರ ಲೀಟರ್ ಡಿಸೇಲ್‌ಗೆ 5.23 ಲಕ್ಷ ರೂ. ಪಾವತಿ ಮಾಡಬೇಕು. ಬಳಿಕ ವಾಯು ಸೇನೆಯಿಂದ ವಾಪಸ್ ಕಳುಹಿಸಲಾಗುತ್ತದೆ’ ಎಂದು ದಾರಿ ತಪ್ಪಿಸಿದ್ದರು. ಸೇನಾಧಿಕಾರಿ ಎಂದು ನಂಬಿ 5.23 ಲಕ್ಷ ರೂ. ಉದ್ಯಮಿ ಕಳುಹಿಸಿದ ಮೇಲೆ ವಾಪಸ್ ಕೊಡದೆ ತಾಂತ್ರಿಕ ದೋಷ ಎಂದು ಸಬೂಬು ಹೇಳಿಕೊಂಡು ಹಂತ ಹಂತವಾಗಿ 25.16 ಲಕ್ಷ ರೂ. ಪಡೆದುಕೊಂಡಿದ್ದರು.

  ಮತ್ತೊಂದೆಡೆ 6 ಸಾವಿರ ಲೀಟರ್ ಡಿಸೇಲ್ ತುಂಬಿದ್ದ ಟ್ಯಾಂಕರ್ ಚಾಲಕ, ಜಾಲಹಳ್ಳಿ ವಾಯು ಸೇನೆ ಘಟಕದ ಮುಖ್ಯ ದ್ವಾರದ ಬಳಿಕ ಹೋಗಿ ಸಾಹಿಲ್ ಕುಮಾರ್ ಎಂಬಾತನಿಗೆ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಅಲ್ಲಿನ ಅಧಿಕಾರಿಗಳನ್ನು ವಿಚಾರಿಸಿದಾಗ ಅಂತಹ ಅಧಿಕಾರಿ ಯಾರೂ ಇಲ್ಲ. ಜತೆಗೆ ಖಾಸಗಿ ವ್ಯಕ್ತಿಗಳಿಂದ ಡಿಸೇಲ್ ಖರೀದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದಾಗ ಉದ್ಯಮಿಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ವೈಟ್‌ಫೀಲ್ಡ್ ಸಿಇಎಲ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts