More

    ಧಂ ಎಳೆಯುತ್ತಿದ್ದವರನ್ನು ಬೆದರಿಸಿ 4 ಸಾವಿರ ರೂ. ಕಿತ್ತುಕೊಂಡ ಪೇದೆಗಳು!

    ಬೆಂಗಳೂರು: ಮಾಲ್ ಬಳಿ ಸಿಗರೇಟ್ ಸೇದುತ್ತಾ ನಿಂತ್ತಿದ್ದ ಸ್ನೇಹಿತರನ್ನು ಬೆದರಿಸಿ 4 ಸಾವಿರ ರೂ. ಸುಲಿಗೆ ಮಾಡಿದ ಆರೋಪದಡಿ ಆಡುಗೋಡಿ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಅರವಿಂದ್ ಮತ್ತು ಮಾಳಪ್ಪ ಬಿ.ವಾಲಿಕರ ಎಂಬುವರು ಅಮಾನತಾಗಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಇಬ್ಬರು ಕಾನ್​​ಸ್ಟೇಬಲ್​​ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಕೋರಮಂಗಲದ ನೆಕ್ಸಾಸ್ ಮಾಲ್ ಬಳಿ ಕೆಲ ದಿನಗಳ ಹಿಂದೆ ಚೈತ್ರಾ ರತ್ನಕಾರ್ ಮತ್ತು ಚಿರಾಸ್ ಸ್ನೇಹಿತರು ಸಿಗರೇಟ್ ಸೇದುತ್ತಾ ನಿಂತಿದ್ದರು. ಅಲ್ಲಿಗೆ ಬಂದ ಕಾನ್‌ಸ್ಟೆಬಲ್‌ಗಳಾದ ಅರವಿಂದ್ ಮತ್ತು ಮಾಳಪ್ಪ ಮಾಲ್, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಬಾರದು. ಇದು ನಿರ್ಬಂಧಿತ ಪ್ರದೇಶವಾಗಿದೆ. ನಿಮ್ಮ ಮೇಲೆ 50 ಸಾವಿರ ರೂ. ದಂಡ ವಿಧಿಸಿ, ಎಫ್‌ಐಆರ್ ದಾಖಲು ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ.

    ಕಾನ್​​ಸ್ಟೇಬಲ್​ಗಳ ಬೆದರಿಕೆಗೆ ಹೆದರಿದ ಸ್ನೇಹಿತರು, ಅಷ್ಟೊಂದು ಹಣ ಇಲ್ಲ. ಎಫ್​ಐಆರ್ ಏನೂ ಬೇಡ ಎಂದು ಚೌಕಾಸಿಗೆ ಇಳಿದಿದ್ದಾರೆ. ಈ ವೇಳೆ ಕಾನ್​ಸ್ಟೇಬಲ್​ಗಳು ಅವರ ಕಡೆಯಿಂದ ಪರಿಚಿತರ ಅಂಗಡಿಗೆ ಯುಪಿಐನಲ್ಲಿ 4 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.

    ಇದರಿಂದ ಬೇಸರಗೊಂಡ ಚೈತ್ರಾ ರತ್ನಾಕರ್, ಟ್ವಿಟರ್‌ನಲ್ಲಿ ನಡೆದ ಘಟನೆಯನ್ನು ಬರೆದು ಪೊಲೀಸರು ನಮ್ಮನ್ನು 3ನೇ ದರ್ಜೆಯ ವ್ಯಕ್ತಿಗಳಂತೆ ನಡೆಸಿಕೊಂಡರು. ನಮ್ಮನ್ನು ಹೆದರಿಸಿ 4 ಸಾವಿರ ರೂ. ಸುಲಿಗೆ ಮಾಡಿದರು ಎಂದು ಆರೋಪಿಸಿ ದೂರು ನೀಡಿದ್ದರು.

    ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಸಿ.ಕೆ. ಬಾಬಾ, ಕಾನ್ಸ್‌ಟೇಬಲ್‌ಗಳ ಮೇಲಿನ ಆರೋಪದ ಬಗ್ಗೆ ಇಲಾಖಾ ತನಿಖೆ ನಡೆಸಿ ವರದಿ ಪಡೆದು ಕಾನ್‌ಸ್ಟೆಬಲ್‌ಗಳನ್ನು ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಇತ್ತೀಚೆಗೆ ದಂಪತಿಯನ್ನು ಬೆದರಿಸಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಸಂಪಿಗೆಹಳ್ಳಿ ಠಾಣೆ ಪೊಲೀಸರನ್ನು ಅಮಾನತು ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts