More

    ಎಂಪಿ ಚುನಾವಣೆಯಲ್ಲಿ ಮಾತ್ರ ಬಿಜೆಪಿಗೆ ಬೆಂಬಲ

    ಮೂಡಿಗೆರೆ: ಬಿಜೆಪಿಯಲ್ಲಿ ತಾಲೂಕು ಮಟ್ಟದ ಉನ್ನತ ಸ್ಥಾನ ಪಡೆದಿದ್ದ ಗುತ್ತಿಗೆದಾರನ ಮಾತು ಕೇಳಿ ನಮಗೆ ನೋಟಿಸ್ ನೀಡದೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಪಕ್ಷಕ್ಕಾಗಿ 25 ವರ್ಷ ದುಡಿದಿದ್ದೇನೆ. ನನಗಿಂತ ಕಿರಿಯನ ಮಾತು ಕೇಳಿ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಪಿ.ಜಿ.ಅನುಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

    ಶುಕ್ರವಾರ ಬಿಜೆಪಿ ಸ್ವಾಭಿಮಾನಿ ಪರಿವಾರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಕೆಲ ದಿನದ ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ನಮ್ಮ ಗುಂಪಿನ ಹಿರಿಯ ನಾಯಕರನ್ನು ಸಂಪರ್ಕಿಸಿ ಇಬ್ಬರ ಅಮಾನತು ರದ್ದುಪಡಿಸಿ ಮತ್ತೆ ಅವರನ್ನು ಪಕ್ಷಕ್ಕೆ ಸೇರಿಸಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಸುತ್ತೇವೆ ಎಂದು ಹೇಳಿದ್ದರು. ಈಗ ಅವರು ಮಾತು ತಪ್ಪಿದ್ದಾರೆ. ನಮ್ಮನ್ನು ಕೈಬಿಟ್ಟು ಪದಗ್ರಹಣ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದರಿಂದಾಗಿ ನಾವು ಪ್ರತ್ಯೇಕ ಸಮಾವೇಶ ನಡೆಸಬೇಕಾಯಿತು. ಈ ಚುನಾವಣೆಯಲ್ಲಿ ನಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಪರವಾಗಿ ಬಿಜೆಪಿಯಲ್ಲಿ ಪ್ರಚಾರ ನಡೆಸುತ್ತೇವೆ. ಮುಂದಿನ ಜಿಪಂ, ತಾಪಂ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ನಾವೂ ತಾಲೂಕು, ಹೋಬಳಿ, ಬೂತ್ ಘಟಕ ಸ್ಥಾಪಿಸಿ ಪದಾಧಿಕಾರಿಗಳನ್ನು ನೇಮಿಸುತ್ತೇವೆ ಎಂದು ತಿಳಿಸಿದರು.
    ಅತಿವೃಷ್ಟಿ ವೇಳೆ ಗುತ್ತಿಗೆದಾರನೂ ಆದ ಬಿಜೆಪಿ ಮುಖಂಡ ಅಂದಿನ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಬಳಿ ಎರಡು ಕೋಟಿ ರೂಪಾಯಿ ಮೊತ್ತದ ಕಾಮಗಾರಿ ನಡೆಸಿದ್ದೇನೆ ಎಂದು 2 ಕೋಟಿ ರೂಪಾಯಿ ಕೇಳಿದಾಗ ಶಾಸಕ ಒಪ್ಪಿರಲಿಲ್ಲ. ಕಾಮಗಾರಿ ವೆಚ್ಚದ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ತನಿಖೆಯಲ್ಲಿ 15 ಲಕ್ಷ ರೂ. ವೆಚ್ಚದಷ್ಟು ಕೆಲಸ ಮಾಡಲಾಗಿದೆ ಎಂದು ಕಂಡುಬಂದಿತ್ತು. ಇದರಿಂದ ಕೋಪಗೊಂಡಿದ್ದ ಗುತ್ತಿಗೆದಾರ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ದೂರು ಹೇಳಿ ಸಂಘರ್ಷ ನಡೆಸಿದ್ದ. ಎಂ.ಪಿ.ಕುಮಾರಸ್ವಾಮಿ ಶಾಸಕರಾಗಿದ್ದಾಗ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿತ್ತು. 94(ಸಿ) ಅರ್ಜಿ ವಿಲೇಗೆ ಹಣ ಕೇಳುತ್ತಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಇರಲಿಲ್ಲ. ಜನರಿಗೆ ಮೂಲಭೂತ ಸೌಕರ್ಯ ಒದಗಿಸಿರಲಿಲ್ಲ. ಇದರಿಂದ ನಾವೂ ಎಂ.ಪಿ.ಕುಮಾರಸ್ವಾಮಿ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಡಿ ಎಂದು ಒತ್ತಾಯಿಸಿದ್ದೆವು ಎಂದು ತಿಳಿಸಿದರು.
    ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಕನ್ನೆಹಳ್ಳಿ ಭರತ್, ಪ್ರಪಂ ಸದಸ್ಯರಾದ ಮನೋಜ್, ಸುಧೀರ್, ಕುಂದೂರು ಗ್ರಾಪಂ ಅಧ್ಯಕ್ಷ ವಿಜಯೇಂದ್ರ, ಮುಖಂಡರಾದ ವಿ.ಕೆ.ಶಿವೇಗೌಡ, ದೇವರಾಜ್, ಸಂಜಯ್, ಉತ್ತಮ್‌ಕುಮಾರ್, ಮುಗೃಹಳ್ಳಿ ಪ್ರಸನ್ನ, ರಘುಪತಿ, ಹೆಮ್ಮಕ್ಕಿ ಗಿರೀಶ್, ರವೀಂದ್ರ, ನೇಮರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts