More

    ಕೊಟ್ಟಿರೋ ಕೆಲಸ ಮಾಡಿದ ನಂತರ ಸಂಬಳ ತಗೊಳ್ಳಿ ಎಂದು ತುಷಾರ್ ಗಿರಿನಾಥ್ ತಾಕೀತು..!

    ಬೆಂಗಳೂರು: ಹೊಸ ವರ್ಷ ಹಿನ್ನೆಲೆಯಲ್ಲಿ ಪರಿಣಾಮಕಾರಿ ಕೆಲಸ ಮಾಡಿದರೆ ಮಾತ್ರ ವೇತನ ಸಿಗುತ್ತದೆ ಎಂಬ ಭಾವನೆ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಮೂಡಬೇಕೆಂಬ ದೃಷ್ಟಿಯಿಂದ ಕೆಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

    ಕೆರೆ, ಬೀದಿ ದೀಪ,ಉದ್ಯಾನ ಸೇರಿ ಇತರ ನಿರ್ವಹಣೆ ಕಾರ್ಯ ಮಾಡಿಸಿದ್ದ ಬಳಿಕವೇ ಗ್ರೂಪ್ ‘ಎ’ ಅಧಿಕಾರಿಗಳಿಗೆ ವೇತನ ನೀಡಲಾಗುವುದು. ನಂತರವಷ್ಟೇ ಗೃಹ ರಕ್ಷಕರಿಗೆ, ಮಾರ್ಷೆಲ್‌ಗಳಿಗೆ ಹಾಗೂ ಗುತ್ತಿಗೆ ಸಿಬ್ಬಂದಿಗೆ ವೇತನ ನೀಡಲಾಗುವುದು. ಅಧಿಕಾರಿಗಳಿಗೆ ಮತ್ತು ನೌಕರರಿಗೆ ವಹಿಸಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸುದ್ದಿಗಾರರರಿಗೆ ಶನಿವಾರ ಮಾಹಿತಿ ನೀಡಿದರು.

    ಜ.1ರಿಂದ ಆಸ್ತಿ ತೆರಿಗೆ ಸಂಗ್ರಹ ಕಡೆ ಹೆಚ್ಚು ಗಮನ ಹರಿಸಲಾಗುವುದು. ಶೇ.75 ಆಸ್ತಿ ತೆರಿಗೆ ಸಂಗ್ರಹ ಪೈಕಿ ಶೇ.68 ಸಂಗ್ರಹವಾಗಿದೆ. ನಿಗದಿಪಡಿಸಿದ ರಾಜಸ್ವ ಗುರಿ ಮುಟ್ಟಲು ಕ್ರಮ ಕೈಗೊಳ್ಳುವಂತೆ ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ಈಗಾಗಲೇ ಸೂಚಿಸಲಾಗಿದೆ. ಆಸ್ತಿ ತೆರಿಗೆ ಕಟ್ಟದಿರುವವರು, ಮನೆ ನಕ್ಷೆ ಪಡೆದು ವಾಣಿಜ್ಯ ಬಳಕೆ ಮಾಡುತ್ತಿರುವವರನ್ನು ಗುರುತಿಸಿ ಆಸ್ತಿ ತೆರಿಗೆ ಸಂಗ್ರಹಿಸುವ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕೆಂದು ತುಷಾರ್ ಗಿರಿನಾಥ್ ಹೇಳಿದರು.

    ಪ್ರತಿ ವರ್ಷದಂತೆ ಈ ವರ್ಷವೂ ನಗರ ಜನತೆಯ ಸಹಕಾರದಿಂದ ಒಳ್ಳೆಯ ಸೇವೆ ನೀಡಲು ಪಾಲಿಕೆ ಸಿದ್ಧವಾಗಿದೆ. ಈ ಬಾರಿ ಸಾರ್ವಜನಿಕರು ನಿರೀಕ್ಷೆಯಂತೆ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು. ಕರೊನಾ ವೈರಾಣು ರೂಪಾಂತರಿ ಹೊಸ ತಳಿಯು ಕಳೆದ ಜುಲೈನಲ್ಲಿ ಬಂದು ಹೋಗಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ತುಷಾರ್ ಗಿರಿನಾಥ್, ಹೊಸ ತಳಿ ಯಾವಾಗ ಬಂದು ಹೋಗಿದೆ ಎಂಬುದರ ಬಗ್ಗೆ ಸಂಬಂಧಪಟ್ಟ ತಂಡವೂ ಅಧ್ಯಯನ ನಡೆಸಿ ವರದಿ ನೀಡಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts