More

    ಕರೊನಾಗೆ ಔಷಧ ಅಭಿವೃದ್ಧಿ ಮನುಷ್ಯನ ಮೇಲೆ ಪ್ರಯೋಗ ಬಾಕಿ; ಮೈಸೂರಿನ ಡಿಆರ್​ಎಂ ಇನೋವೇಷನ್ ಕಂಪನಿ ಹೊಸ ಅಣುವಿನ ಅನ್ವೇಷಣೆ

    ಮೈಸೂರು: ಜಗತ್ತನ್ನೇ ತೀವ್ರವಾಗಿ ಕಾಡುತ್ತಿರುವ ಕೋವಿಡ್-19ಗೆ ಮೈಸೂರಿನಲ್ಲೇ ಹೊಸ ಔಷಧ ಅಭಿವೃದ್ಧಿಪಡಿಸಲಾಗಿದೆ. ಕರೊನಾ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ‘ಸಾರ್ಸ್ ಕೋವ್ 2’ ವೈರಾಣು ವಿರುದ್ಧ ಹೊಸ ಹೋರಾಟ ಅಣುವಿನ ಅನ್ವೇಷಣೆಯಾಗಿದ್ದು, ಮನುಷ್ಯನ ಮೇಲಿನ ಪ್ರಯೋಗವೊಂದೇ ಬಾಕಿ ಉಳಿದಿದೆ.

    ಜಗತ್ತಿನಾದ್ಯಂತ ವಿಜ್ಞಾನಿಗಳು ಕೋವಿಡ್ ಚಿಕಿತ್ಸೆಗೆ ಲಸಿಕೆ ಅಭಿವೃದ್ಧಿಪಡಿಸಲು ನಿರಂತರ ಶ್ರಮಿಸುತ್ತಿದ್ದಾರೆ. ಕೆಲ ಸಂಶೋಧನೆಗಳು ಪೂರ್ಣಗೊಂಡು ಯಶಸ್ವಿಯಾಗಿವೆ. ಇದರ ಫಲವಾಗಿ ಕೆಲ ಲಸಿಕೆಗಳನ್ನು ಈಗಾಗಲೆ ಜನರಿಗೆ ನೀಡಲಾಗುತ್ತಿದೆ. ಇನ್ನೂ ಕೆಲ ಸಂಶೋಧನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ದೇಶ-ವಿದೇಶದಲ್ಲೂ ಸಮರೋಪಾದಿಯಾಗಿ ಪ್ರಯತ್ನಗಳು ನಡೆಯುತ್ತಿವೆ. ಅಂತಹದ್ದೊಂದು ಪ್ರಯತ್ನ ಮೈಸೂರಿನಲ್ಲೂ ನಡೆಯುತ್ತಿದೆ.

    ನಗರದ ಡಿಆರ್​ಎಂ ಇನೋವೇಷನ್ ಕಂಪನಿ ವಿಶ್ವದಲ್ಲೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ನೂತನ ಔಷಧ ಅಭಿವೃದ್ಧಿಪಡಿಸಿದೆ. ಇದು ಕರೊನಾ ವೈರಾಣುವನ್ನು ಸಂಪೂರ್ಣವಾಗಿ ಕೊಲ್ಲಲಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಂಗಸಂಸ್ಥೆಯಾದ ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದಿಂದಿಗೆ ಇದರ ಅಧ್ಯಯನ ನಡೆಸಿದ್ದು, ಈ ಹೊಸ ಔಷಧ ಕೋಶ ಆಧಾರಿತ ವ್ಯವಸ್ಥೆಗಳಲ್ಲಿ ವೈರಾಣುವನ್ನು ಕೊಲ್ಲುವಲ್ಲಿ ಉತ್ತಮ ಪ್ರತಿಬಂಧಕ ಪರಿಣಾಮ ಹೊಂದಿದೆ ಎಂಬುದು ಸಂಶೋಧನೆಯಲ್ಲಿ ದೃಢಪಟ್ಟಿದೆ.

    ಬಳಿಕ ಮೈಸೂರಿನ ಜೆಎಸ್​ಎಸ್ ಔಷಧ ಕಾಲೇಜಿನಲ್ಲಿ ನಡೆದ ಪ್ರಾಣಿಗಳ ಮೇಲಿನ ಪ್ರಯೋಗವೂ ಫಲಕೊಟ್ಟಿದೆ. ಚುಚ್ಚುಮದ್ದಿಗಿಂತ ಮಾತ್ರೆಯ ರೂಪದಲ್ಲೇ ಔಷಧ ನೀಡಬಹುದು ಎಂಬುದು ಈ ಪ್ರಯೋಗದಲ್ಲಿ ವ್ಯಕ್ತವಾಗಿದೆ. ಇದರ ಫಲಿತಾಂಶದಲ್ಲಿ ಪ್ರಾಣಿಗಳಲ್ಲಿ ಯಾವುದೇ ವಿಷತ್ವವನ್ನು ಹೊಂದಿಲ್ಲ ಎಂಬ ಹೆಚ್ಚುವರಿ ಮಾಹಿತಿ ಅಧ್ಯಯನದಿಂದ ತಿಳಿದುಬಂದಿದೆ. ಇದರೊಂದಿಗೆ ಈ ಪ್ರಾಣಿ ಅಧ್ಯಯನಗಳಿಂದ ಔಷಧವನ್ನು ಮುಂದಿನ ಹಂತಕ್ಕೆ ತೆಗೆದುಕೊಳ್ಳಬಹುದು ಎಂಬುದೂ ದೃಢವಾಗಿದೆ.

    ಧನಸಹಾಯಕ್ಕೆ ಪ್ರಯತ್ನ: ಕರೊನಾ ಸೋಂಕು ಮಾನವ ಜೀವಕೋಶಗಳಲ್ಲಿ ಪುನರಾವರ್ತನೆ ಅವಲಂಬಿಸಿರುತ್ತದೆ. ಇದು ವೈರಸ್​ನ ಪ್ರಮುಖ ವಸ್ತುವಾದ ಆರ್​ಎನ್​ಎ ಪಾಲಿಮಾರ್ ಸಂಶ್ಲೇಷಣೆಯಲ್ಲಿ ಒಳಗೊಂಡಿರುವ ಕಿಣ್ವವಾಗಿದೆ. ಸುಧಾರಿತ ಕಂಪ್ಯೂಟರ್ ಸಾಫ್ಟ್​ವೇರ್ ಆಧಾರಿತ ವಿಶ್ಲೇಷಣೆಯ ಈ ಡಿಆರ್​ಎಂ ಔಷಧವನ್ನು ‘ವೈರೋಸಿಡಲ್’ ಎಂದು ಗುರುತಿಸುತ್ತದೆ. ಇದು ರೆಮ್ೆಸಿವಿರ್​ನಂತೆಯೇ ಪರಿಣಾಮ ಬೀರಲಿದ್ದು, ಡೋಸೇಜ್ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಮಾತ್ರೆ ರೂಪದಲ್ಲೇ ನೀಡಬಹುದು. ರಕ್ತದ ಮಿದುಳಿನ ತಡೆಗೋಡೆ ದಾಟುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಖಚಿತವಾಗಿದೆ. ಏಕೆಂದರೆ ಅನೇಕ ಕೋವಿಡ್ ರೋಗಿಗಳು ನರವೈಜ್ಞಾನಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ರೆಮ್ೆಸಿವಿರ್ ಔಷಧ ರಕ್ತದ ಮೆದುಳಿನ ತಡೆಗೋಡೆ ದಾಟುವುದಿಲ್ಲ. ಇದೆಲ್ಲ 1, 2ನೇ ಹಂತದ ಪ್ರಯೋಗದಲ್ಲಿ ಖಚಿತವಾಗಿದೆ. ಮುಂದಿನ ಹಂತಕ್ಕೆ ಅರ್ಹತೆ ದೊರೆತಿದೆ.

    ಈ ಆವಿಷ್ಕಾರವನ್ನು 3ನೇ ಹಂತವಾದ ಮನುಷ್ಯನ ಮೇಲೆ ಬಳಕೆ ಮಾಡುವ ಕ್ಲಿನಿಕಲ್ ಪ್ರಯೋಗ ಮಾಡಬೇಕಿದೆ. ಇದಕ್ಕಾಗಿ ಕೋಟ್ಯಂತರ ರೂ. ವ್ಯಯಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿವಿಧ ಮೂಲಗಳಿಂದ ಧನಸಹಾಯ ಪಡೆಯಲು ಡಿಆರ್​ಎಂ ಇನೋವೇಷನ್ ಸಂಸ್ಥೆ ಪ್ರಯತ್ನಿಸುತ್ತಿದೆ.

    ತಂಡದ ಸದಸ್ಯರು: ಮೈಸೂರಿನಲ್ಲಿ ಅಭಿವೃದ್ಧಿಪಡಿಸಿರುವ ಕೋವಿಡ್ ಔಷಧ ಸಂಶೋಧನಾ ತಂಡದಲ್ಲಿ ನಾಲ್ವರು ಪ್ರಮುಖ ಪಾತ್ರ ವಹಿಸಿದ್ದಾರೆ. ಡಿಆರ್​ಎಂ ಕಂಪನಿಯ ಎಂಡಿ ಡಾ.ಎಚ್.ಮಂಜುನಾಥ್, ಮೈಸೂರು ವಿವಿ ರಾಸಾಯಿನಿಕ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಸಪ್ಪ, ಜೆಎಸ್​ಎಸ್ ವೈದ್ಯಕೀಯ ಕಾಲೇಜಿನ ರೇಸ್ಪಿಟರಿ ಮೆಡಿಯನ್ ಅಧ್ಯಯನ ವಿಭಾಗದ ಪ್ರೊ.ಪಿ.ಎ.ಮಹೇಶ್, ಪುಣೆ ಎನ್​ಐವಿಯ ಡಾ.ಅನಿತಾ ಶೇಟೆ, ಡಾ.ಪ್ರಜ್ಞಾ ಡಿ.ಯಾದವ್, ಡಾ.ಪ್ರಿಯಾ ಅಬ್ರಾಹಂ ಈ ತಂಡದಲ್ಲಿದ್ದಾರೆ.

    ಕರೊನಾಗೆ ಔಷಧ ಅಭಿವೃದ್ಧಿ ಮನುಷ್ಯನ ಮೇಲೆ ಪ್ರಯೋಗ ಬಾಕಿ; ಮೈಸೂರಿನ ಡಿಆರ್​ಎಂ ಇನೋವೇಷನ್ ಕಂಪನಿ ಹೊಸ ಅಣುವಿನ ಅನ್ವೇಷಣೆಕೋವಿಡ್ ವಿರುದ್ಧ ಪರಿಣಾಮಕಾರಿಯಾದ ಹೊಸ ಔಷಧ ಸಂಶೋಧಿಸಲಾಗಿದೆ. ಅದನ್ನು ಮನುಷ್ಯನ ಮೇಲೆ ಪ್ರಯೋಗ ಮಾಡಲು ಅಪಾರ ಪ್ರಮಾಣದ ಆರ್ಥಿಕ ಸಂಪನ್ಮೂಲ ಅಗತ್ಯವಿದೆ. ಅದಕ್ಕಾಗಿ ಸರ್ಕಾರ, ಔಷಧ ಕಂಪನಿಗಳು ಮತ್ತು ಸೇವಾರ್ಥ ಸಂಸ್ಥೆಗಳು ಹಣಕಾಸಿನ ನೆರವು ನೀಡಲು ಮುಂದೆ ಬರಬೇಕು. ಇದರಿಂದ ಪ್ರಯೋಗವನ್ನು ಮುಂದುವರಿಸಲು ಅನುಕೂಲವಾಗಲಿದೆ.

    | ಡಾ.ಎಚ್.ಮಂಜುನಾಥ್ ವ್ಯವಸ್ಥಾಪಕ ನಿರ್ದೇಶಕ, ಡಿಆರ್​ಎಂ ಇನೋವೇಷನ್ ಕಂಪನಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts