More

    ಆಸ್ಪತ್ರೆಗಳಲ್ಲಿ ಡಯಾಬಿಟಿಕ್ ಔಷಧ ಕೊರತೆ

    ಜಿಲ್ಲೆಯಲ್ಲಿ ಸಮರ್ಪಕವಾಗಿ ಪೂರೈಕೆಯಾಗದ ಮಾತ್ರೆ ರೋಗಪೀಡಿತರಲ್ಲಿ ಆತಂಕ

    ಪ್ರಶಾಂತ ಹೂಗಾರ ಬೆಳಗಾವಿ
    ಸಕ್ಕರೆ ಕಾಯಿಲೆ (ಮಧುಮೇಹ) ಒಮ್ಮೆ ಬಂದರೆ ರೋಗಿಯ ಜೀವನವನ್ನು ಹಂತ ಹಂತವಾಗಿ ಮುಗಿಸಿಬಿಡುತ್ತದೆ. ಕಾಯಿಲೆ ನಿಯಂತ್ರಣ ಹಾಗೂ ಹತೋಟಿಗೆ ಕಾಲಕಾಲಕ್ಕೆ ಔಷಧ ಸೇವನೆ ಅತ್ಯಗತ್ಯ. ಆದರೆ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಬಿಟಿಕ್ ರೋಗಿಗಳಿಗೆ ನೀಡಲು ಸಮರ್ಪಕ ಮಾತ್ರೆಗಳೇ ಇಲ್ಲದಿರುವುದು ಕಾಯಿಲೆಪೀಡಿತರನ್ನು ಆತಂಕಕ್ಕೆ ತಳ್ಳಿದೆ.

    2 ತಿಂಗಳಿಂದ ಸರಿಯಾಗಿ ಔಷಧ ಪೂರೈಕೆಯಾಗುತ್ತಿಲ್ಲ. ಡಯಾಬಿಟಿಕ್ ಔಷಧಕ್ಕಾಗಿ ರೋಗಿಗಳು ನಿತ್ಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರಗಳಿಗೆ ಅಲೆದು ರೋಸಿಹೋಗಿದ್ದಾರೆ.

    ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್‌ಎಂಎಸ್‌ಸಿಎಲ್) ಟೆಂಡರ್‌ನಲ್ಲಿ ಉಂಟಾದ ವಿಳಂಬ ಹಿನ್ನೆಲೆಯಲ್ಲಿ ಡಯಾಬಿಟಿಕ್ ಔಷಧ ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸಕ್ಕರೆ ಕಾಯಿಲೆ ಇದೀಗ ವಯಸ್ಸಾದವರಷ್ಟೇ ಅಲ್ಲದೆ ಯುವಜನರು, ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ. ಕಾಯಿಲೆ ನಿಯಂತ್ರಿಸಲು ರೋಗಿಗಳು ಆಹಾರ ಕ್ರಮದಲ್ಲಿ ಬದಲಾವಣೆಯೊಂದಿಗೆ ನಿತ್ಯ ಮಾತ್ರೆ ಸೇವನೆ ಮಾಡಲೇಬೇಕು. ವಾರಾನುಗಟ್ಟಲೇ ಮಾತ್ರೆ ಸೇವನೆ ಮಾಡದೆ ಹೋದಲ್ಲಿ ಕಾಯಿಲೆ ಮತ್ತಷ್ಟು ಹೆಚ್ಚಾಗಿ ಅಪಾಯಕ್ಕೆಡೆ ಮಾಡಿಕೊಡುತ್ತದೆ.

    ರಾಜ್ಯದಲ್ಲಿ 2ನೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯು 139 ಪ್ರಾಥಮಿಕ ಆರೋಗ್ಯ ಕೇಂದ್ರ, 12 ಅರ್ಬನ್ ಪಿಎಚ್‌ಸಿ, 16 ಸಿಎಸ್‌ಸಿ, 9 ಜನರಲ್ ಹಾಸ್ಪಿಟಲ್ ಹಾಗೂ ಜಿಲ್ಲಾಸ್ಪತ್ರೆ ಒಳಗೊಂಡಿದೆ. ಆದರೆ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿರುವ ಸಕ್ಕರೆ ಕಾಯಿಲೆ ರೋಗಿಗಳಿಗೆ ಸಮರ್ಪಕವಾಗಿ ಔಷಧ ಪೂರೈಕೆಯಾಗದಿರುವುದು ವಿಪರ್ಯಾಸ.

    ತುರ್ತು ಖರೀದಿಗೆ ಸೂಚನೆ: ಎರಡು ತಿಂಗಳಿನಿಂದ ಹಲವು ಕಾರಣಗಳಿಂದ ಡಯಾಬಿಟಿಕ್ ಔಷಧ ವಿತರಣೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಹಾಗೂ ಆರೋಗ್ಯ ರಕ್ಷಣಾ ಸಮಿತಿ (ಎಆರ್‌ಎಸ್) ಯೋಜನೆಯಡಿ ತುರ್ತು ಔಷಧ ಖರೀದಿಸಿ ರೋಗಿಗಳಿಗೆ ವಿತರಿಸುವಂತೆ ಸೂಚಿಸಲಾಗಿದೆ.

    ಏಪ್ರಿಲ್‌ನಿಂದ ಮನೆ-ಮನೆಗೆ ಉಚಿತ ವಿತರಣೆ: ರಾಜ್ಯದ ಜನಸಾಮಾನ್ಯರ ಮನೆ ಅಂಗಳಕ್ಕೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಗೃಹ ಆರೋಗ್ಯ ಯೋಜನೆಯಡಿ ಮೊದಲ ಹಂತದಲ್ಲಿ ಬೆಳಗಾವಿ, ಗದಗ, ಬಳ್ಳಾರಿ, ಯಾದಗಿರಿ, ರಾಮನಗರ, ದಕ್ಷಿಣಕನ್ನಡ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆಯಡಿ ಆರೋಗ್ಯ ಸಿಬ್ಬಂದಿ ಮನೆಗೆ ತರಳಿ ತಪಾಸಣೆ ನಡೆಸುವ ಮೂಲಕ ಔಷಧ ವಿತರಣೆ ಮಾಡಲಿದ್ದಾರೆ. ಈ ಕುರಿತು ಮಾ.21 ರಿಂದ ಸುವರ್ಣ ವಿಧಾನಸೌಧದಲ್ಲಿ ಜಿಲ್ಲೆಯ ಆರೋಗ್ಯ ಸಿಬ್ಬಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಏಪ್ರಿಲ್‌ನಿಂದಲೇ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ.

    2 ಲಕ್ಷ ಮಧುಮೇಹ ರೋಗಿಗಳಲ್ಲಿ ಭಯ: ಸಕ್ಕರೆ ಕಾಯಿಲೆಯಿಂದ ಬೆಳಗಾವಿ ಜಿಲ್ಲೆಯ ಅಂದಾಜು 2 ಲಕ್ಷ ಜನರು ಬಳಲುತ್ತಿದ್ದಾರೆ. ಈಗಾಗಲೇ ಆಹಾರ ಪದ್ಧತಿಯೊಂದಿಗೆ ನಿತ್ಯ ಡಯಾಬಿಟಿಕ್ ಮಾತ್ರೆ ಸೇವನೆ ಮಾಡುತ್ತಿದ್ದಾರೆ. ಆದರೆ, ಎರಡು ತಿಂಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರೆ ಲಭ್ಯವಾಗದ ಕಾರಣ ದೇಹದಲ್ಲಿ ಸಕ್ಕರೆ ಕಾಯಿಲೆ ಪ್ರಮಾಣವು ಹೆಚ್ಚಾಗಿದ್ದು, ಮುಂದೆ ಏನು ಎಂಬ ಚಿಂತೆಗೀಡಾಗಿದ್ದಾರೆ.

    ಎರಡು ಲಕ್ಷಕ್ಕೂ ಅಧಿಕ ಮಾತ್ರೆ ಬೇಕು: ಬೆಳಗಾವಿ ಜಿಲ್ಲೆಯಲ್ಲಿ 2 ಲಕ್ಷ ಸಕ್ಕರೆ ಕಾಯಿಲೆಪೀಡಿತರು ಇದ್ದಾರೆ. ಅದರಲ್ಲಿ ನಿತ್ಯ ಒಂದು, ಎರಡು ಹಾಗೂ ಮೂರು ಮಾತ್ರೆಗಳನ್ನು ತೆಗೆದುಕೊಳ್ಳುವ ರೋಗಿಗಳಿದ್ದಾರೆ. ಒಬ್ಬ ರೋಗಿಗೆ ದಿನಕ್ಕೆ ಒಂದು ಮಾತ್ರೆಯಂತೆ ಪರಿಗಣಿಸಿದರೂ ಕನಿಷ್ಠ ನಿತ್ಯ ಎರಡು ಸಾವಿರ ಡಯಾಬಿಟಿಕ್ ಮಾತ್ರೆಗಳು ಬೇಕು.

    ರಾಜ್ಯ ಸರ್ಕಾರದಿಂದ ಔಷಧ ವಿತರಿಸುವ ಕುರಿತು ವೈದ್ಯಕೀಯ ಸರಬರಾಜು ನಿಗಮ ನಿಯಮಿತದಿಂದ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರದಿಂದ ಈ ತಿಂಗಳಲ್ಲಿ ಔಷಧ ಬರುವ ಸಾಧ್ಯತೆ ಇದೆ. ಸದ್ಯ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಹಾಗೂ ಆರೋಗ್ಯ ರಕ್ಷಣಾ ಸಮಿತಿ (ಎಆರ್‌ಎಸ್) ಯೋಜನೆಯಡಿ ತುರ್ತು ಔಷಧ ಪಡೆದು ರೋಗಿಗಳಿಗೆ ವಿತರಿಸಲಾಗುವುದು.
    ಡಾ.ಮಹೇಶ ಕೋಣಿ ಜಿಲ್ಲಾ ಆರೋಗ್ಯಾಧಿಕಾರಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts