More

    VIDEO:ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಅದ್ದೂರಿ ತೆರೆ

    ಟೋಕಿಯೊ: ಪ್ಯಾರಾಲಿಂಪಿಕ್ಸ್‌ಗೆ ಭಾನುವಾರ ಅದ್ದೂರಿಯಾಗಿ ತೆರೆ ಎಳೆಯಲಾಯಿತು. ಕರೊನಾ ಮಹಾಮಾರಿ ನಡುವೆಯೂ ಕಳೆದ 13 ದಿನಗಳಿಂದ ಯಾವುದೇ ಅಡ್ಡಿ ಆತಂಕವಿಲ್ಲದೆ ಸರಾಗವಾಗಿ ಕ್ರೀಡಾಕೂಟ ಆಯೋಜಿಸುವ ಮೂಲಕ ಆತಿಥೇಯ ಜಪಾನ್ ಮತ್ತೊಮ್ಮೆ ಇಡೀ ವಿಶ್ವದ ಮೆಚ್ಚುಗೆಗೆ ಪಾತ್ರವಾಯಿತು. ಕಳೆದ ತಿಂಗಳಷ್ಟೇ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಹಲವು ಅಡ್ಡಿ, ಆತಂಕ, ಟೀಕೆ ವಿರೋಧದ ನಡುವೆಯೂ 40 ದಿನಗಳ ಅಂತರದಲ್ಲಿ 2 ಪ್ರತಿಷ್ಠಿತ ಕ್ರೀಡಾಕೂಟಗಳು ಆಯೋಜನೆಗೊಂಡವು. ಮಹಾಮಾರಿ ಕರೊನಾದಿಂದಾಗಿ ಎರಡೂ ಕ್ರೀಡಾಕೂಟಗಳನ್ನು ಒಂದು ವರ್ಷ ಮುಂದೂಡಲಾಗಿತ್ತು.

    ಸುಮಾರು 2 ಗಂಟೆಗಳ ಕಾಲ ನಡೆದ ಸಮಾರಂಭಕ್ಕೆ ಸ್ಥಳೀಯ ದೊರೆ ಅಕಿಶಿನೊ ಸಾಕ್ಷಿಯಾದರು. ಮಹಿಳೆಯರ ವೀಲ್‌ಚೇರ್ ಶೂಟಿಂಗ್‌ನಲ್ಲಿ ಸ್ವರ್ಣ ಜಯಿಸಿದ್ದ ಅವನಿ ಲೇಖರ ಸಮಾರೋಪ ಸಮಾರಂಭದ ಭಾರತದ ಧ್ವಜಧಾರಿಯಾಗಿದ್ದರು. ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ನಡೆದ ಸುಂದರ ಸರಳ ಸಮಾರಂಭದಲ್ಲಿ ತಂಡದ ಪ್ರತಿನಿಧಿಗಳು ತಮ್ಮರಾಷ್ಟ್ರಧ್ವಜದೊಂದಿಗೆ ಹೆಜ್ಜೆಹಾಕಿದರು. 2024ರ ಪ್ಯಾರಾಲಿಂಪಿಕ್ಸ್ ಪ್ಯಾರಿಸ್‌ನಲ್ಲಿ ನಡೆಯಲಿದ್ದು, ಪ್ಯಾರಾಲಿಂಪಿಕ್ಸ್ ಧ್ವಜವನ್ನು ಹಸ್ತಾಂತರಿಸಲಾಯಿತು. ಸಮಾರಂಭಕ್ಕೆ ಕೆಲ ಶಾಲಾ ಮಕ್ಕಳಿಗೆ ಪ್ರವೇಶ ನೀಡಲಾಗಿತ್ತು.

    ಭಾರತದ ಷಟ್ಲರ್‌ಗಳಾದ ಕೃಷ್ಣ ನಗರ್ ಹಾಗೂ ಕನ್ನಡಿಗ ಸುಹಾಸ್ ಯತಿರಾಜ್ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದ್ದಾರೆ. ಕ್ರೀಡಾಕೂಟದ ಕಡೇ ದಿನವಾದ ಭಾನುವಾರ ಭಾರತ 2 ಪದಕ ಗೆದ್ದುಕೊಂಡಿತು. ಇದರೊಂದಿಗೆ ಕೂಟದಲ್ಲಿ 5 ಸ್ವರ್ಣ, 8 ಬೆಳ್ಳಿ ಹಾಗೂ 6 ಕಂಚು ಸೇರಿದಂತೆ 19 ಪದಕ ಜಯಿಸುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿತು. ಪದಕ ಪಟ್ಟಿಯಲ್ಲಿ 24ನೇ ಸ್ಥಾನ ಅಲಂಕರಿಸುವ ಮೂಲಕ ಕೂಟದ ಇತಿಹಾಸದಲ್ಲಿ ಮೊದಲ ಬಾರಿಗೆ ಅಗ್ರ 25ರೊಳಗಿನ ಸ್ಥಾನ ಸಂಪಾದಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts