More

    ವಿಶ್ವಕ್ಕೆ ಗುರುವಾಗಿ ಭಾರತ ಬೆಳೆಯಲಿ

    ಬೆಳಗಾವಿ: ಹಿರಿಯರ, ತ್ಯಾಗ ಬಲಿದಾನ, ಪರಿಶ್ರಮದಿಂದಾಗಿ ಇಂದು ನಾವೆಲ್ಲ ಸ್ವತಂತ್ರವಾಗಿದ್ದೇವೆ. ಸ್ವಾತಂತ್ರ್ಯ ವೀರರ ಸ್ಮರಣೆಯೇ ಭವ್ಯ ಭಾರತಕ್ಕೆ ಪ್ರೇರಣೆಯಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

    ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ವೇದಿಕೆ ಮೂಲಕ ದೇಶಾದ್ಯಂತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಕಿತ್ತೂರು ತಾಲೂಕು ಚನ್ನಮ್ಮ ಕೋಟೆಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಲಿಂಬಾವಳಿ, ಸ್ವಾತಂತ್ರ್ಯ ವೀರರು ನಮಗೆ ದೊರಕಿಸಿಕೊಟ್ಟ ಸ್ವಾತಂತ್ರ್ಯದ ಸದ್ಬಳಕೆಯಾಗಬೇಕು. ಭವಿಷ್ಯದಲ್ಲಿ ಭಾರತ ಯಾವ ರೀತಿ ಅಭಿವೃದ್ಧಿಯಾಗಬೇಕೆಂದರೆ, ವಿಶ್ವಕ್ಕೆ ಗುರುವಾಗಿ ಬೆಳೆಯಬೇಕು ಎಂದರು.

    ಕೊಡುಗೆ ನೆನೆಯಬೇಕು: ಈದಿನ (ಮಾ.12) ದಂಡಿ ಯಾತ್ರೆ ಪ್ರಾರಂಭವಾದ ದಿನವಾಗಿದೆ. ಅಂದು ದೇಶದ ಸ್ವಾತಂತ್ರ್ಯಕ್ಕಾಗಿ 82 ಜನರಿಂದ ಆರಂಭವಾದ ಈ ಯಾತ್ರೆಯು ಬಳಿಕ ಭಾರತ ದೇಶದ ಚಿತ್ರಣವನ್ನೇ ಬದಲಿಸಿತು. 1857ರ ಸಿಪಾಯಿ ದಂಗೆ ಆರಂಭವಾಗುವುದಕ್ಕಿಂತಲೂ ಮೊದಲು ಕರ್ನಾಟಕದಲ್ಲಿ 1824ರಲ್ಲಿಯೇ ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚನ್ನಮ್ಮ ಹೋರಾಟ ಆರಂಭಿಸಿದ್ದಳು. ಅಮಟೂರು ಬಾಳಪ್ಪ, ಹಲಗಲಿ ಬೇಡರು, ಸುರಪುರದ ವೆಂಕಟಪ್ಪ, ಮುಂಡರಗಿಯ ಭೀಮಪ್ಪ ಮುಂತಾದ ಹೋರಾಟಗಾರರ ಕೊಡುಗೆಯನ್ನು ನಾವೆಲ್ಲ ನೆನೆಯಬೇಕು ಎಂದರು.

    75 ಕಡೆ ಆಯೋಜನೆ: ಸ್ವಾತಂತ್ರೃ ಹೋರಾಟಗಾರರ ಸಾಧನೆ ನೆನೆಯುವ ನಿಟ್ಟಿನಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಏಕಕಾಲದಲ್ಲಿ ದೇಶದ 75 ಕಡೆಗಳಲ್ಲಿ ಆಯೋಜಿಸಲಾಗಿದೆ. ರಾಜ್ಯದಲ್ಲಿ ಬೆಳಗಾವಿ, ಮಂಡ್ಯ, ಚಿಕ್ಕಬಳ್ಳಾಪುರ
    ಜಿಲ್ಲೆಗಳಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ 75 ವಾರಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 75 ವಾರಗಳ ಕಾಲ ಸ್ವಾತಂತ್ರ್ಯದ ವಿಶ್ಲೇಷಣೆಯಾಗಬೇಕು ಎಂದು ಸಚಿವ ಲಿಂಬಾವಳಿ ತಿಳಿಸಿದರು.

    ಭಾರತವಾಗಲಿದೆ ಶ್ರೇಷ್ಠ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ ವಿಶ್ವ ಗುರುವಾಗಬೇಕು ಎಂಬ ಕನಸು ಹೊಂದಿದ್ದಾರೆ. ಅದನ್ನು ನನಸಾಗಿಸುವುದು ನಮ್ಮ ಕರ್ತವ್ಯವಾಗಿದೆ. ಭಾರತಕ್ಕೆ ಸ್ವಾತಂತ್ರ್ಯವು 3 ಹಂತಗಳಲ್ಲಿ ದೊರೆತಿದೆ. ಇಡೀ ಭಾರತಕ್ಕೆ ಒಮ್ಮೆ, ಹೈದರಾಬಾದ್-ಕರ್ನಾಟಕಕ್ಕೆ ಹಾಗೂ ಕಲಂ 370ನೇ ವಿಧಿ ರದ್ದು ಮಾಡುವ ಮೂಲಕ ಮೂರನೇ ಹಂತದಲ್ಲಿ ಜಮ್ಮು-ಕಾಶ್ಮೀರಕ್ಕೆ ಸ್ವಾತಂತ್ರ್ಯ ಲಭಿಸಿದೆ. ಮೋದಿ ಅವರ ನೇತೃತ್ವದಲ್ಲಿ ಶೀಘ್ರವೇ ಭಾರತ ಅಖಂಡ ಹಾಗೂ ಶ್ರೇಷ್ಠವಾಗಲಿದೆ ಎಂದರು.

    ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಪರ್ವಿನಾಯ್ಕರ್, ಕಾಡಾ ಅಧ್ಯಕ್ಷ ಡಾ. ವಿ.ಐ.ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಚೆನ್ನಮ್ಮ ಹೊಸಮನಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ಶಶಿಧರ ಬಗಲಿ ಇತರರು ಪಾಲ್ಗೊಂಡಿದ್ದರು.

    ಕಿತ್ತೂರು ಪ್ರವಾಸೋದ್ಯಮ ತಾಣವಾಗಿಸುವ ಭರವಸೆ

    ದೇಶ, ವಿದೇಶಗಳಲ್ಲಿ ಹಾಗೂ ರಾಜ್ಯದ ಜನತೆ ಕಿತ್ತೂರು ಎಂದರೆ ಚನ್ನಮ್ಮಳ ನಾಡು ಎಂದು ಗುರುತಿಸಿ ಗೌರವಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಅಲ್ಲದೆ, 75ನೇ ಸ್ವಾತಂತ್ರೊೃೀತ್ಸವದ ಅಮೃತ ಮಹೋತ್ಸವಕ್ಕೆ ಕಿತ್ತೂರು ಆಯ್ಕೆ ಮಾಡಿರುವುದೂ ನಮ್ಮ ಸೌಭಾಗ್ಯವಾಗಿದೆ. ಚನ್ನಮ್ಮ ನಾಡಿನ ಸಮಗ್ರ ಅಭಿವೃದ್ಧಿಗೆ 200 ಕೋಟಿ ರೂ. ಯೋಜನೆಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್‌ನಲ್ಲಿ 50ಕೋಟಿ ರೂ. ಘೋಷಿಸಿದ್ದಾರೆ. ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಕಿತ್ತೂರನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಲಾಗುವುದು. ಈ ವರ್ಷ ಜರುಗಲಿರುವ ಕಿತ್ತೂರು ಉತ್ಸವಕ್ಕೆ 25 ವರ್ಷ ಆಗಲಿದ್ದು, ಎರಡು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ತಿಳಿಸಿದರು.

    ನಮ್ಮ ದೇಶಕ್ಕೆ ದೊರಕಿರುವ ಸ್ವಾತಂತ್ರ್ಯ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ. ದಶಕಗಳಿಂದ ಕಿತ್ತೂರಿಗೆ ಕನಸಾಗಿಯೇ ಉಳಿದಿದ್ದ ರೈಲು ಸೌಲಭ್ಯ ನೀಡುತ್ತಿರುವುದು ಸಂತಸದ ವಿಷಯವಾಗಿದೆ. ಕಿತ್ತೂರಿಗೆ ವೈಭವ ಮರುಕಳಿಸುವ ಕಾಲ ಬಂದಿದೆ.
    | ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕಿತ್ತೂರು ಕಲ್ಮಠ

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಂತಹ ನಾಯಕರು ಕಿತ್ತೂರು ನಾಡನ್ನು ಸ್ಮರಿಸಿರು ವುದು ನಮ್ಮೆಲ್ಲರ ಸೌಭಾಗ್ಯ. ದೇಶದಲ್ಲಿ ಚೌಕಿದಾರನೊಬ್ಬ ಆಡಳಿತ ನಡೆಸುತ್ತಿರುವುದರಿಂದಲೇ ಅಭಿವೃದ್ಧಿ ಭರದಿಂದ ಸಾಗುತ್ತಿದೆ. ಮನೆಗೊಬ್ಬ ಸೈನಿಕನಾಗಿ ದೇಶ ಸೇವೆಗೆ ಯುವ ಸಮುದಾಯ ಮುಂದೆ ಬರಬೇಕು.
    | ಪಂಚಾಕ್ಷರಿ ಸ್ವಾಮೀಜಿ ನಿಚ್ಚಣಿಕಿ ಮಡಿವಾಳೇಶ್ವರ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts