More

    ವೈದ್ಯ ಸಾಹಿತ್ಯಕ್ಕಿದೆ ಹೆಚ್ಚು ಬೇಡಿಕೆ

    ಶಿವಮೊಗ್ಗ: ವೈದ್ಯ ಸಾಹಿತಿ ಡಾ. ಎಚ್.ಡಿ.ಚಂದ್ರೇಗೌಡ ಅವರು ಜನರಲ್ಲಿದ್ದ ಮೂಢನಂಬಿಕೆ, ಅಜ್ಞಾನವನ್ನು ನಿರ್ಮೂಲನೆ ಮಾಡಲು ಅಕ್ಷರ ರೂಪದಲ್ಲಿ ಶ್ರಮಿಸಿದ್ದರು ಎಂದು ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್.ಚಂದ್ರಶೇಖರ್ ಬಣ್ಣಿಸಿದರು.

    ಕುವೆಂಪು ರಂಗಮಂದಿರದಲ್ಲಿ ಭಾನುವಾರ ವೈದ್ಯ ಸಾಹಿತಿ ಡಾ. ಎಚ್.ಡಿ.ಚಂದ್ರೇಗೌಡ ಅವರ ಸಂಸ್ಮರಣೆ ಮತ್ತು ಸಾಹಿತ್ಯ ಸಂಪುಟಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಜ್ಜನರು, ವಿನಯವಂತಿಕೆ, ಪ್ರಾಮಾಣಿಕತೆ ಹೊಂದಿದ್ದ ಚಂದ್ರೇಗೌಡರು ಕನ್ನಡ ವೈದ್ಯ ಸಾಹಿತ್ಯಕ್ಕೆ ಕೊಟ್ಟ ಒಂದೊಂದು ಕೃತಿಗಳು ಅಮೂಲ್ಯ. ವೈದ್ಯ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಅವಿಸ್ಮರಣೀಯ ಎಂದರು.
    ರಾಜ್ಯದಲ್ಲಿ ಅಲೋಪಥಿ ಒಳಗೊಂಡಂತೆ ಸುಮಾರು ಎರಡು ಲಕ್ಷ ವೈದ್ಯರಿದ್ದಾರೆ. ಆದರೆ ಅದರಲ್ಲಿ ಕನ್ನಡ ವೈದ್ಯ ಸಾಹಿತ್ಯ ರಚನೆ ಮಾಡಿದವರ ಸಂಖ್ಯೆ 150. ಜನರು ಅನೇಕ ಕಾಯಿಲೆಗಳಿಗೆ ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಲ್ಲ. ನಾಟಿ ವೈದ್ಯರು ಅಥವಾ ಮನೆ ಮದ್ದು ತೆಗೆದುಕೊಳ್ಳುತ್ತಾರೆ. ಮೌಢ್ಯಕ್ಕೆ ಒಳಗಾಗುತ್ತಾರೆ. ಇದನ್ನು ಮನಗಂಡ ಚಂದ್ರೇಗೌಡರು ಸಮಗ್ರ ವೈದ್ಯ ಸಾಹಿತ್ಯ ಮತ್ತು ಸಮೃದ್ಧ ವೈದ್ಯ ಸಾಹಿತ್ಯ ಕೃತಿಗಳನ್ನು ಹೊರತಂದಿದ್ದು, ಅವುಗಳನ್ನು ಓದುವ ಮೂಲಕ ಆರೋಗ್ಯದ ಕಾಳಜಿ ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
    ಸ್ವಸ್ಥ ಸಮಾಜಕ್ಕೆ ವೈದ್ಯಕೀಯ ಸಾಹಿತ್ಯ ಅಗತ್ಯ. ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ವೈದ್ಯರ ಆದ್ಯ ಕರ್ತವ್ಯ. ಆದರೆ ಇಂದು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಅನೇಕ ವೈದ್ಯರಿಗೆ ಕನ್ನಡ ಮಾತನಾಡಲು, ಬರೆಯಲೂ ಬರುವುದಿಲ್ಲ. ಹಾಗಾಗಿ ಸಾಂಪ್ರದಾಯಿಕ ಸಾಹಿತ್ಯವು ವೈದ್ಯ ಸಾಹಿತ್ಯವನ್ನು ಒಪ್ಪುವುದಿಲ್ಲ. ವೈದ್ಯಕೀಯ ಸಾಹಿತ್ಯಕ್ಕೆ ಮನ್ನಣೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೂ ವೈದ್ಯ ಸಾಹಿತ್ಯವೇ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಹೊಂದಿದೆ ಎಂಬುದು ಗಮನಾರ್ಹ ಎಂದು ಹೇಳಿದರು.
    ಪ್ರಗತಿಪರ ರೈತ ಮಹಿಳೆ ಎಚ್.ಸಿ.ಆಶಾ ಶೇಷಾದ್ರಿ, ಸಮಾಜವಾದಿ ಶಾಂತವೇರಿ ಗೋಪಾಲ ಗೌಡರ ಮಾರ್ಗದರ್ಶನದಲ್ಲಿ ಬೆಳೆದ ಡಾ. ಚಂದ್ರೇಗೌಡರು ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸ್ವಾಸ್ಥ್ಯ ಮತ್ತು ಆರೋಗ್ಯ ಕುರಿತು 24 ಗ್ರಂಥಗಳನ್ನು ಬರೆದಿದ್ದಾರೆ. ಸಾಮಾನ್ಯ ಶಸ್ತ್ರಚಿಕಿತ್ಸೆಯಿಂದ ಹೃದಯ ಮರು ಜೋಡಣೆವರೆಗೂ ಪುಸ್ತಕ ಬರೆದಿದ್ದಾರೆ. ಅಮೆರಿಕ, ಲಂಡನ್ ಸೇರಿ ಹಲವು ರಾಷ್ಟ್ರಗಳಿಂದ ಪುಸ್ತಕ ತರಿಸಿಕೊಂಡು ರೂಪಾಂತರ ಮಾಡಿದ್ದಾರೆ. ಮಾನವ ಯಂತ್ರ ಕುಸಿದು ಬೀಳದಂತೆ ತಡೆಯುವುದು ಹೇಗೆ? ಸೇರಿ ಮೂರು ಪುಸ್ತಕಗಳನ್ನು ಭಾಷಾಂತರ ಮಾಡಿದ್ದಾರೆ ಎಂದರು.
    ಪ್ರಾಧ್ಯಾಪಕ ಡಾ. ಗುರುದತ್ ಅವರು ಸಾಹಿತ್ಯ ಸಂಪುಟಗಳ ಪರಿಚಯ ಮಾಡಿಕೊಟ್ಟರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ.ಪರಮಶಿವಮೂರ್ತಿ, ನವ ಕರ್ನಾಟಕ ಪಬ್ಲಿಕೇಷನ್‌ನ ರಮೇಶ್ ಉಡುಪ, ಹಂಪಿ ವಿವಿ ಪ್ರಸಾರಾಂಗ ನಿರ್ದೇಶಕ ಡಾ. ಮಾಧವ ಪೆರಾಜೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts