More

    ಸುವರ್ಣಯುಗ ಕಂಡಿದ್ದ ಕನ್ನಡ ಉಳಿವಿಗಾಗಿ ಹೋರಾಟ ಅನಿವಾರ್ಯ

    ಭದ್ರಾವತಿ: ಹಿಂದೆ ರನ್ನ, ಪಂಪ, ಕುಮಾರವ್ಯಾಸ ಮುಂತಾದ ಮಹಾಕವಿಗಳಿಂದಾಗಿ ಕನ್ನಡ ಸಾಹಿತ್ಯ ಸುವರ್ಣ ಯುಗವನ್ನು ಕಂಡಿದ್ದರೆ, ಇಂದು ಕನ್ನಡ ಸಾಹಿತ್ಯ, ಕನ್ನಡ ಭಾಷೆ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಭದ್ರಾ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಬೇಸರ ವ್ಯಕ್ತಪಡಿಸಿದರು.
    ನಗರದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಮಂಗಳವಾರ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ನ್ಯೂಟೌನ್‌ನ ಶ್ರೀ ಸತ್ಯಸಾಯಿ ಶಾಲೆಯಲ್ಲಿ ಏರ್ಪಡಿಸಿದ್ದ 10ನೇ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
    ಇಂತಹ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳು ಭಾಗವಹಿಸುವುದರಿಂದ ಅವರಲ್ಲಿ ಸಾಹಿತ್ಯಾಸಕ್ತಿ ಬೆಳೆಯುತ್ತದೆ. ಜತೆಗೆ ಸಮಾಜದ ಆಗು-ಹೋಗು, ಅಂಕು-ಡೊಂಕುಗಳ ಅರಿವು ಮೂಡುವುದರಿಂದ ಸರಿ-ತಪ್ಪು ತಿಳುವಳಿಕೆ ಮೂಡುತ್ತದೆ. ಇದರಿಂದ ಸಮಾಜದಲ್ಲಿ ಉತ್ತಮ ಕಾರ್ಯ ಮಾಡಲು ಪ್ರೇರಣೆ ಸಿಗಲಿದೆ ಎಂದರು.
    ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಬರೆದಿದ್ದೆಲ್ಲ ಸಾಹಿತ್ಯ ಎನಿಸಿಕೊಳ್ಳುವುದಿಲ್ಲ. ಒಂದು ಕೃತಿ ರಚಿಸಲು ಅನುಭವ ಬಹಳ ಮುಖ್ಯ. ಅದು ಕವನ, ಕಥೆ, ಪ್ರಬಂಧಗಳನ್ನು ಓದುವುದರಿಂದ ದೊರಕುತ್ತದೆ. ಹೀಗೆ ಗಳಿಸಿದ ಅನುಭವವನ್ನು ಆಸ್ವಾಧಿಸಿದವರಿಗೆ ಚಿಂತನೆ, ಕಲ್ಪನೆ, ಎಲ್ಲವೂ ಸಾಹಿತ್ಯ ರೂಪದಲ್ಲಿ ದೊರಕುತ್ತವೆ. ಹಾಗಾಗಿ ಸಾಹಿತ್ಯ ಸಮ್ಮೇಳನದಂತಹ ವೇದಿಕೆ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ಸಹಕಾರಿಯಾಗಿದೆ ಎಂದರು.
    ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಕನ್ನಡ ಉಳಿಸಿ, ಬೆಳೆಸಬೇಕು ಎಂಬುದನ್ನು ಮೊದಲು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಎಷ್ಟು ಜನ ಕನ್ನಡ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆದರೆ ಪರಿಸ್ಥಿತಿ ಹೆಸರಿನಲ್ಲಿ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದೇವೆ. ಮುಂದಿನ ದಿನಗಳಲ್ಲಿ ಕಸಾಪ ನೇತೃತ್ವದಲ್ಲಿ ತಾಲೂಕಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹಾರ ಮಾಡಲು ಹಿರಿಯ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದರು.
    ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ಸುಧಾಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಇಒ ಎ.ಕೆ.ನಾಗೇಂದ್ರಪ್ಪ, ನಗರಸಭೆ ಆಯುಕ್ತ ಪ್ರಕಾಶ್ ಚನ್ನಪ್ಪನವರ್, ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಪ್ರಭಾಕರ್ ಬೀರಯ್ಯ, ತಾಲೂಕು ಕಸಾಪ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎಂ.ಆರ್.ರೇವಣಪ್ಪ, ಪತ್ರಕರ್ತರ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಕಣ್ಣಪ್ಪ, ಹೊಳೆಹೊನ್ನುರು ಕಸಪಾ ಅಧ್ಯಕ್ಷ ಸಿದ್ಧಪ್ಪ ಇತರರಿದ್ದರು.

    ಅನ್ಯ ಭಾಷೆ ಕಲಿಯುವುದು ತಪ್ಪಲ್ಲ. ಆದರೆ ಮಾತೃಭಾಷೆಯನ್ನು ಕಡೆಗಣಿಸುವುದು ತಪ್ಪು. ಪಂಡಿತರಿಗೂ, ಪಾಮರರಿಗೂ ಸುಲಭವಾಗಿ ಅರ್ಥವಾಗುವ ಸರಳ ಭಾಷೆ ಕನ್ನಡ. ಕನ್ನಡಿಗರು ಪರಭಾಷಾ ವಿರೋಧಿಗಳಲ್ಲ. ಪರಭಾಷೆ ಅಗತ್ಯವೇ ಹೊರತು ಅನಿವಾರ್ಯವಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಮಕ್ಕಳಾದ ನಾವು ಕನ್ನಡ ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.
    ಕೆ.ಆರ್.ಸೇವಂತಿ
    ಸಮ್ಮೇಳನಾಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts