More

    ಲೋಕಸಭೆಗೆ ಬುನಾದಿ, ಪಂಚರಾಜ್ಯಗಳ ಹಾದಿ

    2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ವ್ಯಾಖ್ಯಾನಿಸಲಾಗುತ್ತಿರುವ ಪಂಚರಾಜ್ಯಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢ ಚುನಾವಣೆಗಳು ಬಿಜೆಪಿ ಪಾಲಿಗೆ ನಿರ್ಣಾಯಕ ಎಂದೇ ಹೇಳಲಾಗುತ್ತಿದೆ. ಐದೂ ರಾಜ್ಯಗಳ ಒಟ್ಟು ಲೋಕಸಭೆ ಸೀಟುಗಳ ಸಂಖ್ಯೆ 83. ಇದರಲ್ಲಿ ಉತ್ತರ ಭಾರತದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ಒಟ್ಟು 65 ಲೋಕಸಭೆ ಕ್ಷೇತ್ರಗಳಿದ್ದು, 2019ರಲ್ಲಿ ಬಿಜೆಪಿ 63 ಸೀಟುಗಳನ್ನು ಬಾಚಿಕೊಂಡಿದೆ. ಇಂಡಿಯಾ ಮೈತ್ರಿಕೂಟಕ್ಕೆ ಕಡಿವಾಣ ಹಾಕಬೇಕೆಂದರೆ ಈ ಮೂರೂ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಬಿಜೆಪಿ ಮಟ್ಟಿಗೆ ಅತ್ಯಂತ ಪ್ರಮುಖವಾದುದು. ಐದು ರಾಜ್ಯಗಳ ಪ್ರಸ್ತುತ ರಾಜಕೀಯ ಸ್ಥಿತಿ-ಗತಿ ಕುರಿತು ನವದೆಹಲಿ ವಿಜಯವಾಣಿ ವರದಿಗಾರ ರಾಘವ ಶರ್ಮ ನಿಡ್ಲೆ ವಿಶ್ಲೇಷಣೆ ಮಾಡಿದ್ದಾರೆ.

    ಮಧ್ಯಪ್ರದೇಶ: 2005ರಿಂದ ರಾಜ್ಯದ ಮುಖ್ಯಮಂತ್ರಿಯಾಗಿರುವ ಮತ್ತು ಬೆಂಬಲಿಗರ ಮಧ್ಯೆ ಮಾಮಾಜೀ ಎಂದೇ ಹೆಸರುವಾಸಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಮೊದಲ ಬಾರಿಗೆ ಸಿಎಂ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ! ಚುನಾವಣೆ ಸೋತು ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆಂದಲ್ಲ. ಚೌಹಾಣ್ ಬದಲಿಗೆ ಮತ್ತೊಬ್ಬರನ್ನು ಆಯ್ಕೆ ಮಾಡಬೇಕು ಎಂಬ ಆಶಯ ಬಿಜೆಪಿ ಹೈಕಮಾಂಡ್​ನಲ್ಲಿ ಮೂಡಿದೆ. ಈ ಕಾರಣಕ್ಕಾಗಿಯೇ ಮೂವರು ಕೇಂದ್ರ ಸಚಿವರು ಮತ್ತು ಪಕ್ಷದ ಓರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ವರಿಷ್ಠರು ಈಗಾಗಲೇ ಟಿಕೆಟ್ ಘೊಷಿಸಿದ್ದಾರೆ. ಒಟ್ಟು 234 ಶಾಸಕ ಸ್ಥಾನಗಳಿರುವ ರಾಜ್ಯದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸರ್ಕಾರವನ್ನೇನೋ ರಚನೆ ಮಾಡಿತ್ತು. ಆದರೆ, ನಿರೀಕ್ಷೆಯಂತೆ 15 ತಿಂಗಳಲ್ಲಿ ಕಮಲ್​ನಾಥ್ ನೇತೃತ್ವದ ಸರ್ಕಾರ ಪತನಗೊಂಡು, ಶಿವರಾಜ್ ಸಿಂಗ್ ಚೌಹಾಣ್ ನಾಯಕತ್ವದಲ್ಲಿ ಬಿಜೆಪಿ 2020ರಲ್ಲಿ ಅಧಿಕಾರಕ್ಕೇರಿತು. ಅತ್ಯಧಿಕ ಅವಧಿಗೆ ರಾಜ್ಯದಲ್ಲಿ (2005ರಿಂದ) ಸಿಎಂ ಆಗಿರುವ ಹೆಗ್ಗಳಿಕೆ ಚೌಹಾಣ್​ರದ್ದು. ಹಲವು ಕ್ಷೇತ್ರಗಳಿಗೆ ಟಿಕೆಟ್ ಘೊಷಣೆ ಆಗಿರುವ ಮಧ್ಯೆ ಚೌಹಾಣ್ ಅವರಿಗೆ ವರಿಷ್ಠರು ಟಿಕೆಟ್ ಘೊಷಿಸದಿರುವುದು ಅಚ್ಚರಿ ಮೂಡಿಸಿದೆ. ಇವೆಲ್ಲದರ ಮಧ್ಯೆ ಚೌಹಾಣ್ ಜನರನ್ನು ತಲುಪುವ ಅಭಿಯಾನ ನಿಲ್ಲಿಸಿಲ್ಲ. ನಾನು ಮತ್ತೊಮ್ಮೆ ಸಿಎಂ ಆಗಬೇಕೇ ಬೇಡವೇ ಎಂದು 2 ದಿನಗಳ ಹಿಂದೆ ರ‍್ಯಾಲಿ ಉದ್ದೇಶಿಸಿ ಭಾಷಣ ಮಾಡಿದ್ದರು. ಈ ಮೂಲಕ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸರ್ಕಾರಿ ನೌಕರಿಯಲ್ಲಿ ಮಹಿಳೆಯರಿಗೆ ಶೇ.35ರಷ್ಟು ಮೀಸಲಾತಿ ಘೊಷಿಸಿ, ಮಹಿಳಾ ಮತಗಳನ್ನು ಸೆಳೆಯಲು ಮುಂದಾಗಿದ್ದಾರೆ. ಚೌಹಾಣ್ ಜನಪ್ರಿಯತೆ ಕುಸಿಯುತ್ತಿದೆ ಎಂಬ ರಾಜಕೀಯ ನಿರೂಪಣೆಯನ್ನು ಪಕ್ಷದಲ್ಲಿರುವ ಚೌಹಾಣ್ ವಿರೋಧಿಗಳೇ ಮಾಡುತ್ತಿದ್ದರೂ, ಮೃದುಭಾಷಿಯಾಗಿರುವ ಅವರ ಜನಪ್ರಿಯತೆ ಅಲ್ಲಗಳೆಯಲು ಸಾಧ್ಯವಿಲ್ಲ. ದಲಿತ ಯುವಕನೊಬ್ಬನ ಮೇಲೆ ಬಿಜೆಪಿ ಶಾಸಕರ ಆಪ್ತರೊಬ್ಬರು ಕುಡಿದ ಅಮಲಿನಲ್ಲಿ ಮೂತ್ರ ಮಾಡಿದ ಘಟನೆಗೆ ಬೇಸರ ವ್ಯಕ್ತಪಡಿಸಿ, ನಂತರ ಆತನನ್ನು ತನ್ನ ಮನೆಗೆ ಕರೆಸಿ ಪಾದ ತೊಳೆದ ಚೌಹಾಣ್ ನಡೆ ರಾಜ್ಯಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಚೌಹಾಣ್ ವಿರುದ್ಧ ಕಾಂಗ್ರೆಸ್​ನ ಕಮಲ್​ನಾಥ್ ಮತ್ತೊಮ್ಮೆ ತೊಡೆತಟ್ಟಿದ್ದು, ಮೃದು ಹಿಂದುತ್ವದ ಮೂಲಕ ಹಿಂದುಗಳ ಮನಸೆಳೆಯಲು ಯತ್ನಿಸುತ್ತಿದ್ದಾರೆ.

    MP Polls

    ರಾಜಸ್ಥಾನ: ಇಲ್ಲಿ ಪ್ರತಿ ಸಲದಂತೆ ಈ ಬಾರಿಯೂ ಬಿಜೆಪಿ-ಕಾಂಗ್ರೆಸ್ ಮಧ್ಯೆ ಪ್ರಬಲ ಸ್ಪರ್ಧೆ ಏರ್ಪಡುವ ನಿರೀಕ್ಷೆಯಿದೆ. ಕಾಂಗ್ರೆಸ್ ನಾಯಕ, ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಪಕ್ಷ ಚುನಾವಣೆ ಎದುರಿಸಲಿದೆ. ಕಳೆದ ನಾಲ್ಕು ವರ್ಷ ಗೆಹ್ಲೋಟ್ ಜತೆ ಹೊಂದಾಣಿಕೆ ಸಾಧ್ಯವಾಗದೆ, ಸರ್ಕಾರದ ವಿರುದ್ಧವೇ ಬುಸುಗುಡುತ್ತಿದ್ದ ಸಚಿನ್ ಪೈಲಟ್, ಸದ್ಯ ಮೌನವಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಬ್ಬರ ಮುನಿಸನ್ನು ಸರಿಪಡಿಸಿದ್ದಾರೆಂದು ಮೇಲ್ನೋಟಕ್ಕೆ ಕಂಡುಬಂದರೂ, ಟಿಕೆಟ್ ಹಂಚಿಕೆ ವೇಳೆ ಇಬ್ಬರ ನಡುವೆ ಮತ್ತೊಂದು ಸುತ್ತಿನ ವೈಮನಸ್ಯ ಮೂಡಿದರೂ ಅಚ್ಚರಿ ಇಲ್ಲ. ಕಳೆದ ಬಾರಿ 100 ಕ್ಷೇತ್ರ ಗೆದ್ದು, ನಂತರ ಬಿಎಸ್​ಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ಕಾಂಗ್ರೆಸ್, ಬಿಜೆಪಿ ಸಿಎಂ ಅಭ್ಯರ್ಥಿ ವಸುಂಧರಾ ರಾಜೆ ಸಿಂದಿಯಾಗೆ ತೀವ್ರ ಮುಖಭಂಗ ಉಂಟುಮಾಡಿತ್ತು. ಈ ಬಾರಿ ವಸುಂಧರಾ ರಾಜೆ ಬಿಜೆಪಿ ವರಿಷ್ಠರ ನೆಚ್ಚಿನ ನಾಯಕಿಯಾಗಿ ಉಳಿದಿಲ್ಲ. ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೊಷಿಸುವ ಸಾಧ್ಯತೆ ಕಡಿಮೆ. ಮೇಲಾಗಿ, ಮೋದಿ, ಅಮಿತ್ ಶಾ ಜತೆ ವಸುಂಧರಾ ಸಂಬಂಧವೂ ಅಷ್ಟಕ್ಕಷ್ಟೇ. ಆದರೆ, ವಸುಂಧರಾ ರಾಜೆಯನ್ನು ಕಡೆಗಣಿಸಿದರೆ, ಬಿಜೆಪಿಗದು ಬಿಸಿತುಪ್ಪವಾಗಿ ಪರಿಣಮಿಸುವ ಸಾಧ್ಯತೆಯೂ ಇದೆ. ಏಕೆಂದರೆ, ಜನಪ್ರಿಯತೆ ವಿಚಾರದಲ್ಲಿ ವಸುಂಧರಾ ಮುಂದಿದ್ದಾರೆ. ಏತನ್ಮದ್ಯೆ ಮಧ್ಯಪ್ರದೇಶದಂತೆ ರಾಜಸ್ಥಾನದಲ್ಲೂ ಕೆಲ ಸಂಸದರನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಬಿಜೆಪಿಯಿದೆ. ಕೋಟಾ-ಬುಂಡಿ ಸಂಸದ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಪಿ. ಜೋಶಿ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘ್ವಾಲ್, ಗಜೇಂದ್ರ ಸಿಂಗ್ ಶೇಖಾವತ್, ಸಂಸದ ರಾಜ್ಯವರ್ಧನ್ ಸಿಂಗ್ ರಾಠೋಡ್ ಸೇರಿ ಹಲವರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸುವ ಸಂಭವವಿದೆ. ಇವರೆಲ್ಲರೂ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ. 2013ರ ವಿಧಾನಸಭೆ ಚುನಾವಣೆಯಲ್ಲಿ 163 ಸೀಟು ಬಾಚಿಕೊಂಡಿದ್ದ ಬಿಜೆಪಿ, 2018ರಲ್ಲಿ 23ಕ್ಕೆ ಕುಸಿದಿತ್ತು. ಅದೇ ಕಾಂಗ್ರೆಸ್ 21ರಿಂದ 100ಕ್ಕೆ ಹೈಜಂಪ್ ಮಾಡಿತ್ತು. ಸಿಎಂ ಅಶೋಕ್ ಗೆಹ್ಲೋಟ್ ಬದಲಿಗೆ ಪೈಲಟ್​ರನ್ನು ನಾಯಕರನ್ನಾಗಿ ಬಿಂಬಿಸುವ ಸ್ಥಿತಿಯಲ್ಲಂತೂ ಸದ್ಯ ಕಾಂಗ್ರೆಸ್ ಇಲ್ಲ. ಹಾಗಂತ ಪೈಲಟ್​ರನ್ನು ನಿರ್ಲಕ್ಷಿಸುವಂತೆಯೂ ಇಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಛತ್ತೀಸ್​ಗಢ, ಮಧ್ಯಪ್ರದೇಶ ನಾವು ಗೆಲ್ಲುತ್ತೇವೆ. ತೆಲಂಗಾಣವನ್ನೂ ಗೆಲ್ಲಬಹುದು ಎಂದಿದ್ದರು. ಆದರೆ ರಾಜಸ್ಥಾನದಲ್ಲಿ ಪ್ರಬಲ ಪೈಪೋಟಿ ಎನ್ನುವುದನ್ನು ಒಪ್ಪಿಕೊಂಡಿದ್ದರು. ಬಿಜೆಪಿ 41 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, 7 ಸಂಸದರಿಗೆ ಟಿಕೆಟ್ ನೀಡಿದೆ.

    RJ Polls

    ಮಿಜೋರಾಂ: 40 ವಿಧಾನಸಭೆ ಕ್ಷೇತ್ರಗಳುಳ್ಳ ಈಶಾನ್ಯ ಭಾರತದ ಸಣ್ಣ ರಾಜ್ಯ ಮಿಜೋರಾಂನಲ್ಲಿ ಆಡಳಿತಾರೂಢ ಮಿಜೋ ನ್ಯಾಶನಲ್ ಫ್ರಂಟ್ (ಎಂಎನ್​ಎಫ್) ಮತ್ತು ಕಾಂಗ್ರೆಸ್ ಪ್ರಾಬಲ್ಯ ಸಾಧಿಸುತ್ತಾ ಬಂದಿವೆ. 2018ರ ಚುನಾವಣೆಯಲ್ಲಿ ಎಂಎನ್​ಎಫ್, 10 ವರ್ಷಗಳ ನಂತರ ಮಿಜೋರಾಂನಲ್ಲಿ ಕಾಂಗ್ರೆಸ್ ಸೋಲಿಸಿ ಮತ್ತೆ ಅಧಿಕಾರದ ಗದ್ದುಗೆ ಏರಿತು. 40ರಲ್ಲಿ 26 ಸೀಟು ಮತ್ತು ಶೇ 37.70ರಷ್ಟು ಮತಗಳು ಎಂಎನ್​ಎಫ್ ಪಾಲಾಗಿತ್ತು. 2008ರಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ 2018ರಲ್ಲಿ ಕೇವಲ ಐದು ಸ್ಥಾನಗಳನ್ನಷ್ಟೇ ಗೆದ್ದಿತ್ತು. 1998ರಿಂದ ಅಧಿಕಾರದಲ್ಲಿದ್ದ ಎಂಎನ್​ಎಫ್ ಸೋಲಿಸಿದ್ದ ಕಾಂಗ್ರೆಸ್, 2008ರ ತನಕ ಅಧಿಕಾರ ನಡೆಸಿತ್ತು. ಕೇಂದ್ರದಲ್ಲಿ ಎನ್​ಡಿಎ ಮೈತ್ರಿಕೂಟ ಮತ್ತು ಈಶಾನ್ಯದಲ್ಲಿ ಎನ್​ಇಡಿಎ ಮೈತ್ರಿಕೂಟದ ಭಾಗವಾಗಿದ್ದರೂ, ರಾಜ್ಯ ಚುನಾವಣೆಯಲ್ಲಿ ಎಂಎನ್​ಎಫ್ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಏಳು ಪಕ್ಷಗಳ ವಿಲೀನದ ನಂತರ ಅಂದರೆ ಕಳೆದ ಚುನಾವಣೆಗೆ ಒಂದು ವರ್ಷ ಮುನ್ನ ರಚನೆಗೊಂಡ ಜೋರಾಮ್ ಪೀಪಲ್ಸ್ ಮೂವ್​ವೆುಂಟ್ (ಝುಡ್​ಪಿಎಂ), 2018ರಲ್ಲಿ ಎಂಟು ಸ್ಥಾನಗಳನ್ನು ಗೆದ್ದು, ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇದರಿಂದಾಗಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಕ್ರಿಶ್ಚಿಯನ್ನರೇ ಹೆಚ್ಚಿರುವ ಈ ರಾಜ್ಯದಲ್ಲಿ ಬಿಜೆಪಿ ಕಳೆದ ಚುನಾವಣೆಯಲ್ಲಿ 1 ಸೀಟನ್ನಷ್ಟೇ ಗೆದ್ದಿದೆ. 2018ರಲ್ಲಿ ಝುಡ್​ಪಿಎಂಎ 23% ಮತ್ತು ಬಿಜೆಪಿಗೆ 8% ಮತಗಳು ಬಿದ್ದಿದ್ದವು. ಈ ಚುನಾವಣೆಯಲ್ಲಿ ಕಾಂಗ್ರೆಸ್​ಗಿಂತ ಹೆಚ್ಚು ಝುಡ್​ಪಿಎಂ ಆಡಳಿತಾರೂಢ ಎಂಎನ್​ಎಫ್​ಗೆ ಪ್ರಬಲ ಪೈಪೋಟಿ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

    MJ Polls

    ಛತ್ತೀಸ್​ಗಢ: 2003-2018ರ ತನಕ 15 ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿತ್ತು. ಪ್ರಬಲ ಆಡಳಿತ ವಿರೋಧಿ ಅಲೆಯಿಂದಾಗಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿ, ಭೂಪೇಶ್ ಬಗೇಲ್ ರಾಜ್ಯದ ಸಿಎಂ ಪಟ್ಟವೇರಿದರು. 90 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪ್ರಸ್ತುತ 71 ಸ್ಥಾನಗಳನ್ನು ಹೊಂದಿದೆ. 2018ರಲ್ಲಿ ಬಿಜೆಪಿ ಗೆದ್ದಿದ್ದು ಕೇವಲ 15 ಸೀಟು ಮಾತ್ರ. ಈ ಚುನಾವಣೆಯನ್ನೂ ಬಗೇಲ್ ನೇತೃತ್ವದಲ್ಲೇ ಎದುರಿಸಲು ಕಾಂಗ್ರೆಸ್ ಸಜ್ಜಾಗಿದೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮತ್ತೋರ್ವ ಹಿರಿಯ ನಾಯಕ ಟಿ.ಎಸ್. ಸಿಂಗ್ ದೇವ್​ರನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾಧಾನಪಡಿಸಿ, ಡಿಸಿಎಂ ಸ್ಥಾನ ಸಿಗುವಂತೆ ಮಾಡಿದರು. ಹೀಗಾಗಿ, ಸಿಂಗ್​ದೇವ್ ಸದ್ಯಕ್ಕೆ ಬಂಡಾಯ ಬಾವುಟ ಮಡಚಿ ಕುಳಿತಿದ್ದಾರೆ. ರೈತರು, ಬುಡಕಟ್ಟು ಮತ್ತು ಬಡವರ ಪರ ಯೋಜನೆಗಳನ್ನು ನಂಬಿರುವ ಬಗೇಲ್, 75ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರುವ ವಿಶ್ವಾಸದಲ್ಲಿದ್ದಾರೆ. ಒಬಿಸಿ ಮತ್ತು ಗ್ರಾಮೀಣ ಮತದಾರರ ಮೇಲೆ ಗಮನಾರ್ಹ ಹಿಡಿತ ಹೊಂದಿರುವ ಬಘೕಲ್, ಜನಮಾನಸದ ಮಧ್ಯೆ ಅಭೂತಪೂರ್ವ ಜನಪ್ರಿಯತೆ ಹೊಂದಿರುವುದು ಕಾಂಗ್ರೆಸ್​ನ ಪ್ಲಸ್ ಪಾಯಿಂಟ್. ಹಿಂದುತ್ವ ಅಜೆಂಡಾಕ್ಕೆ ಬಗೇಲ್ ಒತ್ತು ನೀಡಿರುವುದು ಬಿಜೆಪಿಗೆ ಮತ್ತೊಂದು ಸವಾಲು. ಭಗವಾನ್ ಶ್ರೀ ರಾಮನ ತಾಯಿಗೆ ಸಮರ್ಪಿತವಾಗಿರುವ ಏಕೈಕ ದೇಗುಲ ಮಾತಾ ಕೌಸಲ್ಯೆ ದೇವಾಲಯ ನವೀಕರಣಗೊಳಿಸುವ ಮೂಲಕ ಬಗೇಲ್, ಹಿಂದು ಮತಗಳನ್ನು ಸೆಳೆಯಲು ಮುಂದಾಗಿ ದ್ದಾರೆ. ಅವರು ತಮ್ಮ ಭಾಷಣಗಳಲ್ಲೂ ರಾಮಾಯಣ ಉಲ್ಲೇಖ ಮಾಡುತ್ತಿದ್ದಾರೆ. ಏತನ್ಮಧ್ಯೆ, ಇಲ್ಲಿ ಒಬಿಸಿಗಳ ಸುತ್ತಲೇ ರಾಜಕೀಯ ಗಿರಕಿ ಹೊಡೆಯುವುದರಿಂದ ಈಚಿಗೆ ಕೈ ನಾಯಕಿ ಪ್ರಿಯಾಂಕಾ ಗಾಂಧಿ ರಾಜ್ಯದ ರ‍್ಯಾಲಿ ಉದ್ದೇಶಿಸಿ ಮಾತನಾಡುವಾಗ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುವ ವಾಗ್ದಾನ ನೀಡಿದ್ದಾರೆ. ಜಾತಿವಾರು ದತ್ತಾಂಶದ ಕೊರತೆಯಿಂದಾಗಿ ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಇರಬಹುದು ಎಂದು ನಂಬಲಾಗಿರುವ ಒಬಿಸಿ ಮತದಾರರಿಗೆ ಈ ಭರವಸೆ ಹೊಸ ನಿರೀಕ್ಷೆ ಹುಟ್ಟುಹಾಕಿದೆ. ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕೆ ಧಾರ್ವಿುಕ ಮತಾಂತರದ ಕಳವಳ, ಕಾಂಗ್ರೆಸ್​ನ ಸುಳ್ಳು ಭರವಸೆಗಳ ಪಟ್ಟಿ, ಮದ್ಯ ಹಗರಣ, ಭ್ರಷ್ಟಾಚಾರ ಆರೋಪ ಸೇರಿ ಹಲವು ವಿಷಯಗಳನ್ನು ಬಳಸಿಕೊಳ್ಳುತ್ತಿದೆ. ಮಾಜಿ ಸಿಎಂ ರಮಣ್ ಸಿಂಗ್​ರನ್ನು ಸಿಎಂ ಅಭ್ಯರ್ಥಿಯಾಗಿ ಘೊಷಿಸುವ ಸಾಧ್ಯತೆ ಕಡಿಮೆ. ಬಿಜೆಪಿ 64 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು ಮೂವರು ಸಂಸದರಿಗೆ ಟಿಕೆಟ್ ನೀಡಿದೆ.

    CH Polls

    ತೆಲಂಗಾಣ: 119 ವಿಧಾನಸಭೆ ಕ್ಷೇತ್ರಗಳಿರುವ ರಾಜ್ಯದಲ್ಲಿ ಮೂರನೇ ಬಾರಿ ಚುನಾವಣೆ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಬೇಕೆಂಬ ಹವಣಿಕೆಯಲ್ಲಿರುವ ಸಿಎಂ ಕೆ. ಚಂದ್ರಶೇಖರ ರಾವ್ (ಕೆಸಿಆರ್) ನಾಯಕತ್ವದ ಭಾರತ ರಾಷ್ಟ್ರ ಸಮಿತಿ ಪಕ್ಷ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್​ನಿಂದ ಪ್ರಬಲ ಸವಾಲನ್ನೆದುರಿಸುತ್ತಿದೆ. ತೆಲಂಗಾಣ ರಚನೆಗೆ ವ್ಯಾಪಕ ಹೋರಾಟ ನಡೆಸಿ ಅದನ್ನು ಸಾಧಿಸುವಲ್ಲಿ ಯಶಸ್ವಿಯಾದರೂ, ಕೆಸಿಆರ್ ಜನಸಮೂಹದೊಂದಿಗಿನ ಸಂಪರ್ಕ ಬಿಗಿಯಾಗಿಸಿಕೊಳ್ಳದಿರುವುದೇ ಪಕ್ಷಕ್ಕೆ ಹಾನಿ ಮಾಡುವ ಸಾಧ್ಯತೆಯಿದೆ. ಮೇಲಾಗಿ ಮಕ್ಕಳಾದ ಕೆ ರಾಮರಾವ್ ಮತ್ತು ಕನ್ವಲಕುಂಟ ಕವಿತಾ ಅವರು ಆಡಳಿತದಲ್ಲಿ ವಿಪರೀತ ಹಸ್ತಕ್ಷೇಪ ಮಾಡುತ್ತಿರುವುದು ವಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿದೆ. ಚುನಾವಣೆ ತಯಾರಿ ಬಗ್ಗೆ ತಲೆಕೆಡಿಸಿಕೊಳ್ಳುವ ಮಧ್ಯೆ ಕವಿತಾ ದಿಲ್ಲಿ ಅಬಕಾರಿ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ತಮ್ಮ ನೇತೃತ್ವದಲ್ಲಿ ಎನ್​ಡಿಎಗೆ ಪರ್ಯಾಯವಾಗಿ ರಾಷ್ಟ್ರೀಯ ಮಹಾಮೈತ್ರಿ ಕಟ್ಟಬೇಕೆಂದು ಕನಸು ಕಂಡಿದ್ದ ಕೆಸಿಆರ್, ಇಂಡಿಯಾ ಮೈತ್ರಿಕೂಟ ಮತ್ತು ಎನ್​ಡಿಎ ಮೈತ್ರಿಕೂಟ ಎರಡರಿಂದಲೂ ತಿರಸ್ಕೃತಗೊಂಡಿದ್ದಾರೆ. 2014ರಲ್ಲಿ ಹೊಸ ರಾಜ್ಯ ರಚನೆ ಬಳಿಕ ತೆಲಂಗಾಣದಲ್ಲಿ ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್, ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಪುತ್ರಿ ವೈಎಸ್ ಶರ್ವಿುಳಾ ನೇತೃತ್ವದ ವೈಎಸ್​ಆರ್ ತೆಲಂಗಾಣ ಪಾರ್ಟಿಯನ್ನು ವಿಲೀನಗೊಳಿಸುವ ಯತ್ನದಲ್ಲಿತ್ತು. ಈ ಮೂಲಕ ಪಕ್ಷ ದೃಢಗೊಳಿಸುವುದು ಕೈ ಯೋಜನೆಯಾಗಿತ್ತು. ಆದರೆ ವಿಲೀನಕ್ಕೆ ಬ್ರೇಕ್ ಬಿದ್ದಿದೆ. ಶರ್ವಿುಳಾ ಏಕಾಂಗಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉಸ್ತುವಾರಿಯಲ್ಲೇ ಶರ್ವಿುಳಾ ಕಾಂಗ್ರೆಸ್ ಜತೆ ಕೈ ಜೋಡಿಸಲಿದ್ದಾರೆ ಎಂಬ ನಿರೀಕ್ಷೆಗಳು ಈಡೇರಿಲ್ಲ. ಏತನ್ಮಧ್ಯೆ, ಕೆಸಿಆರ್ ವಿರೋಧಿ ಅಲೆಯನ್ನು ಬಳಸಿಕೊಂಡು ರಾಜಕೀಯ ಅಸ್ತಿತ್ವ ಬಿಗಿಗೊಳಿಸಲು ಬಿಜೆಪಿ ಯತ್ನಿಸಿದೆ. ಗ್ರೇಟರ್ ಹೈದ್ರಾಬಾದ್ ಪಾಲಿಕೆ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಬಿಆರ್​ಎಸ್​ಗೆ ಬಿಜೆಪಿ ಪ್ರಬಲ ಪೈಪೋಟಿ ನೀಡಿರುವುದರಿಂದ ಎರಡನೇ ಮುಖ್ಯ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ರಾಜ್ಯದ ಮಟ್ಟಿಗೆ ಬಿಜೆಪಿ ಅಧ್ಯಕ್ಷ, ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಮತ್ತು ಮಾಜಿ ಅಧ್ಯಕ್ಷ ಬಂಡಿ ಸಂಜಯ್ ಪಕ್ಷದ ಬೆನ್ನೆಲುಬುಗಳು. ಬಿಜೆಪಿ ಮತ್ತು ಬಿಆರ್​ಎಸ್ ಮಧ್ಯೆ ಒಳ ಒಪ್ಪಂದ ನಡೆದಿದೆ ಎಂದು ಕಾಂಗ್ರೆಸ್ ಆರೋಪಿ ಸುತ್ತಿರುವುದರಿಂದಲೇ, ಕೆಲ ದಿನಗಳ ಹಿಂದೆ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಎನ್​ಡಿಎ ಮೈತ್ರಿಕೂಟದಿಂದ ಬಿಆರ್​ಎಸ್ ಪಕ್ಷವನ್ನು ದೂರವಿಡಲು ನಾನೇ ತೀರ್ವನಿಸಿದ್ದೆ ಎಂದು ಹೇಳಿದ್ದರು. ಕರ್ನಾಟಕ ವಿಧಾನಸಭೆ ಚುನಾವಣೆ ಗೆಲುವಿನ ನಂತರ ಕಾಂಗ್ರೆಸ್ ಈ ರಾಜ್ಯದಲ್ಲಿ ಬಿಆರ್​ಎಸ್​ಗೆ ತಾನೇ ಪರ್ಯಾಯ ಎಂದು ಪ್ರಚಾರ ಮಾಡುತ್ತಿದೆ. ಹೀಗಾಗಿ, ಈ ಅಭಿಯಾನವು ಬಿಆರ್​ಎಸ್ ವಿರೋಧಿ ಮತಗಳನ್ನು ಕಾಂಗ್ರೆಸ್ ಕಡೆಗೆ ಕ್ರೋಢೀಕರಿಸಲು ನೆರವಾಗಬಹುದು ಎನ್ನಲಾಗಿದೆ. 2018ರಲ್ಲಿ ಬಿಆರ್​ಎಸ್ 88 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 19 ಮತ್ತು ಬಿಜೆಪಿ ಕೇವಲ ಒಂದು ಸೀಟನ್ನಷ್ಟೇ ಗೆದ್ದುಕೊಂಡಿತ್ತು.

    TS polls

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts