More

    ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸವಿದ ಜಿಲ್ಲಾಧ್ಯಕ್ಷ

    ಶಿವಮೊಗ್ಗ: ನಗರದ ಬಿ.ಎಚ್.ರಸ್ತೆ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‌ನ ಅವ್ಯವಸ್ಥೆ ಹಾಗೂ ಮೂಲ ಸೌಕರ್ಯ ಕೊರತೆ ಬಗ್ಗೆ ನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಹಾಗೂ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರ ಗಮನ ಸೆಳೆಯಲಾಗಿದೆ. ಮೂಲ ಸೌಕರ್ಯ ಒದಗಿಸಲು 12 ಲಕ್ಷ ರೂ. ಅನುದಾನವನ್ನು ಆಯುಕ್ತರು ಬಿಡುಗಡೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.
    ಇಂದಿರಾ ಕ್ಯಾಂಟೀನ್ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸಿ, ಆಹಾರ ಸೇವಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರ ಒದಗಿಸುತ್ತಿಲ್ಲ. ನಿಗದಿತ ಪ್ರಮಾಣದಲ್ಲಿ ನೀಡುವುದಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ ಎಂಬ ದೂರುಗಳಿದ್ದವು. ಇದು ವಾಸ್ತವವೂ ಆಗಿತ್ತು. ಎಲ್ಲವನ್ನೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
    2013ರಲ್ಲಿ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭಿಸಿತ್ತು. ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇದರ ಬಗ್ಗೆ ನಿರ್ಲಕ್ಷೃ ವಹಿಸಿತ್ತು. ಈಗ ಮತ್ತೆ ಸಿದ್ದರಾಮಯ್ಯ ಸಿಎಂ ಆಗಿರುವುದರಿಂದ ಕ್ಯಾಂಟೀನ್‌ಗಳಿಗೆ ಕಾಯಕಲ್ಪ ನೀಡುತ್ತಿದ್ದಾರೆ. ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಗಳ ಜಾರಿಗೆ ಕಾಂಗ್ರೆಸ್ ಬದ್ಧವಾಗಿದೆ. ಶಕ್ತಿ ಯೋಜನೆ ಯಶಸ್ವಿಯಾಗಿದೆ. ಅನ್ನಭಾಗ್ಯದ ಹೆಚ್ಚುವರಿ ಅಕ್ಕಿ ಬದಲು ಹಣವನ್ನು ಪಡಿತರದಾರರ ಖಾತೆಗೆ ಜಮಾ ಮಾಡಲಾಗುತ್ತಿದೆ. ಮುಂದೆ ಉಳಿದ ಯೋಜನೆಗಳನ್ನೂ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಶಾ, ಪ್ರಮುಖರಾದ ಪ್ರವೀಣ್‌ಕುಮಾರ್, ಸ್ಟೆಲ್ಲಾ ಮಾರ್ಟಿನ್, ಪ್ರೇಮಾ ಎನ್. ಶೆಟ್ಟಿ, ಕುಮಾರಸ್ವಾಮಿ, ಶಮೀನಾ ಬಾನು ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts