More

  ಸರ್ಕಾರಿ ಶಾಲೆ ಮುಚ್ಚುವ ಭೀತಿ: ಸಮಸ್ಯೆ ಬಗೆಹರಿಸುವುದೇ ಸವಾಲು

  ಅನ್ಸಾರ್ ಇನೋಳಿ ಉಳ್ಳಾಲ

  ಇಲ್ಲೊಂದು ಶಾಲೆಯಲ್ಲಿ ಶಿಕ್ಷಕರೇ ಸಮಸ್ಯೆ ಮೈಮೇಲೆ ಎಳೆದುಕೊಂಡಿರುವ ಪರಿಣಾಮ ಶಾಲೆಯ ಮೇಲೆ ಅಡ್ಡ ಪರಿಣಾಮ ಉಂಟಾಗಿದ್ದು, ದಾಖಲಾತಿ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಮುಂದಿನ ಸಾಲಿನಲ್ಲಿ ಇನ್ನಷ್ಟು ಮಕ್ಕಳು ಶಾಲೆ ತೊರೆಯುವ ಆತಂಕ ಎದುರಾಗಿದೆ. ಇದು ತಲಪಾಡಿ ನಾರ್ಲ ಪಡೀಲ್ ಹಿರಿಯ ಪ್ರಾಥಮಿಕ ಶಾಲೆಯ ಸದ್ಯದ ದುಸ್ಥಿತಿ!

  ಈ ಶಾಲೆಯ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಸಾಕಷ್ಟು ಕೊಡುಗೆ ನೀಡಿವೆ. ಹಿಂದೆ ಸಾಕಷ್ಟು ಮಕ್ಕಳಿದ್ದ ಶಾಲೆಯಲ್ಲೀಗ ಮಕ್ಕಳ ಸಂಖ್ಯೆ ಕಡಿಮೆಯಾದರೂ ಶಿಕ್ಷಣದ ಗುಣಮಟ್ಟಕ್ಕೆ ಅಡ್ಡಿಯಾಗಿರಲಿಲ್ಲ. ಆರಂಭದಲ್ಲಿ 1ರಿಂದ 5ನೇ ತರಗತಿ ಇದ್ದ ಶಾಲೆ ಕರೊನಾ ಸಂದರ್ಭ ಮಕ್ಕಳ ಶಿಕ್ಷಣದ ಹಿತದೃಷ್ಟಿ ಗಮನಿಸಿ ಶಿಕ್ಷಣ ಇಲಾಖೆ ಶಾಲೆಯನ್ನು ಮೇಲ್ದರ್ಜೆಗೇರಿಸಿ 7ನೇ ತರಗತಿವರೆಗೆ ವಿಸ್ತರಿಸಿತ್ತು. ಇಲ್ಲಿ ಮುಖ್ಯ ಶಿಕ್ಷಕರ ಸಹಿತ ನಾಲ್ವರು ಶಿಕ್ಷಕರಿದ್ದಾರೆ.

  ಕಳೆದ ವರ್ಷ ಈ ಶಾಲೆಯಲ್ಲಿ 65 ಮಕ್ಕಳಿದ್ದು, ಈ ವರ್ಷ 49ಕ್ಕೆ ಇಳಿದಿದೆ. ಈ ಬಗ್ಗೆ ಮುಖ್ಯ ಶಿಕ್ಷಕಿಯನ್ನು ಪ್ರಶ್ನಿಸಿದರೆ ಕರೊನಾ ಸಂದರ್ಭ ಖಾಸಗಿ ಶಾಲೆಯ ಮಕ್ಕಳೂ ಬಂದಿದ್ದರು. ಅವರೆಲ್ಲ ಈಗ ಶಾಲೆ ಬಿಟ್ಟಿದ್ದಾರೆ. ಅಲ್ಲದೆ ಐದು ಮಕ್ಕಳ ಪಾಲಕರು ವಸತಿ ಬದಲಾಯಿಸಿದ ಕಾರಣ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ. 2011ರಿಂದ 2022ರವರೆಗೆ ಈ ಶಾಲೆಗೆ ಮುಖ್ಯ ಶಿಕ್ಷಕರೇ ಇರಲಿಲ್ಲ. ಆ ಸಂದರ್ಭ ಇಂದಿರಾ ಪ್ರಭಾರ ಮುಖ್ಯ ಶಿಕ್ಷಕಿಯಾಗಿದ್ದು, ಆಗ ಯಾವುದೇ ಸಮಸ್ಯೆ ಇರಲಿಲ್ಲ. ಈಗ ಶಿಕ್ಷಕರಲ್ಲಿ ಉಂಟಾಗಿರುವ ಭಿನ್ನ ಅಭಿಪ್ರಾಯದಿಂದ ಪಾಲಕರೇ ಬೇಸತ್ತು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಿದ್ದಾರೆ. ಸಮಸ್ಯೆ ಬಗೆಹರಿಸಲು ಶಿಕ್ಷಣ ಇಲಾಖೆ ಮುಂದಾಗದಿದ್ದರೆ ಮುಂದಿನ ವರ್ಷ ಇನ್ನಷ್ಟು ಮಕ್ಕಳು ಶಾಲೆ ತೊರೆಯುವ ಆತಂಕ ಎದುರಾಗಿದೆ.

  ಗ್ರಾಮಸಭೆಯಲ್ಲೂ ಚರ್ಚೆ

  ಕಳೆದ ತಿಂಗಳು 22ರಂದು ತಲಪಾಡಿ ಗ್ರಾಮಸಭೆ ನಡೆದಿತ್ತು. ನಾರ್ಲ ಪಡೀಲ್ ಶಾಲಾ ಶಿಕ್ಷಕರ ವೈಮನಸ್ಸಿನ ಬಗ್ಗೆ ಅಲ್ಲಿ ಚರ್ಚೆಯಾಗಿದ್ದು, ಮಂಗಳೂರು ತಾಪಂ ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ ವಿಷಯ ಪ್ರಸ್ತಾಪಿಸಿದ್ದರು. ನಾರ್ಲ ಪಡೀಲ್ ಶಾಲೆಯಲ್ಲಿ ಶಿಕ್ಷಕರ ಒಳಜಗಳದಿಂದ ಮಕ್ಕಳು ಶಾಲೆ ಬಿಡುತ್ತಿದ್ದು ಶಾಲೆಯ ನಿಯಂತ್ರಣ ತಪ್ಪಿದೆ. ಶಾಲೆಗೆ ಕಟ್ಟಡ ನಿರ್ಮಾಣ, ಶಾಲೆ ಉಳಿವಿಗೆ ಸ್ಥಳೀಯರು ಕಷ್ಟಪಟ್ಟಿದ್ದು, ಮುಂದಿನ ಸಾಲಿನಲ್ಲಿ ಇಂಥ ಸಮಸ್ಯೆ ಇರಬಾರದು, ಶಾಲೆ ಬಿಟ್ಟು ಹೋದ ಮಕ್ಕಳು ಮತ್ತೆ ಬರುವಂತೆ ಮಾಡಬೇಕು ಎಂದು ಸುರೇಖಾ ಶಿಕ್ಷಣ ಇಲಾಖೆ ಅಧಿಕಾರಿಯೆದುರು ಆಗ್ರಹಿಸಿದ್ದರು.

  ಇಬ್ಬರು ಶಿಕ್ಷಕರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ಬಳಿಕ ಸಮಸ್ಯೆ ಪರಿಹರಿಸಿ ಮುಂದಿನ ಸಾಲಿನಲ್ಲಿ ಸಮಸ್ಯೆ ಇಲ್ಲದಂತೆ ಮಾಡಲು ಪ್ರಯತ್ನಿಸುತ್ತೇವೆ. ನಮ್ಮಿಂದ ಆಗದಿದ್ದರೆ ಮೇಲಧಿಕಾರಿಯ ಗಮನಕ್ಕೆ ತರುತ್ತೇವೆ.

  -ಎಚ್.ಆರ್.ಈಶ್ವರ್ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ

  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕಿಯನ್ನು ಹೊಂದಿರುವ ಶಾಲೆ ಎಲ್ಲರ ಸಹಕಾರದಲ್ಲಿ ಉತ್ತಮ ರೀತಿಯಲ್ಲಿ ನಡೆಯುತ್ತಿತ್ತು. ಕಳೆದೆರಡು ವರ್ಷಗಳಿಂದ ಸಮಸ್ಯೆ ಶುರುವಾಗಿದೆ. ಶಿಕ್ಷಣ ಇಲಾಖೆಯ ವೈಫಲ್ಯದಿಂದ ಶಾಲೆಯ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.

  -ಸುರೇಶ್ ಆಳ್ವ ಸಾಂತ್ಯಗುತ್ತು ಮಾಜಿ ಅಧ್ಯಕ್ಷ, ತಲಪಾಡಿ ಗ್ರಾಪಂ

  ಊರಿನಲ್ಲಿ ಶಾಲೆ ಬೇಕೆನ್ನುವ ನೆಲೆಯಲ್ಲಿ ನಾವೆಲ್ಲ ತುಂಬ ಕಷ್ಟಪಟ್ಟು ಮಕ್ಕಳನ್ನು ತಂದು ಸೇರಿಸಿದ್ದೇವೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಉದ್ಭವವಾಗಿದೆ. ಹೀಗಾದರೆ ಮುಂದಿನ ವರ್ಷ ಮಕ್ಕಳಿಲ್ಲದೆ ಮುಚ್ಚುವ ಸ್ಥಿತಿ ಬರಲಿದ್ದು ಅದಕ್ಕೆ ಶಿಕ್ಷಣ ಇಲಾಖೆ ಅವಕಾಶ ನೀಡಬಾರದು.

  -ಸುರೇಖಾ ಚಂದ್ರಹಾಸ, ಮಾಜಿ ಸದಸ್ಯೆ, ಮಂಗಳೂರು ತಾಪಂ

  ಸ್ಥಳೀಯರು ಸಾಕಷ್ಟು ಶ್ರಮಪಟ್ಟು ಮಕ್ಕಳನ್ನು ಸೇರಿಸಿದ್ದು ಇಷ್ಟು ವರ್ಷಗಳಲ್ಲಿ ಶಿಕ್ಷಣ ಇಲಾಖೆಗೆ ಯಾವುದೇ ದೂರು ನೀಡಿಲ್ಲ. ಆದರೆ ಈಗಿನ ಸಮಸ್ಯೆ ಬಗ್ಗೆ ಹಲವು ದೂರು ನೀಡಲಾಗಿದೆ. ಪಾಲಕರಿಗೆ ಶಾಲೆಯ ಬಗ್ಗೆ ವಿಶ್ವಾಸ ಉಳಿಯಬೇಕಾದರೆ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು.

  -ರೇಖಾ ರೈ ಅಧ್ಯಕ್ಷೆ, ಶಾಲಾಭಿವೃದ್ಧಿ ಸಮಿತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts