More

  ಕರಾವಳಿಯಿಂದಲೇ ಶುರು ಬಿಜೆಪಿಯ ಪಕ್ಷಾಂತರ ಪರ್ವ


  * ಪಿ.ಬಿ.ಹರೀಶ್ ರೈ

  ಮಂಗಳೂರು : ಅವಿಭಜಿತ ದ.ಕ.ಜಿಲ್ಲೆ ಬಿಜೆಪಿಯ ಶಕ್ತಿ ಕೇಂದ್ರ . ಪಕ್ಷದ ಶಿಸ್ತಿಗೆ ಹೆಸರಾದ ಜಿಲ್ಲೆ .ಆದರೆ ಬಿಜೆಪಿ ಶಾಸಕರ ಪಕ್ಷಾಂತರ ಪರ್ವ ಕೂಡಾ ಇಲ್ಲಿಂದಲೇ ಆರಂಭವಾಗಿದೆ ಎನ್ನುವುದು ಗಮನಾರ್ಹ ಅಂಶ. ಬಾಕಿಲ ಹುಕ್ರಪ್ಪ, ವಸಂತ ಬಂಗೇರರಿಂದ ವಲಸೆ ಪ್ರಕ್ರಿಯೆ ಶುರು. ಬೈಂದೂರು ಕ್ಷೇತ್ರದ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಈಗ ಹೊಸ ಸೇರ್ಪಡೆ.
  * ಮೊದಲ ಶಾಸಕರೇ ದೂರ:
  1983ರಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಒಟ್ಟು 8 ಮಂದಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು. ಈ ಪೈಕಿ 6 ಮಂದಿ
  ಮುಂದಿನ ರಾಜಕೀಯ ಬೆಳವಣಿಗೆಗಳಲ್ಲಿ ಪಕ್ಷದಿಂದ ದೂರವಾಗಿದ್ದಾರೆ. ಸುಳ್ಯದ ಶಾಸಕರಾಗಿದ್ದ ಬಾಕಿಲ ಹುಕ್ರಪ್ಪ ಅವರು 85ರ ಚುನಾವಣೆಯಲ್ಲಿ ಬಿಜೆಪಿ ತೊರೆದು ಜನತಾ ಪಾರ್ಟಿಯಿಂದ ಸ್ಪರ್ಧಿಸಿ ಸೋತರು. ಬಳಿಕ ಜನತಾ ದಳ, ಕೆಸಿಪಿ, ಕಾಂಗ್ರೆಸ್..ಹೀಗೆ ನಿರಂತರ ಪಕ್ಷಾಂತರದಿಂದ ಸರಣಿ ಸೋಲು ಅನುಭವಿಸಿದರು.
  * ಪ್ರಥಮ ಪಕ್ಷಾಂತರ
  ಬೆಳ್ತಂಗಡಿಯ ವಸಂತ ಬಂಗೇರ ಅವರು ಪಕ್ಷಾಂತರ ಮಾಡಿದ ರಾಜ್ಯದ ಪ್ರಥಮ ಬಿಜೆಪಿ ಶಾಸಕ. 83ರಲ್ಲಿ ಪ್ರಥಮ ಬಾರಿಗೆ ಗೆದ್ದ ಬಂಗೇರ ಅವರು 1985ರಲ್ಲಿ ಪುನರಾಯ್ಕೆಯಾದರು. ಆಗ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಬಂಗೇರ ಅವರು ಇಬ್ಬರೇ ಬಿಜೆಪಿಯ ಶಾಸಕರು. ಗೆದ್ದ ಬಳಿಕ ಬಂಗೇರ ಅವರು ಜನತಾ ಪಾರ್ಟಿ ಸೇರಿದರು.
  * ಬಿಜೆಪಿಗೆ ಗುಡ್ ಬೈ
  ಬಂಟ್ವಾಳದ ಪ್ರಥಮ ಬಿಜೆಪಿ ಶಾಸಕ ಎನ್.ಶಿವರಾವ್ ಅವರು 1994ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಪುತ್ತೂರಿನ ಪ್ರಥಮ ಬಿಜೆಪಿ ಶಾಸಕ ಉರಿಮಜಲು ರಾಮ ಭಟ್ ಅವರು ವಾಜಪೇಯಿ , ಆಡ್ವಾಣಿ ಅವರ ಆಪ್ತ ವಲಯದಲ್ಲಿದ್ದರು. ಆಂತಹ ಹಿರಿಯ ನಾಯಕ 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದರು.
  * ಮರಳಿ ಬಂದರು
  ವಿಟ್ಲ ಕ್ಷೇತ್ರದ ಪ್ರಥಮ ಬಿಜೆಪಿ ಶಾಸಕ ರುಕ್ಮಯ ಪೂಜಾರಿ ಅವರು ಒಮ್ಮೆ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿ ಬಳಿಕ ಬಿಜೆಪಿಗೆ ಮರಳಿದ್ದಾರೆ. ಉಳ್ಳಾಲ ಕ್ಷೇತ್ರದ ಪ್ರಥಮ ಬಿಜೆಪಿ ಶಾಸಕ ಜಯರಾಮ ಶೆಟ್ಟಿ ಅವರು 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಬಳಿಕ ಬಿಜೆಪಿಗೆ ಮರಳಿದರು. ಬಂಟ್ವಾಳ ಕ್ಷೇತ್ರದಿಂದ 2004ರಲ್ಲಿ ಗೆದ್ದ ಬಿ.ನಾಗರಾಜ ಶೆಟ್ಟಿ ಅವರು ಕರಾವಳಿಯ ಪ್ರಥಮ ಬಿಜೆಪಿ ಸಚಿವ ಎನ್ನುವ ಹೆಗ್ಗಳಿಕೆ ಹೊಂದಿದ್ದರು. ಅವರು ಕೂಡಾ ಒಮ್ಮೆ ಜೆಡಿಎಸ್ ಸೇರಿ ಮತ್ತೆ ಬಿಜೆಪಿಗೆ ಬಂದಿದ್ದಾರೆ.
  * ಕಾಂಗ್ರೆಸ್ ಸೇರಿದ ಮಾಜಿ ಸಂಸದರು :
  ಮಂಗಳೂರು (ಈಗ ಮಂಗಳೂರು ದಕ್ಷಿಣ) ಕ್ಷೇತ್ರದ ಪ್ರಥಮ ಬಿಜೆಪಿ ಶಾಸಕ, ಮಂಗಳೂರು ಕ್ಷೇತ್ರದ ಪ್ರಥಮ ಬಿಜೆಪಿ ಸಂಸದ, ದಕ್ಷಿಣ ಭಾರತದ ಪ್ರಥಮ ಬಿಜೆಪಿ ಕೇಂದ್ರ ಸಚಿವ ಧನಂಜಯ ಕುಮಾರ್ ಅವರು ತನ್ನ ರಾಜಕೀಯ ಜೀವನದ ಕೊನೆ ದಿನಗಳಲ್ಲಿ ಕೆಜೆಪಿ, ಜೆಡಿಎಸ್ ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಬೈಂದೂರು ಕ್ಷೇತ್ರದ ಪ್ರಥಮ ಬಿಜೆಪಿ ಶಾಸಕ, ಉಡುಪಿ ಕ್ಷೇತ್ರದ ಪ್ರಥಮ ಬಿಜೆಪಿ ಸಂಸದ ಐ.ಎಂ.ಜಯರಾಮ ಶೆಟ್ಟಿ ಅವರು ಕೂಡಾ ಬಿಜೆಪಿ ತೊರೆದು ಜೆಡಿಯು, ಸಮತಾ ಪಾರ್ಟಿ, ಸಮಾಜವಾದಿ ಪಾರ್ಟಿ ಕೊನೆಗೆ ಕಾಂಗ್ರೆಸ್ ಸೇರಿದ್ದರು.
  * ನಾಯಕಿಯರು ಪಕ್ಷ ತೊರೆದರು
  ಪುತ್ತೂರು ಕ್ಷೇತ್ರದ ಪ್ರಥಮ ಬಿಜೆಪಿ ಶಾಸಕಿ ಶಕುಂತಳಾ ಶೆಟ್ಟಿ ಅವರು 2008ರಲ್ಲಿ ಪಕ್ಷ ಟಿಕೆಟ್ ನಿರಾಕರಿಸಿದ ಕಾರಣ ಸ್ವಾಭಿಮಾನಿಯಾಗಿ ಸ್ಪರ್ಧಿಸಿದ್ದರು. 2013ರಲ್ಲಿ ಕಾಂಗ್ರೆಸ್ ಸೇರಿ ಮತ್ತೆ ಶಾಸಕಿಯಾದರು. ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಉಡುಪಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದ ಮನೋರಮ ಮಧ್ವರಾಜ್ ಅವಧಿ ಪೂರ್ಣಗೊಳ್ಳುವ ಮೊದಲೇ ಬಿಜೆಪಿಗೆ ವಿದಾಯ ಕೋರಿದ್ದರು.
  ಕರಾವಳಿಯ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು ಕೂಡಾ ಒಮ್ಮೆ ಕೆಜೆಪಿ ಸೇರಿ ಬಳಿಕ ಮರಳಿದವರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts