More

  ವಿಟ್ಲ ಪೇಟೆಯ ಹೃದಯ ಭಾಗದಲ್ಲಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಸರಣಿ ಕಳ್ಳತನ !

  ವಿಟ್ಲ: ಪೊಲೀಸ್ ಠಾಣೆಯ ಹಿಂಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೊಂದಿಕೊಂಡಿರುವ ಎರಡು ಅಂಗಡಿ ಸೇರಿ ಮೇಗಿನಪೇಟೆಯ ಒಂದು ಅಂಗಡಿಯಲ್ಲಿ ಸರಣಿ ಕಳ್ಳತನ ನಡೆದಿದ್ದು, ಶನಿವಾರ ಘಟನೆ ಬೆಳಕಿಗೆ ಬರುತ್ತಿದ್ದಂತೆ ಠಾಣೆಗೆ ದೂರು ನೀಡಿದ್ದಾರೆ.

  ವಿಟ್ಲ ಕಾಸರಗೋಡು ರಸ್ತೆಯಲ್ಲಿರುವ ಮಹಮ್ಮದ್ ಹಾಜಿ ಮಾಲೀಕತ್ವದ ದಿನಸಿ ಅಂಗಡಿಯ ಛಾವಣಿಯ ಹೆಂಚು ತೆಗೆದು ಒಳನುಗ್ಗಿದ್ದ ಕಳ್ಳರು ಹಣಕ್ಕಾಗಿ ಎಲ್ಲಾ ಕಡೆ ಜಾಲಾಡಿದ್ದಾರೆ. ಸುಮಾರು ೮ ಸಾವಿರ ನಗದು ಹಾಗೂ ಕಟ್ಟಿಟ್ಟ ದಿನಸಿ ಸಾಮಾಗ್ರಿಯನ್ನು ಕಳವು ಗೈದಿದ್ದಾರೆ. ಅಂಗಡಿಯ ಹಿಂಭಾಗದಲ್ಲಿ ಸಿಸಿಕ್ಯಾಮರಾ ಇದ್ದು, ಮಾ.೨೨ರಂದು ರಾತ್ರಿ ೧೧.೧೫ರ ಸಮಯಕ್ಕೆ ಕಳ್ಳತನದ ಚಲನವಲನ ಪತ್ತೆಯಾಗಿದೆ. ಸಿಸಿ ಕ್ಯಾಮರಾ ಗಮಿಸಿ ಅದನ್ನು ತಿರುಗಿಸಿಟ್ಟಿದ್ದಾನೆ. ಅಂಗಡಿಯ ಹಿಂಭಾಗದಲ್ಲಿ ವೃದ್ಧನೊಬ್ಬ ವಾಸವಾಗಿದ್ದು, ಆತನಲ್ಲಿ ಇಲ್ಲೇನು ಇರುವುದು ಎಂದು ಪ್ರಶ್ನಿಸಿದ ಕಳ್ಳ ಅಂಗಡಿ ಖಾಲಿ ಮಾಡಲು ಬಂದಿರುವುದಾಗಿ ಹೇಳಿಕೊಂಡಿದ್ದಾನೆ. ಅಂಗಡಿಯನ್ನು ನಡೆಸುತ್ತಿರುವ ಕುಂಡಡ್ಕ ನಿವಾಸಿ ಕೌಸರ್ ಅಂಗಡಿ ಕಳ್ಳತನದ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ.

  ದಿನಸಿ ಅಂಗಡಿಯ ಪಕ್ಕದ ದೀಪಕ್ ಬೀಡಿ ಕಂಟ್ರಾಕ್ಟರ್ ನಿಸಾರ್ ವಿ.ಎಸ್. ಅವರಿಗೆ ಸೇರಿದ ಬೀಡಿ ಬ್ರ್ಯಾಂಚ್ ಹಿಂಭಾಗದ ಬಾಗಿಲು ಮುರಿದು, ಒಳ ನುಗ್ಗಿದ್ದ ಕಳ್ಳರು, ಸಂಪೂರ್ಣ ಜಾಲಾಡಿ ಅಲ್ಲಿದ್ದ ಚಿಲ್ಲರೆ ಹಣವನ್ನು ಕದ್ದಿದ್ದಾರೆ. ಪ್ರತಿ ನಿತ್ಯ ಬೀಡಿ ಬಿಟ್ಟು ಹಣವನ್ನು ಅಂಗಡಿಯಿಂದ ತೆಗೆದುಕೊಂಡು ಹೋಗುತ್ತಿದ್ದರು. ಮ್ಯಾನೇಜರ್ ಬಾಲಕೃಷ್ಣ ಅವರು ಅಂಗಡಿಯ ಬಾಗಿಲು ತೆಗೆಯುವ ಸಂದರ್ಭದಲ್ಲಿ ವಿಚಾರ ಬೆಳಕಿಗೆ ಬಂದಿದೆ. ಮೇಗಿನ ಪೇಟೆಯಲ್ಲಿ ಫೆಲಿಸ್ ಪಾಯಸ್ ಅವರಿಗೆ ಸೇರಿದ ಕೋಳಿಯ ಅಂಗಡಿಯ ಹಿಂಭಾಗದ ಕಿಟಕಿ ಕಿತ್ತು ತೆಗೆದು ಒಳ ನುಗ್ಗಿದ ಕಳ್ಳರು, ಅಲ್ಲಿ ಚಿಲ್ಲರೆ ನಗದು ದೋಚಿದ್ದಾರೆ.

  ವಿಟ್ಲ – ಕಾಸರಗೋಡು ಮುಖ್ಯ ರಸ್ತೆಯ ಪೆಟ್ರೋಲ್ ಪಂಪ್ ಪಕ್ಕದಲ್ಲಿರುವ ದಿನಸಿ ಅಂಗಡಿ ಹಾಗೂ ಬಿಡಿ ಸಂಗ್ರಹ ಅಂಗಡಿ ಇದ್ದು, ಇದರ ಹಿಂಭಾಗ ವಿಟ್ಲ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ವಶಕ್ಕೆ ಪಡೆದ ವಾಹನ ನಿಲುಗಡೆ ಮಾಡುವ ಸ್ಥಳಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿದೆ. ಸಿಸಿಕ್ಯಾಮರಾದಲ್ಲಿ ಓರ್ವನ ಮುಖ ಪತ್ತೆಯಾಗಿದ್ದು, ಬಾಕ್ರಬೈಲು ಭಾಗದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವನ ಜತೆಗೆ ಇಬ್ಬರು ಭಾಗಿಯಾಗಿರುವ ಬಗ್ಗೆ ಶಂಖೆ ವ್ಯಕ್ತವಾಗಿದೆ. ಕಬಕ, ಕನ್ಯಾನ, ಆನೆಕಲ್ಲು, ಸಾಲೆತ್ತೂರು ಭಾಗದಲ್ಲಿ ಪೊಲೀಸ್ ಸೇರಿ ಚುನಾವಣಾಧಿಕಾರಿಗಳನ್ನೊಳಗೊಂಡ ವಿಶೇಷ ತಪಾಸಣಾ ಕೇಂದ್ರಗಳಿದ್ದು, ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. ಆದರೂ ಕಳ್ಳರು ಸಲೀಸಾಗಿ ಬಂದು ಕಳ್ಳತನ ನಡೆಸಿ, ಅಷ್ಟೇ ಸಲೀಸಾಗಿ ತಪ್ಪಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts