More

    ಇಂದಿನಿಂದ ಭಾರತ-ಆಸ್ಟ್ರೇಲಿಯಾ ಸರಣಿ ಟೆಸ್ಟ್, ಅಡಿಲೇಡ್‌ನಲ್ಲಿ ಅಹರ್ನಿಶಿ ಸವಾಲು

    ಅಡಿಲೇಡ್: ಕರೊನಾ ಕಾಲದ ಮೊದಲ ಟೆಸ್ಟ್ ಸವಾಲಿಗೆ ಭಾರತ ತಂಡ ಸಜ್ಜಾಗಿದೆ. ಬಹುನಿರೀಕ್ಷಿತ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಗುರುವಾರ ಅಡಿಲೇಡ್ ಓವಲ್ ಮೈದಾನದಲ್ಲಿ ಚಾಲನೆ ದೊರೆಯುತ್ತಿದೆ. ಅಹರ್ನಿಶಿ ಕಾದಾಟದೊಂದಿಗೆ 4 ಪಂದ್ಯಗಳ ಸರಣಿ ಆರಂಭಗೊಳ್ಳುತ್ತಿದ್ದು, ಪಿಂಕ್ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡದ ಅಜೇಯ ದಾಖಲೆಯನ್ನು ಮುರಿಯಲು ಭಾರತ ತಂಡ ಉತ್ಸುಕವಾಗಿದೆ.

    ಇದನ್ನೂ ಓದಿ: ಮಗುವಿಗೆ ಬಾಟಲಿ ಹಾಲುಣಿಸಿ ಟೀಕೆಗೆ ಗುರಿಯಾದ ಹಾರ್ದಿಕ್ ಪಾಂಡ್ಯ!

    ಪ್ರವಾಸದ ಆರಂಭದಲ್ಲಿ ಏಕದಿನ ಸರಣಿಯಲ್ಲಿ ಎಡವಿದರೂ, ಟಿ20 ಸರಣಿಯಲ್ಲಿ ದಿಟ್ಟ ತಿರುಗೇಟು ನೀಡುವ ಬೀಗಿರುವ ಭಾರತ ತಂಡ ಟೆಸ್ಟ್ ಸರಣಿಯಲ್ಲೂ 2018-19ರ ಕಳೆದ ಪ್ರವಾಸದ ಐತಿಹಾಸಿಕ ಸರಣಿ ಗೆಲುವಿನ ದಾಖಲೆ ಪುನರಾವರ್ತಿಸುವ ಹಂಬಲದಲ್ಲಿದೆ. ಮತ್ತೊಂದೆಡೆ ಆಸೀಸ್ ತಂಡ ಸೇಡು ತೀರಿಸಿಕೊಳ್ಳುವ ಛಲದಲ್ಲಿದೆ. ಈ ಸರಣಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವೂ ಆಗಿದೆ.

    ಭಾರತ ತಂಡ ರೋಹಿತ್ ಮತ್ತು ಇಶಾಂತ್ ಶರ್ಮ ಅಲಭ್ಯತೆಯ ಹಿನ್ನಡೆ ಹೊಂದಿದ್ದರೆ, ಆಸೀಸ್‌ಗೆ ಡೇವಿಡ್ ವಾರ್ನರ್ ಗಾಯದಿಂದಾಗಿ ಅಲಭ್ಯರಾಗಿದ್ದಾರೆ. ಚೆಂಡು ವಿರೂಪ ಪ್ರಕರಣದ ನಿಷೇಧದಿಂದಾಗಿ ಉಭಯ ತಂಡಗಳ ಹಿಂದಿನ ಸರಣಿ ತಪ್ಪಿಸಿಕೊಂಡಿದ್ದ ಸ್ಟೀವನ್ ಸ್ಮಿತ್ ಈ ಬಾರಿ ಆತಿಥೇಯರಿಗೆ ಬಲ ತುಂಬಲಿದ್ದಾರೆ. ಕಳೆದ ಪ್ರವಾಸದ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಚೇತೇಶ್ವರ ಪೂಜಾರ ಅದೇ ನಿರ್ವಹಣೆಯನ್ನು ಪುನರಾವರ್ತಿಸುವ ತವಕದಲ್ಲಿದ್ದಾರೆ.

    ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗಿಂತ ವಿರಾಟ್ ಕೊಹ್ಲಿ ಪ್ರಭಾವಿ!

    ಸದೃಢ ಬೌಲಿಂಗ್ ವಿಭಾಗ
    ಉಭಯ ತಂಡಗಳ ಬ್ಯಾಟಿಂಗ್ ವಿಭಾಗ ಅನುಭವಿ-ಯುವಕರ ಮಿಶ್ರಣ ಹೊಂದಿದ್ದರೆ, ಬೌಲಿಂಗ್ ವಿಭಾಗ ಸಂಪೂರ್ಣ ಸದೃಢವಾಗಿದೆ. ಭಾರತಕ್ಕೆ ಮೊಹಮದ್ ಶಮಿ ಮತ್ತು ಜಸ್‌ಪ್ರೀತ್ ಬುಮ್ರಾ ವೇಗದ ಬೌಲಿಂಗ್‌ನಲ್ಲಿ ಪ್ರಮುಖ ಅಸವಾಗಿದ್ದರೆ, ಸ್ಪಿನ್ ವಿಭಾಗದಲ್ಲಿ ಅನುಭವಿ ಆರ್. ಅಶ್ವಿನ್ ಇದ್ದಾರೆ. ಅತ್ತ ಆಸೀಸ್ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ಜೋಶ್ ಹ್ಯಾಸಲ್‌ವುಡ್ ಅವರಂಥ ಅನುಭವಿ ವೇಗಿಗಳನ್ನು ಹೊಂದಿದೆ. ನಾಥನ್ ಲ್ಯಾನ್ ಸ್ಪಿನ್ ಬೌಲಿಂಗ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಅಹರ್ನಿಶಿ ಟೆಸ್ಟ್‌ನಲ್ಲಿ ಬೌಲರ್‌ಗಳ ಮೇಲುಗೈ ಹೆಚ್ಚಾಗಿರುವುದರಿಂದ, ಬೌಲರ್‌ಗಳ ನಿರ್ವಹಣೆ ನಿರ್ಣಾಯಕವಾಗಿರಲಿದೆ.

    ಕೊಹ್ಲಿ ಈ ಟೆಸ್ಟ್ ಬಳಿಕ ತವರಿಗೆ ವಾಪಸ್
    ಈಗಾಗಲೆ ನಿರ್ಧಾರವಾಗಿರುವ ಪ್ರಕಾರ, ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ಬಳಿಕ ತವರಿಗೆ ಮರಳಲಿದ್ದಾರೆ. ಜನವರಿಯಲ್ಲಿ ಪತ್ನಿ ಅನುಷ್ಕಾ ಶರ್ಮ ಚೊಚ್ಚಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇರುವುದರಿಂದ ಕೊಹ್ಲಿ ತವರಿಗೆ ಮರಳಲು ಬಿಸಿಸಿಐ ಅನುಮತಿ ಪಡೆದುಕೊಂಡಿದ್ದಾರೆ. ಹೀಗಾಗಿ ಭಾರತ ತಂಡ ಕೊಹ್ಲಿ ಬಲದಿಂದ ಮೊದಲ ಪಂದ್ಯದಲ್ಲೇ ಮೇಲುಗೈ ಸಾಧಿಸಿದರೆ, ಸರಣಿಯ ಮುಂದಿನ ಪಂದ್ಯಗಳಲ್ಲೂ ವಿಶ್ವಾಸದಿಂದ ಕಣಕ್ಕಿಳಿಯಬಹುದಾಗಿದೆ. ಕೊಹ್ಲಿ ತವರಿಗೆ ಮರಳಿದಾಗ ಉಪನಾಯಕ ಅಜಿಂಕ್ಯ ರಹಾನೆ ತಂಡದ ಸಾರಥ್ಯ ವಹಿಸಲಿದ್ದಾರೆ.

    ಇದನ್ನೂ ಓದಿ: ಕ್ರಿಕೆಟ್‌ಗೆ ಮರಳಲು ಸಜ್ಜಾದ ಯುವರಾಜ್, ಶ್ರೀಶಾಂತ್

    2ನೇ ಟೆಸ್ಟ್‌ವರೆಗೆ ಕಾಯಬೇಕು ಕೆಎಲ್!
    ಸೀಮಿತ ಓವರ್ ಸರಣಿಗೆ ಉಪನಾಯಕರಾಗಿ ಬಡ್ತಿ ಪಡೆದು ವಿಕೆಟ್ ಕೀಪಿಂಗ್ ಜತೆಗೆ ಬ್ಯಾಟಿಂಗ್‌ನಲ್ಲೂ ಉತ್ತಮ ನಿರ್ವಹಣೆ ತೋರಿರುವ ಕನ್ನಡಿಗ ಕೆಎಲ್ ರಾಹುಲ್, ಮೊದಲ ಟೆಸ್ಟ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಹನುಮ ವಿಹಾರಿ ಪಾರ್ಟ್ ಟೈಮ್ ಬೌಲರ್ ಕೂಡ ಆಗಿರುವುದರಿಂದ ಅವರಿಗೆ ಆದ್ಯತೆ ನೀಡಲಾಗಿದೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಆದರೆ ಕೊಹ್ಲಿ ತವರಿಗೆ ಮರಳಿದ ಬಳಿಕ 2ನೇ ಟೆಸ್ಟ್‌ನಿಂದ ಅವರ ಸ್ಥಾನವನ್ನು ರಾಹುಲ್ ತುಂಬುವ ನಿರೀಕ್ಷೆ ಇದೆ.

    11ರ ಬಳಗ ಪ್ರಕಟಿಸಿದ ಭಾರತ
    ಭಾರತ ತಂಡ ತನ್ನ ಇತ್ತೀಚೆಗಿನ ವಾಡಿಕೆಯಂತೆ ಟೆಸ್ಟ್ ಪಂದ್ಯಕ್ಕೆ ಮುನ್ನಾದಿನವೇ ಆಡುವ 11ರ ಬಳಗವನ್ನು ಪ್ರಕಟಿಸಿದೆ. ಇದರಿಂದ ಶುಭಮಾನ್ ಗಿಲ್ ಟೆಸ್ಟ್ ಪದಾರ್ಪಣೆಯ ಅವಕಾಶದಿಂದ ವಂಚಿತರಾಗಿರುವುದು ಖಚಿತವಾಗಿದ್ದರೆ, ಮುಂಬೈ ಆರಂಭಿಕ ಪೃಥ್ವಿ ಷಾಗೆ ಫಾರ್ಮ್ ಕೊರತೆಯ ನಡುವೆಯೂ ಅವಕಾಶ ಲಭಿಸಿದೆ. ಅಹರ್ನಿಶಿ ಅಭ್ಯಾಸ ಪಂದ್ಯದಲ್ಲಿ ಬಿರುಸಿನ ಶತಕ ಸಿಡಿಸಿದ ಹೊರತಾಗಿಯೂ ರಿಷಭ್ ಪಂತ್ ಕೂಡ ಅವಕಾಶ ವಂಚಿತರಾಗಿದ್ದಾರೆ.

    ಇದನ್ನೂ ಓದಿ: ಮಹಿಳೆಯರ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಭಾರತಕ್ಕೆ ಮೊದಲ ಎದುರಾಳಿ ಯಾರು ಗೊತ್ತಾ?

    ಟೀಮ್ ನ್ಯೂಸ್:
    ಆಸ್ಟ್ರೇಲಿಯಾ: ಎಡಗೈ ಆರಂಭಿಕ ಡೇವಿಡ್ ವಾರ್ನರ್ ಗಾಯದಿಂದ ಅಲಭ್ಯರಾಗಿರುವುದರಿಂದ ಆಸೀಸ್ ಅಗ್ರ ಕ್ರಮಾಂಕ ಸ್ವಲ್ಪ ಅನನುಭವಿಗಳಿಂದ ಕೂಡಿದೆ. ಕಳೆದ ಕೆಲ ಸಮಯದಿಂದ ತಂಡದ ಭಾಗವಾಗಿರದ ಆಟಗಾರರಿಗೆ ಆಸೀಸ್ ಈ ಬಾರಿ ಅವಕಾಶ ಕಲ್ಪಿಸಿದೆ. ಆಲ್ರೌಂಡರ್ ಸ್ಥಾನವನ್ನು ಯುವ ಆಟಗಾರ ಕ್ಯಾಮರಾನ್ ಗ್ರೀನ್ ತುಂಬುತ್ತಿದ್ದು, ಟೆಸ್ಟ್ ಪದಾರ್ಪಣೆಯ ಅವಕಾಶ ಪಡೆದಿದ್ದಾರೆ.
    ಸಂಭಾವ್ಯ ತಂಡ: ಜೋ ಬರ್ನ್ಸ್, ಮ್ಯಾಥ್ಯೂ ವೇಡ್, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಡ್ ಹೆಡ್, ಕ್ಯಾಮರಾನ್ ಗ್ರೀನ್, ಟಿಮ್ ಪೇನ್ (ನಾಯಕ, ವಿ.ಕೀ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಲ್‌ವುಡ್, ನಾಥನ್ ಲ್ಯಾನ್.

    ಭಾರತ: ರನ್‌ಬರದ ನಡುವೆಯೂ ಪೃಥ್ವಿ ಷಾಗೆ ಆರಂಭಿಕನ ಸ್ಥಾನವನ್ನು ನೀಡುವ ಮೂಲಕ ಭಾರತ ತಂಡ ಆಯ್ಕೆಯಲ್ಲಿ ಅಚ್ಚರಿ ಸೃಷ್ಟಿಸಿದೆ. ಆದರೆ ಈ ಅವಕಾಶ ರೋಹಿತ್ ಶರ್ಮ ಮರಳುವವರೆಗಷ್ಟೇ ಇರುತ್ತದೆ. ವಿಕೆಟ್ ಕೀಪರ್ ರೇಸ್‌ನಲ್ಲೂ ರಿಷಭ್ ಪಂತ್ ಅವರನ್ನು ವೃದ್ಧಿಮಾನ್ ಸಾಹ ಮೀರಿಸಿದ್ದಾರೆ. 3ನೇ ವೇಗಿಯ ಸ್ಥಾನ ಉಮೇಶ್ ಯಾದವ್‌ಗೆ ಒಲಿದಿದೆ.
    ಸಂಭಾವ್ಯ ತಂಡ: ಮಯಾಂಕ್ ಅಗರ್ವಾಲ್, ಪೃಥ್ವಿ ಷಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್ ಸಾಹ (ವಿ.ಕೀ), ಆರ್. ಅಶ್ವಿನ್, ಉಮೇಶ್ ಯಾದವ್, ಮೊಹಮದ್ ಶಮಿ, ಜಸ್‌ಪ್ರೀತ್ ಬುಮ್ರಾ.

    ಇದನ್ನೂ ಓದಿ: ವಿಶೇಷ ದಾಖಲೆ ಬರೆದ ಕೆಎಲ್ ರಾಹುಲ್, ಅಭಿಮಾನಿಗಳಿಗೆ ಧನ್ಯವಾದ

    *ಪಂದ್ಯ ಆರಂಭ: ಬೆಳಗ್ಗೆ 9.30
    *ನೇರಪ್ರಸಾರ: ಸೋನಿ ಸಿಕ್ಸ್, ಸೋನಿ ಟೆನ್1, ಸೋನಿ ಟೆನ್3.

    ಮುಖಾಮುಖಿ: 98
    ಭಾರತ: 28
    ಆಸ್ಟ್ರೇಲಿಯಾ: 42
    ಟೈ: 1, ಡ್ರಾ 27.
    ಆಸ್ಟ್ರೇಲಿಯಾದಲ್ಲಿ: 48
    ಭಾರತ: 7
    ಆಸ್ಟ್ರೇಲಿಯಾ: 29
    ಡ್ರಾ: 12
    ಅಡಿಲೇಡ್‌ನಲ್ಲಿ: 12
    ಭಾರತ: 2
    ಆಸ್ಟ್ರೇಲಿಯಾ: 7
    ಡ್ರಾ: 3

    ಇದನ್ನೂ ಓದಿ: ಕೊಹ್ಲಿ ವಿರುದ್ಧ ಸ್ಲೆಡ್ಜಿಂಗ್ ಮಾಡಲ್ಲ, ನಮ್ಮ ಪ್ಲ್ಯಾನ್ ಬೇರೆಯೇ ಇದೆ ಎಂದ ಆಸೀಸ್ ಕೋಚ್

    ಪಿಚ್ ರಿಪೋರ್ಟ್
    ಯಾವುದೇ ಅಹರ್ನಿಶಿ ಟೆಸ್ಟ್‌ನಲ್ಲಿ ಪಿಚ್ ಮೇಲೆ ಹೆಚ್ಚಿನ ಹುಲ್ಲು ಬಿಡುವುದು ಸಾಮಾನ್ಯ. ಪಿಂಕ್ ಬಾಲ್‌ಗೆ ರಕ್ಷಣೆ ಒದಗಿಸುವುದು ಇದರ ಉದ್ದೇಶ. ಆದರೆ ಆಸೀಸ್‌ನಲ್ಲಿ ಕೂಕಬುರ‌್ರಾ ಚೆಂಡು ಬಳಸುತ್ತಿರುವ ಕಾರಣ, ಅಷ್ಟಾಗಿ ಹುಲ್ಲು ಉಳಿಯುವುದು ಅನುಮಾನ. ಇದು ಬ್ಯಾಟ್ಸ್‌ಮನ್‌ಗಳಿಗೆ ಖುಷಿಯ ಅಂಶವಾದರೂ, ಪಂದ್ಯದ ಮೊದಲ ದಿನ ಸ್ವಲ್ಪ ಎಚ್ಚರಿಕೆಯಿಂದ ಆಡುವುದು ಅಗತ್ಯ. ಪಂದ್ಯಕ್ಕೆ ಮಳೆ ಅಡಚಣೆ ತರಬಹುದಾದರೂ, ಅದರಿಂದ ಹೆಚ್ಚಿನ ಓವರ್ ನಷ್ಟವಾಗುವ ಭೀತಿ ಇಲ್ಲ.

    ಡೇ-ನೈಟ್ ಟೆಸ್ಟ್‌ನಲ್ಲಿ ಉಭಯ ತಂಡಗಳು ಅಜೇಯ
    ಭಾರತ-ಆಸ್ಟ್ರೇಲಿಯಾ ತಂಡಗಳು ಡೇ-ನೈಟ್ ಟೆಸ್ಟ್‌ನಲ್ಲಿ ಅಜೇಯ ದಾಖಲೆ ಹೊಂದಿವೆ. ಆಸೀಸ್ ಆಡಿದ ಏಳೂ ಟೆಸ್ಟ್‌ಗಳಲ್ಲಿ ಜಯಿಸಿದ್ದರೆ, ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಆಡಿದ ಏಕೈಕ ಅಹರ್ನಿಶಿ ಟೆಸ್ಟ್‌ನಲ್ಲಿ ಜಯ ಕಂಡಿದೆ. ಹೀಗಾಗಿ ಉಭಯ ತಂಡಗಳ ಪೈಕಿ ಒಂದು ತಂಡದ ದಾಖಲೆ ಈ ಬಾರಿ ಭಗ್ನವಾಗುವ ಸಾಧ್ಯತೆ ಇದೆ. ಭಾರತಕ್ಕೆ ಇದು ವಿದೇಶದಲ್ಲಿ ಮತ್ತು ಉಭಯ ತಂಡಗಳ ನಡುವಿನ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯವೂ ಆಗಿದೆ.

    ಇದನ್ನೂ ಓದಿ: ಬಾಲಿವುಡ್‌ನಲ್ಲಿ ಬರಲಿದೆ ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಬಯೋಪಿಕ್

    ಸ್ಮಿತ್ ಫಿಟ್ ನಿರೀಕ್ಷೆ
    ಸ್ಟೀವನ್ ಸ್ಮಿತ್ ಬೆನ್ನುನೋವಿನಿಂದಾಗಿ ಮಂಗಳವಾರ ಅಭ್ಯಾಸ ನಡೆಸಿರಲಿಲ್ಲ. ಆದರೆ ಪಂದ್ಯದಲ್ಲಿ ಆಡಲು ಫಿಟ್ ಆಗುವ ವಿಶ್ವಾಸವಿದೆ ಎಂದು ಆಸೀಸ್ ನಾಯಕ ಟಿಮ್ ಪೇನ್ ಹೇಳಿದ್ದಾರೆ.

    ಆಸೀಸ್ ನೆಲದಲ್ಲಿ ಭಾರತ
    1947-48: ಆಸೀಸ್‌ಗೆ 4-0 ಜಯ
    1967-68: ಆಸೀಸ್‌ಗೆ 4-0 ಜಯ
    1977-78: ಆಸೀಸ್‌ಗೆ 3-2 ಜಯ
    1980-81: 1-1ರಿಂದ ಡ್ರಾ
    1985-86: 0-0ಯಿಂದ ಡ್ರಾ
    1991-92: ಆಸೀಸ್‌ಗೆ 4-0 ಜಯ
    1999-00: ಆಸೀಸ್‌ಗೆ 3-0 ಜಯ
    2003-04: 1-1ರಿಂದ ಡ್ರಾ
    2007-08: ಆಸೀಸ್‌ಗೆ 2-1 ಜಯ
    2011-12: ಆಸೀಸ್‌ಗೆ 4-0 ಜಯ
    2014-15: ಆಸೀಸ್‌ಗೆ 2-0 ಜಯ
    2018-19: ಭಾರತಕ್ಕೆ 2-1 ಗೆಲುವು

    ಇದನ್ನೂ ಓದಿ: ಜನ್ಮದಿನವನ್ನು ಸಂಭ್ರಮಿಸದೆ ರೈತರ ಪರ ನಿಂತ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

    *7: ಸ್ಟೀವನ್ ಸ್ಮಿತ್ ವಿರುದ್ಧ ಉಮೇಶ್ ಯಾದವ್ ಅತಿ ಹೆಚ್ಚು ಯಶ ಕಂಡಿರುವ ಬೌಲರ್ ಆಗಿದ್ದಾರೆ. 15 ಅಂತಾರಾಷ್ಟ್ರೀಯ ಪಂದ್ಯಗಳ ಪೈಕಿ 4 ಟೆಸ್ಟ್ ಸಹಿತ 7ರಲ್ಲಿ ಸ್ಮಿತ್‌ರನ್ನು ಉಮೇಶ್ ಯಾದವ್ ಔಟ್ ಮಾಡಿದ್ದಾರೆ.

    *1: ವಿರಾಟ್ ಕೊಹ್ಲಿ ಈ ವರ್ಷ ಆಡಲಿರುವ ಕೊನೇ ಪಂದ್ಯ ಇದಾಗಿದ್ದು, ಶತಕ ಸಿಡಿಸಲು ವಿಲರಾದರೆ 2008ರ ಬಳಿಕ ಇದೇ ಮೊದಲ ಬಾರಿಗೆ ಶತಕವಿಲ್ಲದೆ ವರ್ಷ ಮುಗಿಸಿದಂತಾಗುತ್ತದೆ.

    *160: ಚೇತೇಶ್ವರ ಪೂಜಾರ 160 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 6 ಸಾವಿರ ರನ್ ಪೂರೈಸಲಿದ್ದಾರೆ.

    *26: ಮಯಾಂಕ್ ಅಗರ್ವಾಲ್ ಮೊದಲ ಇನಿಂಗ್ಸ್‌ನಲ್ಲೇ 26 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾವಿರ ರನ್ ಪೂರೈಸಿದ 2ನೇ ಅತಿವೇಗದ ಭಾರತೀಯ ಸಾಧಕರೆನಿಸಲಿದ್ದಾರೆ. ಸದ್ಯ 11 ಪಂದ್ಯಗಳ 17 ಇನಿಂಗ್ಸ್‌ಗಳಲ್ಲಿ 974 ರನ್ ಗಳಿಸಿದ್ದಾರೆ. ವಿನೋದ್ ಕಾಂಬ್ಳಿ 14 ಇನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿದ್ದರೆ, ಪೂಜಾರ 18 ಇನಿಂಗ್ಸ್‌ಗಳಲ್ಲಿ ಸಾವಿರ ರನ್ ಬಾರಿಸಿದ್ದರು.

    *100: ವಿರಾಟ್ ಕೊಹ್ಲಿ ಶತಕ ಸಿಡಿಸಿದರೆ, ಆಸೀಸ್‌ನಲ್ಲಿ ಅತ್ಯಧಿಕ ಟೆಸ್ಟ್ ಶತಕ ಸಿಡಿಸಿದ ಭಾರತೀಯರೆನಿಸಲಿದ್ದಾರೆ. ಸದ್ಯ ತಲಾ 6 ಶತಕದೊಂದಿಗೆ ಸಚಿನ್ ತೆಂಡುಲ್ಕರ್ ಜತೆ ಗೌರವ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಆಸೀಸ್​ ಪ್ರವಾಸದಿಂದ ಮರಳಿದ ಹಾರ್ದಿಕ್ ಪಾಂಡ್ಯ ಮಗುವಿನ ಆರೈಕೆಯಲ್ಲಿ ಮಗ್ನ!

    ಸರಣಿ ಗೆದ್ದರೆ ಭಾರತ ನಂ. 1
    ಭಾರತ ಸರಣಿ ಜಯಿಸಿದರೆ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ. ಭಾರತ ತಂಡ ಸದ್ಯ 114 ಅಂಕದೊಂದಿಗೆ 3ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 116 ಅಂಕದೊಂದಿಗೆ ನಂ. 1 ಪಟ್ಟದಲ್ಲಿದೆ. ಭಾರತ ತಂಡ ಕನಿಷ್ಠ 1-0 ಅಥವಾ 2-1 ಅಂತರದಿಂದ ಸರಣಿ ಜಯಿಸಿದರೆ, 2 ಅಂಕ ಗಳಿಸಲಿದೆ. ಆಗ ಒಟ್ಟು ಅಂಕ ಗಳಿಕೆ 118ಕ್ಕೇರಲಿದೆ. ಭಾರತ ತಂಡ 2-0ಯಿಂದ ಗೆದ್ದರೆ 3 ಮತ್ತು 3-0ಯಿಂದ ಗೆದ್ದರೆ 7 ಅಂಕಗಳನ್ನು ಕಲೆಹಾಕಲಿದೆ. ಇದರಿಂದ ಆಸ್ಟ್ರೇಲಿಯಾ ತಂಡ 3ನೇ ಸ್ಥಾನಕ್ಕಿಳಿಯಲಿದ್ದರೆ, ನ್ಯೂಜಿಲೆಂಡ್ ತಂಡ 2ನೇ ಸ್ಥಾನವನ್ನು ಕಾಯ್ದುಕೊಳ್ಳಲಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ತಂಡ ನಂ. 1 ಪಟ್ಟ ಕಾಯ್ದುಕೊಳ್ಳಲು ಸರಣಿ ವಶಪಡಿಸಿಕೊಳ್ಳುವುದು ಅಗತ್ಯವಾಗಿದೆ. ಸರಣಿ ಡ್ರಾಗೊಂಡರೆ 2ನೇ ಸ್ಥಾನಿ ನ್ಯೂಜಿಲೆಂಡ್ ತಂಡಕ್ಕೆ ಲಾಭವಾಗಲಿದ್ದು, ಅಗ್ರಸ್ಥಾನಕ್ಕೆ ಬಡ್ತಿ ಪಡೆಯಲಿದೆ.

    ಆಸ್ಟ್ರೇಲಿಯಾ ಮಾಧ್ಯಮಗಳಿಂದ ಮೊಹಮದ್ ಸಿರಾಜ್ ಗುಣಗಾನ, ಕಾರಣವೇನು ಗೊತ್ತೇ?

    PHOTO | ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಐಪಿಎಲ್ ಸ್ಟಾರ್ ವರುಣ್ ಚಕ್ರವರ್ತಿ

    ವಿವಾಹದ 3ನೇ ವಾರ್ಷಿಕೋತ್ಸವಕ್ಕೆ ವಿಶೇಷ ಸಂದೇಶ ಹಂಚಿಕೊಂಡ ವಿರೂಷ್ಕಾ

    ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕಾದರೆ ಹೀಗೆ ಮಾಡಿ ಎಂದ ಅನಿಲ್ ಕುಂಬ್ಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts