More

    ಅಜ್ಞಾತ ಸ್ಥಳದಿಂದಲೇ ಆಡಿಯೋ ಕಳಿಸಿ ಮನದಾಳ ತೆರೆದಿಟ್ಟ ‘ಗೋಲ್ಡ್ ಕ್ವೀನ್’

    ತಿರುವನಂತಪುರ: ಉತ್ತರ ಪ್ರದೇಶದ ಕುಖ್ಯಾತ ರೌಡಿ ವಿಕಾಸ್ ದುಬೆಯಾದರೂ ಪೊಲೀಸರ ಕೈಗೆ ಸಿಕ್ಕಿಬಿದ್ದ, ಆದರೆ ಕೇರಳದ ಈ ಗೋಲ್ಡ್ ಸ್ಮಗ್ಲಿಂಗ್ ಕ್ವೀನ್ ಮಾತ್ರ ಇನ್ನೂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಇದ್ದಾಳೆ. ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಆಕೆ ಇವತ್ತು ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಜತೆಗೆ ಆಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾಳೆ.

    ‘‘ಮುಂದಿನ ವರ್ಷ ಕೇರಳದಲ್ಲಿ ಚುನಾವಣೆ ನಡೆಯಲಿರುವ ಕಾರಣ ಸರ್ಕಾರದ ವರ್ಚಸ್ಸು ಕುಂದಿಸಲು ಈ ಹಗರಣ ಸೃಷ್ಟಿಸಲಾಗಿದೆ. ಇದರಲ್ಲಿ ನನ್ನನ್ನು ಬಲಿಪಶು ಮಾಡಿದ್ದಾರೆ. ರಾಜತಾಂತ್ರಿಕ ಬ್ಯಾಗೇಜ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಿಂದ 30 ಕಿಲೋ ಚಿನ್ನ ಕೇರಳಕ್ಕೆ ಕಳ್ಳಸಾಗಾಣಿಕೆಯಾಗಿದ್ದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಯುಎಇ ಕಾನ್ಸುಲೇಟ್ ಕಚೇರಿಯವರು ಕೇಳಿಕೊಂಡಿದ್ದರಿಂದ ನಾನು ಕಸ್ಟಮ್ಸ್‌ಗೆ ಫೋನ್ ಮಾಡಿ ಚಿನ್ನವನ್ನು ಬಿಟ್ಟುಕಳಿಸುವಂತೆ ತಿಳಿಸಿದೆ. ಇಷ್ಟನ್ನು ಹೊರತುಪಡಿಸಿ ಇದರಲ್ಲಿ ನನ್ನ ಪಾತ್ರ ಬೇರೇನೂ ಇಲ್ಲ’’ ಎಂದು ಸುದ್ದಿ ವಾಹಿನಿಯೊಂದಕ್ಕೆ ಕಳಿಸಿರುವ ಆಡಿಯೋದಲ್ಲಿ ಸ್ವಪ್ನಾ ಸುರೇಶ್ ಹೇಳಿದ್ದಾಳೆ. ಇದನ್ನೂ ಓದಿ: ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!

    ಪ್ರಕರಣ ಬೆಳಕಿಗೆ ಬಂದಾಗಿನಿಂದ ತಾನು ನಾಪತ್ತೆಯಾಗಿರುವುದಕ್ಕೂ ಆಕೆ ಉತ್ತರ ನೀಡಿದ್ದಾಳೆ. ‘‘ನನ್ನ ಜೀವಕ್ಕೆ ಬೆದರಿಕೆ ಇರುವುದರಿಂದ ನಾನು ಅಜ್ಞಾತ ಸ್ಥಳದಲ್ಲಿದ್ದೇನೆ. ವಿರೋಧ ಪಕ್ಷಗಳು ಮತ್ತು ಮಾಧ್ಯಮದವರಲ್ಲಿ ನನ್ನ ವಿನಂತಿ ಇಷ್ಟೇ. ವಿನಾಕಾರಣ ಈ ಪ್ರಕರಣದಲ್ಲಿ ನನ್ನ ಹೆಸರು ಎಳೆದುತರಬೇಡಿ. ನನ್ನ ಗೌರವಕ್ಕೆ ಧಕ್ಕೆ ಉಂಟು ಮಾಡಬೇಡಿ. ನಾನು ಎಲ್ಲ ರೀತಿಯ ತನಿಖೆಗೂ ಸಿದ್ಧಳಾಗಿದ್ದೇನೆ. ಯಾವ ಸಚಿವರೂ ನನ್ನ ಆಪ್ತರಲ್ಲ. ನಾನೇ ಅವರನ್ನು ಯುಎಇ ಕಾನ್ಸುಲೇಟ್ ಕಚೇರಿಯ ಕಾರ‌್ಯಕ್ರಮಗಳಿಗೆ ಆಹ್ವಾನಿಸಿದ್ದಾಗ ಅವರ ಜತೆ ಮಾತನಾಡಿದ್ದಿದೆ’’ ಎಂದು ವಿವರಿಸಿದ್ದಾಳೆ.

    ‘‘ಮಾಧ್ಯಮಗಳು ನನ್ನನ್ನು ಸ್ಮಗ್ಲರ್, ವೇಶ್ಯೆ, ಕ್ರಿಮಿನಲ್ ಎಂಬ ರೀತಿಯಲ್ಲಿ ಬಿಂಬಿಸುತ್ತಿವೆ. ನನಗೆ ಸ್ಪೇಸ್‌ಪಾರ್ಕ್ ಉದ್ಯೋಗದಲ್ಲಿ ತಿಂಗಳಿಗೆ 1 ಲಕ್ಷ ರೂ. ಸಂಬಳ ಸಿಗುತ್ತಿತ್ತು ಎನ್ನುತ್ತಿದ್ದಾರೆ. ನನಗೆ ಯುಎಇ ಕಾನ್ಸುಲೇಟ್‌ನಲ್ಲಿ ಸಿಗುತ್ತಿದ್ದುದಕ್ಕಿಂತ ಸ್ವಲ್ಪ ಜಾಸ್ತಿ ಹಣ ಮಾತ್ರ ಸ್ಪೇಸ್‌ಪಾರ್ಕ್ ಕೆಲಸದಲ್ಲಿ ಸಿಗುತ್ತಿತ್ತು. ನಾನು ಹಣವನ್ನು ಉಳಿಸಿಯೂ ಇಲ್ಲ. ಸಂಬಳದಿಂದ ಬಂದ ಎಲ್ಲ ಹಣವನ್ನೂ ನನ್ನ ಮಕ್ಕಳಿಗಾಗಿ ಖರ್ಚು ಮಾಡಿದ್ದೇನೆ. ನಾನು ವಿವಿಐಪಿಗಳ ಜತೆ ಡಾನ್ಸ್ ಕ್ಲಬ್‌ಗಳಲ್ಲಿ ಕುಣಿಯುತ್ತಿದ್ದೆ ಎಂಬ ಮಾತನ್ನೂ ಕೆಲವರು ಆಡಿದ್ದಾರೆ. ಯಾವ ಕ್ಲಬ್ಬು? ಎಲ್ಲಿಯ ಕ್ಲಬ್ಬು ಅಂತ ತೋರಿಸಿ. ಇಂತಹ ಆಧಾರರಹಿತ ಆರೋಪಗಳಿಂದ ನನಗೆ ಏನೂ ಆಗುವುದಿಲ್ಲ. ಮುಖ್ಯಮಂತ್ರಿಗೂ ಏನೂ ಆಗುವುದಿಲ್ಲ’’ ಎಂದಿದ್ದಾಳೆ.

    ಇದನ್ನೂ ಓದಿ: 30 ಕೆ.ಜಿ ಚಿನ್ನ ಕಳ್ಳಸಾಗಣೆ ಹಿಂದೆ ಇದ್ದದ್ದು ಈ ಪ್ರಭಾವಿ ಮಹಿಳೆ

    ‘‘ದಯವಿಟ್ಟು ನನ್ನ ತಂದೆ-ತಾಯಿ, ಇಬ್ಬರು ಮಕ್ಕಳನ್ನು ಉಳಿಸಿ ಅಂತ ವಿನಯದಿಂದ ಕೇಳಿಕೊಳ್ಳುತ್ತಿದ್ದೇನೆ. ಸರ್ಕಾರದ ವಿರುದ್ಧ ನೀವು ಏನು ಬೇಕಾದರೂ ಆರೋಪ ಮಾಡಿ. ನನ್ನನ್ನು ಬೆಂಬಲಿಸುವವರು ಸರ್ಕಾರದಲ್ಲಿ ಯಾರೂ ಇಲ್ಲ. ಯಾಕೆಂದರೆ ಅವರ‌್ಯಾರೂ ನನ್ನ ನಿಕಟವರ್ತಿಗಳಲ್ಲ. ಮುಖ್ಯಮಂತ್ರಿಯಾಗಲಿ, ವಿಧಾನಸಭಾಧ್ಯಕ್ಷರಾಗಲಿ, ಐಟಿ ಸೆಕ್ರೆಟರಿಯಾಗಲಿ ಯಾರೂ ನನ್ನನ್ನು ಬೆಂಬಲಿಸುವುದಿಲ್ಲ. ಇದನ್ನು ಬಿಟ್ಟು ಪ್ರಕರಣದ ನಿಜವಾದ ಆರೋಪಿಗಳು ಯಾರು ಎಂಬುದರತ್ತ ಗಮನ ಹರಿಸಿ’’ ಎಂದು ಆಕೆ ವಿರೋಧ ಪಕ್ಷಗಳ ನಾಯಕರಿಗೆ ಮನವಿ ಮಾಡಿದ್ದಾಳೆ.

    ಜು. 5ರಂದು 30 ಕಿಲೋ ಚಿನ್ನ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೇರಳ ಐಟಿ ಸ್ಪೇಸ್‌ಪಾರ್ಕ್ ಯೋಜನೆಯ ಉದ್ಯೋಗಿಯಾಗಿದ್ದ ಸ್ವಪ್ನಾ ಸುರೇಶ್ ತಲೆಮರೆಸಿಕೊಂಡಿದ್ದಾಳೆ. ಈಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ಹಲವಾರು ಕಾರ‌್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ಫೋಟೋ ವಿಡಿಯೋಗಳು ಬೆಳಕಿಗೆ ಬಂದಿವೆ. ಈಕೆಯ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರೆನ್ನಲಾದ ಐಎಎಸ್ ಅಧಿಕಾರಿ, ಐಟಿ ಕಾರ‌್ಯದರ್ಶಿ ಶಿವಶಂಕರ್ ಅವರನ್ನು ಸರ್ಕಾರ ಅಮಾನತು ಮಾಡಿದೆ. ಪ್ರಕರಣವನ್ನು ಉನ್ನತ ತನಿಖೆಗೆ ವಹಿಸುವಂತೆ ಪ್ರಧಾನಿ ಮೋದಿ ಅವರಿಗೆ ಪಿಣರಾಯಿ ಪತ್ರವನ್ನೂ ಬರೆದಿದ್ದಾರೆ.

    ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!

    ಅರಬ್‌ ದೇಶಕ್ಕೂ ನಿದ್ದೆಗೆಡಿಸಿರೋ ‘ಚಿನ್ನದ ರಾಣಿ’- ಗೋಳೋ ಎನ್ನುತ್ತಿರುವ ಅಧಿಕಾರಿಗಳು

    ಚಿನ್ನದ ರಾಣಿ ನಾಪತ್ತೆ ಆದಾಗಿನಿಂದ ಇವನೂ ಪತ್ತೆಯಿಲ್ಲ; ಪೊಲೀಸರಿಂದ ಈತನ ಪತ್ನಿ ವಿಚಾರಣೆ!

    ಕುತೂಹಲ ಮೂಡಿಸುತ್ತಿದ್ದಾಳೆ ‘ಚಿನ್ನದ ರಾಣಿ’: ಐಎಎಸ್‌ ಅಧಿಕಾರಿ ತಲೆದಂಡ!

    ಮಾಲಿವುಡ್​ಗೂ ಅಂಟಿದ ಕಳ್ಳಸಾಗಾಣೆ ನಂಟು: ನಟಿ ಶಾಮ್ನಾ ಪ್ರಕರಣದಲ್ಲೂ ಕೇಳಿಬಂತು ಚಿನ್ನದ ರಾಣಿ ಹೆಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts