More

    ಸೂಪರ್​ಸ್ಟಾರ್ ರಜನೀಕಾಂತ್ ಪತ್ನಿ ಸದ್ಯ ನಿರಾಳ; ಸುಳ್ಳು ಹೇಳಿಕೆ ಮತ್ತು ವಂಚನೆ ಪ್ರಕರಣ ರದ್ದು..

    ಬೆಂಗಳೂರು: ಸೂಪರ್‌ಸ್ಟಾರ್ ರಜನೀಕಾಂತ್ ಪತ್ನಿ ಲತಾ ವಿರುದ್ಧದ ಸುಳ್ಳು ಹೇಳಿಕೆ ಹಾಗೂ ವಂಚನೆ ಪ್ರಕರಣ ರದ್ದುಪಡಿಸಿರುವ ಹೈಕೋರ್ಟ್, ಫೋರ್ಜರಿ ಪ್ರಕರಣ ಮುಂದುವರಿಸಲು ವಿಚಾರಣಾ ನ್ಯಾಯಾಲಯಕ್ಕೆ ಅನುಮತಿ ನೀಡಿದೆ.

    ಕೊಚ್ಚಾಡಿಯನ್ ಸಿನಿಮಾದ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿದ್ದ ಫೋರ್ಜರಿ, ಸುಳ್ಳು ಹೇಳಿಕೆ ಮತ್ತು ವಂಚನೆ ಪ್ರಕರಣ ರದ್ದುಪಡಿಸುವಂತೆ ಕೋರಿ ಲತಾ ರಜನೀಕಾಂತ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

    ಅರ್ಜಿದಾರರ ವಿರುದ್ಧ ದಾಖಲಾಗಿದ್ದ ವಂಚನೆ ಹಾಗೂ ಸುಳ್ಳು ಹೇಳಿಕೆ ಪ್ರಕರಣಗಳನ್ನಷ್ಟೇ ರದ್ದುಪಡಿಸಿರುವ ಹೈಕೋರ್ಟ್, ಫೋರ್ಜರಿ ಪ್ರಕರಣವನ್ನು ಮುಂದುವರಿಸಿ ಕಾನೂನು ಪ್ರಕಾರ ಇತ್ಯರ್ಥಪಡಿಸುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ನಿರ್ದೇಶಿಸಿದೆ.

    ಕೊಚ್ಚಾಡಿಯನ್ ನಷ್ಟ ವಿವಾದ: ರಜನೀಕಾಂತ್ ಪುತ್ರಿ ನಿರ್ದೇಶಿಸಿದ್ದ ಕೊಚ್ಚಾಡಿಯನ್ ಚಿತ್ರದ ಸಂಬಂಧ ಆ್ಯಡ್ ಬ್ಯೂರೋ ಅಡ್ವರ್‌ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಮೀಡಿಯಾ ಒನ್ ಗ್ಲೋಬಲ್ ಎಂಟರ್‌ಟೈನ್ಮೆಂಟ್ ಲಿಮಿಟೆಡ್ ನಡುವೆ ಆರ್ಥಿಕ ವಹಿವಾಟು ನಡೆದಿತ್ತು. ಮೀಡಿಯಾ ಒನ್ ಕಂಪನಿ ಪರವಾಗಿ ಲತಾ ಅವರು ಭದ್ರತಾ ಖಾತರಿ ನೀಡಿದ್ದರು. ಆದರೆ, ಚಿತ್ರ ನಷ್ಟವಾಗಿದ್ದರೂ ಆ್ಯಡ್ ಬ್ಯೂರೋ ಅಡ್ವರ್‌ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್‌ಗೆ ನಷ್ಟ ಪರಿಹಾರ ತುಂಬಿಕೊಟ್ಟಿರಲಿಲ್ಲ. ಇದರಿಂದ, ವಿವಾದ ಉಂಟಾಗಿ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಸಾರವಾಗಿತ್ತು.

    ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಲತಾ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2014ರ ಡಿ.2ರಂದು ನ್ಯಾಯಾಲಯ ಮಾಧ್ಯಮಗಳಿಗೆ ನಿರ್ಬಂಧಕಾಜ್ಞೆ ನೀಡಿತ್ತು. ಆದರೆ, 2015ರಲ್ಲಿ ಫೆ.13ರಂದು ಅರ್ಜಿಯನ್ನು ವಿಚಾರಣಾ ವ್ಯಾಪ್ತಿಯ ಕೋರ್ಟ್‌ಗೆ ವರ್ಗಾಯಿಸಿದ್ದ ಬೆಂಗಳೂರಿನ ನ್ಯಾಯಾಲಯ, ಮಾಧ್ಯಮಗಳಿಗೆ ನಿರ್ಬಂಧ ಹೇರಿದ ಆದೇಶವನ್ನು ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಲತಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ 2016ರಲ್ಲಿ ವಜಾಗೊಳಿಸಿತ್ತು.

    ಸುಳ್ಳು ದಾಖಲೆ ಸಲ್ಲಿಸಿದ ಆರೋಪ: ಈ ಮಧ್ಯೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಆದೇಶ ಪಡೆಯಲು ಬೆಂಗಳೂರು ಪ್ರೆಸ್‌ಕ್ಲಬ್ ಅಧೀನದಲ್ಲಿ ಇರದ ಸಂಸ್ಥೆಯೊಂದರ ನಕಲಿ ದಾಖಲೆಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು ಎಂದು ಆರೋಪಿಸಿ ಆ್ಯಡ್ ಬ್ಯೂರೋ ಅಡ್ವರ್‌ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿ 2015ರ ಮೇ 30ರಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಜೂ.9ರಂದು ಲತಾ ಅವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ, 1ನೇ ಎಸಿಎಂಎಂ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ಅದರ ಆಧಾರದಲ್ಲಿ ವಿಚಾರಣಾ ನ್ಯಾಯಾಲಯ, ಸುಳ್ಳು ಹಾಗೂ ನಕಲಿ ಸಾಕ್ಷೃ ಬಳಕೆ, ಸುಳ್ಳು ಹೇಳಿಕೆ ನೀಡಿದ, ವಂಚನೆ, ಪೋರ್ಜರಿ ಪ್ರಕರಣ ಸಂಬಂಧ ಕಾಗ್ನಿಜೆನ್ಸ್ ತೆಗೆದುಕೊಂಡು ಲತಾ ಅವರಿಗೆ 2021ರ ಮಾ.27ರಂದು ಸಮನ್ಸ್ ಜಾರಿಗೊಳಿಸಿತ್ತು. ಇದರಿಂದ, ಹೈಕೋರ್ಟ್ ಮೆಟ್ಟಿಲೇರಿದ್ದ ಲತಾ, ತಮ್ಮ ವಿರುದ್ಧದ ಎಫ್‌ಐಆರ್ ಮತ್ತು ಎಸಿಎಂಎಂ ಕೋರ್ಟ್ ವಿಚಾರಣೆ ರದ್ದುಪಡಿಸುವಂತೆ ಕೋರಿದ್ದರು.

    ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts