More

    ಟಿಸಿ ಕೊಡಲು ತಡ ಮಾಡಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ : ಸೂಕ್ತ ತನಿಖೆಗೆ ಸಾರ್ವಜನಿಕರ ಆಗ್ರಹ : ಬೈಂದೂರು ಠಾಣೆ ಮುಂಭಾಗ ಆಕ್ರೋಶ

    ವಿಜಯವಾಣಿ ಸುದ್ದಿಜಾಲ ಬೈಂದೂರು

    ಶಾಲೆಯಲ್ಲಿ ವರ್ಗಾವಣೆ ಪ್ರಮಾಣಪತ್ರ ನೀಡಲು ವಿಳಂಬ ಮಾಡಿದರೆಂಬ ಕಾರಣಕ್ಕೆ ಈ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣನಾದ ಶಿರೂರು ಮೇಲ್ಪಂಕ್ತಿ ನಿವಾಸಿ ನಿತಿನ್ ಆಚಾರಿ(16) ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ನಿತಿನ್ ಬೈಂದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿದ್ದು, ಸೋಮವಾರ ಕಾಲೇಜಿಗೆ ವರ್ಗಾವಣೆ ಪ್ರಮಾಣಪತ್ರ ಪಡೆಯಲು ತೆರಳಿದ್ದನು. ತರಗತಿಯ ಕೊನೆಯ ದಿನ ಕೆಲವು ವಿದ್ಯಾರ್ಥಿಗಳು ಶಾಲೆ ಹೊರಗಿನ ಸಿಸಿ ಕ್ಯಾಮರಾ ಹಾಗೂ ಗೇಟ್ ಬೀಗ ಮುರಿದಿರುವ ಬಗ್ಗೆ ಉಪಪ್ರಾಂಶುಪಾಲರು ನಿತಿನ್ ಬಳಿ ವಿಚಾರಿಸಿದ್ದು, ಪಾಲಕರನ್ನು ಕರೆದುಕೊಂಡು ಬರುವಂತೆ ತಿಳಿಸಿದ್ದರು. ಅವರ ಮಾತಿಗೆ ಒಪ್ಪಿ ಮನೆಗೆ ತೆರಳಿದ್ದ ನಿತಿನ್, ಈ ವಿಚಾರ ಮನೆಯವರಿಗೆ ತಿಳಿದರೆ ತೊಂದರೆಯಾಗಬಹುದು ಎಂದು ಹೆದರಿ ಮಧ್ಯಾಹ್ನ ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಠಾಣೆ ಮುಂದೆ ಆಕ್ರೋಶ

    ಘಟನೆಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಸಾರ್ವಜನಿಕರು ಬೈಂದೂರು ಪೊಲೀಸ್ ಠಾಣೆ ಎದುರು ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯ ದೊರಕುವವರೆಗೂ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದರು. ಸ್ಥಳಕ್ಕಾಗಮಿಸಿದ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ, ಪ್ರೊಬೇಷನರಿ ಐಪಿಎಸ್ ಡಾ.ಹರ್ಷ ಪ್ರಿಯಂವದಾ ಹಾಗೂ ಬೈಂದೂರು ವೃತ್ತ ನಿರೀಕ್ಷಕ ಸವಿತ್ರತೇಜ ಸಾರ್ವಜನಿಕರ ಜತೆ ಮಾತನಾಡಿ, ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವಿದ್ಯಾರ್ಥಿಯಾಗಿರುವ ಕಾರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತನಿಖೆ ನಡೆಸಿ ವಾರದೊಳಗೆ ವರದಿ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಸ್ಪಷ್ಟತೆ ದೊರೆತಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
    ಊರಿನ ಹಿರಿಯರು, ಸಮಾಜದ ಮುಖಂಡರು, ಸ್ಥಳೀಯರು ಕುಟುಂಬದವರಿಗೆ ಧೈರ್ಯ ತುಂಬಿ ಮನವರಿಕೆ ಮಾಡಿದ ಬಳಿಕ ವಿದ್ಯಾರ್ಥಿಯ ಶವವನ್ನು ಶವಾಗಾರದಿಂದ ಮನೆಗೆ ಕಳುಹಿಸಿಕೊಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts