More

    ಕ್ವಾರಂಟೈನ್​ನಲ್ಲಿ ಜಿಲ್ಲಾಡಳಿತ

    ಕ್ವಾರಂಟೈನ್​ನಲ್ಲಿ ಜಿಲ್ಲಾಡಳಿತ

    ಚಿಕ್ಕಮಗಳೂರು: ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭ ಮುಖ್ಯವಾಹಿನಿಯಲ್ಲಿದ್ದು ಕಾರ್ಯ ನಿರ್ವಹಿಸಬೇಕಾದ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಡಿಎಚ್​ಒ ಕ್ವಾರಂಟೈನ್​ಗೆ ಒಳಗಾಗಿರುವುದರಿಂದ ಜಿಲ್ಲಾಡಳಿತವೇ ಕ್ವಾರಂಟೈನ್​ಲ್ಲಿದ್ದು, ಆಡಳಿತ ಜವಾಬ್ದಾರಿ ಅಧೀನ ಅಧಿಕಾರಿಗಳ ಹೆಗಲೇರಿದೆ.

    ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಹಲವು ಜನಪ್ರತಿನಿಧಿಗಳಲ್ಲೂ ಕರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಹವಾಲು ಹೊತ್ತು ಬರುವ ಜನರಿಗೆ ಯಾರೂ ಕೈಗೆ ಸಿಗದಂತಾಗಿದ್ದು, ಇಡೀ ಆಡಳಿತ ವ್ಯವಸ್ಥೆಗೆ ಗರ ಬಡಿದಂತಾಗಿದೆ.

    ಹಿರಿಯ ಅಧಿಕಾರಿಗಳ ಪಟ್ಟಿಯಲ್ಲಿ ಜಿಪಂ ಸಿಇಒ ಮಾತ್ರ ಕಚೇರಿಗೆ ಬರುತ್ತಿದ್ದಾರೆ. ಜಿಪಂ ಉಪಾಧ್ಯಕ್ಷರಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ಅವರ ಕಚೇರಿ ಸೀಲ್​ಡೌನ್ ಆಗಿದೆ. ಜತೆಗೆ ಕಾರ್ಯ ನಿರ್ವಹಿಸುತ್ತಿದ್ದ ಹಲವು ಅಧಿಕಾರಿಗಳು ತಪಾಸಣೆಗೆ ಒಳಗಾಗಿದ್ದು, ವರದಿ ನೆಗೆಟಿವ್ ಬಂದಿರುವುದರಿಂದ ಕೊಂಚ ಸಮಾಧಾನ ತಂದಿದೆ. ಆದರೂ ಬಹಳಷ್ಟು ಅಧಿಕಾರಿಗಳು, ಸಿಬ್ಬಂದಿ ಆತಂಕದಲ್ಲಿದ್ದಾರೆ. ಕರ್ತವ್ಯ ಮುಗಿಸಿ ಮನೆಗೆ ತೆರಳಿದಾಗ ಸ್ವತಃ ಅವರ ಕುಟುಂಬದವರಿಗೆ ಕಸಿವಿಸಿಯಾಗುವ ಸ್ಥಿತಿ ನಿರ್ವಣವಾಗಿದೆ.

    ಜಿಪಂನಲ್ಲಿ 50ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ ಗಂಟಲ ದ್ರವ ತಪಾಸಣೆಗೆ ಮಾದರಿ ನೀಡಿ ಮೂರು ದಿನಗಳಾಗಿವೆ. ಆತಂಕದಲ್ಲೇ ವರದಿ ನಿರೀಕ್ಷಿಸುತ್ತಿದ್ದಾರೆ. ಇನ್ನೂ ಕೆಲವರು ಮಾದರಿ ಸಂಗ್ರಹ ಕೇಂದ್ರಕ್ಕೆ ತೆರಳಲು ಕೂಡ ಅಂಜುತ್ತಿದ್ದಾರೆ.

    ಮುಂಚೂಣಿ ಕರೊನಾ ಸೇನಾನಿಗಳಾದ ಪೊಲೀಸರಿಗೇ ವೈರಸ್ ತಗುಲುತ್ತಿರುವುದರಿಂದ ಕೆಲಸದಲ್ಲಿ ಉತ್ಸಾಹ ಕುಂದುವಂತೆ ಮಾಡಿದೆ. ಸೋಂಕಿನ ಕುರಿತ ಯಾವುದೇ ಮನವಿಗೆ ಪೊಲೀಸ್ ಸಿಬ್ಬಂದಿಯೂ ಮೊದಲಿನಂತೆ ಸ್ಪಂದಿಸುತ್ತಿಲ್ಲ ಎಂಬ ದೂರು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

    ಸದಸ್ಯರಿಲ್ಲದ ಟಾಸ್ಕ್​ಫೋರ್ಸ್: ಗ್ರಾಪಂ ಸದಸ್ಯರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸದಾ ಅಲರ್ಟ್ ಆಗಿರುತ್ತಿದ್ದ ಟಾಸ್ಕ್​ಫೋರ್ಸ್ ಕಮಿಟಿಗಳು ಅಸ್ತಿತ್ವ ಕಳೆದುಕೊಂಡಿವೆ. ಇತ್ತ ಆಶಾ ಕಾರ್ಯಕರ್ತೆಯರ ಮುಷ್ಕರದಿಂದ ಕರೊನಾ ನಿಯಂತ್ರಣಕ್ಕೆ ಸಂಪೂರ್ಣ ಹಿನ್ನಡೆಯಾಗಿದೆ. ಹೊರಗಿನಿಂದ ಜನ ಬರುತ್ತಿದ್ದಂತೆ ಕ್ವಾರಂಟೈನ್​ಗೆ ಒಳಪಡಿಸಲು ಆಡಳಿತ ಯಂತ್ರಕ್ಕೆ ಮಾಹಿತಿ ನೀಡುತ್ತಿದ್ದ ಜನರ ಮಾತಿಗೀಗ ಬೆಲೆ ಇಲ್ಲದಂತಾಗಿದೆ. ದಿನೇದಿನೆ ಕರೊನಾ ಪ್ರಕರಣ ಹೆಚ್ಚಾಗುತ್ತಿರುವುದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಂಟೇನ್ಮೆಂಟ್ ಪ್ರದೇಶಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬೆಂಗಳೂರಿನಿಂದ ನೂರಾರು ಸಂಖ್ಯೆಯ ಜನ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇಂತಹ ಸಂದರ್ಭ ಆಶಾ ಕಾರ್ಯಕರ್ತೆಯರು ಮುಷ್ಕರ ಮಾಡುತ್ತಿರುವುದು ಆಡಳಿತವನ್ನು ಪೇಚಿಗೆ ಸಿಲುಕಿಸಿದೆ.

    ನಮ್ಮ ಕೆಲಸವಲ್ಲ, ಕಾರ್ಯಕರ್ತೆಯರಿಗೆ ಹೇಳಿ; ಕರೊನಾ ಕಾಲಿಟ್ಟ ಆರಂಭದ ಲಾಕ್​ಡೌನ್ ಸಂದರ್ಭದಲ್ಲಿ ಯಾವುದೇ ಬಡಾವಣೆಗೆ ಹೊರ ರಾಜ್ಯ, ಜಿಲ್ಲೆಗಳಿಂದ ಒಬ್ಬನೇ ವ್ಯಕ್ತಿ ಬಂದದ್ದು ಗೊತ್ತಾದರೂ ಪೊಲೀಸರು, ಆಶಾ, ಆರೋಗ್ಯ ಕಾರ್ಯಕರ್ತೆಯರು ಧಾವಿಸಿ ಕ್ವಾರಂಟೈನ್​ಗೆ ಒಳಪಡಿಸುತ್ತಿದ್ದರು. ಮುಂಚೆ ಇದ್ದ ಉತ್ಸಾಹ ಈಗಿಲ್ಲ. ಆಶಾ ಕಾರ್ಯಕರ್ತೆಯರ ಮುಷ್ಕರದಿಂದಾಗಿ ರ್ಯಾಂಡಂ ಟೆಸ್ಟಿಂಗ್, ಕ್ವಾರಂಟೈನ್​ನಲ್ಲಿರುವವರ ಬಗ್ಗೆ ನಿಗಾ ವಹಿಸಲು ಸಮಸ್ಯೆಯಾಗಿದೆ. ಇತ್ತೀಚೆಗೆ ತರಕಾರಿ ಲಾರಿಯಲ್ಲಿ ತಮಿಳುನಾಡಿನಿಂದ ನಗರದ ಶಂಕರಪುರ ಬಡಾವಣೆಗೆ ಬಂದಿದ್ದ ನಾಲ್ವರು ರಾಜಾರೋಷವಾಗಿ ಓಡಾಡುತ್ತಿದ್ದ ಬಗ್ಗೆ ಪೊಲೀಸರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಗಮನಕ್ಕೆ ಸ್ಥಳೀಯರು ತಂದರೂ ಪ್ರಯೋಜನವಾಗಿಲ್ಲ. ಇದು ನಮ್ಮ ಕೆಲಸವಲ್ಲ, ಆಶಾ ಕಾರ್ಯಕರ್ತೆಯರಿಗೆ ಹೇಳಿ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಆ ಭಾಗದ ಆಶಾ ಕಾರ್ಯಕರ್ತೆ ಮುಷ್ಕರದಲ್ಲಿರುವುದಾಗಿ ತಿಳಿಸಿ ಕೈಚೆಲ್ಲಿದ್ದಾರೆ. ಬೇಸತ್ತ ಜನರು ಊರಿನ ಗೊಡವೆ ನಮಗೇಕೆ ಎಂದು ಸುಮ್ಮನಾಗಿದ್ದಾರೆ. ಇಂತಹ ಹಲವು ನಿದರ್ಶನಗಳಿವೆ.

    ಟಾಸ್ಕ್​ಪೋರ್ಸ್ ಕಮಿಟಿ ಸ್ಥಗಿತ: ಕರೊನಾ ನಿಯಂತ್ರಣಕ್ಕೆ ಗ್ರಾಪಂ ಟಾಸ್ಕ್​ಫೋರ್ಸ್ ಕಮಿಟಿ ರಚಿಸಲಾಗಿತ್ತು. ಈಚೆಗೆ ಗ್ರಾಪಂ ಸದಸ್ಯರ ಅಧಿಕಾರ ಅವಧಿ ಪೂರ್ಣ ಆಗಿರುವುದರಿಂದ ಸಮಿತಿಗಳೂ ವಿಸರ್ಜನೆಯಾಗಿವೆ. ಎಲ್ಲ ಜವಾಬ್ದಾರಿ ಪಿಡಿಒಗಳ ಹೆಗಲೇರಿದೆ. ಹೀಗಾಗಿ ಕರೊನಾ ಸಂಬಂಧಿ ಕಾರ್ಯಕ್ರಮ ರೂಪಿಸಲು ಅಡ್ಡಿಯಾಗಿದೆ. ಹೊರಗಿನಿಂದ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್​ನಲ್ಲಿ ಇರಿಸಲು ಸಹ ಸಾಧ್ಯವಾಗುತ್ತಿಲ್ಲ. ಹಿಂದೆ ಇದ್ದ ಸದಸ್ಯರ ಮಾತನ್ನು ಯಾರೂ ಕೇಳುತ್ತಿಲ್ಲ. ನಗರ, ಗ್ರಾಮೀಣ ಭಾಗದಲ್ಲಿ 60ಕ್ಕೂ ಹೆಚ್ಚು ಕಂಟೇನ್ಮೆಂಟ್ ಜೋನ್​ಗಳಿವೆ. ಅಲ್ಲಿ ಪ್ರತಿದಿನ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಿಗೂ ಅಡಚಣೆ ಉಂಟಾಗುತ್ತಿದೆ. ಘಟನಾ ಕಮಾಂಡರ್​ಗಳನ್ನು ನೇಮಿಸಿದ್ದರೂ ಜನರಿಗೆ ಅಗತ್ಯ ಸೌಕರ್ಯ ಕಲ್ಪಿಸುವುದು ಹಾಗೂ ಸೋಂಕಿತರ ಕುಟುಂಬದ ಮೇಲೆ ನಿಗಾ ವಹಿಸಲು ಕರೊನಾ ಸೇನಾನಿಗಳ ಕೊರತೆ ಕಾಡುತ್ತಿದೆ. ಬೇರೆ ಜಿಲ್ಲೆ, ರಾಜ್ಯಗಳಿಂದ ಬಂದವರಿಗೆ ಪೊಲೀಸರ ಭಯವೂ ಇಲ್ಲ. ಆಶಾ ಕಾರ್ಯಕರ್ತೆಯರ ಮುಷ್ಕರ ಅಂತ್ಯಗೊಳಿಸುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.

    ಹೊಸ ಟಾಸ್ಕ್​ಫೋರ್ಸ್: ಗ್ರಾಪಂ ಮಟ್ಟದಲ್ಲಿ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೊಸ ಟಾಸ್ಕ್​ಫೋರ್ಸ್ ಸಮಿತಿ ರಚಿಸಲು ಸರ್ಕಾರದಿಂದ ಸೂಚನೆ ಬಂದಿದೆ. ಇನ್ನಷ್ಟೇ ಈ ಕಾರ್ಯ ನಡೆಯಬೇಕಿದೆ. ಆಸಕ್ತಿ ಇದ್ದಲ್ಲಿ ಗ್ರಾಪಂ ಮಾಜಿ ಸದಸ್ಯರು ಮತ್ತೆ ಟಾಸ್ಕ್​ಫೋರ್ಸ್ ಸಮಿತಿ ಸದಸ್ಯರಾಗಬಹುದು. ಜಿಪಂ ಸಿಇಒ ಪಿಡಿಒಗಳಿಗೆ ನಿರ್ದೇಶನ ನೀಡಿದ ಬಳಿಕವಷ್ಟೇ ಈ ಕಾರ್ಯಕ್ಕೆ ಚಾಲನೆ ಸಿಗಲಿದೆ.

    ಧರ್ಮ ಸಂಕಟದಲ್ಲಿ ಆಶಾ ಕಾರ್ಯಕರ್ತೆಯರು: ಮುಷ್ಕರದ ಕಾರಣ ಐದು ದಿನದಿಂದ ಮನೆಯಲ್ಲೇ ಇದ್ದೇವೆ. ನಮ್ಮ ವ್ಯಾಪ್ತಿಯ ಜನರು ದೂರವಾಣಿ ಕರೆ ಮಾಡಿ ಬೆಂಗಳೂರು, ಮೈಸೂರು ಇನ್ನಿತರ ಕಡೆಯಿಂದ ಜನ ಬಂದಿದ್ದಾರೆ. ಅವರನ್ನು ಕ್ವಾರಂಟೈನ್ ಮಾಡಿ ಎನ್ನುತ್ತಿದ್ದಾರೆ. ಜತೆಗೆ ಮಳೆಗಾಲದ ಕಾರಣ ಡೆಂಘೆ, ಚಿಕೂನ್​ಗುನ್ಯಾ ಹೆಚ್ಚುತ್ತಿದೆ. ಗರ್ಭಿಣಿಯರು, ಬಾಣಂತಿಯರ ಆರೋಗ್ಯ ರಕ್ಷಣೆ, ಚುಚ್ಚುಮದ್ದು, ಶಿಶು ಆರೈಕೆ ಬಗ್ಗೆ ನಿಗಾ ವಹಿಸಬೇಕಿದೆ. ಇತ್ತ ಮುಷ್ಕರ ಬಿಟ್ಟು ಕೆಲಸ ಮಾಡುವಂತಿಲ್ಲ. ಅತ್ತ ನಮ್ಮನ್ನೇ ನೆಚ್ಚಿಕೊಂಡ ಸಮುದಾಯಕ್ಕೂ ದ್ರೋಹ ಮಾಡುವಂತಿಲ್ಲ. ಇಂಥ ಇಕ್ಕಟ್ಟಿಗೆ ನಾವಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಆಶಾ ಕಾರ್ಯಕರ್ತರೊಬ್ಬರು ನೋವು ತೋಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts