More

  ಗುಡಾಳು ಗ್ರಾಮದ ಮೃತ ರೈತನ ಸಾಲಮನ್ನಾ     ರೈತ ಸಂಘದ ಪದಾಧಿಕಾರಿಗಳ ಜತೆ ಜಿಲ್ಲಾಡಳಿತ ಸಭೆ

  ದಾವಣಗೆರೆ: ಸಾಲ ತೀರಿಸಲಾಗದೆ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದ ದಾವಣಗೆರೆ ತಾಲೂಕಿನ ಗುಡಾಳು ಗೊಲ್ಲರಹಟ್ಟಿ ಗ್ರಾಮದ ರೈತ ಹನುಮಂತಪ್ಪ ಅವರು ಬ್ಯಾಂಕ್‌ನಲ್ಲಿ ಪಡೆದಿದ್ದ ಮನೆ ಹಾಗೂ ಕುರಿ ಸಾಲ ಸೇರಿ 8 ಲಕ್ಷ ರೂ. ಮನ್ನಾ ಮಾಡಲು ಬ್ಯಾಂಕ್ ಅಧಿಕಾರಿಗಳು ಸಮ್ಮತಿಸಿದ್ದಾರೆ.
  ಮೃತ ರೈತನ ಕುಟುಂಬಕ್ಕೆ ಪರಿಹಾರ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಈ ಬಗ್ಗೆ ತಿಳಿಸಿದರು.
  ಮಾನವೀಯತೆ ನೆಲೆ ಮೇಲೆ 2.10 ಲಕ್ಷ ರೂ. ಸಾಲ ಭರ್ತಿ ಮಾಡಿಸಿಕೊಂಡಿದ್ದರೆ ರೈತನ ಪ್ರಾಣ ಉಳಿಯುತ್ತಿತ್ತು. ಈಗ ಆಗಿರುವ ಪ್ರಮಾದಕ್ಕೆ ನೀವೇ ಹೊಣೆ ಎಂದು ಬ್ಯಾಂಕ್ ಅಧಿಕಾರಿಗಳನ್ನು ಡಿಸಿ ತರಾಟೆಗೆ ತಗೆದುಕೊಂಡರು.
  ಸಂತ್ರಸ್ತನ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ವಾರದೊಳಗಾಗಿ 5.25 ಲಕ್ಷ ರೂ.ಗಳ ಪರಿಹಾರ, ಆತನ ಇಬ್ಬರೂ ಮಕ್ಕಳಿಗೆ ಮುರಾರ್ಜಿ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
  ಮೃತನ ಪತ್ನಿ ವಿಕಲಾಂಗಿನಿ ಆಗಿರುವ ಹಿನ್ನೆಲೆಯಲ್ಲಿ ಇಲಾಖೆಗಳಲ್ಲಿ ಖಾಲಿ ಹುದ್ದೆ ಪರಿಶೀಲಿಸಿ ದೈಹಿಕವಾಗಿ ಸಾಧ್ಯತೆ ಇರುವ ಕೆಲಸ ಕಲ್ಪಿಸಲಾಗುವುದು ಎಂದರು. ರೈತ ಸಂಘದ ಬೇಡಿಕೆಯಂತೆ ಲೀಡ್ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಲ್ಲಿ ಪರಿಹಾರ ಕೊಡಿಸಲು ಪರಿಶೀಲನೆ ನಡೆಸಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಮೃತ ರೈತನಿಗೆ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.
  ಸಭೆಯಲ್ಲಿ ಎಡಿಸಿ ಸೈಯಿದಾ ಅಫ್ರೀನ್‌ಬಾನು ಬಳ್ಳಾರಿ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಸೀಲ್ದಾರ್ ಡಾ.ಬಿ.ಎನ್. ಅಶ್ವಥ್, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಲೀಡ್ ಬ್ಯಾಂಕ್ ಅಧಿಕಾರಿ ಶೈಲಾ ಮುರಾರಿ ಹಾಗೂ ಬ್ಯಾಂಕ್ ಅಧಿಕಾರಿಗಳಿದ್ದರು.
  ಮೃತ ರೈತ ಹನುಮಂತಪ್ಪ ಕುಟುಂಬ ಬಡವರಾದ್ದರಿಂದ ಸಿಆರ್‌ಎಸ್ ನಿಧಿಯಡಿ 50 ಲಕ್ಷ ರೂ.ಗಳ ಪರಿಹಾರ ಕೊಡಿಸಬೇಕು ಎಂದೂ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆಗ್ರಹಿಸಿದರು.
  ಸಭೆಗೂ ಮುನ್ನ ಸಿದ್ದವೀರಪ್ಪ ಬಡಾವಣೆಯಲ್ಲಿ ಬ್ಯಾಂಕ್‌ನ ಎಜಿಎಂ ಕಚೇರಿಗೆ ಬೀಗ ಜಡಿದು ಅರ್ಧ ಗಂಟೆ ಕಾಲ ಪ್ರತಿಭಟನೆ ನಡೆಸಿದ ರೈತರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.
  ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಭೆ ಸುಸಂಪನ್ನವಾದ ಬಳಿಕ ರೈತರು ಶವಾಗಾರದ ಶೈತ್ಯಾಗಾರದಲ್ಲಿ ಇರಿಸಿದ್ದ ಮೃತ ಹನುಮಂತಪ್ಪ ಅವರ ಮೃತದೇಹ ಪಡೆದು ಗುಡಾಳ್ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಿದರು.
  ರೈತ ಸಂಘದ ಮುಖಂಡರಾದ ಶಂಭಣ್ಣ ಗುಮ್ಮನೂರು, ರುದ್ರೇಶ್, ಭೂಮೇಶ್, ಲೋಕೇಶ್, ರಾಜನಹಟ್ಟಿ ರಾಜು, ಚಿಕ್ಕಮಲ್ಲನಹೊಳೆ ಚಿರಂಜೀವಿ, ಯಲೋದಹಳ್ಳಿ ರವಿ, ಅಸ್ತಾಪನಹಳ್ಳಿ ಗಂಡುಗಲಿ, ಕೋಗಲೂರು ಕುಮಾರ, ಕುರ್ಕಿ ಹನುಮಂತ, ಹೂವಿನಮಡು ನಾಗರಾಜ್, ನಿಟುವಳ್ಳಿ ಪೂಜಾರ್ ಆಂಜಿನಪ್ಪ, ಹುಚ್ಚವ್ವನಹಳ್ಳಿ ಪ್ರಕಾಶ್, ಕಾಟೇಹಳ್ಳಿ ರಂಗಸ್ವಾಮಿ, ಹೊನ್ನೂರು ಮಂಜಪ್ಪ ಇತರರಿದ್ದರು.

  See also  ಬೆಳೆ ಹಾನಿ ಪರಿಹಾರಕ್ಕೆ ನಿಮ್ಮ ಮನೆ ದುಡ್ಡು ಕೊಡಲ್ಲ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಎಂ.ಪಿ. ರೇಣುಕಾಚಾರ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts