

ಲಖನೌ: ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಲ್ಲಿ ಯುವ ಸಮೂಹದ ಪಾತ್ರ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ.
ಇದೀಗ ಘಟನೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತೆಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಗೌತಮ್ ಬುದ್ಧನಗರ ಜಿಲ್ಲೆಯ ನೋಯ್ಡಾದ ಶಿವ್ ನಾದರ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಮೂರನೇ ವರ್ಷ ಸಮಾಜಶಾಸ್ತ್ರ ಪದವಿ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದು ವಿದ್ಯಾರ್ಥಿಯೂ ತನ್ನ ಸ್ನೇಹಿತೆಯೊಂದಿಗೆ ಜಗಳವಾಡಿದ ನಂತರ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ದುರ್ದೈವಿಗಳ ಹೆಸರು ಅನುಜ್ ಸಿಂಗ್(21) ಹಾಗೂ ನೇಹಾ ಚೌರಾಸಿಯಾ(21) ಎಂದು ತಿಳಿದು ಬಂದಿದ್ದು ಘಟನೆ ನಂತರ ವಿದ್ಯಾರ್ಥಿಯು ಹಾಸ್ಟೆಲ್ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೃತ ಯುವತಿ ತಂದೆ ರಾಜ್ಕುಮಾರ್ ಚೌರಾಸಿಯಾ ವಿಶ್ವವಿದ್ಯಾಲಯದಲ್ಲಿನ ಭದ್ರತೆಯನ್ನು ಪ್ರಶ್ನಿಸಿದ್ದಾರೆ ಮತ್ತು ಒಬ್ಬ ವ್ಯಕ್ತಿ ಗನ್ ಹಿಡಿದು ತಿರುಗಾಡಲು ಹೇಗೆ ಬಿಟ್ಟಿದ್ದೀರಿ.
ಕಾಲೇಜ್ನಲ್ಲಿ ಅನೇಕ ಜನ ಸೆಕ್ಯೂರಿಟಿ ಗಾರ್ಡ್ಗಳು ಇದ್ದರೂ ಸಹ ಆತ ನನ್ನ ಮಗಳ ಮೇಲೆ ಎರಡು ಭಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ಧಾನೆ. ವಿಶ್ವವಿದ್ಯಾಲಯದವರು ಅಪಘಾತಕ್ಕೀಡಾಗಿದ್ದಾಳೆ ಎಂದು ನನಗೆ ಕರೆ ಮಾಡಿ ಹೇಳಿದ್ದರು ಇಲ್ಲಿನೋಡಿದರೆ ಬೇರೆಯದೆ ನಡೆದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.