More

    ಎಸ್ಸೆಸ್ಸೆಲ್ಸಿ ಎಕ್ಸಾಂ ಕಸಿವಿಸಿ

    ದೇವರಾಜ್ ಎಲ್. ಬೆಂಗಳೂರು

    ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ದಾಟಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕೇ? ಬೇಡವೇ ಎಂಬ ಬಗ್ಗೆ ಜಿಜ್ಞಾಸೆ ಶುರುವಾಗಿದೆ. ದಿನೇದಿನೆ ಏರಿಕೆಯಾಗುತ್ತಿರುವ ಪ್ರಕರಣಗಳನ್ನು ನಿರ್ವಹಿಸುತ್ತಲೇ ಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದ್ದರೆ, ಇಂಥ ಕಠಿಣ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಶಿಕ್ಷಣ ತಜ್ಞರು, ಪಾಲಕರು ಹಾಗೂ ಸಂಘ- ಸಂಸ್ಥೆಗಳ ಆಗ್ರಹ ಧ್ವನಿ ಪಡೆದುಕೊಂಡಿದೆ. ಪರೀಕ್ಷೆಗೆ ಒಂದು ತಿಂಗಳು ಬಾಕಿ ಇರುವಾಗ ಈ ಬೆಳವಣಿಗೆಯಿಂದ ಸರ್ಕಾರಕ್ಕೂ ಕಸಿವಿಸಿ ಉಂಟಾಗಿದೆ.

    ಸರ್ಕಾರ ವಾರದ ಹಿಂದಷ್ಟೇ 2020ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ (ಜೂ.25ರಿಂದ ಜು.4ರವರೆಗೆ) ವೇಳಾಪಟ್ಟಿ ಬಿಡುಗಡೆ ಮಾಡಿದೆ. ಸುರಕ್ಷತಾ ಕ್ರಮಗಳ ಮೂಲಕ ಪರೀಕ್ಷೆ ನಡೆಸುವುದಾಗಿ ಹೇಳಿದೆಯಾದರೂ ಲಕ್ಷಾಂತರ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ನೌಕರರು ಭಾಗಿಯಾಗುವ ಈ ಪರೀಕ್ಷಾ ಪ್ರಕ್ರಿಯೆಯಲ್ಲಿ ಒಂದು ಸಣ್ಣ ತಪ್ಪಾದರೂ ಕರೊನಾ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ ದಟ್ಟವಾಗಿರುವುದು ಸರ್ಕಾರವನ್ನು ಯೋಚನೆಗೆ ದೂಡಿದೆ.

    ಇದನ್ನೂ ಓದಿ    ತಬ್ಲಿಘಿಗಳ ವಿರುದ್ಧ ಚಾರ್ಜ್‌ಶೀಟ್ ಹಾಕಲು ಪೊಲೀಸರ ಸಿದ್ಧತೆ

    ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಮಾಡುವಂತೆ ಕೋರಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಇದರ ವಿಚಾರಣೆ ಬಾಕಿ ಇರುವಂತೆಯೇ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ರಾಜ್ಯ ನಿವೃತ್ತ ಶಿಕ್ಷಣ ಅಧಿಕಾರಿಗಳ ವೇದಿಕೆ, ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ಫೆಡರೇಷನ್, ಭಾರತ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ ಮಹಿಳಾ ಒಕ್ಕೂಟ, ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಸೇರಿ 20ಕ್ಕೂ ಹೆಚ್ಚಿನ ಸಂಘಟನೆಗಳು ಒಗ್ಗೂಡಿ ಸಭೆ ನಡೆಸಿ ಪರೀಕ್ಷೆ ನಡೆಸಬಾರದೆಂಬ ಒಕ್ಕೊರಲಿನ ಒಮ್ಮತದ ಅಭಿಪ್ರಾಯವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿವೆ.

    ಕ್ಯಾಮ್ಸ್​  ಏನೇಳುತ್ತೆ?: ಎಸ್ಸೆಸ್ಸೆಲ್ಸಿ ಪರೀಕ್ಷೆ ಒಂದು ಮಹತ್ವದ ಘಟ್ಟವಾಗಿದೆ. ಪರೀಕ್ಷೆ ನಡೆಸಲೇ ಬೇಕು. ಒಂದು ವೇಳೆ ನಡೆಸಲಿಲ್ಲವಾದರೆ ಮಕ್ಕಳಿಗೆ ಘೋರ ಅನ್ಯಾಯವಾಗುತ್ತದೆ ಎಂದು ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ(ಕ್ಯಾಮ್ಸ್​ ) ತಿಳಿಸಿದೆ. ಶಾಲಾ ಹಂತದ ಪರೀಕ್ಷೆ ಎಂದು ನಿರ್ಲಕ್ಷ್ಯತನ ತೋರಿದ್ದ ಮಕ್ಕಳು ಅಂತಿಮ ವರ್ಷದ ಪರೀಕ್ಷೆಗಾಗಿ ಹೆಚ್ಚು ಸಿದ್ಧತೆ ನಡೆಸಿದ್ದಾರೆ. ಸಾರ್ವತ್ರಿಕವಾಗಿ ಪಾಸ್ ಮಾಡಿದರೆ, ಮುಂದೆ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಎಲ್ಲ ಕಡೆ ಕರೊನಾದಿಂದ ಪಾಸಾದವರು ಎಂಬ ವ್ಯಂಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಕ್ಯಾಮ್್ಸ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳಿದ್ದಾರೆ.

    ರೀಕ್ಷೆ ಪ್ರಕ್ರಿಯೆ ಹೇಗಿರುತ್ತೆ?: ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುತ್ತದೆ. ಈಗಾಗಲೇ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಬುಕ್​ಲೆಟ್​ಗಳನ್ನು ಮುದ್ರಣ ಮಾಡಿ ಖಜಾನೆಗಳಲ್ಲಿಟ್ಟಿದೆ. ಅಲ್ಲಿಂದ ಪರೀಕ್ಷಾ ಕೇಂದ್ರಗಳಿಗೆ ವಾಹನಗಳ ಮೂಲಕ ಸರಬರಾಜು ಮಾಡಬೇಕು. ಇದನ್ನು ಪರೀಕ್ಷಾ ಸಮಯದಲ್ಲಿ ವಿತರಿಸಬೇಕು. ಆನಂತರ ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿ ಗುರುತಿಸಿದ ಕೇಂದ್ರಗಳಲ್ಲಿ ಸುರಕ್ಷಿತವಾಗಿ ಜೋಡಿಸಬೇಕು.‘ಡಿ’ ಗ್ರೂಪ್ ನೌಕರದಿಂದ ‘ಎ’ ಗ್ರೂಪ್​ವರೆಗೆ ಸಾವಿರಾರು ಸಿಬ್ಬಂದಿ ಪರೀಕ್ಷಾ ಕಾರ್ಯದಲ್ಲಿ ತೊಡಗಿರುತ್ತಾರೆ. ಪರೀಕ್ಷಾ ಕಾರ್ಯದಲ್ಲಿ ಟೀ ತಂದುಕೊಡುವ ಸಿಬ್ಬಂದಿಯಿಂದ ಕರೊನಾ ಬಂದರೂ ಅದು ವ್ಯಾಪಿಸುವ ಪ್ರಮಾಣ ಊಹೆಗೂ ನಿಲುಕದು.

    ಇದನ್ನೂ ಓದಿ  ಕೋಡೆಡ್ ಮೆಸೇಜ್ ಹೊತ್ತ ಪಾಕ್‌ನ ಗೂಢಚಾರಿ ಪಾರಿವಾಳ ವಶ!

    ಶಾಲೆಗಳ ಹೊಣೆ ಏನು?

    ಕೇಂದ್ರಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು

    ಡೆಸ್ಕ್​ಗಳನ್ನು ಸ್ಯಾನಿಟೈಸ್ ಮಾಡಬೇಕು

    ವಿದ್ಯಾರ್ಥಿಗಳನ್ನು ಥರ್ಮಲ್ ತಪಾಸಣೆಗೆ ಒಳಪಡಿಸಬೇಕು

    ಮಕ್ಕಳು ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರವಹಿಸಬೇಕು

    ಮಾಸ್ಕ್ ಪರಿಶೀಲನೆ ಮಾಡಬೇಕು

    ಪ್ರಶ್ನೆ ಮತ್ತು ಉತ್ತರ ಪತ್ರಿಕೆ ನೀಡುವಾಗ ಜಾಗೃತರಾಗಿರಬೇಕು.

    ಸರ್ಕಾರದ ಸಿದ್ಧತೆ

    2,879 ಕೇಂದ್ರಗಳಲ್ಲಿ 43,720 ಕೊಠಡಿಗಳನ್ನು ನಿಗದಿ ಮಾಡಿ ಪರೀಕ್ಷೆ ನಡೆಸುವುದು

    ಪ್ರತಿ ವಿದ್ಯಾರ್ಥಿಗೂ ಮಾಸ್ಕ್, ಥರ್ಮಲ್ ಸ್ಕಾ್ಯನಿಂಗ್ ಕಡ್ಡಾಯಗೊಳಿಸಿ ಆದೇಶಿಸಿದೆ

    ಪ್ರತಿ ಡೆಸ್ಕ್​ನಲ್ಲಿ ಇಬ್ಬರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ

    ಜ್ವರವಿದ್ದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ತೀರ್ಮಾನ

    ಬೋರ್ಡ್ ಎಕ್ಸಾಂ ಎಂದರೆ ಅದಕ್ಕೆ ಹೆಚ್ಚಿನ ಮಹತ್ವವಿದೆ. ಪರೀಕ್ಷೆಗೆ ಇನ್ನೂ ಒಂದು ತಿಂಗಳ ಅವಧಿ ಇರುವುದರಿಂದ ಸುರಕ್ಷತಾ ಕ್ರಮ ಅನುಸರಿಸಿ ನಡೆಸಬಹುದು. ಪರಿಸ್ಥಿತಿ ಕೈ ಮೀರಿದ ಸಂದರ್ಭದಲ್ಲಿ ಪಾಸ್ ಮಾಡುವ ಬಗ್ಗೆ ಆಲೋಚನೆ ಮಾಡಲಿ.

    |ಎಚ್.ಕೆ.ಮಂಜುನಾಥ್, ಅಧ್ಯಕ್ಷರು, ರಾಜ್ಯ ಪ್ರೌಢ ಶಿಕ್ಷಕರ ಸಂಘ

    ಇತರ ವಿದ್ಯಾರ್ಥಿಗಳು ಆಟವಾಡುವಾಗ ನಾನು ಮಾತ್ರ ಓದಬೇಕೆಂದರೆ ಬೇಸರವಾಗುತ್ತದೆ. ಪರೀಕ್ಷೆ ಬೇಗ ಮಾಡಿ, ಇಲ್ಲವೇ ಬೇಡವೇ ಬೇಡ. ಹೆಚ್ಚಿನ ಅಂಕ ನೀಡಿ ಪಾಸ್ ಮಾಡಿ.

    |ಕೆ.ಆರ್.ಮನೋಜ್ ಕುಮಾರ್, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ

    ಸುರಕ್ಷತಾ ಕ್ರಮ ಅನುಸರಿಸಿ ಪರೀಕ್ಷೆ ನಡೆಸುವುದು ಸೂಕ್ತ. ಇನ್ನೊಂದು ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸಲಿಲ್ಲವಾದರೆ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು.

    |ಎಂ.ಎಸ್.ಪೂಜಾ, ಪಾಲಕರು

    ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಲು ಆಗ್ರಹ

    ಧಾರವಾಡ: ಕರೊನಾ ಆತಂಕದ ನಡುವೆ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವುದು ಅಸಾಧ್ಯ. ಹೀಗಾಗಿ ಸರ್ಕಾರ, ಈ ಬಾರಿಯ ಪರೀಕ್ಷೆಯನ್ನು ರದ್ದುಗೊಳಿಸಿ ಮಕ್ಕಳನ್ನು ತೇರ್ಗಡೆ ಮಾಡುವ ನಿರ್ಧಾರಕ್ಕೆ ಬರಬೇಕು ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಆಗ್ರಹಿಸಿದ್ದಾರೆ.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಮಹತ್ವದ ಘಟ್ಟ. ಪರೀಕ್ಷೆ ಅಂಕಪಟ್ಟಿಯೂ ಮಹತ್ವದ ದಾಖಲೆ. ಈ ಮಧ್ಯೆ ಜೂನ್​ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಾಗಿ ಸರ್ಕಾರ ಪ್ರಕಟಿಸಿದೆ. ವಿದ್ಯಾರ್ಥಿಗಳ ಜೀವನದ ಅಂಶದ ಮುಂದೆ ಪರೀಕ್ಷೆ ಅನಿವಾರ್ಯವೇ? ಎಂಬ ಪ್ರಶ್ನೆ ಮೂಡುತ್ತದೆ. ಈಗಾಗಲೇ ಪಂಜಾಬ್, ಹರಿಯಾಣ ಸೇರಿ ಕೆಲ ರಾಜ್ಯಗಳಲ್ಲಿ ಪರೀಕ್ಷೆ ರದ್ದುಗೊಳಿಸಲಾಗಿದೆ. ಅದೇ ರೀತಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸೂಕ್ತ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಪರೀಕ್ಷೆಗೆ ಆತಂಕ ಏಕೆ?

    ಕರೊನಾ ಕೇಸ್​ಗಳ ಸಂಖ್ಯೆ ಪ್ರತಿನಿತ್ಯ ಸರಾಸರಿ 100ಕ್ಕಿಂತ ಹೆಚ್ಚು ವರದಿಯಾಗುತ್ತಿವೆ

    8.4 ಲಕ್ಷ ವಿದ್ಯಾರ್ಥಿಗಳು ಹಾಗೂ 2 ಲಕ್ಷ ಸಿಬ್ಬಂದಿ ಪರೀಕ್ಷಾ ಉಸ್ತುವಾರಿಗೆ ನಿಯೋಜನೆ

    ಒಬ್ಬ ವಿದ್ಯಾರ್ಥಿ ಅಥವಾ ಸಿಬ್ಬಂದಿಗೆ ಸೋಂಕು ಇದ್ದರೆ ಸಾವಿರಾರು ಜನರಿಗೆ ಆತಂಕ

    8 ಲಕ್ಷ ಮಕ್ಕಳನ್ನು ವ್ಯವಸ್ಥಿತವಾಗಿ ಥರ್ಮಲ್ ಸ್ಕಾ್ಯನಿಂಗ್​ಗೆ ಒಳಪಡಿಸುವುದು ಸಾಧ್ಯವೇ

    ಚಾಮರಾಜನಗರ ಬಿಟ್ಟು ಎಲ್ಲ ಜಿಲ್ಲೆಗಳಲ್ಲೂ ಕಂಟೇನ್​ವೆುಂಟ್ ಜೋನ್​ಗಳಿವೆ

    ಜ್ವರ ಬಂದವರು ಔಷಧ ಪಡೆದು ಎಲ್ಲರಂತೆ ಪರೀಕ್ಷೆ ಬರೆದರೆ ಏನು ಗತಿ?

    ಜೀವಕ್ಕಿಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ದೊಡ್ಡದೇ? ಎಕ್ಸಾಂ ನಡೆಸುವುದು ಅಷ್ಟು ಅನಿವಾರ್ಯವೇ

    ಸರ್ಕಾರಕ್ಕಿರುವ ಸವಾಲು

    8.4 ಲಕ್ಷ ವಿದ್ಯಾರ್ಥಿಗಳು, 2 ಲಕ್ಷ ಸಿಬ್ಬಂದಿ ಯಲ್ಲಿ ಸೋಂಕು ಪತ್ತೆ ಅಷ್ಟು ಸುಲಭವಲ್ಲ

    ವಿದ್ಯಾರ್ಥಿಗಳು ಮನೆಯಿಂದ ಬಂದರೂ ಕೆಳಹಂತದ ಸಿಬ್ಬಂದಿ ಮೇಲಿನ ನಿಗಾ ಹೇಗೆ

    ಪ್ರಶ್ನೆಪತ್ರಿಕೆ ಮುದ್ರಣ, ವಾಹನದಲ್ಲಿ ಪೂರೈಕೆಗೆ ಸಿಬ್ಬಂದಿ ಬೇರೆಬೇರೆ ಕಡೆ ಓಡಾಡಬೇಕು

    ವಿದ್ಯಾರ್ಥಿಗಳ ಸಮಸ್ಯೆ ಏನು?

    ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಜಾಗೃತರಾಗಿ ಪರೀಕ್ಷೆಗೆ ಸಿದ್ಧರಾಗಬೇಕು ಒಂದು ಕಡೆ ಪರೀಕ್ಷಾ ಭಯವಿದ್ದರೆ ಮತ್ತೊಂದೆಡೆ ಕರೊನಾ ಸೋಂಕು ತಗುಲಿದರೆ ಎಂಬ ಆತಂಕ ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬರುವ ಅನಿವಾರ್ಯ ದೈಹಿಕ ಅಂತರ ಕಾಯ್ದುಕೊಂಡು ತಮ್ಮ ಕೊಠಡಿ ಸಂಖ್ಯೆ ನೋಡಿ ಪರೀಕ್ಷೆಗೆ ಹಾಜರಾಗಬೇಕು ಪರೀಕ್ಷೆ ವಿಳಂಬವಾಗಿ ಆರಂಭವಾಗಿದೆ ಎಂಬ ಮನೋಭಾವದಿಂದ ನಿರ್ಲಕ್ಷ್ಯ ಲಾಕ್​ಡೌನ್ ಹಿನ್ನೆಲೆಯಲ್ಲಿ 3 ತಿಂಗಳು ಮನೆಯಲ್ಲಿದ್ದು ನಂತರ ಪರೀಕ್ಷೆ ಬರೆಯುವ ಸವಾಲು

    ಪ್ರಕರಣ ಆಗ ಕಡಿಮೆ, ಈಗ ಜಾಸ್ತಿ

    ಪರೀಕ್ಷೆ ದಿನಾಂಕ ಘೋಷಿಸಿದ ಸಂದರ್ಭದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ಆದರೀಗ ಕಳೆದ ವಾರದಿಂದ ತೀವ್ರಗತಿಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದೆ. ದಿನಕ್ಕೆ 100 ರಿಂದ 200 ಪ್ರಕರಣಗಳು ಪತ್ತೆಯಾಗುತ್ತಿವೆ. ಪರೀಕ್ಷೆಗೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಈ ವೇಳೆ ಪ್ರಕರಣಗಳು ಮತ್ತಷ್ಟು ಪ್ರಮಾಣದಲ್ಲಿ ಹೆಚ್ಚಾಗಬಹುದು, ಕಡಿಮೆಯಾಗಲೂಬಹುದು.

    ಸಂಘ-ಸಂಸ್ಥೆಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಎಲ್ಲ ಸಾಧಕ-ಬಾಧಕಗಳ ಕುರಿತು ರ್ಚಚಿಸಿ, ಮಕ್ಕಳ ಹಿತ ಮತ್ತು ಭವಿಷ್ಯದ ಬಗ್ಗೆ ಅವಲೋಕಿಸಿ ಪರೀಕ್ಷೆ ನಡೆಸುವ ಕುರಿತು ನಿರ್ಧಾರ ಕೈಗೊಂಡಿದ್ದೇವೆ.

    |ಎಸ್.ಸುರೇಶ್ ಕುಮಾರ್ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ

    ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸಬೇಕಿದೆ. ಹಾಗೇ ಪಾಸ್ ಮಾಡುವುದು ಸರಿಯಲ್ಲ. ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪರೀಕ್ಷೆ ನಡೆಸಬಹುದು. ದೈಹಿಕ ಅಂತರ ಕಾಯ್ದುಕೊಳ್ಳಲು ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಸೇರಿ ಅಗತ್ಯ ಸೌಲಭ್ಯ ಒದಗಿಸಬೇಕು.

    | ಡಾ ಸಿ.ಎನ್. ಮಂಜುನಾಥ್ ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ

    ಕರೊನಾಗೆ ಇಡೀ ಪ್ರಪಂಚ ನಲುಗುತ್ತಿದೆ. ಎಸ್ಸೆಸ್ಸೆಲ್ಸಿ ಪ್ರಮಾಣಪತ್ರಕ್ಕೆ ಮಹತ್ವ ಇದೆ ಎಂಬುದು ನಿಜ. ಆದರೆ, ಈ ವೇಳೆ ಪರೀಕ್ಷೆ ನಡೆಸುವ ಅವಶ್ಯಕತೆ ಇಲ್ಲ. | ನಿರಂಜನಾರಾಧ್ಯ ಶಿಕ್ಷಣ ತಜ್ಞ

    ಮಕ್ಕಳ ಜೀವನದ ಜತೆ ಆಟವಾಡುವುದು ಸೂಕ್ತವಲ್ಲ. ಇಂದಿನ ಪರಿಸ್ಥಿತಿ ನೋಡಿದರೆ ಪರೀಕ್ಷೆ ನಡೆಸುವುದು ಒಳ್ಳೆಯದಲ್ಲ.

    |ಎಸ್.ಜಿ.ಸಿದ್ದರಾಮಯ್ಯ ಮಾಜಿ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

    ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾರಿ ಭೂಕಂಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts