More

    ಸ್ಮಾರ್ಟ್‌ಸಿಟಿ ಕಾರ್ಮಿಕರು ಅತಂತ್ರ

    ಬೆಳಗಾವಿ: ಸ್ಮಾರ್ಟ್‌ಸಿಟಿ ನಿರ್ಮಾಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸ್ಮಾರ್ಟ್‌ಸಿಟಿ ಕಾರ್ಮಿಕರು ಲಾಕ್‌ಡೌನ್ ಘೋಷಣೆಯಾದಾಗಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಏಕಾಏಕಿ ಲಾಕ್‌ಡೌನ್ ಘೋಷಣೆಯಾದಾಗಿನಿಂದ ನಗರದ ವ್ಯಾಕ್ಸಿನ್ ಡಿಪೋದಲ್ಲಿರುವ ಕಾರ್ಮಿಕರು ಅವರ ಸ್ವಗ್ರಾಮಗಳಿಗೆ ಹೋಗಲಾಗದೆ, ಇತ್ತ ಕೆಲಸವೂ ಇಲ್ಲದೆ ತಾತ್ಕಾಲಿಕ ಶೆಡ್‌ಗಳಲ್ಲಿ ಕಷ್ಟದ ದಿನಗಳನ್ನು ಕಳೆಯುತ್ತಿದ್ದಾರೆ. ಲಾಕ್‌ಡೌನ್‌ನಿಂದ ಕಾಮಗಾರಿ ಸ್ಥಗಿತವಾಗಿದೆ. ಗುತ್ತಿಗೆದಾರರು ಬೆಂಗಳೂರು ಸೇರಿ ತಮ್ಮ ಊರುಗಳಿಗೆ ತೆರಳಿದ್ದಾರೆ. ಆದರೆ, ಕಾರ್ಮಿಕರು ಇಲ್ಲಿ ಕೆಲಸವಿಲ್ಲದೇ ಪರದಾಡುತ್ತಿದ್ದಾರೆ.

    ಇವರಿಗೆ ಪಡಿತರವೂ ಪೂರೈಕೆಯಾಗಿಲ್ಲ. ಆರೋಗ್ಯ ತಪಾಸಣೆಗೆ ಆರೋಗ್ಯ ಸಿಬ್ಬಂದಿ ಧಾವಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. 125ಕ್ಕೂ ಹೆಚ್ಚು ಕಾರ್ಮಿಕರು ವಾಸ: ಕರ್ನಾಟಕದ ವಿವಿಧ ಭಾಗಗಳ ಸ್ಮಾರ್ಟ್ ಸಿಟಿಯ ಸುಮಾರು 125 ಕಾರ್ಮಿಕರು ನಗರದ ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದಾರೆ. ಸ್ಮಾರ್ಟ್‌ಸಿಟಿ ಕಾಮಗಾರಿಯ ತಾಂತ್ರಿಕ ಕಾರ್ಮಿಕರು ಅನ್ಯರಾಜ್ಯಗಳಿಂದ ಇಲ್ಲಿಗೆ ಬಂದಿದ್ದಾರೆ. ಆದರೆ, ಈ ಕಾರ್ಮಿಕರು ಸದ್ಯ ಕೆಲಸವಿಲ್ಲದೆ ನಿತ್ಯ ಪರಿತಪಿಸುತ್ತಿದ್ದಾರೆ.

    ಕುಟುಂಬಸ್ಥರ ಬಳಿ ಹೋಗುವ ಹಂಬಲಿಸುತ್ತಿರುವ ಜೀವಗಳು: ಅಜ್ಞಾತವಾಸದಂತೆ ವ್ಯಾಕ್ಸಿನ್ ಡಿಪೋದಲ್ಲಿರುವ ಕಾರ್ಮಿಕರಲ್ಲಿ ಬಹುತೇಕರು ಕುಟುಂಬ ತೊರೆದು ಬಂದಿದ್ದಾರೆ. ಅವರೆಲ್ಲ ತಮ್ಮ ಕುಟುಂಬ ಸೇರುವುದಕ್ಕೆ ಹಂಬಲಿಸುತ್ತಿದ್ದಾರೆ. ಆದರೆ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯ, ಜಿಲ್ಲೆಗಳಿಗೆ ತೆರಳುವುದಕ್ಕೆ ನಿರ್ಬಂಧ ಇರುವುದರಿಂದ ಕಾರ್ಮಿಕರು ಇದ್ದಲ್ಲೇ ನಿಟ್ಟುಸಿರು ಬಿಡುತ್ತಿದ್ದಾರೆ. ನಮ್ಮವರನ್ನು ನಾವು ಯಾವಾಗ ನೋಡುವುದು ಎಂಬ ಭಾವನೆ ಅವರಿಂದ ವ್ಯಕ್ತವಾಗುತ್ತಿದೆ.

    ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಕಾರ್ಮಿಕರಿಗೆ ಸವಾಲು ವಾಕ್ಸಿನ್ ಡಿಪೋದಲ್ಲಿರುವ ಹೊರ ರಾಜ್ಯದ ಕಾರ್ಮಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸದ್ಯ ಸವಾಲಾಗಿದೆ. ಈ ಕಾರ್ಮಿಕರು ಯಾವತ್ತೂ ಗುಂಪು, ಗುಂಪಾಗಿ ಕಾಲ ಕಳೆಯುತ್ತಿದ್ದರು. ಕರೊನಾ ವೈರಸ್ ಹಿನ್ನೆಲೆಯಲ್ಲಿ ಸದ್ಯ ಅಂತರ ಕಾಯ್ದುಕೊಳ್ಳಬೇಕೆಂಬ ತಜ್ಞರ ಸಲಹೆಗಳು ಇವರಿಗೆ ಕೊಂಚ ಅಡ್ಡಿಯಾಗಿವೆ.

    ಸ್ಮಾರ್ಟ್‌ಸಿಟಿ ಕೆಲಸ ಮಾಡುತ್ತಿದ್ದ ವಿವಿಧ ರಾಜ್ಯಗಳ ಕಾರ್ಮಿಕರು ಹಲವು ದಿನಗಳಿಂದ ವ್ಯಾಕ್ಸಿನ್ ಡಿಪೋ ಆವರಣದ ಶೆಡ್‌ನಲ್ಲೇ ಉಳಿದಿದ್ದಾರೆ. ಅವರಿಗೆ ಊಟಕ್ಕೆ ತೊಂದರೆಯಾಗಿದೆ. ಸ್ಥಳೀಯರು ಸೇರಿ ಕೈಲಾದಷ್ಟು ಸಹಾಯ ಮಾಡಿದ್ದೇವೆ. ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ.
    | ಶಶಿಧರ ದಿವಟೆ ಸ್ಥಳೀಯ ನಿವಾಸಿ (ಸಿವಿಲ್ ಇಂಜಿನಿಯರ್)

    ಪಾಲಿಕೆಯಿಂದ ಬೆಳಗ್ಗೆ ಕಾರ್ಮಿಕರಿಗೆ ತರಕಾರಿ ಪೂರೈಸಲಾಗಿದೆ. ಅಗತ್ಯ ಬಿದ್ದರೆ ಆಹಾರವನ್ನೂ ನೀಡುತ್ತೇವೆ. ವ್ಯಾಕ್ಸಿನ್ ಡಿಪೋದಲ್ಲಿರುವ ಸರ್ಕಾರಿ ಕಟ್ಟಡದಲ್ಲಿ ಅವರಿಗೆ ತಾತ್ಕಾಲಿಕವಾಗಿ ಇರುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೇರೆ ರಾಜ್ಯದವರಿಗೆ ನಮ್ಮ ರಾಜ್ಯದಲ್ಲಿ ಪಡಿತರ ನೀಡುವುದಕ್ಕೆ ಅವಕಾಶ ಇದೆಯೇ ಎನ್ನುವುದು ನಮಗೆ ಗೊತ್ತಿಲ್ಲ.
    ಸ್ಮಾರ್ಟ್‌ಸಿಟಿ ಕಂಪನಿಯಿಂದ ಆಹಾರ ಸಾಮಗ್ರಿ ವಿತರಿಸಲಾಗಿದೆ.
    | ಕೆ.ಎಚ್.ಜಗದೀಶ ಮಹಾನಗರ ಪಾಲಿಕೆ ಆಯುಕ್ತ, ಬೆಳಗಾವಿ

    ನಮ್ಮ ಊರಿಗೆ ಹೋಗಬೇಕು ಅನಿಸುತ್ತದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ವಾಹನ ವ್ಯವಸ್ಥೆ ಇಲ್ಲ. ಹೀಗಾಗಿ ಲಾಕ್‌ಡೌನ್ ಘೋಷಣೆಯಾದಾಗಿನಿಂದ ಕುಟುಂಬದಿಂದ ದೂರ ಉಳಿದು ಬದುಕುತ್ತಿದ್ದೇನೆ.
    | ಸಂಗು ಕುಡುಗಿ ವಿಜಯಪುರದ ಕಾರ್ಮಿಕ

    | ಜಗದೀಶ ಹೊಂಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts