More

    ಖಾಸಗಿ ಭೂಮಿಯಲ್ಲಿ ಮರ ಸರ್ವೇ

    ಮಡಿಕೇರಿ:

    ಪಶ್ಚಿಮಘಟ್ಟಗಳ ಜನವಸತಿ ಪ್ರದೇಶದ ಮೇಲೆ ಕಸ್ತೂರಿರಂಗನ್ ವರದಿಯ ತೂಗುಕತ್ತಿ ನೇತಾಡುತ್ತಿರುವ ಬೆನ್ನಲ್ಲೇ ಅನ್‌ರೆಡೀಮ್ ಜಾಗಗಳಲ್ಲಿ ಮರಗಳ ಸರ್ವೇ ಕಾರ್ಯ ನಡೆಸುತ್ತಿರುವ ಅರಣ್ಯ ಇಲಾಖೆ ನಡೆ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೊಡಗಿನ ಹಲವೆಡೆ ಈಗಾಗಲೇ ಇಂಥ ಸರ್ವೇ ಕಾರ್ಯ ಮುಗಿದಿದ್ದು, ಮಡಿಕೇರಿ ವಿಭಾಗದಲ್ಲಿ ಈಗ ಕೈಗೆತ್ತಿಕೊಳ್ಳಲಾಗಿದೆ. ಆದರೆ ಈ ಸರ್ವೆಗೆ ಬೆಳೆಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕ ಅರಣ್ಯ ನಿಯಮಾವಳಿ ೧೯೬೯ರ ನಿಯಮ ೧೩೩ರ ಪ್ರಕಾರ ಖಾಸಗಿ ಭೂಮಿಯಲ್ಲಿನ ಸರ್ಕಾರಿ ಮರಗಳನ್ನು ದಾಖಲು ಮಾಡಿ ಪಟ್ಟಿ ಮಾಡುವಂತೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜನವರಿ ತಿಂಗಳಲ್ಲೇ ಆದೇಶ ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುವಂತೆ ಈ ಆದೇಶ ಹೊರಡಿಸಲಾಗಿತ್ತು. ಬಹುತೇಕ ಕಡೆಗಳಲ್ಲಿ ಸರ್ವೆ ಕಾರ್ಯ ಮುಗಿಸಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗಿದೆ.

    ಬೇಸಿಗೆ ಕಾಲವಾಗಿದ್ದರಿಂದ ಕೊಡಗಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾಳ್ಗಿಚ್ಚು ನಿಯಂತ್ರಣ, ಆನೆ ಕಾರ್ಯಾಚರಣೆ, ಹುಲಿ ಕಾರ್ಯಾಚರಣೆ ಮತ್ತಿತರ ತುರ್ತು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಕೇಂದ್ರ ಕಚೇರಿ ಆದೇಶದಂತೆ ಖಾಸಗಿ ಜಾಗದಲ್ಲಿನ ಸರ್ಕಾರಿ ಮರಗಳ ಸರ್ವೇ ಕಾರ್ಯ ನಿಗದಿತ ಅವಧಿಯಲ್ಲಿ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಈಗ ವರದಿ ಸಲ್ಲಿಸಲು ನಿಗದಿಯಾಗಿದ್ದ ಗಡುವು ಮುಗಿಯುತ್ತಾ ಬಂದಿರುವ ಕಾರಣ ಜಿಲ್ಲೆಯಾದ್ಯಂತ ತರಾತುರಿಯಲ್ಲಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ.

    ವಿರಾಜಪೇಟೆ ವಿಭಾಗದ ಬಹುತೇಕ ಕಡೆಗಳಲ್ಲಿ ಈ ಸರ್ವೆ ನಡೆಸಿ ಮರಗಳಿಗೆ ಸಂಖ್ಯೆ ನೀಡಲಾಗಿದೆ. ಇದೀಗ ವಾಲ್ನೂರು, ಭಾಗಮಂಡಲ, ಚೆಟ್ಟಿಮಾನಿ, ಮದೆನಾಡು ಸೇರಿದಂತೆ ಮಡಿಕೇರಿ ವಿಭಾಗದಲ್ಲಿ ಸರ್ವೆ ಕಾರ್ಯ ಭರದಿಂದ ನಡೆಸಲಾಗುತ್ತಿದೆ. ಮಡಿಕೇರಿ ತಾಲೂಕಿನ ಬಹುತೇಕ ಭಾಗಗಳು ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪವಾಗಿದ್ದು, ಈ ಭಾಗದಲ್ಲಿ ಈಗ ನಡೆಯುತ್ತಿರುವ ಮರಗಳ ಸರ್ವೇ ಕಾರ್ಯ ಸ್ಥಳೀಯರ ಆತಂಕ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.

    ಗುರುವಾರ ವಾಲ್ನೂರು ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಜಮ್ಮಾ ಭೂಮಿ, ಸಾಗು ಬಾಣೆಗಳ ಜಾಗದಲ್ಲಿ ಬೆಲೆಬಾಳುವ ಮರಗಳ ಸರ್ವೇ ಕಾರ್ಯ ನಡೆಸುವಾಗ ಬೆಳೆಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಜಾಗಕ್ಕೆ ತೋಟದ ಮಾಲೀಕರ ಅನುಮತಿ ಪಡೆಯದೇ ನುಗ್ಗಿರುವ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯವೈಖರಿಗೂ ಆಕ್ರೋಶ ವ್ಯಕ್ತವಾಗಿದೆ. ಸರ್ವೇ ನಡೆಸುವುದಕ್ಕೂ ಮೊದಲು ನೊಟೀಸ್ ಕೊಡುವುದು ಸೇರಿದಂತೆ ಪ್ರಾಥಮಿಕ ಕ್ರಮಗಳನ್ನು ಪಾಲಿಸದ ಇಲಾಖೆ ಸಿಬ್ಬಂದಿಯನ್ನು ಸರ್ವೇ ನಡೆಸುವುದಕ್ಕೂ ಬಿಡದೆ ವಾಪಸ್ ಕಳಿಸಲಾಗಿದೆ.

    ಹಿರಿಯ ಅಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಖಾಸಗಿ ತೋಟಗಳಿಗೆ ಭೇಟಿ ನೀಡುವ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿ ಬೆಳೆಸದಿರುವ ಬೀಟೆ ಸೇರಿದಂತೆ ಬೆಲೆಬಾಳುವ ವಿವಿಧ ರೀತಿಯ ಮರಗಳನ್ನು ಗುರುತಿಸಿ ಅದಕ್ಕೆ ಸಂಖ್ಯೆ ಕೊಡುತ್ತಿದ್ದಾರೆ. ಆದರೆ ಇಲಾಖೆ ಸಿಬ್ಬಂದಿಯ ಈ ಕ್ರಮವನ್ನು ಬೆಳೆಗಾರರು ವಿರೋಧಿಸುತ್ತಿದ್ದಾರೆ. ಈ ಬೆಲೆ ಬಾಳುವ ಮರಗಳನ್ನು ಹಿರಿಯರು ನೂರಾರು ವರ್ಷಗಳಿಂದ ಸಂರಕ್ಷಿಸಿಕೊಂಡು ಬಂದಿದ್ದಾರೆ. ಇದೀಗ ಅರಣ್ಯ ಅಧಿಕಾರಿಗಳು ಮರಗಳಿಗೆ ಸಂಖ್ಯೆಗಳನ್ನು ಹಾಕುತ್ತಿದ್ದಾರೆ, ಮುಂದೆ ಕತ್ತರಿಸಿ ಹರಾಜು ಹಾಕುವ ಆತಂಕವಿದೆ ಎನ್ನುವು ಬೆಳೆಗಾರರ ಅಭಿಪ್ರಾಯ.

    ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಮರಗಳ ಸರ್ವೇಗೆ ಅವಕಾಶ ಕೊಡುವುದಿಲ್ಲ ಎಂದು ವಾಲ್ನೂರು ಭಾಗದ ಬೆಳೆಗಾರರು ಎಚ್ಚರಿಸಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ. ಅರಣ್ಯ ಇಲಾಖೆ ಕಾರ್ಯಾಚರಣೆ ಬಗ್ಗೆ ಹಾಲಿ ಮತ್ತು ಮಾಜಿ ಶಾಸಕರುಗಳ ಗಮನ ಸೆಳೆಯಲಾಗುವುದು. ಇದಕ್ಕೂ ಮೀರಿ ಮರಗಳಿಗೆ ನಂಬರ್ ಹಾಕಲು ಮುಂದಾದರೆ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರುವ ಬೆಳೆಗಾರರು ಅರಣ್ಯ ಇಲಾಖೆ ವಿರುದ್ಧ ಹೋರಾಟ ಸಂಘಟಿಸಲಿದ್ದಾರೆ ಎನ್ನುವ ಸಂದೇಶವನ್ನೂ ರವಾನಿಸಲಾಗಿದೆ.

    ಇತ್ತೀಚೆಗೆ ವನ್ಯಜೀವಿಗಳ ವಸ್ತುಗಳನ್ನು ಅರಣ್ಯ ಇಲಾಖೆಯ ಸ್ವಾಧೀನಕ್ಕೆ ಒಪ್ಪಿಸುವಂತೆ ಆದೇಶ ನೀಡುವ ಮೂಲಕ ಕೊಡಗಿನ ಜನರಲ್ಲಿ ಆತಂಕ ಮತ್ತು ಗೊಂದಲದ ವಾತಾವರಣ ಸೃಷ್ಟಿಸಲಾಗಿದೆ. ಇದೀಗ ರಾಜ್ಯ ಸರ್ಕಾರ ತೋಟಗಳಲ್ಲಿರುವ ಬೆಲೆ ಬಾಳುವ ಮರಗಳ ಮೇಲೆ ಕಣ್ಣು ಹಾಕಿ ಸರ್ವೇ ಕಾರ್ಯಕ್ಕೆ ಇಳಿದಿರುವುದು ಹಲವು ಸಂಶಯಗಳನ್ನು ಮೂಡಿಸಿದೆ ಎನ್ನುತ್ತಾರೆ ಬೆಳೆಗಾರರು.

    ಯಾವುದೇ ಕಾರಣಕ್ಕೂ ನಮ್ಮ ಹಕ್ಕು ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ನಾವು ನೆಟ್ಟು ಬೆಳೆಸಿದ ಮರವನ್ನು ತುಂಡರಿಸಿ ಅರಣ್ಯ ಇಲಾಖೆ ಡಿಪೋದಲ್ಲಿ ಹಾಕಿ ಆ ಮೂಲಕ ಸರ್ಕಾರದ ಖಜಾನೆ ತುಂಬಿಸುವ ಪ್ರಯತ್ನಕ್ಕೆ ನಮ್ಮ ವಿರೋಧ ಇದೆ. ಎನ್ನುತ್ತಾರೆ ಬೆಳೆಗಾರರು. ಹೀಗೆ ಬೆಳೆಗಾರರ ವಿರೋಧದ ಕಾರಣದಿಂದ ಬರಿಗೈಯಲ್ಲಿ ಮರಳಿರುವ ಅರಣ್ಯ ಇಲಾಖೆ ಸಿಬ್ಬಂದಿ ನಡೆದಿರುವ ಘಟನೆಯ ಮಾಹಿತಿಯನ್ನು ತಮ್ಮ ಮೇಲಾಧಿಕಾರಿಗಳಿಗೆ ತಲುಪಿಸಿದ್ದಾರೆ.
    ಕಸ್ತೂರಿರಂಗನ್ ವರದಿಯ ಗುಮ್ಮವನ್ನು ಎದುರಿಗೆ ಇಟ್ಟುಕೊಂಡು ಆತಂಕದಿಂದ ದಿನ ಕಳೆಯುತ್ತಿರುವ ಕೊಡಗಿನ ಜನರಿಗೆ ಅರಣ್ಯ ಇಲಾಖೆಯ ಏಕಾಏಕಿ ಈ ನಡೆ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಜಾಗದಲ್ಲಿನ ಸರ್ಕಾರಿ ಮರಗಳ ಸರ್ವೇ ಕಾರ್ಯಕ್ಕೆ ಏನು ಕಾರಣ ಎನ್ನುವುದನ್ನು ಬೆಳೆಗಾರರ ಮುಂದಿಟ್ಟು ಆತಂಕ ನಿವಾರಿಸುವ ಕೆಲಸ ಮೊದಲು ಮಾಡಬೇಕಿದೆ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.

    ಖಾಸಗಿ ಭೂಮಿಯಲ್ಲಿ ಬೆಳೆದಿರುವ ಸರ್ಕಾರಿ ಮರಗಳನ್ನು ದಾಖಲೆ ಮಾಡಿ ಪಟ್ಟಿ ಮಾಡಲು ಕೇಂದ್ರ ಕಚೇರಿಯಿಂದ ಜನವರಿಯಲ್ಲಿ ನಮಗೆ ಸುತ್ತೋಲೆ ಬಂದಿದೆ. ಇದು ಕೊಡಗಿಗೆ ಮಾತ್ರ ಸೀಮಿತ ಅಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಈ ಆದೇಶ ಇದೆ. ಹಾಗಾಗಿ ನಮ್ಮ ಸಿಬ್ಬಂದಿ ದಾಖಲಾತಿ ಮಾಡಲು ಹೋಗಿದ್ದಾರೆ. ಇದು ಕೆಲವು ಕಡೆ ಈಗಾಗಲೇ ಮಾಡಲಾಗಿದೆ ಮತ್ತೆ ಕೆಲವು ಕಡೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಸ್ತು ಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ವರದಿ ಮಾಡಲಾಗುವುದು. ಖಾಸಗಿ ಜಾಗಕ್ಕೆ ತೆರಳುವ ಮೊದಲು ಸಂಬಂಧಿಸಿದ ಜಾಗದ ಮಾಲೀಕರ ಒಪ್ಪಿಗೆ ತೆಗೆದುಕೊಳ್ಳಬೇಕು. ಸರ್ಕಾರದ ಆದೇಶ ಪ್ರತಿ ತೋರಿಸುವಂತೆಯೂ ನಮ್ಮ ಸಿಬ್ಬಂದಿಗೆ ಸೂಚಿಸಲಾಗಿದೆ.
    ಭಾಸ್ಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ

    ನಮ್ಮ ಜಮ್ಮಾ ಭೂಮಿಯಲ್ಲಿರುವ ಮರಗಳ ಸರ್ವೇ ಮಾಡಲು ಏಕಾಏಕಿ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದರೆ ಅದನ್ನು ಹೇಗೆ ಒಪ್ಪಿಕೊಳ್ಳಲು ಆಗುತ್ತದೆ. ಈ ಸರ್ವೇ ಮರಗಳ ರಕ್ಷಣೆ ಮಾಡಲು ಮಾಡುತ್ತಿದ್ದಾರೋ ಅಥವಾ ಕಡಿಯಲು ಮಾಡುತ್ತಾರೋ ಎನ್ನುವುದೂ ಗೊತ್ತಿಲ್ಲ. ಈ ಸರ್ವೇ ಬಗ್ಗೆ ನಮಗೆ ನೊಟೀಸ್ ಕೊಟ್ಟಿಲ್ಲ, ನಮ್ಮಲ್ಲಿ ಸಭೆಯನ್ನೂ ಮಾಡಿಲ್ಲ, ಸರ್ಕಾರದ ಆದೇಶವನ್ನೂ ತೋರಿಸಿಲ್ಲ. ಈ ವಿಷಯವನ್ನು ನ್ಯಾಯಬದ್ಧವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತರಲಾಗಿದೆ.
    ಭುವನೇಂದ್ರ, ಗ್ರಾ.ಪಂ. ಸದಸ್ಯ, ವಾಲ್ನೂರು ಗ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts