More

    ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತತ್ವಾರ

    370ಕ್ಕೂ ಅಧಿಕ ಗ್ರಾಮಗಳಲ್ಲಿ ಸಮಸ್ಯೆ ಉಲ್ಬಣ? | ಜಿಲ್ಲಾಡಳಿತದಿಂದಲೇ ಪಟ್ಟಿ ಸಿದ್ಧ

    ಗಂಗಾಧರ್ ಬೈರಾಪಟ್ಟಣ

    ರಾಮನಗರ ಜಿಲ್ಲೆಯಲ್ಲಿ ಬೇಸಿಗೆ ಅಬ್ಬರಿಸುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗುವ 370ಕ್ಕೂ ಹೆಚ್ಚು ಗ್ರಾಮಗಳ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ಧಪಡಿಸಿಕೊಂಡಿದೆ.

    ಈಗಾಗಲೇ ಸುಡು ಬೇಸಿಗೆಗೆ ತತ್ತರಿಸುವ ರಾಮನಗರ ಜಿಲ್ಲೆಯಲ್ಲಿ ಈಗ ಕುಡಿಯುವ ನೀರಿನ ಅಭಾವವೂ ಹೆಚ್ಚಾಗಿದೆ. ನಗರದಲ್ಲಿ ಕುಡಿಯುವ ನೀರು ಪೂರೈಕೆಗೆ ಹರ ಸಾಹಸ ಪಡುತ್ತಿದ್ದರೆ, ಗ್ರಾಮೀಣ ಭಾಗದಲ್ಲಿಯೂ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಮೇ 2ರ ಅಂತ್ಯಕ್ಕೆ ಜಿಲ್ಲೆಯ 120 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಇದು ಮುಂದಿನ ದಿನಗಳಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ.

    ಮಂಚನಬೆಲೆ ಜಲಾಶಯ ಹೊರತು ಪಡಿಸಿ, ಕುಡಿಯುವ ನೀರಿಗಾಗಿ ಬಳಕೆಯಾಗುವಂತಹ ಯಾವುದೇ ಅಣೆಕಟ್ಟು-ಜಲಾಶಯ ಜಿಲ್ಲೆಯಲ್ಲಿ ಇಲ್ಲದಿರುವುದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಬೇಸಿಗೆ ಕಾಡಲು ಆರಂಭಿಸಿದೆ.

    ತಕ್ಷಣಕ್ಕೆ ಟ್ಯಾಂಕರ್ ನೀರು:

    ಜಿಲ್ಲಾಡಳಿತ ಸಿದ್ಧಪಡಿಸಿರುವ ವರದಿಯಂತೆ ಪ್ರಸ್ತುತ 120 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಳೆದ ಮಾರ್ಚ್​ನಲ್ಲಿ 28 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಬಿಸಿಲ ತಾಪ ಹೆಚ್ಚಾಗುತ್ತಿದ್ದಂತೆ ನೀರಿನ ಸಮಸ್ಯೆ ಇರುವ ಹಳ್ಳಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

    ಪ್ರಸ್ತುತ ಜಿಲ್ಲೆಯಲ್ಲಿ ಚನ್ನಪಟ್ಟಣ ತಾಲೂಕು ಹೊರತುಪಡಿಸಿ, ಕನಕಪುರ ತಾಲೂಕಿನ 7, ಹಾರೋಹಳ್ಳಿಯ 7, ಮಾಗಡಿಯ 19 ಗ್ರಾಮಗಳಲ್ಲಿ ಹಾಗೂ ರಾಮನಗರ ತಾಲೂಕಿನ 10 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ 43 ಟ್ಯಾಂಕರ್​ಗಳ ಮೂಲಕ ಪ್ರತಿದಿನ 122 ಟ್ರಿಪ್​ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಇದಕ್ಕಾಗಿಯೇ ಜಿಲ್ಲಾಡಳಿತ ಪ್ರತಿ ತಾಲೂಕಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಿದೆ.

    ಸಮಸ್ಯೆ ಹೆಚ್ಚಳದ ಆತಂಕ:

    ಪ್ರಸ್ತುತ ಸನ್ನಿವೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆ ಹೆಚ್ಚಿದೆ. ಜಿಲ್ಲೆಯಲ್ಲಿ ಶುಕ್ರವಾರ ಅಲ್ಪ ಪ್ರಮಾಣದಲ್ಲಿ ಮಳೆ ಬಿದ್ದಿರುವುದು ಬಿಟ್ಟರೆ, ನೀರಿನ ಸಮಸ್ಯೆಗೆ ಪರಿಹಾರ ನೀಡುವಷ್ಟು ಮಳೆ ಸುರಿದಿಲ್ಲ. ಇದರಿಂದ ಉತ್ತಮ ಮಳೆ ಆಗುವವರೆಗೂ ಜಿಲ್ಲೆಯಲ್ಲಿ ನೀರಿನ ಕೊರತೆ ಎದುರಿಸುವ ಗ್ರಾಮಗಳ ಅಂದಾಜನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಈಗಾಗಲೇ ಸುಮಾರು 373 ಹಳ್ಳಿಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.

    ಇದರಲ್ಲಿ ಅತಿ ಹೆಚ್ಚಿನ ಪಾಲು ಮಾಗಡಿ ತಾಲೂಕಿನದ್ದೇ ಆಗಿದೆ. ಈ ತಾಲೂಕಿನ ಒಟ್ಟು 154 ಹಳ್ಳಿಗಳಲ್ಲಿ ಸಮಸ್ಯೆ ಎದುರಾಗಬಹುದು ಎಂದು ಪಟ್ಟಿ ಮಾಡಿಕೊಳ್ಳಲಾಗಿದೆ. ಕನಕಪುರ ತಾಲೂಕಿನ 77, ರಾಮನಗರದ 76, ಚನ್ನಪಟ್ಟಣದ 28 ಮತ್ತು ಹಾರೋಹಳ್ಳಿ ತಾಲೂಕಿನ 38 ಹಳ್ಳಿಗಳಲ್ಲಿ ಸಮಸ್ಯೆ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ.

    ಎಲ್ಲೆಲ್ಲಿ ಸಮಸ್ಯೆ

    ಗ್ರಾಮೀಣ ಭಾಗದಲ್ಲಿ ಪ್ರಸ್ತುತ 120 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ರಾಮನಗರ ತಾಲೂಕಿನ ಬಿಡದಿ, ಬನ್ನಿಕುಪ್ಪೆ, ದೊಡ್ಡಗಂಗವಾಡಿ, ಲಕ್ಷ್ಮೀಪುರ, ವಿಭೂತಿಕೆರೆ ಮತ್ತು ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿ, ಕನಕಪುರ ತಾಲೂಕಿನ ಗೊಲ್ಲಹಳ್ಳಿ, ಹೊನ್ನಿಗನಹಳ್ಳಿ, ಹೊಸದುರ್ಗ, ಕಬ್ಬಾಳು, ಕೊಳಗೊಂಡನಹಳ್ಳಿ ಸೇರಿ 15 ಗ್ರಾಪಂಗಳು, ಹಾರೋಹಳ್ಳಿಯ ಕೊಟ್ಟಗಾಳು, ಬನವಾಸಿ, ಕಗ್ಗಲಹಳ್ಳಿ, ಚೀಲೂರು ಮತ್ತು ಯಲಚವಾಡಿ ಸೇರಿ 8 ಗ್ರಾಪಂ ವ್ಯಾಪ್ತಿ.

    ಮಾಗಡಿಯ ನೇತೇನಹಳ್ಳಿ, ತಗ್ಗೀಕುಪ್ಪೆ, ಕಲ್ಯಾ ಶ್ರೀಗಿರಿಪುರ, ಹಂಚಿಕುಪ್ಪೆ, ಬಾಚೇನಹಟ್ಟಿ, ಬೆಳಗುಂಬ, ಮೋಟಗೊಂಡನಹಳ್ಳಿ, ತಿಪ್ಪಸಂದ್ರ ಸೇರಿ 18 ಗ್ರಾಪಂಗಳಲ್ಲಿ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್ ಮತ್ತು ಖಾಸಗಿ ಬೋರ್​ವೆಲ್​ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

    ಬೋರ್​ವೆಲ್​ಗಳಲ್ಲೂ ನೀರಿಲ್ಲ ಸದ್ಯಕ್ಕೆ ನಗರ ಪ್ರದೇಶದ ನೀರಿನ ಸಮಸ್ಯೆ ಪರಿಹಾರಕ್ಕೆ ಗ್ರಾಮೀಣ ಭಾಗದ ಬೋರ್​ವೆಲ್​ಗಳು ಸಹಕಾರಿಯಾಗಿವೆ. ಅದೇರೀತಿ ಗ್ರಾಮೀಣ ಭಾಗದಲ್ಲಿಯೂ ಕೆಲವು ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು, ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಕೆರೆ ಕಟ್ಟೆಗಳು ಖಾಲಿಯಾಗಿರುವ ಕಾರಣ ಕೊಳವೆ ಬಾವಿಗಳು ಸಹ ಬತ್ತಿ ಹೋಗುತ್ತಿವೆ. 78 ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು, ಸಮಸ್ಯೆ ಇರುವ ಸುಮಾರು 77 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಇವು ಯಾವಾಗ ಬಂದ್ ಆಗಲಿವೆಯೋ ಎನ್ನುವ ಆತಂಕ ಎದುರಾಗಿದೆ.

    ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ದೂರಿರುವ ಹಿನ್ನೆಲೆಯಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಹೊಸ ಬೋರ್​ವೆಲ್ ಕೊರೆಯುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಖಾಸಗಿ ಬೋರ್ ವೆಲ್ ಮಾಲೀಕರಿಂದ ಅಗತ್ಯ ಇರುವ ಕಡೆಗಳಲ್ಲಿ ಒಪ್ಪಿಗೆ ಪತ್ರವನ್ನು ಸಹ ಪಡೆದುಕೊಳ್ಳಲಾಗಿದ್ದು, ಎಲ್ಲಿಯೂ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಲಾಗಿದೆ.  

    ದಿಗ್ವಿಜಯ್ ಬೋಡ್ಕೆ,  | ಸಿಇಓ ಜಿಪಂ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts