More

    ಕಿರು ಸೇತುವೆ ಕಾಮಗಾರಿ ಅಪೂರ್ಣ

    ಮಡಿಕೇರಿ
    ಜೂನ್ ಮೊದಲ ವಾರದಲ್ಲಿ ಕೊಡಗಿನಲ್ಲೂ ಮುಂಗಾರು ಮಳೆ ಶುರುವಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಈ ಮಧ್ಯೆ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಒಂದಾಗಿರುವ ಅಯ್ಯಂಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಲೆಮಾನಿ ಭಾಗದ ಜನರಲ್ಲಿ ಆತಂಕ ಕಾಣಿಸಿಕೊಂಡಿದೆ. ಇಲ್ಲಿಯವರನ್ನು ಹೊರಜಗತ್ತಿಗೆ ಸಂಪರ್ಕಿಸುವ ಕಿರು ಸೇತುವೆ ಕಾಮಗಾರಿ ಅಪೂರ್ಣವಾಗಿರುವುದೇ ಇದಕ್ಕೆ ಕಾರಣ.
    ಮಡಿಕೇರಿ ತಾಲೂಕು ಭಾಗಮಂಡಲ ಕೊಡಗಿನಲ್ಲೇ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಈ ವ್ಯಾಪ್ತಿಯಲ್ಲಿ ಮಳೆ ಆರಂಭವಾದರೆ ಸೆಪ್ಟೆಂಬರ್ ಕೊನೆಯ ತನಕವೂ ಸುರಿಯುತ್ತಲೇ ಇರುತ್ತದೆ. ಜೀವನದಿ ಕಾವೇರಿ ಮತ್ತು ಈ ಭಾಗದ ಸಣ್ಣ ಪುಟ್ಟ ತೊರೆಗಳೆಲ್ಲಾ ತುಂಬಿ ಹರಿಯುವ ದೃಶ್ಯ ಕಂಡುಬರುತ್ತಿರುತ್ತದೆ. ಹಾಗಾಗಿ ಇಲ್ಲಿಯ ಗ್ರಾಮೀಣ ಪ್ರದೇಶಗಳ ಜನರು ಹೊರಜಗತ್ತಿನ ಜತೆಗೆ ಮಳೆಗಾಲದಲ್ಲಿ ಸಂಪರ್ಕ ಕಳೆದುಕೊಳ್ಳಬಾರದು ಎನ್ನುವ ಕಾರಣದ ಆಯಕಟ್ಟಿನ ಜಾಗದಲೆಲ್ಲಾ ಚಿಕ್ಕಪುಟ್ಟ ಸಂಪರ್ಕ ಸೇತುವೆ, ಮೋರಿಗಳನ್ನು ನಿರ್ಮಿಸಲಾಗಿರುತ್ತದೆ. ಆದರೆ ತಲೆಮಾನಿ ಎಂಬಲ್ಲಿ ನಿರ್ಮಿಸಿರುವ ಕಿರು ಸೇತುವೆ ಸ್ಥಳೀಯರ ತಲೆನೋವಿಗೆ ಕಾರಣವಾಗಿದೆ.
    ಅಯ್ಯಂಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಸಣ್ಣಪುಲಿಕೋಟು ಗ್ರಾಮದ ತಲೆಮಾನಿ ಎಂಬಲ್ಲಿ ೨೦೨೨-೨೩ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ೨೦ ಲಕ್ಷ ರೂ. ವೆಚ್ಚದಲ್ಲಿ ಮೋರಿ ಮತ್ತು ತಡೆಗೋಡೆ ನಿರ್ಮಿಸಲಾಗಿದೆ. ಈ ಕಾಮಗಾರಿ ಮುಗಿದು ಸುಮಾರು ಒಂದೂವರೆ ವರ್ಷ ಕಳೆದರೂ ಮೋರಿ ಮತ್ತು ತಡೆಗೋಡೆ ನಡುವಿನ ಜಾಗಕ್ಕೆ ಮಣ್ಣು ತುಂಬಿಸಿಲ್ಲ. ಮಳೆಗಾಲದಲ್ಲಿ ಇದು ಅಪಾಯಕ್ಕೆ ಆಹ್ವಾನ ತಂದೊಡ್ಡುವಂತೆ ಇದ್ದು, ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದರೂ ಈತನಕ ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.
    ಈ ರಸ್ತೆ ಸಮೀಪದ ಗಿರಿಜನ ಹಾಡಿ, ಕೋರಂಗಾಲ ಮತ್ತು ಚೇರಂಗಾಲ ಗ್ರಾಮಕ್ಕೂ ಸಂಪರ್ಕ ಕಲ್ಪಿಸುತ್ತದೆ. ಶಾಲಾ ಮಕ್ಕಳು, ಕಚೇರಿಗೆ ತೆರಳುವರು, ಹತ್ತಿರದ ಪೇಟೆಗೆ ಹೋಗುವವರು.. ಹೀಗೆ ಪ್ರತಿದಿನವೂ ಇಲ್ಲಿ ಜನಸಂಚಾರ ಇರುತ್ತದೆ. ಸ್ಥಳೀಯರು ದನ-ಕರುಗಳನ್ನೂ ಇದೇ ದಾರಿಯಲ್ಲಿ ಮೇವಿಗಾಗಿ ಕರೆದುಕೊಂಡು ಹೋಗುತ್ತಾರೆ. ಮೋರಿ ಮತ್ತು ತಡೆಗೋಡೆ ಮಧ್ಯೆ ಮಣ್ಣು ತುಂಬಿಸದೇ ಬಿಟ್ಟಿರುವುದರಿಂದ ಸಾಮಾನ್ಯ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಮಳೆಗಾಲದಲ್ಲಿ ದೊಡ್ಡ ಮಟ್ಟದ ತೊಂದರೆ ಎದುರಾಗುವ ಆತಂಕ ಇದೆ.
    ಮಳೆ ಹೆಚ್ಚಾಗಿ ತೊರೆಯಲ್ಲಿ ನೀರಿನ ಮಟ್ಟ ಏರಿಕೆಯಾದರೆ ಈ ಭಾಗದ ಜನರ ಓಡಾಟಕ್ಕೆ ಸಮಸ್ಯೆ ಆಗಲಿದೆ. ಅನಾರೋಗ್ಯ ಸೇರಿದಂತೆ ತುರ್ತು ಅಗತ್ಯಗಳಿಗೆ ಹತ್ತಿರದ ಪಟ್ಟಣವನ್ನು ಸಂಪರ್ಕಿಸಲು ಕೂಡ ಕಷ್ಟವಾಗಲಿದೆ. ಮನೆ ಮಕ್ಕಳು ಶಾಲೆಗೆ ಹೋಗಿ ಮನೆಗೆ ಬರುವ ತನಕ ಪೋಷಕರು ಆತಂಕದಲ್ಲೇ ದಿನ ಕಳೆಯಬೇಕಾಗುವ ಪರಿಸ್ಥಿತಿ ನಿರ್ಮಾಣ ಆಗಲಿದೆ. ಹಾಗಾಗಿ ಇಲ್ಲಿ ಅಪೂರ್ಣವಾಗಿರುವ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸುವಂತೆ ಸಂಬಂಧಿಸಿದವರನ್ನು ಸ್ಥಳೀಯರು ಆಗ್ರಹಿಸಿದ್ದಾರೆ.

    ಈ ಹಿಂದಿನ ಮಳೆಗಾಲದಲ್ಲೂ ಇಲ್ಲಿ ಇದೇ ಪರಿಸ್ಥಿತಿ ಇತ್ತು. ಆದರೆ ಮಳೆಯ ಅಬ್ಬರ ಜಾಸ್ತಿ ಇಲ್ಲದ ಕಾರಣ ಹೇಳಿಕೊಳ್ಳುವಂತಹ ಸಮಸ್ಯೆ ಆಗಿರಲಿಲ್ಲ. ಆದರೆ ಈ ಬಾರಿ ಅದೇ ರೀತಿ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಹಾಗಾಗಿ ಈ ಮಳೆಗಾಲ ಶುರುವಾಗುವ ಮೊದಲು ಮೋರಿ ಮತ್ತು ತಡೆಗೋಡೆ ಮಧ್ಯೆ ಮಣ್ಣು ತುಂಬಿಸಿ ಸ್ಥಳೀಯರ ಆತಂಕ ದೂರ ಮಾಡಬೇಕಿದೆ. ಇನ್ನು ಒಂದು ತಿಂಗಳ ಒಳಗೆ ಈ ಕಾಮಗಾರಿ ಪೂರ್ಣಗೊಳಿಸದಿದ್ದರೆ ಸಂಬಂಧಿಸಿದ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ವಿಜಯವಾಣಿ ಮುಖಾಂತರ ಸ್ಥಳೀಯರು ಎಚ್ಚರಿಸಿದ್ದಾರೆ.

    ೨ ವರ್ಷಗಳ ಹಿಂದೆ ಇಲ್ಲಿ ಮೋರಿ ಮತ್ತು ತಡೆಗೋಡೆ ನಿರ್ಮಾಣ ಆಗಿದೆ. ಆದರೆ ಆ ಕಾಮಗಾರಿಯನ್ನು ಇನ್ನೂ ಪೂರ್ಣಗೊಳಿಸಿಲ್ಲ. ಇನ್ನೇನು ಮಳೆಗಾಲ ಹತ್ತಿರ ಬರುತ್ತಿದೆ. ಒಂದು ವೇಳೆ ಮಳೆ ಹೆಚ್ಚು ಬಂದು ತೊರೆಯಲ್ಲಿ ನೀರಿನ ಮಟ್ಟ ಏರಿದರೆ ನಾವು ಹೊರ ಜಗತ್ತಿನ ಜತೆ ಸಂಪರ್ಕ ಕಡಿದುಕೊಳ್ಳಬೇಕಾಗುತ್ತದೆ. ಸಂಬಂಧಿಸಿದವರು ಕೂಡಲೇ ಇಲ್ಲಿ ಕೆಲಸ ಪೂರ್ಣಗೊಳಿಸಬೇಕು.
    ಯೋಗೇಶ್, ತಲೆಮಾನಿ ನಿವಾಸಿ

    ಈ ವಿಷಯ ಈಗ ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ಅಲ್ಲಿ ಮಣ್ಣು ತುಂಬಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಗ್ರಾಮಸ್ಥರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಮಳೆಗಾಲಕ್ಕೂ ಮೊದಲು ರಸ್ತೆ ಸಂಪರ್ಕ ಸರಿಪಡಿಸಲಾಗುವುದು. ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು.
    ಕುಮಾರಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ, ಸಣ್ಣ ನೀರಾವರಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts