More

    ಅಪರಾಧ ಪತ್ತೆಗೆ ಸ್ಮಾರ್ಟ್ ತಂತ್ರಜ್ಞಾನ ಬಳಕೆ

    ದಾವಣಗೆರೆ : ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್ ಸಹಯೋಗದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕ್ಯಾಮೆರಾಗಳ ಸಹಾಯದಿಂದ ಕಳೆದ ಮಾರ್ಚ್‌ನಿಂದ ಇಲ್ಲಿಯ ವರೆಗೆ ಜಿಲ್ಲೆಯಲ್ಲಿ 123 ಪೊಲೀಸ್ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
     ಅವುಗಳಲ್ಲಿ 250 ಗ್ರಾಂ ಚಿನ್ನ, 48 ಕೆಜಿ ಬೆಳ್ಳಿ, 72 ಬೈಕ್ ವಶಪಡಿಸಿಕೊಳ್ಳಲಾಗಿದೆ. 1 ಕೊಲೆ, 22 ಅಪಘಾತ, 7 ನಕಲಿ ನಂಬರ್ ಪ್ಲೇಟ್ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
     ಸ್ಮಾರ್ಟ್‌ಸಿಟಿ ಕಚೇರಿಯಲ್ಲಿರುವ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಕೇಂದ್ರದಲ್ಲಿ ಶನಿವಾರ, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಡಿಜಿಎಂ ಮಮತಾ ಈ ವಿವರಗಳನ್ನು ನೀಡಿದರು.
     ನಗರದ 23 ವೃತ್ತಗಳಲ್ಲಿ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ. ವಾಹನ ದಟ್ಟಣೆಗೆ ತಕ್ಕಂತೆ ಸಿಗ್ನಲ್‌ಗಳಲ್ಲಿ ಸಮಯ ನಿಗದಿ ಮಾಡಲಾಗಿದೆ. ಇದರ ಪರಿಣಾಮವಾಗಿ ಇಂಧನದ ಉಳಿತಾಯವೂ ಆಗುತ್ತಿದೆ ಎಂದು ತಿಳಿಸಿದರು.
     ಹಳೇ ಪಿಬಿ ರಸ್ತೆಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಈರುಳ್ಳಿ ಮಾರುಕಟ್ಟೆ ವರೆಗೆ 7 ಪ್ರಮುಖ ವೃತ್ತಗಳನ್ನು ದಾಟಿ ಹೋಗಲು ಈ ಮೊದಲು 14.46 ನಿಮಿಷ ಬೇಕಿತ್ತು. ಈಗ ಕೇವಲ 8.6 ನಿಮಿಷಗಳಲ್ಲಿ ಆ ಅಂತರವನ್ನು ಕ್ರಮಿಸಬಹುದು ಎಂದು ಹೇಳಿದರು.
     ನಗರ ಸರ್ವೇಕ್ಷಣೆ ಅಡಿಯಲ್ಲಿ 111 ಕಡೆಗಳಲ್ಲಿ 215 ಕ್ಯಾಮೆರಾ ಅಳವಡಿಸಲಾಗಿದೆ. ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅಡಿಯಲ್ಲಿ 11 ಕಡೆಗಳಲ್ಲಿ 45 ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಿಳಿಸಿದರು.
     ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಇ-ಚಲನ್ ವ್ಯವಸ್ಥೆ ಜಾರಿಗೆ ತರಲಾಗಿದೆ. 45170 ಪ್ರಕರಣಗಳ ಪೈಕಿ 1022 ಕೇಸ್‌ಗಳಲ್ಲಿ ದಂಡ ವಸೂಲಿ ಮಾಡಲಾಗಿದೆ. ದಂಡದ ಮೊತ್ತ ಪಾವತಿಗೆ ಅಂಚೆ ಕಚೇರಿಗಳಲ್ಲೂ ವ್ಯವಸ್ಥೆ ಮಾಡಲಾಗಿದೆ.
     ನಗರದ 20 ಕಡೆಗಳಲ್ಲಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. 15 ಡಿಜಿಟಲ್ ಬೋರ್ಡ್ ಅಳವಡಿಸಲಾಗಿದೆ. 2 ಡ್ರೋನ್‌ಗಳನ್ನು ಪೊಲೀಸ್ ಇಲಾಖೆಗೆ ನೀಡಲಾಗಿದೆ. ಡಿಜಿಟಲ್ ಟ್ವಿನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
     ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಅಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನಗಳು, ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು, ಶಾಲಾ ಬಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಸಾರ್ವಜನಿಕ ಸುರಕ್ಷತೆಗಾಗಿ ‘ಸುರಕ್ಷಾ ಆ್ಯಪ್’ ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ನಗರದಲ್ಲಿ ಪ್ರಿ ಪೇಡ್ ಆಟೋ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
     ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್, ಹೆಚ್ಚುವರಿ ಎಸ್ಪಿ ಜಿ. ಮಂಜುನಾಥ್, ಡಿವೈಎಸ್ಪಿಗಳಾದ ಮಲ್ಲೇಶ್ ದೊಡ್ಡಮನಿ, ಯಶವಂತ್, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ನಲವಾಗಲು ಮಂಜುನಾಥ, ಮಲ್ಲಮ್ಮ ಚೌಬೆ, ಇಮ್ರಾನ್ ಬೇಗ್, ಪಿಎಸ್‌ಐ ಶೈಲಜಾ ಇದ್ದರು.
     …
     
     * ಸಾರ್ವಜನಿಕರು ದೂರು ಸಲ್ಲಿಸಲು ಮೊಬೈಲ್ ಸಂಖ್ಯೆ: 9480803208
     * ಸ್ಮಾರ್ಟ್‌ಸಿಟಿ ಸಹಾಯವಾಣಿ: 1800 4256020
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts