More

    ರಾಜ್ಯದ ಅಡಕೆ ಬೆಳೆಗಾರರ ಮೇಲೆ ತೂಗುಕತ್ತಿ : ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಸರ್ಕಾರ ಒಲವು

    ಶಿರಸಿ : ರಾಜ್ಯದಲ್ಲಿ ತಂಬಾಕು ಉತ್ಪನ್ನಗಳ ನಿಷೇಧದ ಬಗ್ಗೆ ವಾರದೊಳಗೆ ಸುಗ್ರೀವಾಜ್ಞೆ ಹೊರಡಿಸುವುದಾಗಿ ರಾಜ್ಯಪಾಲ ವಜುಬಾಯಿ ವಾಲಾ ಅವರಿಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಿದ್ದು, ಅಡಕೆ ಭವಿಷ್ಯದ ಬಗ್ಗೆ ಬೆಳೆಗಾರರಲ್ಲಿ ತೀವ್ರ ಆತಂಕ ಎದುರಾಗಿದೆ.

    ತಂಬಾಕು ನಿಷೇಧದಿಂದ ರಾಜ್ಯದಲ್ಲಿಯೇ ಮಾರಾಟವಾಗುವ 2.25 ಲಕ್ಷ ಮೆಟ್ರಿಕ್ ಟನ್​ಗೂ ಹೆಚ್ಚಿನ ಅಡಕೆ ಮೇಲೆ ನೇರ ಪರಿಣಾಮ ಬೀರಲಿದೆ. ಇದರಿಂದ ಸರ್ಕಾರವೇ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಬರೆ ಎಳೆದಂತಾಗುತ್ತದೆ.
    | ರವೀಶ ಹೆಗಡೆ
    ಟಿಎಸ್​ಎಸ್ ಪ್ರಧಾನ ವ್ಯವಸ್ಥಾಪಕ

    ದೇಶದ ಕೃಷಿ ಆದಾಯದಲ್ಲಿ ಅಡಕೆಯ ಪಾಲು ಶೇ.8 ಇದೆ. ಈ ಪೈಕಿ ಶೇ.50 ಅನ್ನು ಕರ್ನಾಟಕವೇ ಪೂರೈಸುತ್ತದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳು ಸಾಂಪ್ರದಾಯಿಕವಾಗಿ ಅಡಕೆ ಬೆಳೆಯುವ ಪ್ರದೇಶಗಳಾಗಿವೆ. ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಾಸನ, ಕೊಡಗಿನಲ್ಲೂ ಪ್ರಮುಖ ಬೆಳೆಯಾಗಿ ಅಡಕೆ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಅಂದಾಜು 7-8 ಲಕ್ಷ ಅಡಕೆ ಬೆಳೆಗಾರರಿದ್ದು, ಒಟ್ಟಾರೆ 2,68,813 ಹೆಕ್ಟೇರ್​ನಲ್ಲಿ 4,25,853 ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗುತ್ತಿದೆ. ಅದರಲ್ಲಿ ಶೇ.70 ಅಡಕೆ ಪಾನ್​ವುಸಾಲಾ ಉತ್ಪನ್ನಗಳಿಗೆ ಮಾರಾಟವಾಗುತ್ತದೆ.

    ರಾಜ್ಯದ ಒಟ್ಟು ಅಡಕೆ ಉತ್ಪಾದನೆಯಲ್ಲಿ ಶೇ.60 ಚಾಲಿ ಹಾಗೂ ಶೇ.80 ರಾಶಿ ಅಡಕೆ ತಂಬಾಕು ಆಧಾರಿತ ಪಾನ್​ವುಸಾಲಾಕ್ಕೆ ಬಳಸಲಾಗುತ್ತಿದೆ. ಒಂದೊಮ್ಮೆ ಜಗಿಯುವ ತಂಬಾಕು ನಿಷೇಧವಾದರೆ ಹೊರ ರಾಜ್ಯಗಳಿಗೆ ರಫ್ತಾಗುವ ಅಡಕೆ ಹೊರತುಪಡಿಸಿ ರಾಜ್ಯದಲ್ಲೇ ಮಾರಾಟವಾಗುವ 2.25 ಲಕ್ಷ ಮೆಟ್ರಿಕ್ ಟನ್ ಅಡಕೆ ಭವಿಷ್ಯ ಅತಂತ್ರವಾಗಲಿದೆ ಎಂಬುದು ಮಾರುಕಟ್ಟೆ ತಜ್ಞರ ಲೆಕ್ಕಾಚಾರ.

    ಸದಾ ಅನಿಶ್ಚಿತತೆ: ಇತ್ತೀಚಿನ ಅಡಕೆ ಮಾರುಕಟ್ಟೆಯಲ್ಲಿ ರಾಶಿ ಅಡಕೆಗೆ ಅಂದಾಜು 36 ಸಾವಿರ ರೂ. ಹಾಗೂ ಚಾಲಿ ಅಡಕೆಗೆ 35 ಸಾವಿರ ರೂ. ಇದೆ. ತಂಬಾಕು ನಿಷೇಧ ಕಟ್ಟುನಿಟ್ಟಾಗಿ ಜಾರಿಯಾದಲ್ಲಿ ಸ್ಥಿರವಾಗಿದ್ದ ದರ ಏಕಾಏಕಿ ಇಳಿಕೆಯಾಗುವ ಸಾಧ್ಯತೆಯಿದೆ. ಸರ್ಕಾರದ ನಡೆಯಿಂದ ದರ ಏರಿಕೆ ನಿರೀಕ್ಷೆಯಲ್ಲಿ ದಾಸ್ತಾನಿಟ್ಟ ಅಡಕೆಯನ್ನು ತರಾತುರಿಯಲ್ಲಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು, ಮತ್ತೊಮ್ಮೆ ಬೆಳೆಗಾರರು ಅನಿಶ್ಚಿತತೆಯ ತೂಗುಗತ್ತಿಯಡಿ ಬರುವಂತಾಗಿದೆ.

    ಇನ್ನೊಮ್ಮೆ ಚರ್ಚಿಸಿ : ಸದ್ಯ ಉತ್ತರ ಕನ್ನಡ ಜಿಲ್ಲೆಯ ಕೃಷಿಕರ ಬದುಕಿಗೆ ಶಕ್ತಿ ಕೊಡುವ ಇನ್ನೊಂದು ಬೆಳೆಯಾದ ಕಾಳು ಮೆಣಸಿನ ದರ ಏರಿಕೆ ಕಾಣದೆ ವರ್ಷಗಳು ಕಳೆದಿವೆ. ಕ್ವಿಂಟಾಲ್​ಗೆ ಕೇವಲ 30 ಸಾವಿರ ರೂ. ಲಭಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅಡಕೆ ದರವೂ ಇಳಿದಲ್ಲಿ ಅದು ಕೃಷಿಕರ ಭವಿಷ್ಯಕ್ಕೆ ಕೊಡಲಿ ಪೆಟ್ಟಾಗಿದ್ದು, ತಂಬಾಕು ಉತ್ಪನ್ನಗಳ ನಿಷೇಧದ ಕುರಿತು ಸರ್ಕಾರ ಇನ್ನೊಮ್ಮೆ ಚರ್ಚೆ ನಡೆಸಬೇಕು ಎನ್ನುವುದು ಅಡಕೆ ಬೆಳೆಗಾರರ ಆಗ್ರಹವಾಗಿದೆ.

    ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 4.69 ಲಕ್ಷ ಕ್ವಿಂಟಾಲ್ ಅಡಕೆ ಬೆಳೆ ಉತ್ಪಾದನೆ ಆಗುತ್ತಿದ್ದು, ಅಂದಾಜು 3 ಲಕ್ಷ ಕ್ವಿಂ. ಅಡಕೆ ಪಾನ್ ಮಸಾಲಾ ತಯಾರಿಕೆ ಬಳಕೆಯಾಗುತ್ತದೆ. ತಂಬಾಕು ಉತ್ಪನ್ನಗಳು ನಿಷೇಧವಾದಲ್ಲಿ ಇವೆಲ್ಲ ಖರೀದಿ, ಬಳಕೆಗಳ ಮೇಲೆ ನೇರ ಪರಿಣಾಮ ಬೀರಲಿದೆ. ಲಕ್ಷಾಂತರ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಕಂಟಕವಾಗುವ ಜಗಿಯುವ ತಂಬಾಕು ನಿಷೇಧದ ಬಗ್ಗೆ ಸರ್ಕಾರ ಇನ್ನೊಮ್ಮೆ ಯೋಚಿಸುವುದು ಸೂಕ್ತ.
    – ಲಕ್ಷ್ಮೀನಾರಾಯಣ ಹೆಗಡೆ– ಮಾರುಕಟ್ಟೆ ತಜ್ಞ

    ‘ಛೋಟಾ ತೆಲಗಿ’ ಎಂಬ ಈ ಖತರ್ನಾಕ್ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದೇ ರೋಚಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts