More

    ಎಲೆಚುಕ್ಕೆ ಪೀಡಿತ ಅಡಕೆ ಬೆಳೆಗಾರರ ನೆರವಿಗೆ ಬನ್ನಿ; ಒಂದು ಪ್ಯಾಕೇಟ್ ಔಷಧ ವಿತರಣೆ ಕಣ್ಣೊರೆಸುವ ತಂತ್ರ: ಬೇಳೂರು ಗೋಪಾಲಕೃಷ್ಣ

    ಕಾರ್ಗಲ್: ಎಲೆಚುಕ್ಕೆ ರೋಗದಿಂದ ತಾಲೂಕಿನ ಅಂದಾಜು 20 ಸಾವಿರ ಎಕರೆ ಅಡಕೆ ತೋಟಗಳು ನರಳುತ್ತಿದ್ದು ಸಾಲ-ಶೂಲ ಮಾಡಿಕೊಂಡ ರೈತನ ಸಹಾಯಕ್ಕೆ ಕೂಡಲೆ ಸರ್ಕಾರ ಬರಬೇಕು ಹಾಗೂ ಸೂಕ್ತ ಪರಿಹಾರವನ್ನು ಕಲ್ಪಿಸಬೇಕು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.
    ಸಾಗರ ತಾಲೂಕಿನ ಭಾರಂಗಿ ಹೋಬಳಿಯ ಕೊಂಜವಳ್ಳಿ ಗ್ರಾಮದ ಎಲೆಚುಕ್ಕೆ ರೋಗ ಬಾಧಿತ ಅಡಕೆ ತೋಟದ ಮಾಲಿಕ ಅಜಿತ್‌ಕುಮಾರ್ ಜೈನ್ ಅವರ ಮನೆಗೆ ಭಾನುವಾರ ಭೇಟಿ ನೀಡಿ ಅವರು ಮಾತನಾಡಿದರು.
    ಎಲೆಚುಕ್ಕೆ ರೋಗಕ್ಕೆ ಸರ್ಕಾರವು ಹಾಲಿ ನೀಡುತ್ತಿರುವ ಔಷಧ ಪ್ಯಾಕೇಟ್‌ಗಳು ಕೇವಲ ಮೂಗಿಗೆ ತ್ಪುಪ ಒರೆಸುವ ತಂತ್ರವಾಗಿದೆ. ಹೆಚ್ಚಿನ ಧನಸಹಾಯ ನೀಡದಿದ್ದಲ್ಲಿ ರೈತರ ಆತ್ಮಹತ್ಯೆ ಸರಣಿಗಳು ಹೆಚ್ಚಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
    ಕಳೆದ ಎರಡು ವರ್ಷಗಳಿಂದ ಎಲೆಚುಕ್ಕೆ ರೋಗ ಈ ಭಾಗದಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ರೈತರು ಸಾಕಷ್ಟು ತೋಟ ಹಾಗೂ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಇಲ್ಲಿಯವರೆಗೂ ಕಾಣಿಸಿಕೊಳ್ಳದ ಜನಪ್ರತಿನಿಧಿಗಳು ಈಗ ಬಂದು ಔಷಧ ನೀಡುವ ನೆಪ ಮಾಡುತ್ತಿದ್ದಾರೆ. ಸರ್ಕಾರ ನಿಗದಿ ಪಡಿಸಿ ನೀಡುತ್ತಿರುವ ಒಂದು ಪ್ಯಾಕೇಟ್ ಔಷಧ ಯಾವುದಕ್ಕೂ ಸಾಲುವುದಿಲ್ಲ ಎಂದರು.
    ಕೃಷಿಯನ್ನು ಅರಸಿ ಬದುಕನ್ನು ಕಟ್ಟಿಕೊಂಡ ಈ ಭಾಗದ ರೈತನ ಜೀವನ ಹೇಳತ್ತೀರದ್ದಾಗಿದೆ. ಸರ್ಕಾರದ ಯೋಜನೆಗಳು ಕೃಷಿಕ ಹಾಗೂ ಬಡ ಕೂಲಿ ಕಾರ್ಮಿಕರ ಪರವಾಗಿರಬೇಕು ಎನ್ನುವುದೇ ನಮ್ಮ ಒತ್ತಾಯ. ಜನಪ್ರತಿನಿಧಿಗಳು ಇತ್ತ ಗಮನಹರಿಸಲಿ ಎಂದು ಹೇಳಿದರು.
    ಈಡೇರದ ಕೆಎಫ್‌ಡಿ ಲ್ಯಾಬ್: ಮಂಗನ ಕಾಯಿಲೆಯಿಂದ ಈ ಭಾಗದಲ್ಲಿ ಸುಮಾರು 22 ಜೀವಗಳು ಬಲಿಯಾದವು. ತುರ್ತು ಪರೀಕ್ಷೆಗಳು ನಡೆಯಬೇಕು ಎನ್ನುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಕೆಎಫ್‌ಡಿ ಪ್ರಯೋಗಾಲಯವನ್ನು ಸ್ಥಾಪನೆ ಮಾಡುವುದಾಗಿ ತಿಳಿಸಲಾಗಿತ್ತು, ಆದರೆ ಈವರೆಗೆ ಅದು ಈಡೇರಿಲ್ಲ. ಇನ್ನೂ ಈಗ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗಕ್ಕೆ ಪ್ರಯೋಗಾಲಯ ಮಾಡುವುದು ಯಾವಾಗ ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು. ರೈತರಿಗಾಗಿಯೇ ಒಂದು ನಿಗಮವನ್ನು ಮಾಡಿ ಒಂದಿಷ್ಟು ಹಣವನ್ನು ಮೀಸಲಿಡುವ ವ್ಯವಸ್ಥೆ ಮಾಡಿದ್ದರೆ, ಬೆಳೆಗಳು ನಾಶವಾದ ಇಂತಹ ಸಂದರ್ಭದಲ್ಲಿ ರೈತರಿಗೆ ಎಕರೆಗೆ ಇಂತಿಷ್ಟು ಎಂದು ಸಹಾಯಧನ ನೀಡಬಹುದಾಗಿತ್ತು. ಇದರ ಬಗ್ಗೆ ಸರ್ಕಾರ ಏಕೆ ಚಿಂತನೆ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts