More

    ಅರಣ್ಯ ಬೆಳೆಗಿಲ್ಲ ರೈತರ ಆಸಕ್ತಿ

    ಸಿಂಧನೂರು: ಅರಣ್ಯ ಇಲಾಖೆ ಎಂದಾಕ್ಷಣ ರಸ್ತೆ, ಕಾಡು-ಮೇಡುಗಳಲ್ಲಿ ಗಿಡ ನೆಡುವುದಷ್ಟೇ ಎಂದುಕೊಂಡಿದ್ದರೆ ಅದು ತಪ್ಪು. ಅರಣ್ಯ ಕೃಷಿ ಮಾಡಲು ಯೋಜನೆಗಳಿದ್ದು ಪ್ರೋತ್ಸಾಹಧನವೂ ದೊರೆಯುತ್ತದೆ. ಆದರೆ ತಾಲೂಕಿನಲ್ಲಿ ಯೋಜನೆ ಲಾಭ ಪಡೆಯಲು ರೈತರು ಮುಂದೆ ಬರದಿರುವುದು ಸಮಸ್ಯೆಯಾಗಿದೆ.

    2011-12ನೇ ಸಾಲಿನಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಜಾರಿಯಾಗಿದೆ. ಇದರ ಲಾಭ ಪಡೆಯಲು ರೈತರು ಹೊಲದ ಪಹಣಿ, ಆಧಾರ್‌ಕಾರ್ಡ್, ಬ್ಯಾಂಕ್ ಪಾಸ್‌ಬುಕ್, 2 ಪಾಸ್‌ಪೋಟೋಗಳನ್ನು ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ ನೀಡಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು. ಸೆಪ್ಟೆಂಬರ್ ತಿಂಗಳ ಒಳಗಡೆ (ಮಳೆಗಾಲ ಪೂರ್ವದಲ್ಲಿ) 10 ರೂ. ನೀಡಿ ಹೆಸರು ನೋಂದಾಯಿಸಿ, ತಾವು ಬೆಳೆಯುವ ಬೆಳೆಯ ಬೇಡಿಕೆ ಪಟ್ಟಿ ಸಲ್ಲಿಸಿದರೆ, ನಂತರದಲ್ಲಿ ಸಸಿಗಳನ್ನು ಬೆಳೆಸಿ 1 ಮತ್ತು 3 ರೂ. ರಿಯಾಯಿತಿ ದರದಲ್ಲಿ ರೈತರಿಗೆ ನೀಡಲಾಗುತ್ತದೆ. ಈ ಯೋಜನೆಯಡಿ ಶ್ರೀಗಂಧ, ಸಾಗುವಾನಿ, ಮಹಾಗನಿ, ರಕ್ತಚಂದನ, ಹುಣಸೆ, ಬೇವು, ನಾಟಿ ಮಾವು ಇತರ ಜಾತಿಯ ಗಿಡಗಳನ್ನು ಮಾತ್ರ ಬೆಳೆಯಲು ಅವಕಾಶವಿದೆ. ಪ್ರತಿ ಹೆಕ್ಟೇರ್‌ಗೆ 400 ಸಸಿಗಳನ್ನು ಬೆಳೆಸಬೇಕಾಗಿದೆ. ಆದರೆ ರೈತರು ಆಸಕ್ತಿ ವಹಿಸದಿರುವುದು ಇಲಾಖೆಯ ಹಿನ್ನೆಡೆಗೆ ಕಾರಣವಾಗಿದೆ.

    ಕಳೆದ ಐದು ವರ್ಷದಿಂದ ಮಹಾಗನಿ ಬೆಳೆಯಲು ರೈತರು ಆಸಕ್ತಿ ತೋರಿದ್ದಾರೆ. 2017-18ರಲ್ಲಿ 19 ರೈತರು, 2018-19 ರಲ್ಲಿ 02, 2019-20 ರಲ್ಲಿ 25, 2020-21ರಲ್ಲಿ 92, 2021-22ರಲ್ಲಿ 42, 2022-23ರಲ್ಲಿ 100 ಮಂದಿ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ. 15 ವರ್ಷದ ಅವಧಿಯಲ್ಲಿ ಮಹಾಗನಿ ಬೆಳೆ ಬರುವುದರಿಂದ ಹೆಚ್ಚಿನ ಲಾಭವೂ ದೊರೆಯಲಿದೆ. ಕೆಲವರಿಗೆ ಮರ ಬೆಳೆದ ಮೇಲೆ ಕಡಿಯುವ ಕುರಿತಂತೆ ಅನುಮಾನವಿದೆ. ಆದರೆ ಮರ ಕಡಿಯುವವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಅಗತ್ಯ ಪತ್ರ ಪಡೆದರೆ ಯಾವುದೇ ಸಮಸ್ಯೆ ಇಲ್ಲ. ಇಲಾಖೆಯು ಆಗಾಗ ಸಮಸ್ಯೆಗೆ ಪರಿಹಾರ ನೀಡುತ್ತಿದೆ.

    ಅರಣ್ಯ ಇಲಾಖೆಯಿಂದ ಸಸಿ ಪಡೆದು ಹೊಲದಲ್ಲಿ ಹಚ್ಚಿದ ರೈತರಿಗೆ ಬದುಕುಳಿದ ಸಸಿಗೆ ಮೊದಲ ವರ್ಷ ಪ್ರತಿ ಸಸಿಗೆ 35 ರೂ., ಎರಡನೇ ವರ್ಷ 40 ರೂ., ಮೂರನೇ ವರ್ಷ 50 ರೂ.ನಂತೆ ಗಿಡವೊಂದಕ್ಕೆ ಮೂರು ವರ್ಷಕ್ಕೆ 125 ರೂ. ಪ್ರೋತ್ಸಾಹಧನ ದೊರೆಯುತ್ತದೆ. ಒಟ್ಟು ಮೂರು ವರ್ಷಕ್ಕೆ ಒಂದು ಹೆಕ್ಟೇರ್‌ಗೆ ಕನಿಷ್ಠ 50 ಸಾವಿರ ರೂ. ಸರ್ಕಾರದಿಂದ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಆದರೆ ಬಹುತೇಕ ರೈತರು ಯೋಜನೆ ಕುರಿತು ತಿಳಿದಿದ್ದರೂ ಬೆಳೆ ಬೆಳೆಯಲು ಮುಂದಾಗುತ್ತಿಲ್ಲ.
    ಒಟ್ಟಿನಲ್ಲಿ ರೈತರಿಗಾಗಿಯೇ ಪ್ರಾದೇಶಿಕ ಅರಣ್ಯ ವಲಯದಲ್ಲಿ ಯೋಜನೆ ಇದ್ದರೂ ಲಾಭ ಪಡೆಯದಿರುವುದು ಸೋಜಿಗದ ಸಂಗತಿಯಾಗಿದೆ. ಯೋಜನೆ ಹೊಂದಿದರೆ ಭೂಮಿ ಫಲವತ್ತತೆ ಜತೆಗೆ ಲಾಭವು ರೈತರಿಗೆ ಸಿಗಲಿದೆ.

    ಪ್ರಾದೇಶಿಕ ಅರಣ್ಯ ವಲಯದಿಂದ ರೈತರನ್ನು ಉತ್ತೇಜಿಸುವ ಕೆಲಸ ಮಾಡಲಾಗುತ್ತಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಹೆಚ್ಚಿನ ಲಾಭವಿದೆ. ಗಿಡ ಹಚ್ಚಿದ ಬಳಿಕ ಪ್ರತಿ ಸಸಿಗೂ ಮೂರು ವರ್ಷ ಹಂತ ಹಂತವಾಗಿ ಪ್ರೋತ್ಸಾಹಧನ ದೊರೆಯುತ್ತದೆ. ರೈತರು ಇಲಾಖಾ ಕಚೇರಿಯಲ್ಲಿ ನಿಗದಿತ ದಾಖಲೆಯೊಂದಿಗೆ ಹೆಸರು ನೋಂದಾಯಿಸಬೇಕು. ಯೋಜನೆ ಲಾಭ ಪಡೆದರೆ ರೈತರ ಆರ್ಥಿಕ ಬಲ ಹೆಚ್ಚಲಿದೆ.
    > ಸುರೇಶ, ಪ್ರಾದೇಶಿಕ ವಲಯ ಅರಣ್ಯ ಅಕಾರಿ, ಮಾನ್ವಿ
    =====
    ರೈತರು ಕೇವಲ ಏಕಬೆಳೆ ಬೆಳೆಯುವುದರಿಂದ ಆರ್ಥಿಕ ಅಭಿವೃದ್ಧಿ ಸಾಧಿಸುವುದು ಕಷ್ಟ. ಜತೆಗೆ ಭೂಮಿಯ ಸತ್ವವು ಕಳೆದು ಹೋಗುತ್ತದೆ. ನಾವು ಅರಣ್ಯ ಬೆಳೆಯತ್ತ ಚಿತ್ತವಿರಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಜಮೀನಿನಲ್ಲಿ ಮಹಾಗನಿ ಗಿಡಗಳನ್ನು ಸಮೃದ್ಧವಾಗಿ ಬೆಳೆಸಲಾಗಿದೆ. ಮುಂದೆ ಅವು ನಮಗೆ ಲಾಭ, ಭೂಮಿಯ ಸತ್ವ ಹೆಚ್ಚಿಸುತ್ತವೆ. ಅರಣ್ಯ ಬೆಳೆ ಬೆಳೆಯಲು ಸಹಾಯಧನ ಇದ್ದು ಸದುಪಯೋಗಪಡಿಸಿಕೊಳ್ಳಬಹುದು.
    > ಸರ್ವೋತ್ತಮರಡ್ಡಿ , ಪ್ರಗತಿಪರ ರೈತ, ಮುಕ್ಕುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts