More

    ರಕ್ತದೊತ್ತಡ, ಖಿನ್ನತೆ, ಶ್ವಾಸಕೋಶದ ರೋಗ ನಿಯಂತ್ರಣಕ್ಕೆ ಇಷ್ಟು ಸರಳ ಚಿಕಿತ್ಸೆ ಇನ್ನೊಂದಿಲ್ಲ!

    ರಕ್ತದೊತ್ತಡ, ಖಿನ್ನತೆ, ಶ್ವಾಸಕೋಶದ ರೋಗ ನಿಯಂತ್ರಣಕ್ಕೆ ಇಷ್ಟು ಸರಳ ಚಿಕಿತ್ಸೆ ಇನ್ನೊಂದಿಲ್ಲ!| ಡಾ. ಆನಂದ ಪಾಂಡುರಂಗಿ

    ಆಕೆ 19 ವರ್ಷದ ಯುವತಿ. ಪಿಯುಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದಾಳೆ. ಒಳ್ಳೆಯ ಕಾಲೇಜಿನಲ್ಲಿ ಪ್ರವೇಶ ಕೂಡ ಸಿಕ್ಕಿತ್ತು. ಆದರೆ ಆಕೆಗೆ ಕಾಲೇಜ್ ಲೈಫ್ ಎಂಜಾಯ್ ಮಾಡಲು ಆಗುತ್ತಿರಲಿಲ್ಲ. ಏಕಾಂಗಿ ಆಗಿರುವುದು, ಸ್ನೇಹಿತರೊಂದಿಗೆ ಬೆರೆಯದಿರುವುದು ಮತ್ತು ಸದಾ ಕೀಳರಿಮೆ ಆಕೆಯದಾಗಿತ್ತು. ಅವಳನ್ನು ಕೇಳಿದರೆ ‘‘ಮನಸ್ಸಿಗೆ ತುಂಬಾ ನೋವಾಗುತ್ತಿದೆ, ಜೀವಿಸಲು ಇಷ್ಟವಿಲ್ಲ’’ ಎನ್ನುತ್ತಿದ್ದಳು. ಪಾಲಕರು ಆಕೆಯನ್ನು ನನ್ನ ಬಳಿ ಕರೆತಂದಿದ್ದರು. ಅವಳನ್ನು ವಿಶ್ಲೇಷಿಸಿ ಚಿಕ್ಕ ಮಾತ್ರೆಗಳನ್ನು ನೀಡಿ ಮನೋಪರಿವರ್ತನೆಗೆ ಸಂಗೀತ ಚಿಕಿತ್ಸೆ ಪಡೆಯಲು ಸೂಚಿಸಿದೆ.

    ಅದರನ್ವಯ ಪಾಲಕರು ಆಕೆಯನ್ನು ಪರಿಚಯಸ್ಥರೊಬ್ಬರ ಸಂಗೀತ ಶಾಲೆಗೆ ಕರೆದೊಯ್ದರು. ಅಲ್ಲಿ ಸಂಗೀತ ಆಲಿಸಲು ಆರಂಭಿಸಿದಳು. ತನಗೆ ಗೊತ್ತಿಲ್ಲದೇ ಆಕೆ ಗುನಗುನಿಸತೊಡಗಿದಳು. ಹಾಡುಗಳು ಆಕೆಯ ನಾಲಿಗೆ ಮೇಲೆ ನಲಿದಾಡಹತ್ತಿದವು. ದಿನವೂ ಈ ಸಂಗೀತ ಕೇಳುವುದು ಮತ್ತು ಹಾಡುವುದರಿಂದ ಆಕೆಯ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿತು. ನಿರಂತರ ಅಭ್ಯಾಸದಿಂದ ಮುಂದೊಂದು ದಿನ ಆಕೆ ಸಂಗೀತ ಜ್ಯೂನಿಯರ್ ಪರೀಕ್ಷೆ ಸಹ ಬರೆದು ಶೇ. 90ರಷ್ಟು ಅಂಕ ಪಡೆದಳು. ಮನೋವೈದ್ಯರು ನೀಡಿದ ಮಾತ್ರೆಗಳ ಬಳಕೆ ಪ್ರಮಾಣ ಕಡಿಮೆಯಾಯಿತು. ಮುಂದೆ ಪದವಿ ನಂತರ ಮಾಂಟೆಸರಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಲಾರಂಭಿಸಿದಳು.

    ಇದಕ್ಕೆಲ್ಲ ಕಾರಣ ಸಂಗೀತ. ಅದರಲ್ಲೂ ಭಾರತೀಯ ಸಂಗೀತ ದೈವಿಕ ಕಲೆ. ಎಲ್ಲ ಜೀವಿಗಳ ಮೇಲೂ ಆರೋಗ್ಯಕರ ಪರಿಣಾಮ ಬೀರುವ ಶಕ್ತಿ ಅದಕ್ಕಿದೆ. ಖಿನ್ನತೆಗೆ ಒಳಗಾದವರಿಗೆ ಆತ್ಮಚೈತನ್ಯ ತುಂಬುತ್ತದೆ ಈ ಸಂಗೀತ. ಸಪ್ತಸ್ವರಗಳ ನಿನಾದ, ತರಂಗಾಂತರಗಳ ವೈವಿಧ್ಯವು ಮನುಷ್ಯನನ್ನು ಚಟುವಟಿಕೆಯ ಚಿಲುಮೆಯನ್ನಾಗಿಸುತ್ತದೆ. ದೈಹಿಕ, ಆಧ್ಯಾತ್ಮಿಕ ಅನುಭೂತಿ ನೀಡುತ್ತದೆ. ಮಾನಸಿಕ ಆತಂಕ ಹಾಗೂ ಖಿನ್ನತೆಯಿಂದ ಹೊರಬರಲು ಅನೇಕ ಮಾರ್ಗಗಳಿವೆ. ಅತ್ಯಂತ ಸರಳ ಮಾರ್ಗ ಸಂಗೀತ ಕೇಳುವುದು. ಇದು ಈಗ ಹೆಚ್ಚು ಪ್ರಚಲಿತದಲ್ಲಿರುವ ಚಿಕಿತ್ಸೆ ಕೂಡ. ಈ ಚಿಕಿತ್ಸೆಗೆ ಒಳಪಡುವುದು ಎಂದರೆ ಸಂಗೀತ ಕೇಳುವುದು. ಇದು ಕರ್ನಾಟಕ ಶಾಸ್ತ್ರೀಯ ಸಂಗೀತವಿರಬಹುದು, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವಿರಬಹುದು. ಯೋಗ ಕೂಡ ಸಂಗೀತ ಚಿಕಿತ್ಸೆಯ ಒಂದು ಭಾಗವಾಗಿದೆ.

    ಅಕ್ಬರ್‌ನ ದರ್ಬಾರ್‌ನಲ್ಲಿ ಕೆಲಸಗಳು ಬಹಳ ಹೊತ್ತಿನವರೆಗೂ ಇರುತಿತ್ತಂತೆ. ಹೀಗಾಗಿ ಕೆಲಸದ ಒತ್ತಡ ಕಡಿಮೆ ಮಾಡಲು ತಾನ್‌ಸೇನ್ ರಾತ್ರಿ ಹೊತ್ತು ಕೆಲಸ ಮುಗಿದ ಬಳಿಕ ತಾನೇ ರಚಿಸಿದ ದರ್ಬಾರಿ ಕಾನಡಾ ರಾಗ ಹಾಡುತ್ತಿದ್ದರಂತೆ. ಇದು ಮನಸ್ಸಿನ ಒತ್ತಡ ಕಡಿಮೆ ಮಾಡಿ ಮನಸ್ಸಿಗೆ ವಿಶ್ರಾಂತಿ ನೀಡುತ್ತಿತ್ತಂತೆ. ಯಾವುದೇ ಶಾಸ್ತ್ರೀಯ ಸಂಗೀತ ಆಲಿಸಿ, ಹಾಡಿ. ಕೇಳುತ್ತ ಧ್ಯಾನ ಮಾಡಿ, ನೃತ್ಯ ಮಾಡಿ. ಇವೆಲ್ಲ ಮನಸ್ಸಿಗೆ ಮುದ ನೀಡುತ್ತವೆ. ದುಗುಡ ದೂರವಾಗುತ್ತದೆ.

    ಶಾಸ್ತ್ರೀಯ ಸಂಗೀತದಲ್ಲಿ ರಾಗಗಳಿಗೆ ಬಹಳ ಪ್ರಾಮುಖ್ಯತೆ. ಬೆಳಗ್ಗೆ ಬಿಲಹರಿ, ಬೈರವಿ, ತೋಡಿ ಹಾಡಿದರೆ ಸಂಜೆ ಯಮನ್, ಕಲ್ಯಾಣಿ, ಕಾನಡಾ ಹೀಗೆ ಹಲವು ರಾಗಗಳು ರಕ್ತದ ಒತ್ತಡ, ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಶಮನಕ್ಕೆ ಉತ್ತಮ ಎನ್ನುತ್ತಾರೆ. ಮಕ್ಕಳ ಏಕಾಗ್ರತೆ ಹೆಚ್ಚಿಸಲು ಸಂಗೀತ ಬಹಳ ಉಪಕಾರಿ. ಹಾಗಾಗಿ ಮಕ್ಕಳಿಗೆ ಸಂಗೀತ ಕಲಿಸಿ, ಕಲಿಯಲು ಉತ್ತೇಜಿಸಿ. ವಾದ್ಯ ಸಂಗೀತ, ಹಾಡುಗಾರಿಕೆ ಎರಡನ್ನೂ ಕಲಿಸಬಹುದು. ಗರ್ಭಿಣಿಯರಲ್ಲಿ ಸಂಗೀತವು ಉಪಯೋಗಕಾರಿ ಎಂದು ಗರ್ಭ ಸಂಸ್ಕಾರದಲ್ಲಿ ಹೇಳುತ್ತಾರೆ. ಇದು ತಾಯಿ ಹಾಗೂ ಗರ್ಭದಲ್ಲಿರುವ ಮಗುವಿನ ಮೇಲೆ ಉತ್ತಮ ಪ್ರಭಾವ ಬೀರುತ್ತ್ತದೆ ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತಿದೆ. ತಾಯಿಯ ಮನಸ್ಸು ಭಯದಿಂದ ಹೊರ ಬರಲು ಇದು ಸಹಾಯ ಮಾಡುತ್ತದೆ. ಹೀಗಾಗಿ ಸಂಗೀತ ಥೆರಪಿ ಪಡೆಯುವುದು ಸೂಕ್ತ. ಒಟ್ಟಾರೆ ಹೇಳುವುದಾದರೆ ಸಂಗೀತ ಚಿಕಿತ್ಸೆ ಮಾನಸಿಕ ಖಿನ್ನತೆ ಸೇರಿದಂತೆ ಹಲವು ಮನೋರೋಗಗಳಿಗೆ ಪೂರಕ ಪರಿಣಾಮಕಾರಿ ಚಿಕಿತ್ಸೆ ಎಂಬುದು ಸ್ಪಷ್ಟ.

    ಸಂಗೀತವನ್ನು ಆಸ್ವಾದಿಸದಿರುವವರೇ ವಿರಳ. ಅದಕ್ಕಿರುವ ಶಕ್ತಿಯೂ ಅದ್ಭುತ. ಸಂಗೀತ ಕೇವಲ ಮನರಂಜನೆಯ ಸಾಧನವಲ್ಲ. ಅದೊಂದು ಅಭಿವ್ಯಕ್ತಿ ಮಾಧ್ಯಮ ಕೂಡ. ಇದರ ಜತೆ ಜತೆಗೆ ಮಾನಸಿಕ ಒತ್ತಡ ಹಾಗೂ ಸಂಬಂಧಿತ ಸಮಸ್ಯೆಗಳಿಗೆ ಇದು ಪೂರಕ ಚಿಕಿತ್ಸೆ ಎಂಬುದು ವಿಶೇಷ. ಇದನ್ನು ಪುಷ್ಟೀಕರಿಸುವ ಉದಾಹರಣೆಗಳು, ಪ್ರಕರಣಗಳು ಇತ್ತೀಚೆಗೆ ನಮ್ಮ ಮಧ್ಯೆ ಹಲವಾರು ಇವೆ.

    ಚೌತಿ ಮೆರವಣಿಗೆ ವೇಳೆ ಮಸೀದಿ ಆವರಣಕ್ಕೆ ಬಣ್ಣ ಎರಚಿದ ಯೋಧ; ಸೈನಿಕನ ಬಂಧನ, ಪ್ರಕರಣ ದಾಖಲು..

    ಮಗನ ಉದ್ಯೋಗಕ್ಕಾಗಿ ಸಂಸದೆಯ ಕಾಲಿಗೆ ಬಿದ್ದ ಮಹಿಳೆ; ಹೈಕೋರ್ಟ್ ತೀರ್ಪಿಗೂ ಬಗ್ಗದ ಆಡಳಿತ ಮಂಡಳಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts