More

    ಕಾಯಿಲೆಗಳ ದಾಂಗುಡಿ, ಆರೋಗ್ಯ ಇಲಾಖೆ ಅಲರ್ಟ್

    ಜಿಲ್ಲೆಯಲ್ಲಿ ತಪಾಸಣೆ ಚುರುಕುಕಾಲರ, ಡೆಂಘೆ, ಚಿಕೂನ್‌ಗುನ್ಯಾ ಭೀತಿ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ರಾಜ್ಯದಲ್ಲಿ ತಾಪಮಾನ ಗಣನೀಯವಾಗಿ ಏರುತ್ತಿರುವ ನಡುವೆಯೇ ಡೆಂಘೆ, ಚಿಕೂನ್‌ಗುನ್ಯಾದಂಥ ಸಾಂಕ್ರಾಮಿಕ ರೋಗಗಳು ದಾಂಗುಡಿ ಇಡುತ್ತಿದ್ದು, ಗ್ರಾಮಾಂತರ ಜಿಲ್ಲಾ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.
    ತೀವ್ರ ಬಿಸಿಲಿನಿಂದ ಜ್ವರಬಾಧೆ ಹೆಚ್ಚಾಗಿದೆ, ಸಾಮಾನ್ಯವಾಗಿ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಡೆಂಘೆ, ಚಿಕೂನ್‌ಗುನ್ಯಾ ಬೇಸಿಗೆಯಲ್ಲೇ ಕಾಡಲಾರಂಭಿಸಿದೆ. ಜಿಲ್ಲೆಯ ಗಡಿ ಹಂಚಿಕೊಂಡಿರುವ ರಾಜಧಾನಿ ಬೆಂಗಳೂರಿನಲ್ಲಿ ಸಾಂಕ್ರಾಮಿಕ ಸೋಂಕುಗಳು ದೃಢಪಟ್ಟಿರುವುದರಿಂದ ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದೊಂದಿಗೆ ತಪಾಸಣೆ ನಡೆಸಲು ಸನ್ನದ್ಧವಾಗಿದೆ.
    ಬರದ ನಡುವೆ ಬಿಕ್ಕಟ್ಟು:
    ಕುಡಿಯುವ ನೀರಿನ ಬರದ ನಡುವೆಯೇ ಸಾಂಕ್ರಾಮಿಕ ರೋಗದ ಬಿಕ್ಕಟ್ಟು ಎದುರಾಗುತ್ತಿದ್ದು, ಆರೋಗ್ಯ ಇಲಾಖೆ ಮುಂಜಾಗ್ರತಾಕ್ರಮ ಕೈಗೊಳ್ಳಲು ಮುಂದಾಗಿದೆ. ಈಗಾಗಲೇ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದು ವಾರಕ್ಕೊಮ್ಮೆ ಬಿಡುವ ನೀರನ್ನೇ ಸಂಗ್ರಹಿಸಿಕೊಟ್ಟಲು ಸಾರ್ವಜನಿಕರು ಇನ್ನಿಲ್ಲದ ಕಸರತ್ತು ಆರಂಭಿಸುತ್ತಿದ್ದಾರೆ. ಹೀಗೆ ಸಂಗ್ರಹಿಸಿಟ್ಟ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಸೊಳ್ಳೆಗಳಿಂದ ಸೋಂಕು ಹರಡುವುದರಿಂದ ಪ್ರಕರಣಗಳ ಹತೋಟಿ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಲಿದೆ. ವಾರಕ್ಕೊಮ್ಮೆ ನೀರು ಬಿಡುವ ಪ್ರದೇಶಗಳಲ್ಲಿ ಮುಂದಿನ ಬಾರಿ ನೀರು ಬರುವುದೋ ಇಲ್ಲವೋ ಎನ್ನುವ ಖಾತ್ರಿ ಇಲ್ಲದಂತಾಗಿರುವುದರಿಂದ ಸಾರ್ವಜನಿಕರು, ಸಂಪ್, ಡ್ರಮ್ ಸೇರಿ ಸಿಕ್ಕ ವಸ್ತುಗಳಲ್ಲೇ ನೀರನ್ನು ವಾರಗಟ್ಟಲೆ ಸಂಗ್ರಹಿಸಿಡಲು ಆರಂಭಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನೀರನ್ನು ಸಂಗ್ರಹಿಸಡದಂತೆ ಹೇಳುವುದೂ ಸಾಧ್ಯವಿಲ್ಲದಂತ ಸಂದಿಗ್ಧ ಪರಿಸ್ಥಿತಿ ಅಧಿಕಾರಿಗಳದ್ದಾಗಿದೆ.
    ಜಿಲ್ಲೆಯಲ್ಲಿ ಪ್ರಕರಣವಿಲ್ಲ: ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿಯಂತೆ ಇದುವರೆಗೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಎಲ್ಲಿಯೂ ಚಿಕೂನ್‌ಗುನ್ಯಾ, ಡೆಂಘೆ ಹಾಗೂ ಕಾಲರ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ಜ್ವರಬಾಧೆ ತೀವ್ರವಾಗಿರುವ ಪ್ರಕರಣಗಳು ಕಂಡುಬರುತ್ತಿವೆ.
    ನಗರದಲ್ಲಿ ಕಾಲರ? ರಾಜಧಾನಿ ಬೆಂಗಳೂರು ನಗರದಲ್ಲಿ ಸದ್ದಿಲ್ಲದೆ ಕಾಲರ ಪ್ರಕರಗಳು ಉಲ್ಭಣಗೊಂಡಿವೆ ಎನ್ನಲಾಗಿದೆ. ಶಂಕಿತ ಪ್ರಕರಣಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನೈರ್ಮಲ್ಯ ಕಾಪಾಡದಿರುವುದು ಮತ್ತು ಕಲುಷಿತ ನೀರಿನ ಮೂಲಗಳು ನಗರದಲ್ಲಿ ಕಾಲರಾ ಪ್ರಕರಣಗಳ ಉಲ್ಬಣಕ್ಕೆ ಪ್ರಾಥಮಿಕ ಕಾರಣಗಳಾಗಿವೆ ಎಂದು ವೈದ್ಯರು ತಿಳಿಸಿದ್ದು, ಜಿಲ್ಲೆಯಲ್ಲಿ ಸ್ವಚ್ಛತೆ ಬಗ್ಗೆ ನಿಗಾವಹಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.ಆರೋಗ್ಯ ತಜ್ಞರು ಕಾಲರಾ ಪ್ರಕರಣಗಳಲ್ಲಿ ಈ ಹೆಚ್ಚಳವನ್ನು, ಅಶುಚಿತ್ವದ ತಿನಿಸುಗಳ ಸೇವಿಸಿದ ನಂತರ ಸೋಂಕಿಗೆ ಒಳಗಾಗುವ ವ್ಯಕ್ತಿಗಳೇ ಸೊಂಕಿಗೆ ಈಡಾಗುತ್ತಿದ್ದಾರೆ. ತೀವ್ರವಾದ ನೀರಿನ ಕೊರತೆಯಿಂದ ಪ್ರಭಾವಿತವಾಗಿರುವ ಕಳಪೆ ಗುಣಮಟ್ಟದ ನೀರಿನ ಬಳಕೆಯಿಂದ ರೋಗ ಉಲ್ಬಣಗೊಳ್ಳುತ್ತಿದೆ.


    ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಪ್ರಸ್ತುತ ಎಲ್ಲಿಯೂ ಡೆಂಘೆ, ಚಿಕೂನ್‌ಗುನ್ಯಾ ಅಥವಾ ಕಾಲರ ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ. ಬೆಂಗಳೂರಿನಲ್ಲಿ ಪ್ರಕರಣಗಳು ಕಾಣಿಸಿಕೊಂಡಿರುವ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೋಗ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು.

    ಡಾ.ಸುನೀಲ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ

    ಜಿಲ್ಲೆಯ ಹಲವೆಡೆ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಸಾರ್ವಜನಿಕರು ವಾರಗಟ್ಟಲೆ ಡ್ರಮ್‌ಗಳಲ್ಲಿ ಮತ್ತಿತರ ವಸ್ತುಗಳಲ್ಲಿ ನೀರು ಶೇಖರಣೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ನೀರು ಸಂಗ್ರಹಿಸಿಕೊಳ್ಳದಂತೆ ಹೇಳುವುದು ಕಷ್ಟ. ಆದರೂ ನೀರು ಖಾಲಿಯಾದ ಬಳಿಕ ಡ್ರಮ್‌ಗಳನ್ನು ಹಾಗೂ ನೀರಿನ ಸಂಗ್ರಹಣಾ ಸ್ಥಳಗಳನ್ನು ಸ್ವಚ್ಛಗೊಳಿಸುವಂತೆ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ನೀರು ಸಂಗ್ರಹ ಸ್ಥಳಗಳಲ್ಲಿ ತಪಾಸಣೆ ನಡೆಸಿ ಮುಂಜಾಗ್ರತೆ ವಹಿಸುತ್ತಿದೆ.

    ಕೃಷ್ಣಾರೆಡ್ಡಿ, ಜಿಲ್ಲಾ ಮಲೇರಿಯಾ ಅಧಿಕಾರಿ

    ಸಾಮಾನ್ಯವಾಗಿ ಶುಚಿತ್ವ ಕಾಪಾಡಿಕೊಳ್ಳದಿದ್ದರೆ ಅನೇಕ ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ, ಹೊರಗಿನ ತಿಂಡಿ ತಿನಿಸುಗಳ ಬಗ್ಗೆ ಎಚ್ಚರಿಕೆ ಅಗತ್ಯ, ಇಲಾಖೆ ವತಿಯಿಂದ ಹೋಟೆಲ್, ಡಾಬಾ, ವಸತಿ ನಿಲಯಗಳು ಸೇರಿ ದೇವಸ್ಥಾನಗಳಲ್ಲಿ ಅನ್ನದಾಸೋಹ, ಹಬ್ಬ ಜಾತ್ರೆಗಳಲ್ಲಿನ ಅನ್ನಸಂತರ್ಪಣೆಯಂಥ ಕಾರ್ಯಕ್ರಮಗಳಲ್ಲಿ ಆಹಾರದ ಗುಣಮಟ್ಟ ಹಾಗೂ ಶುಚಿತ್ವ ಕಾಪಾಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲಿಯಾದರೂ ಲೋಪ ಕಂಡುಬಂದರೆ ದಂಡದೊಂದಿಗೆ ಕಾನೂನು ಕ್ರಮ ಜರುಗಿಸಲಾಗುತ್ತದೆ.
    ಡಾ.ಧರ್ಮೆಂದ್ರ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts