More

    ಕಣ್ಮನ ಸೆಳೆಯುವ ಭೀಮಗಡ ಅಭಯಾರಣ್ಯ

    ಬೆಳಗಾವಿ: ಮುಂಗಾರಿನ ಆರಂಭದಲ್ಲೇ ವರುಣ ಸಾಥ್ ಕೊಟ್ಟಿದ್ದರಿಂದ ಬತ್ತಿ ಹೋಗಿದ್ದ ಮಹದಾಯಿ, ಪನ್ಸಾರ, ಹಾಲತ್ರಿ ನದಿಗಳಿಗೆ ಜೀವ ಕಳೆ ಬಂದಿದೆ. ಇದರಿಂದ ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಆದರೆ, ಪ್ರಕೃತಿಯ ಇಂತಹ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರೇ ಇಲ್ಲ.

    ಮೇ, ಜೂನ್ ತಿಂಗಳು ಬಂತೆಂದರೆ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದ ಈ ಅಭಯಾರಣ್ಯ, ಕರೊನಾ ವೈರಸ್ ಪರಿಣಾಮದಿಂದ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. ವನ್ಯ ಸಂಪತ್ತು, ಹಚ್ಚ ಹಸಿರಿನ ದಟ್ಟ ಕಾನನ, ವನ್ಯ ಜೀವಿಗಳ ನರ್ತನ ಕಣ್ತುಂಬಿಕೊಳ್ಳುತ್ತ ಅಭಯಾರಣ್ಯದಲ್ಲಿ ಟ್ರಕ್ಕಿಂಗ್ ಮಾಡುವವರಿಗೆ ಸ್ವರ್ಗದ ಅನುಭವ. ಆದರೆ, ಸದ್ಯ ಪ್ರವಾಸಿಗರು ಇಲ್ಲಿಗೆ ಬರುವುದಕ್ಕೆ ಹೆದರುತ್ತಿದ್ದಾರೆ.

    ಕರೊನಾ ಎಂಬ ಅದೃಶ್ಯ ವೈರಸ್ ಭೀತಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಸದಾ ಪ್ರಕೃತಿ ಪ್ರಿಯರಿಂದ ತುಂಬಿ ತುಳುಕುತ್ತಿದ್ದ ಅಭಯಾರಣ್ಯ ಈಗ ಖಾಲಿಯಾಗಿದೆ.

    ಲಕ್ಷಾಂತರ ರೂ. ನಷ್ಟ: ಕರೊನಾ ವೈರಸ್ ಭೀತಿಯಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದರಿಂದ ಭೀಮಗಡ ವನ್ಯಜೀವಿ ವಲಯಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅಭಯಾರಣ್ಯ ಪ್ರವೇಶಕ್ಕೆ ಒಬ್ಬರಿಗೆ 150 ರೂ. ಶುಲ್ಕವಿದೆ. ಆದರೆ, ಪ್ರಸಕ್ತವಾಗಿ ಪ್ರವಾಸಿಗರು ಬಾರದಿರುವುದರಿಂದ ಏಪ್ರಿಲ್‌ನಿಂದ ಇಲ್ಲಿಯವರೆಗೆ 2 ಲಕ್ಷ ರೂ. ನಷ್ಟವಾಗಿದೆ. ಅಭಯಾರಣ್ಯದಲ್ಲಿ ಚಾರಣ ಮಾಡುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದರಿಂದ ವನ್ಯಜೀವಿಗಳು ಈಗ ಪ್ರಕೃತಿ ಮಡಿಲಲ್ಲಿ ಸ್ವಚ್ಛಂದವಾಗಿ ನಲಿದಾಡುತ್ತಿವೆ.

    ಪರಿಸರ ಜಾಗೃತಿ: ಭೀಮಗಡ ಅಭಯಾರಣ್ಯ ಪ್ರವಾಸೋದ್ಯಮಕ್ಕಿಂತ ಮುಖ್ಯವಾಗಿ ಪರಿಸರದ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಬರುವ ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ಪರಿಸರ ಸೂಕ್ಷ್ಮತೆ, ಕಾಳಜಿ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

    ಚಾರಣಕ್ಕೆ ಷರತ್ತು, ಕ್ರಮ: ಅಭಯಾರಣ್ಯಕ್ಕೆ ಬರುವ ಪ್ರವಾಸಿಗರಿಗೆ ಅರಣ್ಯ ಅಧಿಕಾರಿಗಳು ಕೆಲವು ಷರತ್ತು ವಿಧಿಸಿದ್ದಾರೆ. ಆ ಷರತ್ತಿನನ್ವಯ ಪ್ರವಾಸಿಗರು ಚಾರಣ ಕೈಗೊಳ್ಳಬೇಕಾಗುತ್ತದೆ. ಬರುವ ಪ್ರವಾಸಿಗರು ಪರಿಸರಕ್ಕೆ ಹೊಂದಿಕೊಳ್ಳುವ ಬಣ್ಣದ ಬಟ್ಟೆ (ಹಸಿರು, ಕಪ್ಪು ಬಣ್ಣ. ಬಿಳಿ ಬಣ್ಣ ನಿಷಿದ್ಧ) ಯನ್ನೇ ಧರಿಸಿರಬೇಕು. ಯಾವುದೇ ಪ್ಲಾಸ್ಟಿಕ್ ವಸ್ತು ಬಳಸುವಂತಿಲ್ಲ. ಸುಗಂಧ ದ್ರವ್ಯ ಸಿಂಪಡಿಸಿಕೊಂಡೂ ಬರಬಾರದು. ಕೆಲವೊಮ್ಮೆ ಇವುಗಳಿಂದ ವನ್ಯಜೀವಿಗಳಿಗೆ ತೊಂದರೆಯಾಗಬಹುದು. ಅಥವಾ ಪ್ರವಾಸಿಗರಿಗೇ ವನ್ಯಜೀವಿಗಳಿಂದ ತೊಂದರೆಯಾಗಬಹದು. ಹೀಗಾಗಿ ಕೆಲವು ನಿರ್ಭಂದನೆಯೊಂದಿಗೆ ಚಾರಣಕ್ಕೆ ಅವಕಾಶ ನೀಡುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.

    ಭೀಮಗಡಕ್ಕೆ ಬರುವ ಪ್ರವಾಸಿಗರ ಮೇಲೆ ನಿಗಾ ವಹಿಸಿದ್ದೇವೆ. ವನ್ಯ ಜೀವಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸುತ್ತಿದ್ದೇವೆ. ಕೋವಿಡ್-19 ನಿಯಂತ್ರಣದ ನಿಯಮ ಅನುಸರಿಸಿದರೆ ಅಭಯಾರಣ್ಯ ವೀಕ್ಷಣೆಗೆ ಅವಕಾಶ ನೀಡಲಾಗುವುದು.
    | ಎಂ.ವಿ. ಅಮರನಾಥ
    ಉಪ ಅರಣ್ಯ ಸಂರಕ್ಷಣಾಧಿಕಾರಿ, ಬೆಳಗಾವಿ ವಿಭಾಗ

    | ಜಗದೀಶ ಹೊಂಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts