More

    ಹಳೆಯ ಘಟನೆ ಕೆದಕಿ SRH​ ತಂಡವನ್ನು ಅವಮಾನಿಸಿದ ಶಾರುಖ್​ ಖಾನ್​! ಇದನ್ನು ನಿರೀಕ್ಷೆ ಮಾಡಿರ್ಲಿಲ್ಲ ಅಂದ್ರು ಫ್ಯಾನ್ಸ್

    ಚೆನ್ನೈ: ಕಳೆದ ಕೆಲವು ಐಪಿಎಲ್​ ಸೀಸನ್​ಗಳಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್​) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ತಂಡಗಳು ತಮ್ಮ ಕಳಪೆ ಪ್ರದರ್ಶನಗಳೊಂದಿಗೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದವು. ಆದರೆ, ನಿನ್ನೆಯಷ್ಟೇ (ಮೇ 26) ಮುಕ್ತಾಯಗೊಂಡ 17ನೇ ಸೀಸನ್​ನಲ್ಲಿ ಸಂಪೂರ್ಣ ಬದಲಾದ ಉಭಯ ತಂಡಗಳು ಒಟ್ಟಿಗೆ ಫೈನಲ್ ತಲುಪಿದವು. ಆಕ್ರಮಣಕಾರಿ ಆಟವಾಡಿ ಎದುರಾಳಿಗಳನ್ನು ಕಾಡಿದ ಈ ತಂಡಗಳ ನಡುವಿನ ಪ್ರಶಸ್ತಿ ಸುತ್ತಿನ ಕದನ ರಣ ರೋಚಕವಾಗಿರಲಿದೆ ಎಂದು ಎಲ್ಲರು ಭಾವಿಸಿದ್ದರು. ಆದರೆ, ಎಲ್ಲವೂ ಉಲ್ಟಾ ಆಯಿತು. ಏಕೆಂದರೆ, ನಿನ್ನೆ ನಡೆದ ಫೈನಲ್​ ಕದನದಲ್ಲಿ ಫೈಟ್​ ಎಂಬುದೇ ಇರಲಿಲ್ಲ. ಕೆಕೆಆರ್​ಗೆ ಎಸ್​ಆರ್​ಚ್​ ಸುಲಭ ತುತ್ತಾಯಿತು. ಬಾಲಿವುಡ್​ ಬಾದ್​ಷಾ ಶಾರುಖ್​ ಖಾನ್​ ಒಡೆತನದ ಕೆಕೆಆರ್​ ತಂಡ ಹೊಸ ಚಾಂಪಿಯನ್​ ಆಗಿ ಹೊರ ಹೊಮ್ಮಿತು.

    ಈ ಸೀಸನ್​ನ ಆರಂಭದಿಂದಲೂ ಅಬ್ಬರಿಸಿದ ಶ್ರೇಯಸ್​ ಅಯ್ಯರ್ ಪಡೆ, ಫೈನಲ್‌ನಲ್ಲಿಯೂ ಅದೇ ಪ್ರಾಬಲ್ಯವನ್ನು ಮುಂದುವರಿಸಿತು. ಪಂದ್ಯವನ್ನು ಏಕಪಕ್ಷೀಯವಾಗಿ ಮಾಡಿ ಟ್ರೋಫಿ ಜಯಿಸಿದರು. ಆದರೆ, ರನ್ನರ್ ಅಪ್ ಆದ ಸನ್ ರೈಸರ್ಸ್ ತಂಡಕ್ಕೆ ಕೋಲ್ಕತ್ತ ಮಾಲೀಕ ಶಾರುಖ್ ಖಾನ್ ಅವಮಾನ ಮಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಕೆಕೆಆರ್ ಮಾಲೀಕ ಶಾರುಖ್ ಖಾನ್ ತಮ್ಮದೇ ತಂಡ ಹಾಗೂ ಎದುರಾಳಿ ತಂಡದ ಆಟಗಾರರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಪಂದ್ಯದ ಕೊನೆಯಲ್ಲಿ ಯಾರೇ ಗೆದ್ದರೂ ಎರಡೂ ತಂಡಗಳ ಆಟಗಾರರನ್ನು ಶಾರುಖ್​ ಭೇಟಿಯಾಗುತ್ತಾರೆ. ಆಟಗಾರರ ಯೋಗಕ್ಷೇಮ ವಿಚಾರಿಸುವುದು, ಅವರೊಂದಿಗೆ ಚಿತ್ರ ತೆಗೆಸಿಕೊಂಡು ಅಭಿನಂದನೆ ಸಲ್ಲಿಸುವುದು ಕಿಂಗ್ ಖಾನ್​ಗೆ ಅಭ್ಯಾಸವಾಗಿದೆ. ಇದರಿಂದಾಗಿ ಕ್ರಿಕೆಟ್ ಪ್ರೇಮಿಗಳಿಗೆ ಶಾರುಖ್ ಮೇಲೆ ಗೌರವ ಹೆಚ್ಚಿದೆ. ಆದರೆ, ಐಪಿಎಲ್-2024 ರ ಫೈನಲ್‌ನಲ್ಲಿ ಶಾರುಖ್​ ಅವರ ವರ್ತನೆಯು ವಿವಾದಕ್ಕೆ ಗುರಿಯಾಗಿದೆ. ಪಂದ್ಯದ ಕೊನೆಯಲ್ಲಿ ಇಡೀ ಕೋಲ್ಕತ್ತ ತಂಡ ಟ್ರೋಫಿಯೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡಿತು. ಈ ವೇಳೆ ಶಾರುಖ್ ತಂಡದ ಎಲ್ಲ ಸದಸ್ಯರಿಗೂ ಫ್ಲೈಯಿಂಗ್ ಕಿಸ್ ನೀಡಲು ಹೇಳಿದರು. ಇದೀಗ ಈ ಫೋಟೋಗಳು ವೈರಲ್ ಆಗಿವೆ.

    ಕೆಕೆಆರ್​ ವೇಗಿ ಹರ್ಷಿತ್​ ರಾಣ ಹಾಗೂ ಎಸ್​ಆರ್​ಎಚ್ ನಡುವೆ ಸೇಡಿನ ಕಥೆ ನಡೆಯುತ್ತಿರುವುದು ಗೊತ್ತೇ ಇದೆ. ಈ ಸೀಸನ್​ ಆರಂಭದಲ್ಲಿ ಉಭಯ ತಂಡಗಳ ನಡುವಿನ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದ ನಂತರ ಹರ್ಷಿತ್ ಅವರು ಅಗರ್ವಾಲ್​ಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಅವಮಾನಿಸಿದರು. ಅಲ್ಲದೆ, ತನ್ನ ವರ್ತನೆಯಿಂದ ಹರ್ಷಿತ್​ ರಾಣ ಒಂದು ಪಂದ್ಯದಿಂದ ನಿಷೇಧಕ್ಕೂ ಒಳಗಾದರು. ಆದರೂ ಬಲವಾಗಿ ತಂಡಕ್ಕೆ ಮರಳಿದ ಹರ್ಷಿತ್​, ಈ ಸೀಸನ್​ನಲ್ಲಿ ಕೆಕೆಆರ್​ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.

    ಮಯಾಂಕ್​ ಅವರನ್ನು ಅವಮಾನಿಸಿದಾಗಿನಿಂದ ಆರೆಂಜ್ ಆರ್ಮಿ ಹರ್ಷಿತ್​ ವಿರುದ್ಧ ಕೋಪದಿಂದ ಕುದಿಯುತ್ತಿದೆ. ಇದರ ನಡುವೆ ಗಾಯದ ಮೇಲೆ ಖಾರದಪುಡಿ ಎರಚಿದಂತೆ ಮಾಲೀಕ ಶಾರುಖ್ ಅವರು ಫೈನಲ್ ಪಂದ್ಯ ಮುಗಿದ ನಂತರ ಹರ್ಷಿತ್ ಜತೆ ಸಂಭ್ರಮಾಚರಣೆ ಮಾಡುವ ಫ್ಲೈಯಿಂಗ್​ ಕಿಸ್​ ಮಾಡುವ ಮೂಲಕ ಮತ್ತೊಮ್ಮೆ ಎಸ್​ಆರ್​ಎಚ್​ ತಂಡವನ್ನು ಅವಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಸೋಲಿನ ನೋವಿನಲ್ಲಿರುವ ಸನ್ ರೈಸರ್ಸ್ ಅಭಿಮಾನಿಗಳಿಗೆ ಇದು ನುಂಗಲಾರದ ತುತ್ತಾಗಿದೆ.

    ಪಂದ್ಯ ವಿಚಾರಕ್ಕೆ ಬರುವುದಾದರೆ, ನಿನ್ನೆ (ಮೇ 26) ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್​ ಕೇವಲ 18.3 ಓವರ್​ಗಳಲ್ಲಿ 113 ರನ್ ಗಳಿಗೆ ಆಲೌಟಾಯಿತು. ಯಾವುದೇ ಹಂತದಲ್ಲೂ ಬ್ಯಾಟಿಂಗ್‌ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಐಪಿಎಲ್​ ಹರಾಜಿನಲ್ಲಿ 24.75 ಕೋಟಿ ರೂ.ಗೆ ಕೋಲ್ಕತ್ತ ಪಾಲಾದ ವೇಗಿ ಮಿಚೆಲ್ ಸ್ಟಾರ್ಕ್ ಆರಂಭಿಕ ದಾಳಿ ನಡೆಸಿದರು. ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ (2) ಅವರನ್ನು ಔಟ್ ಮಾಡಿದರು. ನಂತರದ ಓವರ್‌ನಲ್ಲಿ ವೈಭವ್ ಅರೋರಾ, ಟ್ರಾವಿಸ್​ ಹೆಡ್ ಡಕ್ ಔಟ್ ಮಾಡಿದರು. ಇದಾದ ಬಳಿಕ ಸ್ಟಾರ್ಕ್ ತ್ರಿಪಾಠಿ ಅವರನ್ನು ಔಟ್ ಮಾಡಿದರು. ಆ ನಂತರ ಎಸ್​ಆರ್​ಎಚ್​ ತಂಡ ಯಾವ ಹಂತದಲ್ಲೂ ಚೇತರಿಕೆ ಕಾಣಲಿಲ್ಲ. ನಾಯಕ ಪ್ಯಾಟ್ ಕಮ್ಮಿನ್ಸ್ (24) ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್​ ಆಯಿತು. ಮಾರ್ಕ್ರಾಮ್ 20ರನ್ ಗಳಿಸಿದರು. ಕೋಲ್ಕತ್ತ ಬೌಲರ್‌ಗಳು ಎಲ್ಲಾ ವಿಕೆಟ್‌ಗಳನ್ನು ಪಡೆದರು. ಆಂಡ್ರೆ ರಸೆಲ್ 3 ವಿಕೆಟ್ ಪಡೆದರೆ, ಸ್ಟಾರ್ಕ್ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್​ ಪಡೆದರು. ಉಳಿದಂತೆ ವರುಣ್ ಚಕ್ರವರ್ತಿ, ನರೈನ್ ಮತ್ತು ಅರೋರಾ ಒಂದು ವಿಕೆಟ್ ಪಡೆದರು.

    ಹೈದರಾಬಾದ್​​ ನೀಡಿದ 114ರನ್​ಗಳ ಗುರಿ ಬೆನ್ನತ್ತಿದ ಕೆಕೆಆರ್​, 10.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 114 ರನ್​ ಕಲೆಹಾಕಿ ವಿಜಯೋತ್ಸವ ಆಚರಿಸಿತು. ಕೆಕೆಆರ್​ ಪರ ವೆಂಕಟೇಶ್​ ಅಯ್ಯರ್​ (52) ಅತ್ಯುತ್ತಮ ಆಟವಾಡಿದರು. (ಏಜೆನ್ಸೀಸ್​)

    ಗೆದ್ದಿದ್ದು ಕೆಕೆಆರ್​ ಆದ್ರೆ ಟ್ರೆಂಡ್​ ಆಗಿದ್ದು ಕಾವ್ಯಾ ಮಾರನ್​! ಕ್ಯಾಮೆರಾ​ಗೆ ಮುಖ ತೋರದೆ ಕಣ್ಣೀರಿಟ್ಟ SRH ಒಡತಿ

    ಕ್ಯಾಶ್‌ ರಿಚ್‌ ಲೀಗ್​ನಲ್ಲಿ ಕ್ರೇಜಿ ದಾಖಲೆ ಬರೆದ ವಿರಾಟ್​ ಕೊಹ್ಲಿ: ಐಪಿಎಲ್​ ಇತಿಹಾಸದಲ್ಲೇ ಇದು ಮೊದಲು!

    ಐಪಿಎಲ್​​​ ಇತಿಹಾಸದಲ್ಲೇ ಗರಿಷ್ಠ ಸ್ಕೋರ್​ ಗಳಿಸಿದ ಎಸ್​ಆರ್​ಎಚ್​​ ತಂಡದಿಂದಲೇ ಅತ್ಯಂತ ಕೆಟ್ಟ ದಾಖಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts