More

    ಮೇ 11ರಿಂದ ಧಾರಾವಾಹಿ ಶೂಟಿಂಗ್ ಪ್ರಾರಂಭ?

    ಲಾಕ್‌ಡೌನ್‌ನಿಂದ ಕಿರುತೆರೆಯ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದು ಒಂದೂವರೆ ತಿಂಗಳಾಗಿವೆ. ಈ ಮಧ್ಯೆ ಲಾಕ್‌ಡೌನ್ ಕೊಂಚ ಸಡಲಿಕೆಯಾಗಿರುವುದರಿಂದ ಮತ್ತು ಬೇರೆ ಬೇರೆ ವಲಯಗಳಲ್ಲಿ ಕೆಲಸ ಪ್ರಾರಂಭವಾಗುತ್ತಿರುವುದರಿಂದ, ಕಿರುತೆರೆಯ ಚಿತ್ರೀಕರಣಕ್ಕೂ ಅನುವು ಮಾಡಿಕೊಡಬೇಕೆಂದು ಹಲವರು ಇದೀಗ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ, ಹಲವು ಷರತ್ತುಗಳನ್ನು ಅನ್ವಯಿಸಿ ಮೇ 11ರಿಂದ ಧಾರಾವಾಹಿಗಳ ಶೂಟಿಂಗ್ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಈ ಒಂದೂವರೆ ತಿಂಗಳುಗಳಲ್ಲಿ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣ ಸಂಪೂರ್ಣ ಬಂದ್ ಆಗಿದ್ದು, ಇದನ್ನೇ ನಂಬಿಕೊಂಡು ಬದುಕುತ್ತಿದ್ದ ಸಾವಿರಾರು ಕಾರ್ಮಿಕರಿಗೆ ಸಾಕಷ್ಟು ಸಮಸ್ಯೆಗಳಾಗಿವೆ. ಈ ಹಿನ್ನೆಲೆಯಲ್ಲಿ ಕಿರುತೆರೆಯ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದೆ. ಕಡಿಮೆ ಜನರನ್ನಿಟ್ಟುಕೊಂಡು ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಕೊಡಬೇಕು ಎಂದು ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ಸ್ಪಷ್ಟ ಸೂಚನೆ ಸಿಕ್ಕಿಲ್ಲವಾದರೂ, ಮೇ 11ರಿಂದ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಮತ್ತೆ ಬಾಲ್ಯಕ್ಕೆ ಕರೆದೊಯ್ಯಲಿದೆ ಶಂಕರ್​ನಾಗ್​ ನಿರ್ದೇಶನದ ಆ ಧಾರಾವಾಹಿ; ಮರುಪ್ರಸಾರ ಯಾವಾಗ?

    ಈ ಕುರಿತು ಮಾತನಾಡುವ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಜೊತೆಜೊತೆಯಲಿ’ ನಿರ್ದೇಶಕ ಆರೂರು ಜಗದೀಶ್, ‘ಈಗಾಗಲೇ ಚಿತ್ರೀಕರಣವಾದ ಕಂತುಗಳೆಲ್ಲಾ ಮುಗಿದು, ಧಾರಾವಾಹಿಯನ್ನು ಮರುಪ್ರಸಾರ ಮಾಡಲಾಗುತ್ತಿದೆ. ಚಿತ್ರೀಕರಣ ನಿಂತಿರುವುದರಿಂದ, ಇದನ್ನೇ ನಂಬಿ ಬದುಕುತ್ತಿರುವವರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಈ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಮೇ 11ರಿಂದ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮುಂದಿನ ಒಂದೆರೆಡು ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ’ ಎನ್ನುತ್ತಾರೆ.

    ಇದನ್ನೂ ಓದಿ: ಲಾಕ್​ಡೌನ್​ನಲ್ಲೇ ಮುಗೀತು ಸಖತ್ ಸಂಗೀತ

    ಇನ್ನು ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್. ಲಿಂಗದೇವರು ಸಹ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಅನುಮತಿ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ. ‘ಚಲನಚಿತ್ರ ಮತ್ತು ಕಿರುತೆರೆಯಲ್ಲಿ ಸಹಸ್ರಾರು ಮಂದಿ ದಿನಗೂಲಿಗೆ ಕೆಲಸ ಮಾಡುತ್ತಿದ್ದ ಅನೇಕ ಕುಟುಂಬಗಳು, ತಮ್ಮ ದಿನನಿತ್ಯದ ಊಟಕ್ಕೂ ಇಲ್ಲದ ಸ್ಥಿತಿಯಲ್ಲಿ ಇರುವುದು ತಾವು ಹಲವಾರು ಮಾಧ್ಯಮಗಳಿಂದ ತಿಳಿದಿರುತ್ತೀರಿ ಎಂದು ಭಾವಿಸುತ್ತೇನೆ. ಇದನ್ನೇ ಆಶ್ರಯಿಸಿರುವ, ಅವಲಂಬಿಸಿರುವ ಅನೇಕ ಕುಟುಂಬಗಳ ಬದುಕು ದುಸ್ಥಿತಿಯಲ್ಲಿದೆ. ಆದರೂ, ಸ್ವಾಭಿಮಾನದಿಂದ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ತಾವು ಇತರೆ ಉದ್ಯಮಗಳ ಪುನರಾರಂಭಕ್ಕೆ ಅನುವು ಮಾಡಿಕೊಟ್ಟಂತೆ, ಕಲೋದ್ಯಮಗಳಾದ ಸಿನಿಮಾ ಮತ್ತು ಟಿವಿ ಧಾರಾವಾಹಿಗಳ ನಿರ್ಮಾಣಕ್ಕೆ ಅನುಮತಿ ನೀಡಬೇಕಾಗಿ ಈ ಮೂಲಕ ಕೋರುತ್ತೇನೆ’ ಎಂದು ಮನವಿ ಸಲ್ಲಿಸಿದ್ದಾರೆ.

    ಇಷ್ಟೆಲ್ಲಾ ಮನವಿಗಳಿಗೆ ಸರ್ಕಾರ ಸ್ಪಂದಿಸುತ್ತದಾ ಎಂಬುದು ಕಾದು ನೋಡಬೇಕಾಗಿದೆ.

    ಕಿರುತೆರೆ ಕಂಗಾಲು, ಮುಂದೇನು ಎಂಬುದೇ ಯಕ್ಷಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts