More

    ಹೆದ್ದಾರಿಗೆ ಬಂದ ಹಾವನ್ನು ಉಳಿಸಲು ಹೋಗಿ ಎಡವಟ್ಟು; ಟ್ರಕ್ ಚಾಲಕನಿಂದ ಸರಣಿ ಅಪಘಾತ!

    ಚಿಕ್ಕಬಳ್ಳಾಪುರ: ಅಡ್ಡ ಬಂದ ಹಾವಿನ ಮೇಲೆ ವಾಹನ ಹತ್ತುವುದನ್ನು ಟ್ರಕ್ ಚಾಲಕ ತಪ್ಪಿಸಲು ಹೋಗಿ ಬುಧವಾರ ತಾಲೂಕಿನ ಅಗಲಗುರ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಒಬ್ಬ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

    ಬೆಂಗಳೂರು- ಹೈದರಾಬಾದ್ ವಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟ್ರಕ್ ಚಾಲಕ ರಸ್ತೆಯಲ್ಲಿ ಹಾವು ಹೋಗುತ್ತಿರುವುದನ್ನು ಕಂಡು ಕೂಡಲೇ ಬ್ರೇಕ್ ಹಾಕಿದ್ದಾನೆ. ಇದರ ಹಿಂಬದಿಯಲ್ಲಿ ಟಾಟಾ ಏಸ್ ಬರುತ್ತಿತ್ತು. ಅದರ ಹಿಂದೆ ಕಾರು ಮತ್ತು ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಬರುತ್ತಿದ್ದವು. ಎಲ್ಲವೂ ಡಿಕ್ಕಿ ಹೊಡೆದಿವೆ. ಟಾಟಾ ಏಸ್ ಚಾಲಕನಿಗೆ ಗಂಭೀರ ಗಾಯವಾಗಿದೆ. ತಕ್ಷಣ ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯು ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಸ್ಟೇರಿಂಗ್ ಹೊಟ್ಟೆಗೆ ತಗುಲಿ, ಸಿಲುಕಿಕೊಂಡು ಚಾಲಕ ರಕ್ಷಣೆಗೆ ಮೊರೆ ಇಟ್ಟಿದ್ದಾನೆ. ಸ್ಥಳೀಯರು ಹೊರ ತರಲು ಹರಸಾಹಸ ವಾಡಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಸಂಚಾರಿ ಠಾಣೆಯ ಪೊಲೀಸರು ಗ್ಯಾಸ್ ವೆಲ್ಡರ್‌ನನ್ನು ಸ್ಥಳಕ್ಕೆ ಕರೆಸಿ, ಟಿಪ್ಪರ್ ಡೋರ್ ಮತ್ತು ಮುಂಭಾಗವನ್ನು ತೆಗೆಸಿ, ಒಳ ಭಾಗದಿಂದ ಎಳೆದು ರಕ್ಷಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ಸದಾ ವಾಹನಗಳ ಸಂಚಾರ ದಟ್ಟಣೆ ಇರುತ್ತದೆ. ಇದರ ನಡುವೆ ಸಂಚಾರಿ ಠಾಣೆಯ ಪೊಲೀಸರು ದಾಖಲೆಗಳ ಪರಿಶೀಲನೆಯ ನೆಪದಲ್ಲಿ ವಾಹನಗಳನ್ನು ಗಂಟೆಗಟ್ಟಲೇ ಅಡ್ಡಗಟ್ಟಿ ನಿಲ್ಲಿಸಿಕೊಂಡಿರುತ್ತಾರೆ. ಇದರ ನಡುವೆ ಟ್ರಾಫಿಕ್ ಉಂಟಾಗಿ, ಅಲ್ಲಲ್ಲಿ ಅಪಘಾತ ಸಂಭವಿಸುತ್ತಿವೆ. ಮತ್ತೊಂದೆಡೆ ಹೆದ್ದಾರಿ ಬದಿಯಲ್ಲಿ ರಸ್ತೆಯು ಅವೈಜ್ಞಾನಿಕವಾಗಿದ್ದು ತಗ್ಗು ಪ್ರದೇಶ, ಗುಂಡಿಗಳು ಮತ್ತು ರಸ್ತೆಯ ತಿರುವಿನ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts