More

    ಸಿಗಲಿಲ್ಲ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕಿ 

    ಸತೀಶ್ ಕೆ. ಬಳ್ಳಾರಿ
    ಬೆಂಗಳೂರು: ಬೆಳ್ಳಂದೂರಿನಲ್ಲಿ ರಾಜಕಾಲುವೆಗೆ ಬಿದ್ದ ಬಾಲಕಿ ದೇಹ 4 ದಿನ ಕಳೆದರೂ ಪತ್ತೆಯಾಗದ ಕಾರಣ ಅಗ್ನಿಶಾಮಕ ದಳ ಹಾಗೂ ಎನ್​ಡಿಆರ್​ಎಫ್ ತಂಡಗಳು ಶೋಧ ಕಾರ್ಯ ಸ್ಥಗಿತಗೊಳಿಸಿವೆ.

    ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದ ಅಸ್ಸಾಂ ಮೂಲದ ವಲಸೆ ಕಾರ್ವಿುಕ ನಿತ್ಯಾನಂದ ಎಂಬುವರ ಪುತ್ರಿ ಮೊನಾಲಿಕಾ (6) ಜು.10ರ ಮಧ್ಯಾಹ್ನ ಆಟ ಆಡುವಾಗ ರಾಜಕಾಲುವೆಗೆ ಬಿದ್ದಿದ್ದಾಳೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ, ಎನ್​ಡಿಆರ್​ಎಫ್ ತಂಡಗಳು ಸತತ 4 ದಿನ ಬೋಟ್ ಮೂಲಕ 5 ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ಆದರೂ, ಮಗುವಿನ ದೇಹ ಸಿಕ್ಕಿಲ್ಲ. ಮೂರು ದಿನಗಳಿಗೆ ದೇಹ ನೀರಿನಲ್ಲಿ ತೇಲುತ್ತದೆ ಎಂಬ ಎನ್​ಡಿಆರ್​ಎಫ್ ಸಿಬ್ಬಂದಿ ಊಹೆಯೂ ಸುಳ್ಳಾಗಿದ್ದು ದೇಹ ಮುಂದಕ್ಕೆ ಕೊಚ್ಚಿಕೊಂಡು ಹೋಗಿರುವ ಶಂಕೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

    ಕಳೆದ ಅಕ್ಟೋಬರ್​ನಲ್ಲಿ ಬನಶಂಕರಿ 2ನೇ ಹಂತದ ಶ್ರೀನಿವಾಸನಗರದ ಬಳಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ರಾಜಕಾಲುವೆಗೆ ಬಿದ್ದು ಮೃತಪಟ್ಟಿದ್ದ. ಕಳೆದ ಸೆಪ್ಟೆಂಬರ್​ನಲ್ಲಿ ಗುಡ್ಡದಹಳ್ಳಿ ಬಳಿ 5 ವರ್ಷದ ಬಾಲಕ ಕಸ ಸುರಿಯಲು ಹೋಗಿ ಕಾಲುವೆಗೆ ಬಿದ್ದಿದ್ದ. 3 ದಿನದ ಕಾರ್ಯಾಚರಣೆ ನಂತರ ರಾಜರಾಜೇಶ್ವರಿನಗರದ ಗ್ಲೋಬಲ್ ವಿಲೇಜ್ ಬಳಿ ದೇಹ ಪತ್ತೆಯಾಗಿತ್ತು.

    ಶೇ.45 ರಾಜಕಾಲುವೆಗೆ ಮಾತ್ರ ತಂತಿಬೇಲಿ: ನಗರದಲ್ಲಿ 847 ಕಿ.ಮೀ.ರಾಜಕಾಲುವೆಯಿದ್ದು, ಶೇ.45 ಕ್ಕೆ ಮಾತ್ರ ತಂತಿಬೇಲಿ ಅಥವಾ ರಕ್ಷಣಾ ಬೇಲಿಯನ್ನು ಬಿಬಿಎಂಪಿ ನಿರ್ವಿುಸಿದೆ. ಉಳಿದೆಡೆ ತೆರೆದ ಕಾಲುವೆಯಿದ್ದು, ಸಾರ್ವಜನಿಕರ ಬಲಿಗಾಗಿ ಕಾಯುತ್ತಿವೆ. ರಾಜಕಾಲುವೆಗೆ ಜನರು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣ ಪ್ರತಿ ವರ್ಷ ನಡೆಯುತ್ತಲೇ ಇವೆ. ಈ ಸಂಬಂಧ ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ ಹಾಕಿತ್ತು. ರಾಜಕಾಲುವೆಗೆ ಜ.10ರೊಳಗಾಗಿ ರಕ್ಷಣಾ ಬೇಲಿ ನಿರ್ವಿುಸುವಂತೆ ಸೂಚನೆ ನೀಡಿತ್ತು. ಆದರೆ, ಜುಲೈ ಬಂದರೂ 381 ಕಿ.ಮೀ. ಮಾತ್ರ ಬೇಲಿ ಅಳವಡಿಕೆಯಾಗಿದೆ. ನ್ಯಾಯಾಲಯ ಆದೇಶ ಉಲ್ಲಂಘನೆ ಜತೆಗೆ ಸಾರ್ವಜನಿಕರ ಜೀವದ ಜತೆಗೂ ಬಿಬಿಎಂಪಿ ಚೆಲ್ಲಾಟವಾಡುತ್ತಿದೆ.
    ಕಾರ್ಯಾಚರಣೆ ಆರಂಭ ನಾಲ್ಕು ದಿನಗಳ ಕಾಲ ಮಾರತ್​ಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಯೂ ಸ್ಥಳದಲ್ಲಿದ್ದು ಬಾಲಕಿ ದೇಹ ಶೋಧ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಿದ್ದರು. ದೇಹ ಸಿಗದ ಕಾರಣ, ಕಾಲುವೆ ಮೂಲಕ ತಮಿಳುನಾಡಿನ ಕಡೆಗೆ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಾಲುವೆ ವ್ಯಾಪ್ತಿಯಲ್ಲಿ ಬರುವ ತಮಿಳುನಾಡಿನ ಪೊಲೀಸ್ ಠಾಣೆಗಳಿಗೆ ಬಾಲಕಿ ನೀರಿನಲ್ಲಿ ಕೊಚ್ಚಿ ಹೋಗಿರುವ ಮಾಹಿತಿ ಕೊಟ್ಟು ದೇಹ ಪತ್ತೆಯಾದರೆ ತಿಳಿಸುವಂತೆ ಹೇಳಲಾಗಿದೆ.

    ಇದನ್ನೂ ಓದಿ:  ಲೈಂಗಿಕ ಸಂಪರ್ಕಕ್ಕೆ ಒಪ್ಪದ ಸ್ವಚ್ಛತಾ ಕಾರ್ಮಿಕಳನ್ನು ಪತ್ನಿಗೆ ಹೇಳಿ ಕೆಲಸದಿಂದ ತೆಗೆಸಿದ ಕಾಮುಕ…

    ಕಸ ಹಾಕುವವರಿಗೆ ಶಿಕ್ಷೆ?: ರಾಜಕಾಲುವೆ ಬಳಿಯ ಮನೆ, ಅಪಾರ್ಟ್ ಮೆಂಟ್, ತಾತ್ಕಾಲಿಕ ಶೆಡ್ ವಾಸಿಗಳು ಕಸವನ್ನು ಕಾಲುವೆಗೆ ಎಸೆಯುತ್ತಾರೆ. ಕಾಲುವೆ ಪಕ್ಕದ ಬಹಳಷ್ಟು ಮನೆಯವರು ಬಿಬಿಎಂಪಿ ವಾಹನಕ್ಕೆ ಕಸವನ್ನೇ ನೀಡುವುದಿಲ್ಲ. ಕಾಲುವೆಗೆ ಕಸ ಹಾಕುವವರನ್ನು ಗುರುತಿಸಿ ಶಿಕ್ಷೆ ಅಥವಾ ದೊಡ್ಡ ಪ್ರಮಾಣದ ದಂಡ ವಿಧಿಸಬೇಕಿದೆ.

    ಅನುದಾನವಿದ್ದರೂ ಬಳಕೆಗೆ ಸಿಗುತ್ತಿಲ್ಲ: ಪ್ರತಿವರ್ಷ ರಾಜಕಾಲುವೆ ಸ್ವಚ್ಛತೆ, ನಿರ್ವಹಣೆ ಹಾಗೂ ಇತರೆ ಕಾರ್ಯಗಳಿಗೆ 25 ಕೋಟಿ ರೂ.ಗಳಿಗೂ ಅಧಿಕ ವೆಚ್ಚ ಮಾಡಲಾಗುತ್ತಿದೆ. ಇನ್ನು ತಂತಿಬೇಲಿ ನಿರ್ಮಾಣಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಟ್ಟರೂ ಯೋಜನೆ ಸಫಲವಾಗುತ್ತಿಲ್ಲ. 2020-21ನೇ ಸಾಲಿನ ಪಾಲಿಕೆ ಬಜೆಟ್​ನಲ್ಲಿ ರಾಜಕಾಲುವೆ ರಿಪೇರಿ, ಸ್ವಚ್ಛತೆ, ನಿರ್ವಹಣೆಗೆ 25 ಕೋಟಿ ರೂ. ಮೀಸಲಿಟ್ಟರೆ, ತಂತಿಬೇಲಿ ನಿರ್ಮಾಣ ಮಾಡಲು 10 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದರೆ, ಬಜೆಟ್ ಪುಸ್ತಕ ಬಿಡುಗಡೆಯಾಗದೆ ಅನುದಾನ ಬಳಕೆ ಆಗದಂತಾಗಿದೆ.

    ಸ್ವಚ್ಛವಾಯ್ತು ಹೂಳು, ಕಳೆ: ಬೆಳ್ಳಂದೂರಿನಲ್ಲಿ ಬಾಲಕಿ ರಾಜಕಾಲುವೆಗೆ ಬಿದ್ದಾಗ ಶೋಧ ಕಾರ್ಯಕ್ಕೆ ಕಸ ಅಥವಾ ಕಳೆಯಿಂದ ತೊಂದರೆ ಯಾಗಿಲ್ಲ. ನೀರು ರಭಸವಾಗಿ ಹರಿಯುತ್ತಿದ್ದ ಕಾರಣ ದೇಹ ಮುಂದಕ್ಕೆ ಹೋಗಿರಬಹುದು. ಎಲ್ಲೆಡೆ ಹೂಳು ಮತ್ತು ಕಳೆಯನ್ನು ಸ್ವಚ್ಛಗೊಳಿಸಲಾಗಿದೆ. ಆದರೆ, ತಂತಿಬೇಲಿ ಕಾರ್ಯ ಶೇ.45 ಪೂರ್ಣಗೊಂಡಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    FACT CHECK| ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಗೆ ಗ್ರೇಸ್ ಮಾರ್ಕ್​ ಸಿಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts