More

    ರಾಜಕಾಲುವೆ ಸ್ವಚ್ಛತೆಯಲ್ಲಿ ಷರತ್ತು ಉಲ್ಲಂಘನೆ

    ರಾಯಚೂರು: ನಗರದಲ್ಲಿ ರಾಜಕಾಲುವೆ ಸ್ವಚ್ಛತೆ ಮತ್ತು ಘನತ್ಯಾಜ್ಯ ವಿಲೇವಾರಿಗೆ ವಾಹನ ಒದಗಿಸಲು ಟೆಂಡರ್ ಪಡೆದು ಗುತ್ತಿಗೆದಾರ ಸತೀಶಕುಮಾರ ಷರತ್ತು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಕಾರ್ಯಾದೇಶ ರದ್ದುಪಡಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದಾರೆ.

    ನಗರಸಭೆ ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ ನೇತೃತ್ವದಲ್ಲಿ ಸದಸ್ಯರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕಗೆ ಗುರುವಾರ ಮನವಿ ಸಲ್ಲಿಸಿದರು. ಸ್ವಚ್ಛತಾ ಕಾರ್ಯಕ್ಕೆ 15 ಟ್ರಾೃಕ್ಟರ್ ಹಾಗೂ 2 ಜೆಸಿಬಿ ಒದಗಿಸುವ ಟೆಂಡರ್ ಪಡೆದು ಸ್ವಚ್ಛತಾ ಕಾರ್ಯ ನಡೆಸದೆ ನಗರಸಭೆ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ ಎಂದು ದೂರಿದರು.

    ಸ್ವಚ್ಛತಾ ಕಾರ್ಯಕ್ಕೆ ವಾಹನ ಒದಗಿಸಲು ಸತೀಶಕುಮಾರಗೆ 44.08 ಲಕ್ಷ ರೂಪಾಯಿಯ ಕಾರ್ಯಾದೇಶ ನೀಡಲಾಗಿದೆ. ಪ್ರತಿ ದಿನ 15 ಟ್ರಾೃಕ್ಟರ್ ಮತ್ತು 2 ಜೆಸಿಬಿಗಳನ್ನು ಪರಿಸರ ಇಂಜಿನಿಯರ್ ನಿರ್ದೇಶನದಂತೆ ಬಳಕೆ ಮಾಡಬೇಕು. ಆದರೆ ಇದುವರೆಗೂ ಸ್ವಚ್ಛತೆ ಕಾರ್ಯಕ್ಕೆ ಒಂದು ಜೆಸಿಬಿಯನ್ನೂ ಉಪಯೋಗಿಸಿಲ್ಲ.

    ವಾಹನಗಳನ್ನು ಒದಗಿಸದಿದ್ದಲ್ಲಿ ಶೇ.5 ದಂಡ ವಿಧಿಸುವ ಷರತ್ತು ಇದೆ. ಪ್ರತಿದಿನ ಕಾಮಗಾರಿ ನಿರ್ವಹಿಸಿದ ಬಗ್ಗೆ ಆರೋಗ್ಯ ನಿರೀಕ್ಷಕಗೆ ವರದಿ ನೀಡಬೇಕು ಎನ್ನುವ ನಿಯಮವನ್ನೂ ಉಲ್ಲಂಘಿಸಲಾಗಿದೆ. ಮಳೆಗಾಲದ ಮುಂಚೆಯೇ ಎಲ್ಲ ರಾಜಕಾಲುವೆ ಹೂಳೆತ್ತುವ ಸಂಬಂಧ ಟೆಂಡರ್‌ಗೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಆದರೆ ಅದರ ಉದ್ಧೇಶ ಈಡೇರದೆ ಚರಂಡಿಗಳು ದುರ್ವಾಸನೆ ಬೀರುವಂತಾಗಿದೆ.

    ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಗುತ್ತಿಗೆದಾರರ ಅಕ್ರಮ ಕೂಟವಿದ್ದು, ನಗರಸಭೆಯಿಂದ ಕರೆಯುವ ಟೆಂಡರ್‌ನಲ್ಲಿ ಭಾಗವಹಿಸಲು ಒಳ ಒಪ್ಪಂದ ಮಾಡಿಕೊಂಡು ಅಧಿಕಾರಿಗಳೊಂದಿಗೆ ಶಾಮಿಲಾಗಿ ಕಳಪೆ ಕಾಮಗಾರಿ ನಿರ್ವಹಿಸಿ ಬೋಗಸ್ ಬಿಲ್ ಎತ್ತುವಳಿ ಮಾಡಲಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts