More

    ಕಳಪೆ ಟಿ.ಸಿ ನೀಡಿದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಿ

    ಬಸವನಬಾಗೇವಾಡಿ: ರೈತರಿಗೆ ಕಳಪೆ ವಿದ್ಯುತ್ ಪರಿವರ್ತಕ (ಟಿ.ಸಿ) ನೀಡಿದ ಗುತ್ತಿಗೆದಾರನ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಮಸಬಿನಾಳ ಗ್ರಾಮದ ರೈತರು ಶುಕ್ರವಾರ ಹೆಸ್ಕಾಂ ಎ.ಇ.ಇ ಜೆ.ವಿ.ಸಂಪಣ್ಣನವರ ಅವರ ಮುಖಾಂತರ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಮನವಿ ಸಲ್ಲಿಸಿದರು.

    ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ರೈತರು ಕೊಳವಿ ಬಾವಿ ಹಾಗೂ ತೆರೆದ ಬಾವಿಯ ಮುಖಾಂತರ ಬೆಳೆಗಳಿಗೆ ನೀರುಣಿಸಲು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಲಿಸಲು ಪರಿವರ್ತಕವನ್ನು ಗುತ್ತಿಗೆದಾರನಿಂದ ಪಡೆದುಕೊಂಡಿದ್ದಾರೆ. ಕಳಪೆ ಟಿ.ಸಿ ನೀಡಿ ರೈತರಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಿ ವಿದ್ಯುತ್ ಪರಿವರ್ತಕವನ್ನು ಎ.ಇ.ಇ ಅವರ ಕಚೇರಿ ಮುಂದೆ ಇರಿಸಿ ಗುತ್ತಿಗೆದಾರನ ವಿರುದ್ಧ ಘೋಷಣೆ ಕೂಗಿ ಆತನ ಪರವಾನಗಿ ರದ್ದು ಪಡಿಸಬೇಕೆಂದು ಆಗ್ರಹಿಸಿದರು.

    ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಅಂದಾಜು 3 ಸಾವಿರಕ್ಕಿಂತಲೂ ಹೆಚ್ಚು ರೈತರಿಗೆ ಕಳಪೆ ಮಟ್ಟದ ಟಿ.ಸಿ.ಗಳನ್ನು ನೀಡಿ ರೈತರೊಂದಿಗೆ ಚಲ್ಲಾಟವಾಡುತ್ತಿರುವ ಗುತ್ತಿಗೆದಾರನನ್ನು ಕೇಳಿದರೆ ಟಿ.ಸಿ ಕಳಪೆ ಮಟ್ಟದಾಗಿದ್ದರೆ ಅದಕ್ಕೆ ಹೆಸ್ಕಾಂ ಅಧಿಕಾರಿಗಳು ಅನುಮತಿ ಹೇಗೆ ಕೊಟ್ಟರೆಂದು ? ಅಧಿಕಾರಿಗಳ ತಪ್ಪು ಎಂದು ಅವರ ಕಡೆಗೆ ಬೊಟ್ಟು ಮಾಡುತ್ತಿದ್ದಾನೆ. ಟಿ.ಸಿ.ಯನ್ನು ಜೋಡು ಕಂಬಗಳ ಮೇಲೆ ಎಂಗಲ್ ಹಾಕಿ ಕೂಡಿಸಬೇಕು, ಆದರೆ ನಿಯಮ ಬಾಹಿರವಾಗಿ ಸಿಮೆಂಟ್ ಬ್ಲಾಕ್‌ಗಳ ಮೇಲೆ ಕೂಡಿಸಿ ಅವರಿಗೆ ಮೋಸ ಮಾಡಿದ್ದಾನೆ. ಕೂಡಲೇ ರೈತರಿಗೆ ಮೋಸ ಮಾಡಿದ ಗುತ್ತಿಗೆದಾರರ ಪರವಾನಗಿ ರದ್ದುಪಡಿಸಬೇಕೆಂದು ಒತ್ತಾಯಿಸಿದರು.

    ರೈತರಾದ ಸುರೇಶ ಬಾಗೇವಾಡಿ, ರಾಜಶೇಖರ ಗುದ್ದಿ, ನಾಗಪ್ಪ ಬಾಗೇವಾಡಿ, ಸಂತಪ್ಪ ಮಣೂರ, ಮಲ್ಲಪ್ಪ ಮಟ್ಯಾಳ, ಶಿವಾನಂದ ಹರನಾಳ, ತಿಪ್ಪಣ್ಣ ಪ್ಯಾಟಿ, ಚಿದಾನಂದ ಬೈರವಾಡಗಿ, ಪ್ರಕಾಶ ಬಾಗೇವಾಡಿ, ಶಂಕ್ರ ಗುದ್ದಿ, ಶ್ರೀಶೈಲ ಮಟ್ಯಾಳ, ಉಮೇಶ ಗುದ್ದಿ, ಶಾಂತಪ್ಪ ಹಡಲಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts