More

    ಕರೊನಾ ಸಂಕಟ ಕಾಲದಲ್ಲಿ ಕಾರ್ಮಿಕರ ಕಣ್ಣೀರು ಒರೆಸಿ ಹೀರೋಯಿಸಂ ತೋರಿಸ್ತಿರೋ ಸ್ಯಾಂಡಲ್​ವುಡ್​ ಸ್ಟಾರ್ಸ್ ಯಾರು?

    ಬೆಂಗಳೂರು: ಕರೊನಾದಿಂದ ಚಿತ್ರೀಕರಣ ಚಟುವಟಿಕೆಗಳು ನಿಂತು ಕೆಲವು ದಿನಗಳೇ ಆಗಿವೆ. ಚಿತ್ರರಂಗವನ್ನೇ ನಂಬಿಕೊಂಡಿರುವ ದಿನಗೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ಬೇರೆ ಭಾಷೆಯ ಚಿತ್ರರಂಗದ ಸ್ಟಾರ್‌ಗಳು ಕಾರ್ಮಿಕರಿಗೆ ಲಕ್ಷ ಲಕ್ಷ ಧನಸಹಾಯ ಮಾಡಿದ್ದಾರೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಮಾತ್ರ ಸ್ಟಾರ್‌ಗಳು ಇನ್ನಷ್ಟೇ ಹೆಜ್ಜೆ ಇಡಬೇಕಿದೆ.

    ಕೆಲವು ದಿನಗಳಿಂದ ಇಡೀ ಭಾರತೀಯ ಚಿತ್ರರಂಗವೇ ಲಾಕ್‌ಡೌನ್ ಆಗಿರುವುದರಿಂದ ದಿನಗೂಲಿ ಕಾರ್ಮಿಕರು, ಸಂಬಳವಿಲ್ಲದೆ ಕಷ್ಟ ಅನುಭವಿಸುವಂತಾಗಿದೆ. ಈಗಾಗಲೇ ತೆಲುಗು ನಟ ಪವನ್ ಕಲ್ಯಾಣ್ ಎರಡು ಕೋಟಿ ದೇಣಿಗೆ ನೀಡಿದ್ದಾರೆ. ರಾಮ್‌ಚರಣ್ ತೇಜ 70 ಲಕ್ಷ ಕೊಟ್ಟಿದ್ದಾರೆ. ಇವರಿಬ್ಬರೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪರಿಹಾರ ನಿಧಿಗೆ ದೇಣಿಗೆ ನೀಡಿದರೆ, ಇತ್ತ ತಮಿಳಿನಲ್ಲಿ ರಜನಿಕಾಂತ್, ಫಿಲ್ಮ ಎಂಪ್ಲಾಯಿಸ್ ಫೆಡರೇಷನ್ ಆಫ್​ ಸೌಥ್ ಇಂಡಿಯಾ ಎಂಬ ಕಾರ್ಮಿಕರ ಒಕ್ಕೂಟಕ್ಕೆ 50 ಲಕ್ಷ ಕೊಟ್ಟಿದ್ದಾರೆ. ಇನ್ನು ನಟ ಸೂರ್ಯ, ವಿಜಯ್ ಸೇತುಪತಿ ಸಹ ಕಾರ್ಮಿಕರಿಗಾಗಿ ತಲಾ 10 ಲಕ್ಷ ದೇಣಿಗೆ ನೀಡಿದ್ದಾರೆ.

    ಹೀಗೆ ಅಕ್ಕ-ಪಕ್ಕದ ರಾಜ್ಯದವರೆಲ್ಲಾ ಕಾರ್ಮಿಕರಿಗೆ ಮತ್ತು ಕರೊನಾ ವೈರಸ್ ಪರಿಹಾರ ನಿಧಿಗೆ ಲಕ್ಷಲಕ್ಷ ದೇಣಿಗೆ ಕೊಟ್ಟು ಕೊಡುಗೈ ದಾನಿಗಳೆಂದನಿಸಿಕೊಂಡರೆ, ಇತ್ತ ಕನ್ನಡದಲ್ಲಿ ಮಾತ್ರ ಸ್ಟಾರ್‌ಗಳು ಇನ್ನಷ್ಟೇ ಖಾತೆ ತೆರೆಯಬೇಕಿದೆ. ಸಾಮಾನ್ಯವಾಗಿ ಯಾವುದೇ ಸಮಸ್ಯೆ ಎದುರಾದರೂ ಕನ್ನಡದ ಸ್ಟಾರ್ ನಟರುಗಳು ಮೊದಲು ಕಾರ್ಯಪ್ರವೃತ್ತರಾಗಿ ಸಹಾಯ ಮಾಡುತ್ತಾರೆ. ಕಳೆದ ವರ್ಷ ಉತ್ತರ ಕರ್ನಾಟಕ ಮತ್ತು ಕೊಡಗಿನಲ್ಲಿ ಪ್ರವಾಹವಾದಾಗ, ಹಲವು ಕಲಾವಿದರು ಸ್ಪಂದಿಸಿದ್ದರು. ಕೆಲವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನಸಹಾಯ ಮಾಡಿದರೆ, ಇನ್ನೂ ಕೆಲವರು ತಮ್ಮ ಅಭಿಮಾನಿ ಸಂಘಗಳ ಮೂಲಕ ಜನರ ಸಹಾಯಕ್ಕೆ ಧಾವಿಸಿದ್ದರು. ಅದಕ್ಕೂ ಮುನ್ನ ಪ್ರಕೃತಿ ವಿಕೋಪಗಳಾದಾಗ, ಸ್ಯಾಂಡಲ್‌ವುಡ್ ತಾರೆಯರು ತಮ್ಮ ಕರ್ತವ್ಯ ನಿರ್ವಹಿಸಿದ್ದರು.

    ಆದರೆ, ಚಿತ್ರೀಕರಣ ಸ್ಥಗಿತಗೊಂಡಿರುವುದರಿಂದ ಕಾರ್ಮಿಕರು ಸಮಸ್ಯೆ ಎದುರಿಸುತ್ತಿದ್ದರೂ, ದೊಡ್ಡ ಸ್ಟಾರ್‌ಗಳ್ಯಾರೂ ಅವರ ನೆರವಿಗೆ ಇನ್ನೂ ಧಾವಿಸಿಲ್ಲ. ಈ ವಿಷಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಮೊದಲು ಹೆಜ್ಜೆ ಇಟ್ಟವರು ನಟ-ನಿರ್ದೇಶಕ ‘ಲೂಸಿಯಾ’ ಪವನ್ ಕುಮಾರ್. ಕಾರ್ಮಿಕರಿಗೆ ಅನುಕೂಲವಾಗುವಂತೆ ಸುಮಾರು ಐದು ಲಕ್ಷ ರೂಪಾಯಿಗಳನ್ನು ಫಂಡ್ ರೈಸ್ ಮಾಡಿರುವ ಅವರು, ಅದನ್ನು ಕಾರ್ಮಿಕರಿಗೆ ಸದ್ಯದಲ್ಲೇ ಹಂಚಲಿದ್ದಾರೆ. ನಟ ಧನಂಜಯ್ ಸೇರಿದಂತೆ ಇನ್ನೂ ಹಲವರು ಈ ವಿಷಯದಲ್ಲಿ ಅವರ ಕೈಜೋಡಿಸಿದ್ದಾರೆ. ಕರ್ನಾಟಕ ಚಲನಚಿತ್ರ ಸಹಕಲಾವಿದರ, ಕಿರುತೆರೆ ಹಾಗೂ ಪ್ರತಿನಿಧಿಗಳ ಸಂಘ ಸಹ ಇತ್ತೀಚೆಗೆ ಸಂಕಷ್ಟದಲ್ಲಿರುವ ಸಹಕಲಾವಿದರಿಗೆ ಅಕ್ಕಿ, ಬೇಳೆ, ಎಣ್ಣೆ ಮುಂತಾದ ದವಸಗಳನ್ನು ಕೊಡುವುದರ ಜೊತೆಗೆ, ತಲಾ 500 ರೂಪಾಯಿ ಹಂಚಿದೆ.

    ಈ ಹಿಂದೆ ಡಾ. ರಾಜಕುಮಾರ್ ಅವರ ಅಪಹರಣವಾದಾಗ, ಕನ್ನಡ ಚಲನಚಿತ್ರ ಕಾರ್ಮಿಕರ ಮತ್ತು ತಂತ್ರಜ್ಞರ ಒಕ್ಕೂಟವು ಹಲವು ಕಲಾವಿದರ ಸಹಾಯದಿಂದ ಒಂದು ನಿಧಿ ಸ್ಥಾಪಿಸಿ ಕಲಾವಿದರಿಗೆ ಅಗತ್ಯ ವಸ್ತುಗಳನ್ನು ಪೂರೈಸಿತ್ತು. ಈಗ ಸಹ ಅದೇ ನಿಟ್ಟಿನಲ್ಲಿ ಒಕ್ಕೂಟವು ಹೆಜ್ಜೆ ಇಟ್ಟಿದೆ. ಈ ಕುರಿತು ಮಾತನಾಡುವ ಒಕ್ಕೂಟದ ಅಧ್ಯಕ್ಷ ಅಶೋಕ್, ‘ಬೆಂಗಳೂರಿನಾದ್ಯಂತ 60 ರಿಲಯನ್ಸ್ ಔಟ್‌ಲೆಟ್‌ಗಳಿವೆ. ಕಾರ್ಮಿಕರಿಗೆ ಕೂಪನ್‌ಗಳನ್ನು ಕೊಟ್ಟು, ಅವರು ಅಲ್ಲಿಂದ ಅಗತ್ಯ ವಸ್ತುಗಳನ್ನು ಖರೀದಿಸುವ ವ್ಯವಸ್ಥೆ ಮಾಡುವುದರ ಬಗ್ಗೆ ಯೋಚನೆ ನಡೆಯುತ್ತಿದೆ. ಇದಕ್ಕೆ ಒಂದಿಷ್ಟು ಹಣದ ಅವಶ್ಯಕತೆ ಇದ್ದು, ಹಣ ಸಂಗ್ರಹಣೆ ಕುರಿತು ಕಲಾವಿದರೊಂದಿಗೆ ಮಾತನಾಡುತ್ತಿದ್ದೇವೆ. ಸದ್ಯದಲ್ಲೇ ಇದು ಕಾರ್ಯರೂಪಕ್ಕೆ ಬರಬಹುದು’ ಎನ್ನುತ್ತಾರೆ.

    ಒಟ್ಟಿನಲ್ಲಿ ದೇಶಾದ್ಯಂತ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೇರೆ ಭಾಷೆಗಳ ಚಿತ್ರರಂಗದ ಸ್ಟಾರ್‌ಗಳು ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿರುವಾಗ, ಕನ್ನಡದಲ್ಲಿ ಮಾತ್ರ ಯಾವ ಸ್ಟಾರ್ ಸಹ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿಲ್ಲ. ಕಾರ್ಮಿಕರಿಗೆ ಅಥವಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಿಲ್ಲ. ಚಲನಚಿತ್ರ ಕಾರ್ಮಿಕರಿಗೆ ತಾವೇ ಮುಂದೆ ನಿಂತು ಅವರಿಗೆ ಅಗತ್ಯವಿರುವ ಸಹಾಯ ಮಾಡಬಹುದು ಅಥವಾ ಯಾವುದಾದರೂ ಸಂಘ-ಸಂಸ್ಥೆಗಳ ಮೂಲಕವೂ ಮಾಡಬಹುದು. ಇನ್ನಾದರೂ ಸೆಲೆಬ್ರಿಟಿಗಳು ದೊಡ್ಡ ಮನಸ್ಸು ಮಾಡಿ, ಈ ನಿಟ್ಟಿನಲ್ಲಿ ಹಜ್ಜೆ ಇಟ್ಟು, ತಮ್ಮ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ವಹಿಸಿರುವ ಚಿತ್ರರಂಗದ ಕಾರ್ಮಿಕರಿಗೆ ಸಹಾಯ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.

    ಲೂಸಿಯಾ ಪವನ್ ಕುಮಾರ್ ಕೆಲಸಕ್ಕೆ ಮೆಚ್ಚುಗೆ: ಸಿನಿ ಕಾರ್ಮಿಕರಿಗೆ ನಾಲ್ಕೇ ದಿನದಲ್ಲಿ 4.5 ಲಕ್ಷ ಹಣ ಸಂಗ್ರಹಣೆ

    ಸಿಂಗರ್ ವಿಜಯ್ ಪ್ರಕಾಶ್ ಆರಂಭಿಸಿದ್ರು ನೂತನ ಚಾಲೆಂಜ್! ಇದರಲ್ಲಿ ನೀವೂ ಭಾಗವಹಿಸಬಹುದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts